World Test Championship 2023 Final: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023 ರ ಫೈನಲ್ ಪಂದ್ಯದ ದಿನಾಂಕವನ್ನು ಘೋಷಿಸಿದೆ. ಜೂನ್ 7 ರಿಂದ WTC ಫೈನಲ್ ಪಂದ್ಯವು ಶುರುವಾಗಲಿದ್ದು, ಜೂನ್ 11 ರವರೆಗೆ ನಡೆಯಲಿದೆ ಎಂದು ಐಸಿಸಿ ತಿಳಿಸಿದೆ. ಇನ್ನು ಪ್ರತಿಕೂಲ ಹವಾಮಾನದಿಂದ ದಿನದಾಟವನ್ನು ಮುಂದೂಡಿದರೆ ಜೂನ್ 12 ಅನ್ನು ಮೀಸಲು ದಿನವಾಗಿ ಆಯ್ಕೆ ಮಾಡಲಾಗಿದೆ. ಅದರಂತೆ ಇಂಗ್ಲೆಂಡ್ನ ಓವಲ್ ಮೈದಾನದಲ್ಲಿ ಜೂನ್ 7 ರಿಂದ 11 ರವರೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಕುತೂಹಲಕಾರಿ ವಿಷಯ ಎಂದರೆ ಈ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡುವ ತಂಡಗಳು ಯಾವುವು ಎಂಬುದು ಇನ್ನೂ ಕೂಡ ನಿರ್ಧಾರವಾಗಿಲ್ಲ.
ಇದಾಗ್ಯೂ ಆಸ್ಟ್ರೇಲಿಯಾ ತಂಡವು ಫೈನಲ್ ಆಡುವುದು ಖಚಿತವಾಗಿದೆ. ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ ಟೇಬಲ್ನಲ್ಲಿ ಆಸೀಸ್ ಪಡೆಯು ಅಗ್ರಸ್ಥಾನದಲ್ಲಿದೆ. ಹೀಗಾಗಿ ಫೈನಲ್ ಫೈಟ್ನಲ್ಲಿ ಕಣಕ್ಕಿಳಿಯುವುದು ಕನ್ಫರ್ಮ್ ಆಗಿದೆ. ಆದರೆ ಮತ್ತೊಂದೆಡೆ ಫೈನಲ್ ಪ್ರವೇಶಿಸಲು ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.
ಟೀಮ್ ಇಂಡಿಯಾ ಫೈನಲ್ ಪ್ರವೇಶಿಸುವುದು ಹೇಗೆ?
ಭಾರತ ತಂಡವು ಫೆಬ್ರವರಿ 9 ರಿಂದ ಶುರುವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಥವಾ 3-1 ಅಥವಾ 2-0 ಅಂತರದಿಂದ ಗೆದ್ದುಕೊಂಡರೆ ನೇರವಾಗಿ ಫೈನಲ್ ಪ್ರವೇಶಿಸಬಹುದು. ಏಕೆಂದರೆ ಟೀಮ್ ಇಂಡಿಯಾ ಕಷ್ಟದಿಂದ 2-0 ಅಂತರದಿಂದ ಗೆದ್ದರೂ ಶೇ.60.65 ಅಂಕ ಪಡೆಯಲಿದೆ. ಅದೇ ವೇಳೆಗೆ ಆಸ್ಟ್ರೇಲಿಯಾ ತಂಡ ಪಾಯಿಂಟ್ ಶೇ.63.16 ಅಂಕಗಳಿಗೆ ಕುಸಿಯಲಿದೆ. ಅದರಂತೆ ಫೈನಲ್ನಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ಮುಖಾಮುಖಿಯಾಗಬಹುದು.
ಶ್ರೀಲಂಕಾ ಫೈನಲ್ ಪ್ರವೇಶಿಸುವುದು ಹೇಗೆ?
ಒಂದು ವೇಳೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋತರೆ ಮಾತ್ರ ಶ್ರೀಲಂಕಾಗೆ ಅವಕಾಶ ಇರಲಿದೆ. ಇಲ್ಲಿ ಸೋಲುವ ಲೆಕ್ಕಚಾರ ಕೂಡ ಗಣನೆಗೆ ಬರಲಿದೆ. ಅಂದರೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 3-1 ಅಥವಾ, 2-0, 1-0 ಸರಣಿ ಅಂತರದಿಂದ ಸೋತರೆ ಶ್ರೀಲಂಕಾ ತಂಡಕ್ಕೆ ಫೈನಲ್ಗೇರುವ ಅವಕಾಶ ಹೆಚ್ಚಾಗಲಿದೆ.
ಅಂದರೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋತರೆ ಶ್ರೀಲಂಕಾ ತಂಡವು ನ್ಯೂಜಿಲೆಂಡ್ ವಿರುದ್ಧ ಸರಣಿಯನ್ನು ಗೆಲ್ಲಬೇಕು. ಇಲ್ಲಿ ಲಂಕಾ ತಂಡವು ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡರೆ ಮಾತ್ರ ನೇರವಾಗಿ ಫೈನಲ್ಗೆ ಪ್ರವೇಶಿಸಬಹುದು.
ಇಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸರಣಿಯನ್ನು ಡ್ರಾ ಮಾಡಿಕೊಂಡರೆ, ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ನಡುವಣ ಸರಣಿಯ ಫಲಿತಾಂಶವನ್ನು ಎದುರು ನೋಡಬೇಕಾಗುತ್ತದೆ. ಅಲ್ಲಿ ಶ್ರೀಲಂಕಾ ಸರಣಿ ಗೆದ್ದರೆ ಭಾರತ ತಂಡವು ಫೈನಲ್ ರೇಸ್ನಿಂದ ಹೊರಬೀಳಲಿದೆ. ಹೀಗಾಗಿ ಆಸೀಸ್ ವಿರುದ್ಧದ ಸರಣಿಯು ಭಾರತದ ಪಾಲಿಗೆ ತುಂಬಾ ಮಹತ್ವದ್ದಾಗಿದೆ.
ಭಾರತ ತಂಡಕ್ಕೆ ಉತ್ತಮ ಅವಕಾಶ:
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಲು ಇಲ್ಲಿ ಟೀಮ್ ಇಂಡಿಯಾಗೆ ಇರುವ ಪ್ಲಸ್ ಪಾಯಿಂಟ್ ಅಂದರೆ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲೇ ಸರಣಿ ಆಡುತ್ತಿರುವುದು. ಅಂದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯ ಕೊನೆಯ ಸರಣಿಯನ್ನು ಟೀಮ್ ಇಂಡಿಯಾ ಭಾರತದಲ್ಲೇ ಆಡುತ್ತಿದೆ. ಆದರೆ ಶ್ರೀಲಂಕಾ ತಂಡವು ನ್ಯೂಜಿಲೆಂಡ್ನಲ್ಲಿ ಸರಣಿ ಆಡಬೇಕಿದೆ. ಹೀಗಾಗಿ ತವರಿನ ಬೆಂಬಲದೊಂದಿಗೆ ಸರಣಿ ಗೆಲ್ಲುವ ಅವಕಾಶ ಭಾರತ ತಂಡದ ಮುಂದಿದೆ.
ಮತ್ತೊಂದೆಡೆ ನ್ಯೂಜಿಲೆಂಡ್ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಕೊನೆಯ ಟೆಸ್ಟ್ ಪಂದ್ಯಗಳನ್ನು ಆಡಲಿರುವ ಶ್ರೀಲಂಕಾ ತಂಡಕ್ಕೆ ದೊಡ್ಡ ಸವಾಲು ಎದುರಾಗುವ ಸಾಧ್ಯತೆ ಹೆಚ್ಚು. ಏಕೆಂದರೆ ಶ್ರೀಲಂಕಾ ತಂಡ ಇದುವರೆಗೆ ನ್ಯೂಜಿಲೆಂಡ್ನಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಲು ಭಾರತ ತಂಡಕ್ಕೆ ಉತ್ತಮ ಅವಕಾಶವಿದೆ. ಅದರಂತೆ ಭಾರತ ತಂಡವು ಮತ್ತೊಮ್ಮೆ WTC ಫೈನಲ್ ಆಡಲಿದೆಯಾ ಕಾದು ನೋಡಬೇಕಿದೆ.