WPL 2024: ವುಮೆನ್ಸ್​ ಪ್ರೀಮಿಯರ್ ಲೀಗ್​ನಲ್ಲಿ ದಾಖಲೆ ಬರೆದ ಮೆಗ್ ಲ್ಯಾನಿಂಗ್

| Updated By: ಝಾಹಿರ್ ಯೂಸುಫ್

Updated on: Mar 06, 2024 | 10:46 AM

Meg Lanning: ಮಹಿಳಾ ಟಿ20 ಕ್ರಿಕೆಟ್​ನಲ್ಲಿ ಅತೀ ವೇಗವಾಗಿ 9 ಸಾವಿರ ರನ್ ಕಲೆಹಾಕಿದ ವಿಶ್ವ ದಾಖಲೆ ಹೊಂದಿರುವ ಮೆಗ್ ಲ್ಯಾನಿಂಗ್ ಇದೀಗ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲೂ ವಿಶೇಷ ದಾಖಲೆ ಬರೆದಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಪೂರೈಸುವುದರೊಂದಿಗೆ ಲ್ಯಾನಿಂಗ್ WPL ನಲ್ಲಿ ಈ ವಿಶೇಷ ಸಾಧನೆ ಮಾಡಿದ್ದಾರೆ.

WPL 2024: ವುಮೆನ್ಸ್​ ಪ್ರೀಮಿಯರ್ ಲೀಗ್​ನಲ್ಲಿ ದಾಖಲೆ ಬರೆದ ಮೆಗ್ ಲ್ಯಾನಿಂಗ್
Meg Lanning
Follow us on

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ (Meg Lanning) ವಿಶೇಷ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ಪರ ಮೆಗ್ ಲ್ಯಾನಿಂಗ್ ಹಾಗೂ ಶಫಾಲಿ ವರ್ಮಾ ಇನಿಂಗ್ಸ್ ಆರಂಭಿಸಿದ್ದರು.

ಮೊದಲ ವಿಕೆಟ್​ಗೆ 48 ರನ್​ಗಳ ಜೊತೆಯಾಟವಾಡಿ ಶಫಾಲಿ ವರ್ಮಾ (28) ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಮೆಗ್ ಲ್ಯಾನಿಂಗ್ 38 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 53 ರನ್ ಬಾರಿಸಿದರು. ಈ ರನ್​ಗಳೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ 500 ರನ್ ಕಲೆಹಾಕಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಮೆಗ್ ಲ್ಯಾನಿಂಗ್ ಪಾತ್ರರಾಗಿದ್ದಾರೆ.

ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಇದುವರೆಗೆ 14 ಪಂದ್ಯಗಳನ್ನಾಡಿರುವ ಮೆಗ್ ಲ್ಯಾನಿಂಗ್ 546 ರನ್​ ಕಲೆಹಾಕಿದ್ದಾರೆ. ಕಳೆದ ಸೀಸನ್​ನಲ್ಲಿ 345 ರನ್ ಬಾರಿಸಿದ್ದ ಲ್ಯಾನಿಂಗ್, ಈ ಬಾರಿ 5 ಪಂದ್ಯಗಳಿಂದ 201 ರನ್ ಕಲೆಹಾಕಿದ್ದಾರೆ. ಈ ಮೂಲಕ ವುಮೆನ್ಸ್​ ಪ್ರೀಮಿಯರ್ ಲೀಗ್​ನಲ್ಲಿ 500 ರನ್ ಕಲೆಹಾಕಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

WPL ನಲ್ಲಿ ಪ್ರತಿ ಮೈಲಿಗಲ್ಲನ್ನು ತಲುಪಿದ ಬ್ಯಾಟರ್​ಗಳು:

  • 100 ರನ್ಸ್​ : ಹೇಲಿ ಮ್ಯಾಥ್ಯೂಸ್ (MI)
  • 200 ರನ್ಸ್​ : ಮೆಗ್ ಲ್ಯಾನಿಂಗ್ (DC)
  • 300 ರನ್ಸ್​ : ಮೆಗ್ ಲ್ಯಾನಿಂಗ್ (DC)
  • 400 ರನ್ಸ್​ : ಮೆಗ್ ಲ್ಯಾನಿಂಗ್ (DC)
  • 𝟱𝟬𝟬 ರನ್ಸ್​ : ಮೆಗ್ ಲ್ಯಾನಿಂಗ್ (DC)

ಡೆಲ್ಲಿ ಕ್ಯಾಪಿಟಲ್ಸ್​ಗೆ ಭರ್ಜರಿ ಜಯ:

ಈ ಪಂದ್ಯದಲ್ಲಿ ಟಾಸ್ ಗೆದ್ದು ಮುಂಬೈ ಇಂಡಿಯನ್ಸ್ ತಂಡವು ಮೊದಲು ಬೌಲಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ಪರ ನಾಯಕಿ ಮೆಗ್ ಲ್ಯಾನಿಂಗ್ (53) ಹಾಗೂ ಜೆಮಿಮಾ ರೊಡ್ರಿಗಾಸ್ (69) ಅರ್ಧಶತಕ ಬಾರಿಸಿದ್ದರು. ಈ ಹಾಫ್​ ಸೆಂಚುರಿಗಳ ನೆರವಿನಿಂದ  ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ವಿಕೆಟ್ ಕಳೆದುಕೊಂಡು 192 ರನ್ ಕಲೆಹಾಕಿತು.

ಇದನ್ನೂ ಓದಿIPL 2024: CSK ತಂಡಕ್ಕೆ ಬಿಗ್ ಶಾಕ್: ಸ್ಟಾರ್ ಆಟಗಾರ ಐಪಿಎಲ್​ನಿಂದ ಔಟ್..!

193 ರನ್​ಗಳ ಗುರಿ ಪಡೆದ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಆರಂಭ ಪಡೆಯಲು ಸಾಧ್ಯವಾಗಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಅಮನ್ಜೋತ್ ಕೌರ್ 42 ರನ್ ಕಲೆಹಾಕಿದರು. ಆದರೆ ಉಳಿದ ಬ್ಯಾಟರ್​ಗಳಿಂದ ಉತ್ತಮ ಸಾಥ್ ದೊರೆತಿರಲಿಲ್ಲ. ಅಂತಿಮವಾಗಿ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 163 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು 29 ರನ್​ಗಳ ಭರ್ಜರಿ ಜಯ ಸಾಧಿಸಿದೆ.