WPL 2024 Final: ಕಪ್ ನಮ್ದೇ….! ಇತಿಹಾಸ ಸೃಷ್ಟಿಸಿದ ಆರ್ಸಿಬಿ ಸಿಂಹಿಣಿಯರು
WPL 2024 Final: ದೆಹಲಿಯ ಆರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಫೈನಲ್ ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ತಂಡವನ್ನು 8 ವಿಕೆಟ್ಗಳಿಂದ ಮಣಿಸಿದ ಸ್ಮೃತಿ ಮಂಧಾನ ನೇತೃತ್ವದ ಆರ್ಸಿಬಿ ಪಡೆ ಇದೇ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಈ ಕ್ಷಣ… ಇದೊಂದು ಕ್ಷಣಕ್ಕಾಗಿ ಆರ್ಸಿಬಿ (RCB) ಅಭಿಮಾನಿಗಳು ಕಾಯ್ದಿದ್ದು ಬರೋಬ್ಬರಿ 17 ವರ್ಷಗಳು. ಐಪಿಎಲ್ (IPL) ಶುರುವಾಗಿ ಇಲ್ಲಿಯವರೆಗೆ 16 ಆವೃತ್ತಿಗಳು ಕಳೆದಿವೆ. ಪ್ರತಿ ಆವೃತ್ತಿಯಲ್ಲೂ ಬೆಟ್ಟದಷ್ಟು ನಿರೀಕ್ಷೆ ಇಟ್ಟು ಕಾಯುತ್ತಿದ್ದ ಆರ್ಸಿಬಿ ಅಭಿಮಾನಿಗಳಿಗೆ ಕೊನೆಗೆ ಎದುರಾಗುತ್ತಿದ್ದಿದ್ದು, ಸೋಲಿನ ನಿರಾಸೆ. ಕಳೆದ 16 ಆವೃತ್ತಿಗಳಲ್ಲಿ ಆರ್ಸಿಬಿ 4 ಬಾರಿ ಫೈನಲ್ಗೇರಿತ್ತಾದರೂ ಒಮ್ಮೆಯೂ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ಪ್ರತಿ ಫೈನಲ್ ಪಂದ್ಯದಲ್ಲೂ ಆರ್ಸಿಬಿ ಗೆಲುವಿಗಾಗಿ ಮುಕ್ಕೋಟಿ ದೇವರ ಬಳಿ ಮೊರೆ ಇಡುತ್ತಿದ್ದ ಆರ್ಸಿಬಿ ಅಭಿಮಾನಿಗಳಿಗೆ ಕೊನೆಗೆ ಎದುರಾಗುತ್ತಿದ್ದಿದ್ದು ಅದೇ ಸೋಲು, ಅದೇ ನಿರಾಸೆ, ಅದೇ ಕಣ್ಣೀರು. ಈಗಲೂ ಆರ್ಸಿಬಿ ಅಭಿಮಾನಿಗಳ ಕಣ್ಣಲ್ಲಿ ನೀರಿದೆ. ಆದರೆ ಅದು ದುಃಖದ ಕಣ್ಣೀರಲ್ಲ, ಬದಲಿಗೆ 17 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯವಾಯಿತಲ್ಲ ಎಂಬ ಆನಂದದ ಕಣ್ಣೀರು. 16 ಆವೃತ್ತಿಗಳ ಐಪಿಎಲ್ನಲ್ಲಿ ಆರ್ಸಿಬಿ ಪುರುಷ ತಂಡ ಮಾಡಲಾಗದ ಕೆಲಸವನ್ನು ಆರ್ಸಿಬಿ ಮಹಿಳಾ ಹುಲಿಗಳ ಪಡೆ ಕೇವಲ ಎರಡನೇ ಆವೃತ್ತಿಯಲ್ಲೇ ಮಾಡಿ ಮುಗಿಸಿದೆ.
ಆರ್ಸಿಬಿಗೆ 8 ವಿಕೆಟ್ ಜಯ
ದೆಹಲಿಯ ಆರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಫೈನಲ್ ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ತಂಡವನ್ನು 8 ವಿಕೆಟ್ಗಳಿಂದ ಮಣಿಸಿದ ಸ್ಮೃತಿ ಮಂಧಾನ ನೇತೃತ್ವದ ಆರ್ಸಿಬಿ ಪಡೆ ಇದೇ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಪೂರ್ಣ 20 ಓವರ್ಗಳನ್ನು ಆಡಲಾಗದೆ 18.3 ಓವರ್ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 113 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಆರ್ಸಿಬಿ ಕೇವಲ 2 ವಿಕೆಟ್ ಕಳೆದುಕೊಂಡು ಇನ್ನು 3 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು.
Ee Sala Cup N̶a̶m̶d̶e̶ Namdu! 🏆🥹#PlayBold #ನಮ್ಮRCB #SheIsBold #WPL2024 #WPLFinal #DCvRCB pic.twitter.com/jkubj1MRy6
— Royal Challengers Bangalore (@RCBTweets) March 17, 2024
ಗೆಲುವಿನ ಬೌಂಡರಿ ಬಾರಿಸಿದ ರಿಚಾ
ಡೆಲ್ಲಿ ನೀಡಿದ 114 ರನ್ಗಳ ಅಲ್ಪ ಗುರಿ ಬೆನ್ನಟ್ಟಿದ ಆರ್ಸಿಬಿಗೆ ವೇಗದ ಆರಂಭ ಸಿಗದಿದ್ದರೂ 49 ರನ್ಗಳ ಉಪಯುಕ್ತ ಆರಂಭ ಸಿಕ್ಕಿತು. ಆರಂಭಿಕರಾದ ನಾಯಕಿ ಸ್ಮೃತಿ ಹಾಗೂ ಸೋಫಿ ಡಿವೈನ್ ಮೊದಲ ವಿಕೆಟ್ಗೆ 49 ರನ್ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ ಸೋಫಿ 27 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 32 ರನ್ಗಳ ಅಮೂಲ್ಯ ಕಾಣಿಕೆ ನೀಡಿದರು. ಆ ಬಳಿಕ ಜೊತೆಯಾದ ಸ್ಮೃತಿ ಹಾಗೂ ಎಲ್ಲಿಸ್ ಪೆರ್ರಿ 33 ರನ್ಗಳ ಜೊತೆಯಾಟ ನಡೆಸಿದರು. ಆರಂಭದಿಂದಲೂ ತಾಳ್ಮೆಯ ಆಟವಾಡುತ್ತಿದ್ದ ಸ್ಮೃತಿ ಗೆಲುವಿನಂಚಿನಲ್ಲಿ ಲಯ ಕಳೆದುಕೊಂಡು 39 ಎಸೆತಗಳಲ್ಲಿ 3 ಬೌಂಡರಿ ಸಹಿತ 33 ರನ್ಗಳಿಗೆ ತಮ್ಮ ವಿಕೆಟ್ ಒಪ್ಪಿಸಿದರು. ಅಂತ್ಯದಲ್ಲಿ ಬಂದ ರಿಚಾ ಘೋಷ್, ಎಲ್ಲಿಸ್ ಪೆರ್ರಿಗೆ ಅಜೇಯ ಸಾಥ್ ನೀಡಿದಲ್ಲದೆ, ಬೌಂಡರಿ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ ಪೆರ್ರಿ 37 ಎಸೆತಗಳಲ್ಲಿ 4 ಬೌಂಡರಿ ಸಹಿತ 34 ರನ್ ಬಾರಿಸಿದರೆ, ರಿಚಾ 14 ಎಸೆತಗಳಲ್ಲಿ 2 ಬೌಂಡರಿ ಸಹಿತ ಅಜೇಯ 17 ರನ್ ಸಿಡಿಸಿದರು.
𝙏𝙝𝙖𝙩 𝙎𝙥𝙚𝙘𝙞𝙖𝙡 𝙈𝙤𝙢𝙚𝙣𝙩! 👏 👏
That’s how the Royal Challengers Bangalore sealed a memorable win to emerge the #TATAWPL 2024 Champions! 🏆
Scorecard ▶️https://t.co/g011cfzcFp#DCvRCB | #Final | @RCBTweets pic.twitter.com/ghlo7YVvwW
— Women’s Premier League (WPL) (@wplt20) March 17, 2024
ಡೆಲ್ಲಿಗೆ ಉತ್ತಮ ಆರಂಭ
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕರಾದ ನಾಯಕಿ ಮೆಗ್ ಲ್ಯಾನಿಂಗ್ ಹಾಗೂ ಶಫಾಲಿ ವರ್ಮಾ ಮೊದಲ ವಿಕೆಟ್ಗೆ 64 ರನ್ಗಳ ಜೊತೆಯಾಟವನ್ನಾಡಿದರು. ಈ ವೇಳೆ 27 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 44 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದ ಶಫಾಲಿ ಮೊಲಿನೆಕ್ಸ್ ಎಸೆತದಲ್ಲಿ ಬಿಗ್ ಶಾಟ್ ಆಡುವ ಯತ್ನದಲ್ಲಿ ಕ್ಯಾಚಿತ್ತು ಔಟಾದರು. ಆ ನಂತರ ಬಂದ ಭರವಸೆಯ ಆಟಗಾರ್ತಿ ಜೆಮಿಮಾ ರಾಡ್ರಿಗಸ್ 2 ಎಸೆತಗಳನ್ನು ಎದುರಿಸಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಜಮಿಮಾ ನಂತರ ಬಂದ ಆಲಿಸ್ ಕ್ಯಾಪ್ಸಿ ಕೂಡ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. ಆರ್ಸಿಬಿಗೆ ಆಪತ್ಬಾಂಧವಿಯಂತೆ ಬಂದ ಸೋಫಿ ಮೊಲಿನೆಕ್ಸ್ ಒಂದೇ ಓವರ್ನಲ್ಲಿ 3 ವಿಕೆಟ್ ಕಬಳಿಸಿ ಡೆಲ್ಲಿ ತಂಡಕ್ಕೆ ಬಿಗ್ ಶಾಕ್ ನೀಡಿದರು.
ಕುಸಿದ ಬ್ಯಾಟಿಂಗ್ ಕ್ರಮಾಂಕ
ನಂತರ ದಾಳಿಗಿಳಿದ ಕನ್ನಡತಿ ಶ್ರೇಯಾಂಕ ಪಾಟೀಲ್, ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ರನ್ನು ಎಲ್ಬಿಡ್ಬ್ಲ್ಯೂ ಬಲೆಗೆ ಬೀಳಿಸಿದರು. ಮೆಗ್ ಲ್ಯಾನಿಂಗ್ ಇನ್ನಿಂಗ್ಸ್ 23 ರನ್ಗಳಿಗೆ ಅಂತ್ಯಗೊಂಡಿತು. ಇಲ್ಲಿಂದ ಡೆಲ್ಲಿ ಇನ್ನಿಂಗ್ಸ್ ಕುಸಿಯಲಾರಂಭಿಸಿತು. ಇದರ ಲಾಭ ಪಡೆದ ಆರ್ಸಿಬಿ ಬೌಲರ್ಗಳು ಡೆಲ್ಲಿ ಬ್ಯಾಟರ್ಗಳಿಗೆ ಹೆಚ್ಚು ರನ್ ಬಿಟ್ಟುಕೊಡದೆ ಅವರನ್ನು ಒತ್ತಡಕ್ಕೆ ಸಿಲುಕಿಸಿದರು. ಹೀಗಾಗಿ ಒತ್ತಡಕ್ಕೊಳಗಾದ ಡೆಲ್ಲಿ ಬ್ಯಾಟರ್ಸ್ ಬಂದಷ್ಟೇ ವೇಗವಾಗಿ ಪೆವಿಲಿಯನ್ ಕಡೆ ಹೆಜ್ಜೆಹಾಕಿದರು.
ಪರ್ಪಲ್ ಕ್ಯಾಪ್ ಗೆದ್ದ ಶ್ರೇಯಾಂಕ
14ನೇ ಓವರ್ನ ಮೊದಲ ಎಸೆತದಲ್ಲಿ ಆಶಾ ಕೇಪ್ ಅವರನ್ನು 8 ರನ್ಗಳಿಗೆ ಬಲಿ ಪಡೆದರೆ, ಜೆಸ್ ಜೊನಾಸೆನ್ ಕೂಡ ಆಶಾಗೆ ವಿಕೆಟ್ ಒಪ್ಪಿಸಿದರು. ಸೋಫಿ ಮೊಲಿನೆಕ್ಸ್ ಅವರ ಅದ್ಭುತ ಎಸೆತದಲ್ಲಿ ರಾಧಾ ರನೌಟ್ಗೆ ಬಲಿಯಾದರೆ, ಕೊನೆಯ ಮೂರು ವಿಕೆಟ್ಗಳನ್ನು ಕನ್ನಡತಿ ಶ್ರೇಯಾಂಕ ಪಡೆಯುವಲ್ಲಿ ಯಶಸ್ವಿಯಾದರು. ಶ್ರೇಯಾಂಕ, ಮಿನ್ನು ಮಣಿ (5 ರನ್) ಅರುಂಧತಿ ರೆಡ್ಡಿ (10 ರನ್) ತನಿಯಾ ಭಾಟಿಯಾ ಅವರನ್ನು ಶೂನ್ಯಕ್ಕೆ ಪೆವಿಲಿಯನ್ಗೆ ಕಳುಹಿಸಿದರು. ಫೈನಲ್ ಪಂದ್ಯದಲ್ಲಿ ಶ್ರೇಯಾಂಕ 4 ವಿಕೆಟ್ ಪಡೆಯುವ ಮೂಲಕ ಲೀಗ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತನ್ನದಾಗಿಸಿಕೊಂಡರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:37 pm, Sun, 17 March 24