
ಜೂನ್ 11 ರಂದು ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಆರಂಭವಾಗಿದ್ದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (World Test Championship) ಮೂರನೇ ಆವೃತ್ತಿಯ ಫೈನಲ್ ಪಂದ್ಯ ನಾಲ್ಕೇ ದಿನಕ್ಕೆ ಬಹುನಿರೀಕ್ಷಿತ ಫಲಿತಾಂಶದೊಂದಿಗೆ ಅಂತ್ಯಗೊಂಡಿದೆ. ಒಂದೆಡೆ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಕಿರೀಟ ತೊಡುವ ಇರಾದೆಯೊಂದಿಗೆ ಆಸ್ಟ್ರೇಲಿಯಾ ತಂಡ ಲಾರ್ಡ್ಸ್ ಅಂಗಳಕ್ಕಿಳಿದಿದ್ದರೆ, ಮತ್ತೊಂದೆಡೆ ಚೊಚ್ಚಲ ಟೆಸ್ಟ್ ಚಾಂಪಿಯನ್ ಪಟ್ಟ ಹಾಗೆಯೇ ಬಹು ವರ್ಷಗಳ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುವ ಗುರಿಯೊಂದಿಗೆ ಬಂದಿದ್ದ ದಕ್ಷಿಣ ಆಫ್ರಿಕಾ ತಂಡಗಳು (Australia vs South Africa) ಮುಖಾಮುಖಿಯಾಗಿದ್ದವು. ಉಭಯ ತಂಡಗಳಲ್ಲೂ ಬಲಿಷ್ಠ ಆಟಗಾರರಿಂದಲೇ ತುಂಬಿ ತುಳುಕುತ್ತಿದ್ದರಿಂದ ಈ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಬೌಲರ್ಗಳ ಪಾರುಪತ್ಯದಲ್ಲೇ ನಡೆದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಜಯ ಗಳಿಸುವಲ್ಲಿ ಕೊನೆಗೂ ಯಶಸ್ವಿಯಾಗಿದೆ.
ಆಸ್ಟ್ರೇಲಿಯಾ ನೀಡಿದ 282 ರನ್‌ಗಳ ಗುರಿ ಬೆನ್ನಟ್ಟಿದ ಆಫ್ರಿಕಾಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ರಯಾನ್ ರಿಕಲ್ಟನ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲ್ಲು ಸಾಧ್ಯವಾಗದೆ ಕೇವಲ ಮೂರನೇ ಓವರ್‌ನಲ್ಲಿ ಪೆವಿಲಿಯನ್ ಸೇರಿಕೊಂಡರು. ಇದಾದ ನಂತರ ಜೊತೆಯಾದ ಮಾರ್ಕ್ರಾಮ್ ಹಾಗೂ ವಿಯಾನ್ ಮುಲ್ಡರ್ ಅರ್ಧಶತಕದ ಜೊತೆಯಾಟವನ್ನಾಡಿ ತಂಡವನ್ನು ಸಂಕಷ್ಟದಿಂದ ಹೊರತಂದರು. ವಿಯಾನ್ ಮುಲ್ಡರ್ ಅವರ ಇನ್ನಿಂಗ್ಸ್ 27 ರನ್ ಗಳಿಗೆ ಅಂತ್ಯವಾಯಿತು. ಆ ಬಳಿಕ ಜತೆಯಾದ ಐಡೆನ್ ಮಾರ್ಕ್ರಾಮ್ ಹಾಗೂ ಟೆಂಬಾ ಬವುಮಾ ಶತಕದ ಪಾಲುದಾರಿಕೆಯನ್ನು ಮಾಡಿ ತಂಡವನ್ನು 200 ರನ್‌ಗಳ ಗಡಿ ದಾಟಿಸಿದಲ್ಲದೆ ಮೂರನೇ ದಿನದಾಟವನ್ನು ಅಜೇಯವಾಗಿ ಮುಗಿಸಿದ್ದರು.
𝐂𝐇𝐀𝐌𝐏𝐈𝐎𝐍𝐒 🏆🇿🇦
South Africa take home the 𝐌𝐚𝐜𝐞 👏#WTC25 #SAvAUS pic.twitter.com/Yy4C4AQEO7
— ICC (@ICC) June 14, 2025
ನಾಲ್ಕನೇ ದಿನದಾಟದಲ್ಲಿ ಈ ಇಬ್ಬರೇ ನಿಂತು ತಂಡವನ್ನು ಗೆಲುವಿನ ದಡ ಸೇರಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನಾಯಕ ಬವುಮಾ ತಮ್ಮ ಸ್ಕೋರ್ಗೆ ಕೇವಲ 1 ರನ್ ಸೇರಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಟ್ರಿಸ್ಟಾನ್ ಸ್ಟಬ್ಸ್ ಕೂಡ 8 ರನ್ಗಳಿಗೆ ಸುಸ್ತಾದರು. ಈ ಹಂತದಲ್ಲಿ ಆಸೀಸ್ ಪರ ಪಂದ್ಯ ವಾಲುತ್ತಿರುವಂತೆ ತೋರಿತು. ಆದರೆ ಮೂರನೇ ದಿನದಾಟದಲ್ಲಿ ಶತಕ ಸಿಡಿಸಿ ಅಜೇಯರಾಗಿ ಉಳಿದಿದ್ದ ಐಡೆನ್ ಮಾರ್ಕ್ರಾಮ್ ನಾಲ್ಕನೇ ದಿನವೂ ಅದೇ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು.
WTC 2025 final: ಗೆಲುವಿನ ಶತಕ ಸಿಡಿಸಿ ಆಸೀಸ್ ಬೌಲರ್ಗಳ ಅಹಂ ಮುರಿದ ಐಡೆನ್ ಮಾರ್ಕ್ರಾಮ್
ಗೆಲುವಿಗೆ ಇನ್ನು 6 ರನ್ ಬೇಕಾಗಿದ್ದಾಗ ಮಾರ್ಕ್ರಾಮ್ ವಿಕೆಟ್ ಪತನವಾಯಿತು. ಕೊನೆಯದಾಗಿ ಕೈಲ್ ವೆರ್ರೆನ್ ಅವರ ಬ್ಯಾಟ್‌ನಿಂದ ಗೆಲುವಿನ ರನ್ ಬಂದ ತಕ್ಷಣ, ಲಾರ್ಡ್ಸ್ ಡ್ರೆಸ್ಸಿಂಗ್ ಕೋಣೆಯಲ್ಲಿದ್ದ ದಕ್ಷಿಣ ಆಫ್ರಿಕಾದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ, ಕ್ರೀಡಾಂಗಣದಲ್ಲಿ ಹಾಜರಿದ್ದ ಪ್ರತಿಯೊಬ್ಬ ದಕ್ಷಿಣ ಆಫ್ರಿಕಾದ ಅಭಿಮಾನಿ ಮತ್ತು ಸಾಮಾನ್ಯ ಕ್ರಿಕೆಟ್ ಅಭಿಮಾನಿಗಳು ಭಾವುಕರಾದರು. ಈ ಗೆಲುವಿನೊಂದಿಗೆ ಪ್ರತಿ ಐಸಿಸಿ ಈವೆಂಟ್ನಲ್ಲೂ ಗೆಲುವಿನ ಸನಿಹಕ್ಕೆ ಬಂದು ಎಡವುತ್ತಿದ್ದ ಆಫ್ರಿಕಾ ತಂಡ ಕೊನೆಗೂ ಚೋಕರ್ಸ್ ಹಣೆ ಪಟ್ಟಿಯನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾಯಿತು. ಇದು ಮಾತ್ರವಲ್ಲದೆ 27 ವರ್ಷಗಳ ನಂತರ ಐಸಿಸಿ ಟ್ರೋಫಿ ಗೆದ್ದ ಸಾಧನೆ ಮಾಡಿತು. ಈ ಹಿಂದೆ ಆಫ್ರಿಕಾ ತಂಡ 1998 ರಲ್ಲಿ ಚಾಂಪಿಯನ್ಸ್ ಟ್ರೋಫಿ (ಐಸಿಸಿ ನಾಕೌಟ್ ಟ್ರೋಫಿ) ರೂಪದಲ್ಲಿ ತನ್ನ ಕೊನೆಯ ಐಸಿಸಿ ಪ್ರಶಸ್ತಿಯನ್ನು ಗೆದ್ದಿತ್ತು. ಅಲ್ಲಿಂದ ಇಲ್ಲಿಯವರೆಗೆ ಆಫ್ರಿಕಾ ತಂಡಕ್ಕೆ ಹಲವು ಅವಕಾಶಗಳು ಸಿಕ್ಕವಾದರೂ ಅವನ್ನು ಪ್ರಶಸ್ತಿಯಾಗಿ ಪರಿವರ್ತಿಸುವಲ್ಲಿ ಆಫ್ರಿಕಾ ಎಡವಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:16 pm, Sat, 14 June 25