WPL 2024 Final: ಆರ್ಸಿಬಿ ಸಾಂಘೀಕ ದಾಳಿಗೆ ತತ್ತರಿಸಿದ ಡೆಲ್ಲಿ 113 ರನ್ಗಳಿಗೆ ಆಲೌಟ್..!
WPL 2024 Final: ಮಹಿಳಾ ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿಯ ಅಂತಿಮ ಪಂದ್ಯ ಇಂದು ಅಂದರೆ ಮಾರ್ಚ್ 17 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರ್ಸಿಬಿ ಬೌಲರ್ಗಳ ಸಾಂಘೀಕ ದಾಳಿಗೆ ನಲುಗಿ 18.3 ಓವರ್ಗಳಲ್ಲಿ ತನ್ನೇಲ್ಲಾ ವಿಕೆಟ್ ಕಳೆದುಕೊಂಡು 113 ರನ್ ಕಲೆಹಾಕಿದೆ.

ಮಹಿಳಾ ಪ್ರೀಮಿಯರ್ ಲೀಗ್ (Women’s Premier League) ಎರಡನೇ ಆವೃತ್ತಿಯ ಅಂತಿಮ ಪಂದ್ಯ ಇಂದು ಅಂದರೆ ಮಾರ್ಚ್ 17 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರ್ಸಿಬಿ (Delhi Capitals vs Royal Challengers Bangalore) ಬೌಲರ್ಗಳ ಸಾಂಘೀಕ ದಾಳಿಗೆ ನಲುಗಿ 18.3 ಓವರ್ಗಳಲ್ಲಿ ತನ್ನೇಲ್ಲಾ ವಿಕೆಟ್ ಕಳೆದುಕೊಂಡು 113 ರನ್ ಕಲೆಹಾಕಿದೆ. ಈ ಮೂಲಕ ಆರ್ಸಿಬಿಗೆ 114 ರನ್ಗಳ ಗೆಲುವಿನ ಗುರಿ ನೀಡಿದೆ. ಆರ್ಸಿಬಿ ಪರ ಬೌಲಿಂಗ್ನಲ್ಲಿ ಮಿಂಚಿದ ಕನ್ನಡತಿ ಶ್ರೇಯಾಂಕ ಪಾಟೀಲ್ (Shreyanka Patil) 4 ವಿಕೆಟ್ ಪಡೆದರೆ, ಸೋಫಿ ಮೊಲಿನೆಕ್ಸ್ 3 ಹಾಗೂ ಆಶಾ ಶೋಭನಾ 2 ವಿಕೆಟ್ ಪಡೆದರು.
ಡೆಲ್ಲಿಗೆ ಉತ್ತಮ ಆರಂಭ
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕರಾದ ನಾಯಕಿ ಮೆಗ್ ಲ್ಯಾನಿಂಗ್ ಹಾಗೂ ಶಫಾಲಿ ವರ್ಮಾ ಮೊದಲ ವಿಕೆಟ್ಗೆ 64 ರನ್ಗಳ ಜೊತೆಯಾಟವನ್ನಾಡಿದರು. ಈ ವೇಳೆ 27 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 44 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದ ಶಫಾಲಿ ಮೊಲಿನೆಕ್ಸ್ ಎಸೆತದಲ್ಲಿ ಬಿಗ್ ಶಾಟ್ ಆಡುವ ಯತ್ನದಲ್ಲಿ ಕ್ಯಾಚಿತ್ತು ಔಟಾದರು. ಆ ನಂತರ ಬಂದ ಭರವಸೆಯ ಆಟಗಾರ್ತಿ ಜೆಮಿಮಾ ರಾಡ್ರಿಗಸ್ 2 ಎಸೆತಗಳನ್ನು ಎದುರಿಸಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಜಮಿಮಾ ನಂತರ ಬಂದ ಆಲಿಸ್ ಕ್ಯಾಪ್ಸಿ ಕೂಡ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. ಆರ್ಸಿಬಿಗೆ ಆಪತ್ಬಾಂಧವಿಯಂತೆ ಬಂದ ಸೋಫಿ ಮೊಲಿನೆಕ್ಸ್ ಒಂದೇ ಓವರ್ನಲ್ಲಿ 3 ವಿಕೆಟ್ ಕಬಳಿಸಿ ಡೆಲ್ಲಿ ತಂಡಕ್ಕೆ ಬಿಗ್ ಶಾಕ್ ನೀಡಿದರು.
WPL 2024 Final: ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ; ಆರ್ಸಿಬಿ ಮೊದಲು ಬೌಲಿಂಗ್
ದಿಢೀರ್ ಕುಸಿದ ಡೆಲ್ಲಿ ಇನ್ನಿಂಗ್ಸ್
ನಂತರ ದಾಳಿಗಿಳಿದ ಕನ್ನಡತಿ ಶ್ರೇಯಾಂಕ ಪಾಟೀಲ್, ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ರನ್ನು ಎಲ್ಬಿಡ್ಬ್ಲ್ಯೂ ಬಲೆಗೆ ಬೀಳಿಸಿದರು. ಮೆಗ್ ಲ್ಯಾನಿಂಗ್ ಇನ್ನಿಂಗ್ಸ್ 23 ರನ್ಗಳಿಗೆ ಅಂತ್ಯಗೊಂಡಿತು. ಇಲ್ಲಿಂದ ಡೆಲ್ಲಿ ಇನ್ನಿಂಗ್ಸ್ ಕುಸಿಯಲಾರಂಭಿಸಿತು. ಇದರ ಲಾಭ ಪಡೆದ ಆರ್ಸಿಬಿ ಬೌಲರ್ಗಳು ಡೆಲ್ಲಿ ಬ್ಯಾಟರ್ಗಳಿಗೆ ಹೆಚ್ಚು ರನ್ ಬಿಟ್ಟುಕೊಡದೆ ಅವರನ್ನು ಒತ್ತಡಕ್ಕೆ ಸಿಲುಕಿಸಿದರು. ಹೀಗಾಗಿ ಒತ್ತಡಕ್ಕೊಳಗಾದ ಡೆಲ್ಲಿ ಬ್ಯಾಟರ್ಸ್ ಬಂದಷ್ಟೇ ವೇಗವಾಗಿ ಪೆವಿಲಿಯನ್ ಕಡೆ ಹೆಜ್ಜೆಹಾಕಿದರು.
ಕನ್ನಡತಿ ಶ್ರೇಯಾಂಕಗೆ 4 ವಿಕೆಟ್
14ನೇ ಓವರ್ನ ಮೊದಲ ಎಸೆತದಲ್ಲಿ ಆಶಾ ಕೇಪ್ ಅವರನ್ನು 8 ರನ್ಗಳಿಗೆ ಬಲಿ ಪಡೆದರೆ, ಜೆಸ್ ಜೊನಾಸೆನ್ ಕೂಡ ಆಶಾಗೆ ವಿಕೆಟ್ ಒಪ್ಪಿಸಿದರು. ಸೋಫಿ ಮೊಲಿನೆಕ್ಸ್ ಅವರ ಅದ್ಭುತ ಎಸೆತದಲ್ಲಿ ರಾಧಾ ರನೌಟ್ಗೆ ಬಲಿಯಾದರೆ, ಕೊನೆಯ ಮೂರು ವಿಕೆಟ್ಗಳನ್ನು ಕನ್ನಡತಿ ಶ್ರೇಯಾಂಕ ಪಡೆಯುವಲ್ಲಿ ಯಶಸ್ವಿಯಾದರು. ಶ್ರೇಯಾಂಕ, ಮಿನ್ನು ಮಣಿ (5 ರನ್) ಅರುಂಧತಿ ರೆಡ್ಡಿ (10 ರನ್) ತನಿಯಾ ಭಾಟಿಯಾ ಅವರನ್ನು ಶೂನ್ಯಕ್ಕೆ ಪೆವಿಲಿಯನ್ಗೆ ಕಳುಹಿಸಿದರು. ಫೈನಲ್ ಪಂದ್ಯದಲ್ಲಿ ಶ್ರೇಯಾಂಕ 4 ವಿಕೆಟ್ ಪಡೆಯುವ ಮೂಲಕ ಲೀಗ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತನ್ನದಾಗಿಸಿಕೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:03 pm, Sun, 17 March 24
