WPL 2024: ಬಲಿಷ್ಠ ಮುಂಬೈಗೆ ಮಣ್ಣು ಮುಕ್ಕಿಸಿದ ಯುಪಿ ವಾರಿಯರ್ಸ್​..!

|

Updated on: Feb 28, 2024 | 10:59 PM

WPL 2024: ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಇಂದು ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ ಆರನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ಯುಪಿ ವಾರಿಯರ್ಸ್ ತಂಡ ಲೀಗ್​ನಲ್ಲಿ ಮೊದಲ ಜಯ ದಾಖಲಿಸಿದೆ.

WPL 2024: ಬಲಿಷ್ಠ ಮುಂಬೈಗೆ ಮಣ್ಣು ಮುಕ್ಕಿಸಿದ ಯುಪಿ ವಾರಿಯರ್ಸ್​..!
ಯುಪಿ ವಾರಿಯರ್ಸ್
Follow us on

ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಇಂದು ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ ಆರನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ಯುಪಿ ವಾರಿಯರ್ಸ್ ತಂಡ (UP Warriorz Women beat Mumbai Indians Women) ಲೀಗ್​ನಲ್ಲಿ ಮೊದಲ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ವಾರಿಯರ್ಸ್ ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ಗೆಲುವಿಗೆ 162 ರನ್​ಗಳ ಸವಾಲನ್ನು ನೀಡಿತು. ಹಾಗೆ ನೋಡಿದರೆ ಯುಪಿ ತಂಡಕ್ಕೆ ಈ ಸವಾಲು ಬಹಳ ದೊಡ್ಡದಿತ್ತು. ಆದರೆ ಸೊಲ್ಲಾಪುರದ ಕಿರಣ ನವಗಿರೆಯ (Kiran Navgire) ಬಿರುಗಾಳಿ ಬ್ಯಾಟಿಂಗ್​ ಮುಂದೆ ಮುಂಬೈ ಬೌಲರ್​ಗಳು ತತ್ತರಿಸಿ ಹೋದರು. ಹೀಗಾಗಿ ಅಬ್ಬರದ ಆರಂಭ ಪಡೆದುಕೊಂಡ ಯುಪಿ ತಂಡ ಅಂತಿಮವಾಗಿ 16.3 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.

ಸ್ಫೋಟಕ ಆರಂಭ

ಮುಂಬೈ ನೀಡಿದ 162 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಯುಪಿ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕಿ ಅಲಿಸ್ಸಾ ಹೀಲಿ ಹಾಗೂ ಕಿರಣ್ ನವಗಿರೆ 91 ರನ್​ಗಳ ಬೃಹತ್ ಜೊತೆಯಾಟ ನೀಡಿದರು. ಈ ಹಂತದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಕಿರಣ್ 31 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 57 ರನ್‌ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿದರು.ಕಿರಣ್ ಅವರ ಈ ಸ್ಫೋಟಕ ಬ್ಯಾಟಿಂಗ್​ನಿಂದಾಗಿ ಯುಪಿ ವಾರಿಯರ್ಸ್ ಗೆಲುವು ಸುಲಭವಾಯಿತು.

WPL 2024: ಆರ್​ಸಿಬಿ ಕ್ವೀನ್ ಶ್ರೇಯಾಂಕ ಪಾಟೀಲ್​ಗೆ ಬಂತು ಮದುವೆ ಪ್ರಪೋಸಲ್

ಗೆಲುವಿನ ಇನ್ನಿಂಗ್ಸ್ ಆಡಿದ ಹ್ಯಾರಿಸ್, ದೀಪ್ತಿ

ಕಿರಣ್ ಹೊರತುಪಡಿಸಿ ನಾಯಕಿ ಹೀಲಿ ಕೂಡ ಸಮಯೋಜಿತ ಬ್ಯಾಟಿಂಗ್ ಮಾಡಿ 29 ಎಸೆತಗಳಲ್ಲಿ 33 ರನ್ ಕಲೆಹಾಕಿದರು. ಆ ನಂತರ ನಾಲ್ಕು ಮತ್ತು ಐದನೇ ಕ್ರಮಾಂಕದಲ್ಲಿ ಬಂದ ಗ್ರೇಸ್ ಹ್ಯಾರಿಸ್ ಹಾಗೂ ದೀಪ್ತಿ ಶರ್ಮಾ ಕ್ರಮವಾಗಿ 38 (17 ಎಸೆತಗಳು) 27 ರನ್ ಕಲೆಹಾಕಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಮುಂಬೈ ಇನ್ನಿಂಗ್ಸ್

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡಕ್ಕೆ ಆರಂಭಿಕರು ಅರ್ಧಶತಕದ ಜೊತೆಯಾಟ ನೀಡಿದರು. ಓಪನರ್ ಹೇಲಿ ಮ್ಯಾಥ್ಯೂಸ್ 55 ರನ್​ಗಳ ಅರ್ಧಶತಕದ ಇನ್ನಿಂಗ್ಸ್ ಆಡಿದರೆ, ಯಾಸ್ತಿಕಾ ಭಾಟಿಯಾ 26 ರನ್ ಗಳಿಸಿ ಔಟಾದರು. ನಾಯಕಿ ನ್ಯಾಟ್ ಸ್ಕಿವರ್-ಬ್ರಂಟ್ 19 ರನ್​ಗಳಿಗೆ ಸುಸ್ತಾದರೆ, ಅಮೆಲಿಯಾ ಕೆರ್ 23 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು. ಕೊನೆಯಲ್ಲಿ ಪೂಜಾ ವಸ್ತ್ರಾಕರ್ 18 ರನ್, ಇಸ್ಸಿ ವಾಂಗ್ 15 ರನ್ ಬಾರಿಸಿ ತಂಡವನ್ನು 161 ರನ್​ಗಳ ಸ್ಫರ್ಧಾತ್ಮಕ ಮೊತ್ತದ ಕೊಂಡೊಯ್ದಿದ್ದರು.

ಎರಡೂ ತಂಡಗಳು

ಮುಂಬೈ ಇಂಡಿಯನ್ಸ್: ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹೇಲಿ ಮ್ಯಾಥ್ಯೂಸ್, ನೇಟ್ ಸಿವರ್-ಬ್ರಂಟ್ (ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಅಮನ್ಜೋತ್ ಕೌರ್, ಇಸ್ಸಿ ವಾಂಗ್, ಎಸ್ ಸಜ್ನಾ, ಹುಮೈರಾ ಕಾಜಿ, ಕೀರ್ತನಾ ಬಾಲಕೃಷ್ಣನ್, ಸೈಕಾ ಇಶಾಕ್

ಯುಪಿ ವಾರಿಯರ್ಸ್: ಅಲಿಸ್ಸಾ ಹೀಲಿ (ವಿಕೆಟ್‌ಕೀಪರ್/ನಾಯಕಿ), ವೃಂದಾ ದಿನೇಶ್, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ಪೂನಂ ಖೇಮ್ನಾರ್, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್, ಅಂಜಲಿ ಸಾರ್ವಾನಿ, ರಾಜೇಶ್ವರಿ ಗಾಯಕ್ವಾಡ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ