WTC Final 2023: ಡಬ್ಲ್ಯುಟಿಸಿ ಫೈನಲ್​ಗೆ ಅಂಪೈರ್​ಗಳ ನೇಮಕ; ಟೀಂ ಇಂಡಿಯಾಗೆ ಶುರುವಾಯ್ತು ನಡುಕ..!

|

Updated on: May 31, 2023 | 5:33 PM

WTC Final 2023: ಕಾಕತಾಳೀಯವೆಂಬಂತೆ ಈ ಅಂಪೈರ್​ಗಳ ಸಮಿತಿ ಕಾರ್ಯನಿರ್ವಹಿಸಿದ ಪ್ರಮುಖ ಐಸಿಸಿ ಈವೆಂಟ್​ಗಳಲ್ಲಿ ಟೀಂ ಇಂಡಿಯಾ ಸೋತಿರುವುದು ಟೀಂ ಇಂಡಿಯಾಕ್ಕೆ ಆರಂಭದಲ್ಲೇ ವಿಘ್ನ ಎದುರಾದಂತ್ತಾಗಿದೆ.

WTC Final 2023: ಡಬ್ಲ್ಯುಟಿಸಿ ಫೈನಲ್​ಗೆ ಅಂಪೈರ್​ಗಳ ನೇಮಕ; ಟೀಂ ಇಂಡಿಯಾಗೆ ಶುರುವಾಯ್ತು ನಡುಕ..!
ಡಬ್ಲ್ಯುಟಿಸಿ ಫೈನಲ್​ಗೆ ಅಂಪೈರ್​ಗಳ ನೇಮಕ
Follow us on

ಆಸ್ಟ್ರೇಲಿಯಾ ಮತ್ತು ಭಾರತ (India vs Australia) ನಡುವೆ ಜೂನ್ 7 ರಿಂದ ಓವಲ್‌ನಲ್ಲಿ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ (World Test Championship final) ಅಂಪೈರಿಂಗ್ ಮಾಡುವ ಅಂಪೈರ್​ಗಳ ಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಪ್ರಕಟಿಸಿದೆ. ನ್ಯೂಜಿಲೆಂಡ್‌ನ ಕ್ರಿಸ್ ಗಫ್ನಿ ಮತ್ತು ಇಂಗ್ಲೆಂಡ್‌ನ ರಿಚರ್ಡ್ ಇಲ್ಲಿಂಗ್‌ವರ್ತ್ (Chris Gaffaney and Richard Illingworth) ಅವರನ್ನು ಆನ್-ಫೀಲ್ಡ್ ಅಂಪೈರ್‌ಗಳಾಗಿ ನೇಮಕ ಮಾಡಲಾಗಿದ್ದು. ಟಿವಿ ಅಂಪೈರ್ ಆಗಿ ಇಂಗ್ಲೆಂಡ್‌ನ ರಿಚರ್ಡ್ ಕೆಟಲ್‌ಬರೋ ನೇಮಕಗೊಂಡಿದ್ದರೆ, ಶ್ರೀಲಂಕಾದ ಕುಮಾರ್ ಧರ್ಮಸೇನಾ (Kumar Dharmasena) ನಾಲ್ಕನೇ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ವೆಸ್ಟ್ ಇಂಡೀಸ್‌ನ ರಿಚಿ ರಿಚರ್ಡ್‌ಸನ್ ಮ್ಯಾಚ್ ರೆಫರಿಯಾಗಿ ಆಯ್ಕೆಯಾಗಿದ್ದಾರೆ. ಆದರೆ ವಿಚಿತ್ರ ಸಂಗತಿಯೆಂದರೆ ಕಾಕತಾಳೀಯವೆಂಬಂತೆ ಈ ಅಂಪೈರ್​ಗಳ ಸಮಿತಿ ಕಾರ್ಯನಿರ್ವಹಿಸಿದ ಪ್ರಮುಖ ಐಸಿಸಿ ಈವೆಂಟ್​ಗಳಲ್ಲಿ ಟೀಂ ಇಂಡಿಯಾ ಸೋತಿರುವುದು ಟೀಂ ಇಂಡಿಯಾಕ್ಕೆ ಆರಂಭದಲ್ಲೇ ವಿಘ್ನ ಎದುರಾದಂತ್ತಾಗಿದೆ.

48ವರ್ಷದ ಕ್ರಿಸ್ ಗಫ್ನಿ ತಮ್ಮ ವೃತ್ತಿಜೀವನದ 49ನೇ ಟೆಸ್ಟ್ ಪಂದ್ಯದಲ್ಲಿ ಅಂಪೈರಿಂಗ್ ಮಾಡಲಿದ್ದು, 59ವರ್ಷದ ಇಲ್ಲಿಂಗ್‌ವರ್ತ್‌ಗೆ ಇದು 64ನೇ ಟೆಸ್ಟ್‌ ಪಂದ್ಯವಾಗಿದೆ. ಇನ್ನು ಟೀಂ ಇಂಡಿಯಾದ ಬಗ್ಗೆ ಹೇಳಬೇಕೆಂದರೆ, ಕಳೆದ 6 ವರ್ಷಗಳಲ್ಲಿ ಭಾರತ ತಂಡ ಮೂರನೇ ಬಾರಿಗೆ ಐಸಿಸಿ ಟೂರ್ನಿಯೊಂದರ ಫೈನಲ್ ಆಡಲಿದೆ. ಇದಕ್ಕೂ ಮುನ್ನ ಟೀಂ ಇಂಡಿಯಾ 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯವನ್ನು ಆಡಿತ್ತು. ನಂತರ ಕಳೆದ ಬಾರಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡಿ ಸೋತಿತ್ತು. ಆ ನಂತರ ಯಾವುದೇ ಐಸಿಸಿ ಈವೆಂಟ್​ಗಳಲ್ಲಿ ಟೀಂ ಇಂಡಿಯಾ ಫೈನಲ್​ ಆಡಿಲ್ಲ.

ನಾಕೌಟ್ ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿಲ್ಲ

ಕಾಕತಾಳೀಯವೆಂದರೆ, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಆನ್-ಫೀಲ್ಡ್ ಅಂಪೈರ್‌ ಮತ್ತು ಟಿವಿ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ಮೂವರು ಅಂಪೈರ್​ಗಳು ಕಳೆದ 6 ವರ್ಷಗಳಲ್ಲಿ ಭಾರತ ಆಡಿದ ಎಲ್ಲಾ ನಾಕೌಟ್ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ್ದಾರೆ. ದುರಾದೃಷ್ಟವೆಂದರೆ ಈ ಎಲ್ಲಾ ನಾಕೌಟ್ ಪಂದ್ಯಗಳಲ್ಲಿ ಭಾರತ ಸೋತಿದೆ.

WTC Final 2023: ಐಪಿಎಲ್ ಫೈನಲ್ ಮುಗಿಸಿ ಲಂಡನ್​ಗೆ ಹಾರಿದ ಟೀಂ ಇಂಡಿಯಾದ ಕೊನೆಯ ಬ್ಯಾಚ್

ವಿಶೇಷವಾಗಿ ರಿಚರ್ಡ್ ಕೆಟಲ್‌ಬರೋ. ಈ ಇಂಗ್ಲೆಂಡ್ ಅಂಪೈರ್ 2017 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಮತ್ತು 2019 ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆನ್-ಫೀಲ್ಡ್ ಅಂಪೈರ್ ಆಗಿದ್ದರು. ಕಳೆದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲೂ ಟಿವಿ ಅಂಪೈರ್‌ ಆಗಿದ್ದರು ಈ ಮೂರು ನಾಕೌಟ್ ಪಂದ್ಯಗಳಲ್ಲೂ ಭಾರತ ಸೋತಿದೆ. ಹಾಗೆಯೇ ರಿಚರ್ಡ್ ಇಲ್ಲಿಂಗ್‌ವರ್ತ್‌ ಅವರು 2021 ರ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು 2019 ರ ಸೆಮಿ-ಫೈನಲ್‌ನಲ್ಲಿ ಆನ್-ಫೀಲ್ಡ್ ಅಂಪೈರ್ ಆಗಿದ್ದರು. ಅದೇ ರೀತಿ, ಕ್ರಿಸ್ ಗಫ್ನಿ 2022 ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಟಿವಿ ಅಂಪೈರ್ ಆಗಿದ್ದರು. ಈ ಪಂದ್ಯದಲ್ಲಿ ಕುಮಾರ್ ಧರ್ಮಸೇನಾ ಆನ್ ಫೀಲ್ಡ್ ಅಂಪೈರ್ ಆಗಿದ್ದರು.

ಇತಿಹಾಸ ಬದಲಾಗುತ್ತಾ?

ಅದೇನೇ ಕಾಕತಾಳೀಯವಿರಲಿ. ಒಂದು ತಂಡದ ಸೋಲು ಅಥವಾ ಗೆಲುವು ಯಾರು ಅಂಪೈರಿಂಗ್ ಮಾಡುತ್ತಿದ್ದಾರೆ ಎಂಬುದರ ಮೇಲೆ ನಿರ್ಧಾರವಾಗುವುದಿಲ್ಲ. ಏಕೆಂದರೆ ಮೈದಾನದಲ್ಲಿ ಉಭಯ ತಂಡಗಳ ಪ್ರದರ್ಶನದ ಆಧಾರದ ಮೇಲೆ ಗೆಲುವು ಯಾವ ತಂಡಕ್ಕೆ ಒಲಿಯುತ್ತದೆ ಎಂಬುದು ಖಚಿತವಾಗಲಿದೆ. ಹೀಗಾಗಿ ಈ ಬಾರಿಯಾದರೂ ಟೀಂ ಇಂಡಿಯಾ ಐಸಿಸಿ ಟ್ರೋಫಿ ಗೆದ್ದು ಹಲವು ವರ್ಷಗಳಿಂದ ಭಾರತ ಕ್ರಿಕೆಟ್ ಎದುರಿಸುತ್ತಿರುವ ಐಸಿಸಿ ಟ್ರೋಫಿಗಳ ಬರವನ್ನು ನೀಗಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:31 pm, Wed, 31 May 23