
ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ (RCB vs MI) ನಡುವಿನ ಮಹಿಳಾ ಪ್ರೀಮಿಯರ್ ಲೀಗ್ನ (Women’s Premier League) ನಾಲ್ಕನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ಆರ್‌ಸಿಬಿ ಲೀಗ್ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ರಣರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಕೊನೆಯ ಎಸೆತದವರೆಗೂ ಯಾವ ತಂಡಕ್ಕೆ ಗೆಲುವು ಸಿಗಲಿದೆ ಎಂಬುದನ್ನು ಹೇಳುವುದು ಕಷ್ಟಕರವಾಗಿತ್ತು. ಆದಾಗ್ಯೂ ಆರ್‌ಸಿಬಿ ಪರ ಆಲ್ರೌಂಡರ್ ಪ್ರದರ್ಶನ ನೀಡಿದ ನಡಿನ್ ಡಿ ಕ್ಲರ್ಕ್ ಕೊನೆಯ ಓವರ್‌ನಲ್ಲಿ 2 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 154 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ಗೆಲುವಿನ ದಡ ಮುಟ್ಟಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಕಳಪೆ ಆರಂಭವನ್ನೇ ಕಂಡಿತು. ಅಮೆಲಿಯಾ ಕೆರ್ 15 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿ ಔಟಾದರೆ, ಆ ನಂತರ ಬಂದ ನ್ಯಾಟ್ ಸಿವರ್-ಬ್ರಂಟ್, ಹರ್ಮನ್ ಪ್ರೀತ್ ಕೌರ್ ಬೇಗನೆ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ಮುಂಬೈ ತಂಡವು ಕೇವಲ 67 ರನ್ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದಾಗ್ಯೂ, ಎರಡೆರಡು ಜೀವದಾನಗಳ ಲಾಭ ಪಡೆದ ಸಜೀವನ ಸಜ್ನಾ ಮತ್ತು ನಿಕೋಲಾ ಕ್ಯಾರಿ ಜೋಡಿ ಅದ್ಭುತ ಬ್ಯಾಟಿಂಗ್ ನಡೆಸಿ ಮುಂಬೈ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಸಜೀವನ ಸಜ್ನಾ 25 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 45 ರನ್ ಬಾರಿಸಿದರೆ, ನಿಕೋಲಾ ಕ್ಯಾರಿ 29 ಎಸೆತಗಳಲ್ಲಿ 40 ರನ್ ಗಳಿಸುವ ಮೂಲಕ ಮುಂಬೈ ತಂಡವನ್ನು 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 154 ರನ್ ಗಳಿಸಲು ಸಹಾಯ ಮಾಡಿದರು.
ಮತ್ತೊಂದೆಡೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಲಾರೆನ್ ಬೆಲ್ ಮಾರಕ ಬೌಲಿಂಗ್ ಮಾಡಿದರು. ಬೆಲ್ ನಾಲ್ಕು ಓವರ್ ಸ್ಪೆಲ್ನಲ್ಲಿ ಕೇವಲ 14 ರನ್ ಬಿಟ್ಟುಕೊಟ್ಟಿದ್ದು, ಮಾತ್ರವಲ್ಲದೆ ಬರೋಬ್ಬರಿ 19 ಡಾಟ್ ಬಾಲ್ ಗಳನ್ನು ಎಸೆದು ಒಂದು ವಿಕೆಟ್ ಪಡೆದರು. ಏತನ್ಮಧ್ಯೆ , ನಾಡಿನ್ ಡಿ ಕ್ಲರ್ಕ್ ತಮ್ಮ ನಾಲ್ಕು ಓವರ್‌ಗಳಲ್ಲಿ 26 ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ಕನ್ನಡತಿ ಶ್ರೇಯಾಂಕ ಪಾಟೀಲ್ ಕೂಡ ಒಂದು ವಿಕೆಟ್ ಪಡೆದರು.
155 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಆರಂಭ ಪಡೆದುಕೊಂಡಿತು. ಗ್ರೇಸ್ ಹ್ಯಾರಿಸ್ ಮತ್ತು ನಾಯಕಿ ಸ್ಮೃತಿ ಮಂಧಾನ ಮೊದಲ ವಿಕೆಟ್ಗೆ 3.5 ಓವರ್‌ಗಳಲ್ಲಿ 40 ರನ್ ಕಲೆಹಾಕಿದರು. ಆದರೆ ಈ ಜೋಡಿ ಪೆವಿಲಿಯನ್ ಸೇರಿಕೊಂಡ ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಿಗೆ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲಿಲ್ಲ. ಹೀಗಾಗಿ ಆರ್‌ಸಿಬಿ 121 ರನ್ಗಳಿಗೆ 7 ವಿಕೆಟ್ಗಳನ್ನು ಕಳೆದುಕೊಂಡಿತು. ಇದರಿಂದ ಪಂದ್ಯವು ಆರ್‌ಸಿಬಿ ಹಿಡಿತದಿಂದ ಜಾರುವಂತೆ ತೋರುತ್ತಿತ್ತು. ಆದಾಗ್ಯೂ, ತಂಡದ ಪರ ಬ್ಯಾಟಿಂಗ್ನಲ್ಲೂ ಏಕಾಂಗಿ ಹೋರಾಟ ನೀಡಿದ ನಡಿನ್ ಡಿ ಕ್ಲರ್ಕ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ನಡಿನ್ ಡಿ ಕ್ಲರ್ಕ್ 44 ಎಸೆತಗಳಲ್ಲಿ 63 ರನ್ ಗಳಿಸಿ ಆರ್ಸಿಬಿಯನ್ನು ಗೆಲುವಿನತ್ತ ಕೊಂಡೊಯ್ದರು.
WPL 2026: 6,4,6,4..! ಕೊನೆಯ ಓವರ್‌ನಲ್ಲಿ ಪಂದ್ಯ ಗೆಲ್ಲಿಸಿದ ನಡಿನ್ ಡಿ ಕ್ಲರ್ಕ್; ವಿಡಿಯೋ ನೋಡಿ
ಕೊನೆಯ ಎರಡು ಓವರ್‌ಗಳಲ್ಲಿ ಆರ್‌ಸಿಬಿ ಗೆಲುವಿಗೆ 29 ರನ್‌ಗಳ ಅಗತ್ಯವಿತ್ತು. 19 ನೇ ಓವರ್‌ನಲ್ಲಿ ನಡಿನ್ ಡಿ ಕ್ಲರ್ಕ್ ಮತ್ತು ಪ್ರೇಮಾ ರಾವತ್ ಜೊತೆಯಾಗಿ 11 ರನ್ ಕಲೆಹಾಕಿದರು. ಹೀಗಾಗಿ ಕೊನೆಯ ಓವರ್‌ನಲ್ಲಿ ಆರ್‌ಸಿಬಿ ಗೆಲುವಿಗೆ 18 ರನ್ ಬೇಕಾಗಿದ್ದವು. ನ್ಯಾಟ್ ಸಿವರ್-ಬ್ರಂಟ್ ಎಸೆದ ಈ ಓವರ್ನ ಮೊದಲ 2 ಎಸೆತಗಳಲ್ಲಿ ಕ್ಲರ್ಕ್ಗೆ ಯಾವುದೇ ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಆದರೆ ಉಳಿದ 4 ಎಸೆತಗಳಲ್ಲಿ ಕ್ಲರ್ಕ್ ಕ್ರಮವಾಗಿ 6,4,6,4 ಬಾರಿಸಿ ಮುಂಬೈ ತಂಡದಿಂದ ಜಯವನ್ನು ಕಸಿದುಕೊಂಡರು. ನಾಡಿನ್ ಡಿ ಕ್ಲರ್ಕ್ ತಮ್ಮ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:15 pm, Fri, 9 January 26