World Test Championship 2023 Final: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023 ರ ಫೈನಲ್ ಪಂದ್ಯಕ್ಕೆ ಡೇಟ್ ಫಿಕ್ಸ್ ಆಗಿದೆ. ಜೂನ್ 8 ರಿಂದ WTC ಫೈನಲ್ ಪಂದ್ಯವು ಶುರುವಾಗಲಿದ್ದು, ಜೂನ್ 12 ರವರೆಗೆ ನಡೆಯಲಿದೆ. ಇನ್ನು ಪ್ರತಿಕೂಲ ಹವಾಮಾನದಿಂದ ದಿನದಾಟವನ್ನು ಮುಂದೂಡಿದರೆ ಜೂನ್ 15 ರೊಳಗೆ ಪಂದ್ಯವನ್ನು ಮುಗಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ಅಂದರೆ ಇಂಗ್ಲೆಂಡ್ನ ಓವಲ್ ಮೈದಾನದಲ್ಲಿ ಜೂನ್ 8 ರಿಂದ 12ರವರೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯುವುದು ಬಹುತೇಕ ಖಚಿತವಾಗಿದೆ. ಇದಾಗ್ಯೂ ಫೈನಲ್ ಆಡಲಿರುವ ತಂಡಗಳು ಯಾವುವು ಎಂಬುದು ಇನ್ನೂ ಕೂಡ ನಿರ್ಧಾರವಾಗಿಲ್ಲ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡವು ಫೈನಲ್ ಆಡುವುದನ್ನು ಖಾತ್ರಿಪಡಿಸಿಕೊಂಡಿದೆ. ಆದರೆ 2ನೇ ತಂಡವಾಗಿ ಫೈನಲ್ ಪ್ರವೇಶಿಸಲು ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ನೇರ ಪೈಪೋಟಿ ಇದೆ.
ಭಾರತ ಫೈನಲ್ ಪ್ರವೇಶಿಸುವುದು ಹೇಗೆ?
ಭಾರತ ತಂಡವು ಮುಂಬರುವ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಥವಾ 3-1 ಅಥವಾ 2-0 ಅಂತರದಿಂದ ಗೆದ್ದುಕೊಂಡರೆ ನೇರವಾಗಿ ಫೈನಲ್ ಪ್ರವೇಶಿಸಬಹುದು. ಏಕೆಂದರೆ ಟೀಮ್ ಇಂಡಿಯಾ ಕಷ್ಟದಿಂದ 2-0 ಅಂತರದಿಂದ ಗೆದ್ದರೂ ಶೇ.60.65 ಅಂಕ ಪಡೆಯಲಿದೆ. ಅದೇ ವೇಳೆಗೆ ಆಸ್ಟ್ರೇಲಿಯಾ ತಂಡ ಪಾಯಿಂಟ್ ಶೇ.63.16 ಅಂಕಗಳಿಗೆ ಕುಸಿಯಲಿದೆ. ಇದಾಗ್ಯೂ ಉಭಯ ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗಬಹುದು.
ಇದನ್ನೂ ಓದಿ: IPL 2023: ಮಾಜಿ RCB ಆಟಗಾರರೇ ಈಗ ಮುಂಬೈ ಇಂಡಿಯನ್ಸ್ ತಂಡದ ಹಿಂದಿನ ಶಕ್ತಿ..!
ಒಂದು ವೇಳೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋತರೆ ಮಾತ್ರ ಶ್ರೀಲಂಕಾಗೆ ಅವಕಾಶ ಇರಲಿದೆ. ಇಲ್ಲಿ ಸೋಲುವ ಲೆಕ್ಕಚಾರ ಕೂಡ ಗಣನೆಗೆ ಬರಲಿದೆ. ಅಂದರೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 3-1 ಅಥವಾ, 2-0, 1-0 ಸರಣಿ ಅಂತರದಿಂದ ಸೋತರೆ ಶ್ರೀಲಂಕಾ ತಂಡಕ್ಕೆ ಫೈನಲ್ಗೇರುವ ಅವಕಾಶ ಹೆಚ್ಚಾಗಲಿದೆ.
ಅದರಂತೆ ಶ್ರೀಲಂಕಾ ತಂಡವು ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡರೆ ನೇರವಾಗಿ ಫೈನಲ್ಗೆ ಎಂಟ್ರಿ ಕೊಡಬಹುದು. ಹೀಗಾಗಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 4-0 ಅಥವಾ 3-1 ಅಥವಾ 3-0, ಅಥವಾ 2-0 ಅಂತರದಿಂದ ಗೆಲ್ಲಲೇಬೇಕು. ಒಂದು ವೇಳೆ 2-2 ಅಂತರದಿಂದ ಸರಣಿ ಡ್ರಾ ಮಾಡಿಕೊಂಡರೂ ಶ್ರೀಲಂಕಾ ತಂಡದ ಫಲಿತಾಂಶವನ್ನು ಎದುರು ನೋಡಬೇಕಾಗುತ್ತದೆ.
ಇದನ್ನೂ ಓದಿ: ODI Double Century List: ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿದ 10 ಬ್ಯಾಟರ್ಗಳ ಪಟ್ಟಿ ಇಲ್ಲಿದೆ
ಏಕೆಂದರೆ ಆಸ್ಟ್ರೇಲಿಯಾ ವಿರುದ್ಧ ಭಾರತ 4-0 ಅಂತರದಲ್ಲಿ ಗೆದ್ದರೆ 68.06% ಅಂಕ ಪಡೆಯಲಿದೆ. ಒಂದು ವೇಳೆ 3-1 ರಲ್ಲಿ ಗೆದ್ದರೆ 62.5%, ಹಾಗೆಯೇ 2-0 ಅಂತರದಿಂದ ಗೆದ್ದರೆ 60.65% ಅಂಕಗಳಿಸಲಿದೆ. ಒಂದು ವೇಳೆ 2-2 ಅಂತರದಿಂದ ಸರಣಿಯನ್ನು ಡ್ರಾ ಮಾಡಿಕೊಂಡರೆ 56.94% ಅಂಕ ಮಾತ್ರ ಹೊಂದಿರಲಿದೆ. ಅತ್ತ ಶ್ರೀಲಂಕಾ ತಂಡವು ನ್ಯೂಜಿಲೆಂಡ್ ವಿರುದ್ದ 2-0 ಅಂತರದಿಂದ ಗೆದ್ದರೆ ಶೇ.60 ರಷ್ಟು ಅಂಕವನ್ನು ಪಡೆಯಬಹುದು. ಇದರಿಂದ ಟೀಮ್ ಇಂಡಿಯಾ ಹೊರಬೀಳಲಿದೆ.
ಟೀಮ್ ಇಂಡಿಯಾಗೆ ಉತ್ತಮ ಅವಕಾಶ:
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಲು ಇಲ್ಲಿ ಟೀಮ್ ಇಂಡಿಯಾಗೆ ಇರುವ ಪ್ಲಸ್ ಪಾಯಿಂಟ್ ಅಂದರೆ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲೇ ಸರಣಿ ಆಡಲಿದೆ. ಆದರೆ ಶ್ರೀಲಂಕಾ ತಂಡವು ನ್ಯೂಜಿಲೆಂಡ್ನಲ್ಲಿ ಸರಣಿ ಆಡಬೇಕಿದೆ. ಅಂದರೆ ಶ್ರೀಲಂಕಾ ಇದುವರೆಗೆ ನ್ಯೂಜಿಲೆಂಡ್ನಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. ಹೀಗಾಗಿ ತವರಿನಲ್ಲಿ ಪಂದ್ಯವಾಡುತ್ತಿರುವ ಭಾರತ ತಂಡಕ್ಕೆ ಗೆಲ್ಲುವ ಅವಕಾಶ ಹೆಚ್ಚಿದೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಮತ್ತೊಮ್ಮೆ ಭಾರತ ತಂಡವನ್ನು ಎದುರು ನೋಡಬಹುದು.