ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಜಯ ಸಾಧಿಸಿದೆ. ತವರಿನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ RCB ತಂಡವು ದ್ವಿತೀಯಾರ್ಧವನ್ನು ಆರಂಭಿಸಿದೆ. ಅಂದರೆ ವುಮೆನ್ಸ್ ಪ್ರೀಮಿಯರ್ ಲೀಗ್ನ ದ್ವಿತೀಯಾರ್ಧದ ಪಂದ್ಯಗಳು ಇನ್ನು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಈ ಬಾರಿಯ ಐಪಿಎಲ್ ಅನ್ನು ಎರಡು ನಗರಗಳಲ್ಲಿ ಆಯೋಜಿಸಲಾಗುತ್ತಿದ್ದು, ಅದರಂತೆ ಮೊದಲಾರ್ಧದ ಪಂದ್ಯಗಳಿಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸಿತ್ತು. ಅಲ್ಲದೆ ಆರ್ಸಿಬಿ ತಂಡವು ದ್ವಿತೀಯಾರ್ಧದ ಮೊದಲ ಪಂದ್ಯವನ್ನು ತವರು ಮೈದಾನದಲ್ಲಿ ಆಡಿದೆ. ಇದೀಗ ಮುಂದಿನ ಪಂದ್ಯಗಳಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದೆಹಲಿಗೆ ಪ್ರಯಾಣ ಬೆಳೆಸಿದೆ.
ಇತ್ತ ರಾಯಲ್ ಅಭಿಮಾನಿಗಳ ಮುಂದೆ ಕೊನೆಯ ಬಾರಿ ಕಣಕ್ಕಿಳಿದ ಆರ್ಸಿಬಿ ತಂಡವು ಗೆಲುವಿನ ಉಡುಗೊರೆ ನೀಡಿದ್ದಾರೆ. ಅಲ್ಲದೆ ಪಂದ್ಯ ಮುಗಿದ ಬಳಿಕ ಆರಂಭದಿಂದಲೂ ಬೆಂಬಲಿಸುತ್ತಾ ಬಂದಿದ್ದ ಅಭಿಮಾನಿಗಳಿಗೆ ಆರ್ಸಿಬಿ ತಂಡವು ಧನ್ಯವಾದ ತಿಳಿಸಿದೆ.
ಇದೀಗ ಆರ್ಸಿಬಿ ತಂಡದ ಆಟಗಾರ್ತಿಯರು ಮೈದಾನದ ಸುತ್ತ ಸಾಗುತ್ತಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
A victory lap around the Chinnaswamy to honour the best fans in the whole world! 🥹❤️#PlayBold #SheIsBold #ನಮ್ಮRCB #WPL2024 #UPWvRCB pic.twitter.com/vhVh3cm29d
— Royal Challengers Bangalore (@RCBTweets) March 4, 2024
ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತ ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಈ ಅವಕಾಶವನ್ನು ಬಳಸಿಕೊಂಡ ಆರ್ಸಿಬಿ ಪರ ನಾಯಕ ಸ್ಮೃತಿ ಮಂಧಾನ 50 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ 80 ರನ್ ಬಾರಿಸಿದರು. ಇನ್ನು ಎಲ್ಲಿಸ್ ಪೆರ್ರಿ 37 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 58 ರನ್ ಚಚ್ಚಿದರು. ಈ ಅರ್ಧಶತಕಗಳ ನೆರವಿನಿಂದ ಆರ್ಸಿಬಿ ತಂಡವು 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 198 ರನ್ ಕಲೆಹಾಕಿತು.
ಇದನ್ನೂ ಓದಿ: IPL 2024: 10 ತಂಡಗಳ ನಾಯಕರುಗಳ ಪಟ್ಟಿ ಇಲ್ಲಿದೆ
199 ರನ್ಗಳ ಕಠಿಣ ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್ ಪರ ನಾಯಕಿ ಅಲಿಸ್ಸಾ ಹೀಲಿ 38 ಎಸೆತಗಳಲ್ಲಿ 55 ರನ್ ಬಾರಿಸಿದ್ದರು. ಇದಾಗ್ಯೂ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ಪರಿಣಾಮ ಯುಪಿ ವಾರಿಯರ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 175 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಆರ್ಸಿಬಿ ತಂಡ 23 ರನ್ಗಳ ಭರ್ಜರಿ ಜಯ ಸಾಧಿಸಿತು.