Yash Dayal: ಲೈಂಗಿಕ ಕಿರುಕುಳ ಪ್ರಕರಣ; ಯುವತಿ ವಿರುದ್ಧ ಯಶ್ ದಯಾಳ್ ಪ್ರತಿ ದೂರು
Yash Dayal: ಕೆಲವು ದಿನಗಳ ಹಿಂದೆ ಯುವತಿಯೊಬ್ಬಳು ಐಪಿಎಲ್ ಆಟಗಾರ ಯಶ್ ದಯಾಳ್ ವಿರುದ್ಧ ಲೈಂಗಿಕ ಕಿರುಕುಳ, ದೈಹಿಕ ಹಿಂಸೆ ಮತ್ತು ವಂಚನೆ ಆರೋಪ ಹೊರಿಸಿದ್ದಳು. ದೂರಿನನ್ವಯ ಎಫ್‌ಐಆರ್ ಕೂಡ ದಾಖಲಾಗಿದೆ. ಇದೀಗ ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ದಯಾಳ್, ಯುವತಿಯೇ ತನ್ನ ಐಫೋನ್, ಲ್ಯಾಪ್‌ಟಾಪ್ ಕದ್ದಿರುವುದರ ಜೊತೆಗೆ ನನ್ನಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದಿದ್ದಾಳೆ ಎಂದು ಆರೋಪಿಸಿ ಪ್ರತಿ ದೂರು ದಾಖಲಿಸಿದ್ದಾರೆ.

ಟೀಂ ಇಂಡಿಯಾ ಯುವ ವೇಗಿ ಹಾಗೂ ಐಪಿಎಲ್ನಲ್ಲಿ (IPL) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರ ಆಡುತ್ತಿರುವ ಯಶ್ ದಯಾಳ್ (Yash Dayal) ವಿರುದ್ಧ ಯುವತಿಯೊಬ್ಬಳು ಲೈಂಗಿಕ ಕಿರುಕುಳ, ದೈಹಿಕ ಹಿಂಸೆ ಮತ್ತು ವಂಚನೆ ಆರೋಪಗಳನ್ನು ಹೊರಿಸಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಾಳೆ. ಯುವತಿಯ ದೂರಿನನ್ವಯ ದಯಾಳ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಇದೀಗ ಪ್ರಕರಣದ ಗಂಭೀರತೆಯನ್ನು ಮನಗಂಡಿರುವ ದಯಾಳ್, ಇದೇ ಮೊದಲ ಬಾರಿಗೆ ಯುವತಿಯ ದೂರುಗಳ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
ವಾಸ್ತವವಾಗಿ ತನ್ನ ವಿರುದ್ಧ ಪ್ರಕರಣ ದಾಖಲಿಸಿರುವ ಹುಡುಗಿಯ ವಿರುದ್ಧವೇ ಯಶ್ ದಯಾಳ್ ಸಾಲು ಸಾಲು ಆರೋಪಗಳನ್ನು ಮಾಡಿದ್ದು, ಯುವತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಯಾಗ್‌ರಾಜ್ ಪೊಲೀಸರ ಮೊರೆ ಹೋಗಿದ್ದಾರೆ ಎಂದು ವರದಿಯಾಗಿದೆ. ಅಷ್ಟಕ್ಕೂ ಯುವತಿಯ ವಿರುದ್ಧ ಯಶ್ ದಯಾಳ್ ಮಾಡಿರುವ ಆರೋಪಗಳೆನೆಂದರೆ, ತನ್ನ ವಿರುದ್ಧ ನಾನಾ ಆರೋಪಗಳನ್ನು ಹೊರಿಸಿರುವ ಆ ಯುವತಿ ನನ್ನ ಐಫೋನ್ ಮತ್ತು ಲ್ಯಾಪ್‌ಟಾಪ್ ಕದ್ದಿದ್ದಾಳೆ. ಇದು ಮಾತ್ರವಲ್ಲದೆ ನನ್ನಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದುಕೊಂಡು ಅದನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಯಶ್ ದಯಾಳ್ ಪ್ರತಿಕ್ರಿಯೆ
ಇದರ ಜೊತೆಗೆ ಲೈಂಗಿಕ ದೌರ್ಜನ್ಯದ ಆರೋಪಗಳಿಗೆ ಪ್ರತಿಕ್ರಿಯಿಸಿದ ಯಶ್ ದಯಾಳ್, ‘2021 ರಲ್ಲಿ ಈ ಯುವತಿಯೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಂಭಾಷಣೆ ನಡೆಸಿದ್ದೆ. ಆ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿಯೇ ನಮ್ಮಿಬ್ಬರ ನಡುವೆ ಮಾತುಕುತೆ ಹೆಚ್ಚಾಯಿತು. ಇಬ್ಬರ ನಡುವಿನ ಸಲುಗೆಯನ್ನು ದುರುಪಯೋಗಪಡಿಸಿಕೊಂಡ ಆ ಹುಡುಗಿ ನನಗೆ ಹಾಗೂ ನನ್ನ ಕುಟುಂದವರಿಗೆ ಆರೋಗ್ಯ ಸರಿ ಇಲ್ಲ ಎಂದು ಸುಳ್ಳು ಹೇಳಿ ಚಿಕಿತ್ಸೆಗೆಂದು ನನ್ನ ಬಳಿ ಲಕ್ಷಾಂತರ ರೂಪಾಯಿಗಳನ್ನು ಪಡೆದಿದ್ದಾಳೆ. ಅಲ್ಲದೆ ಈ ಹಣವನ್ನು ಪಡೆದುಕೊಳ್ಳುವ ವೇಳೆ ಆ ಯುವತಿ ಆದಷ್ಟು ಬೇಗ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದಳು. ಆದರೆ ಇಲ್ಲಿಯವರೆಗೆ ಅವಳು ಒಂದು ಪೈಸೆಯನ್ನೂ ಹಿಂತಿರುಗಿಸಿಲ್ಲ. ಇದು ಮಾತ್ರವಲ್ಲದೆ ಆ ಹುಡುಗಿ ನನ್ನ ಐಫೋನ್ ಮತ್ತು ಲ್ಯಾಪ್‌ಟಾಪ್ ಕದ್ದಿದ್ದಾಳೆ ಎಂದು ಯಶ್ ದಯಾಳ್ ಆರೋಪಿಸಿದ್ದಾರೆ. ಅಲ್ಲದೆ ಈ ಬಗ್ಗೆ ಪ್ರಯಾಗ್‌ರಾಜ್‌ನ ಖುಲ್ದಾಬಾದ್ ಪೊಲೀಸ್ ಠಾಣೆಯಲ್ಲಿ ಮೂರು ಪುಟಗಳ ದೂರನ್ನು ಸಹ ದಾಖಲಿಸಿದ್ದು, ಆದಷ್ಟು ಬೇಗ ಆ ಹುಡುಗಿಯ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಯಶ್ ದಯಾಳ್ ಒತ್ತಾಯಿಸಿದ್ದಾರೆ.
ಆರ್‌ಸಿಬಿ ವೇಗಿ ಯಶ್ ದಯಾಳ್ ವಿರುದ್ಧ ಪ್ರಕರಣ ದಾಖಲು; ವೃತ್ತಿಜೀವನಕ್ಕೆ ಎದುರಾಯ್ತು ಆಪತ್ತು
ಯಶ್ ದಯಾಳ್ ವಿರುದ್ಧ ಎಫ್ಐಆರ್ ದಾಖಲು
ಜುಲೈ 7 ರಂದು ಯಶ್ ದಯಾಳ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇಂದಿರಾಪುರಂನಲ್ಲಿ ವಾಸಿಸುವ ಹುಡುಗಿಯೊಬ್ಬಳು ಯಶ್ ದಯಾಳ್, ಮದುವೆ ಭರವಸೆ ನೀಡಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ ಯಶ್ ದಯಾಳ್ ನನ್ನನ್ನು ಅವರ ಕುಟುಂಬಸ್ಥರಿಗೂ ಪರಿಚಯ ಮಾಡಿಕೊಟ್ಟಿದ್ದು, ಅವರನ್ನು ಹಲವು ಬಾರಿ ಭೇಟಿಯಾಗಿದ್ದೇನೆ. ಇದೀಗ ನನ್ನನ್ನು ಮದುವೆಯಾಗು ಎಂದು ದಯಾಳ್ ಬಳಿ ಕೇಳಿದಾಗ ಆತ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ಯುವತಿ ದೂರು ದಾಖಲಿಸಿದ್ದಳು. ದೂರಿನನ್ವಯ ದಯಾಳ್ ವಿರುದ್ಧ ಎಫ್ಐಆರ್ ಹಾಕಲಾಗಿದೆ. ಇದಾದ ಬಳಿಕ ಯಶ್ ದಯಾಳ್, ಯುವತಿಯ ಮೇಲೆ ಕಳ್ಳತನ ಮತ್ತು ಹಣ ಪಡೆದ ಆರೋಪ ಹೊರಿಸುವ ಮೂಲಕ ಈ ವಿಷಯವನ್ನು ಇನ್ನಷ್ಟು ಜಟಿಲಗೊಳಿಸಿದ್ದಾರೆ. ಮುಂದೆ ಏನಾಗುತ್ತದೆ ಎಂದು ಕಾದುನೋಡಬೇಕಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:00 pm, Wed, 9 July 25
