
ಭಾರತ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ (Yashasvi Jaiswal) ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಮುಗಿದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಜೈಸ್ವಲ್ ಬ್ಯಾಟ್ ಅಬ್ಬರಿಸಿತ್ತು. ಅದರಂತೆ ಕೊನೆಯ ಟೆಸ್ಟ್ ಪಂದ್ಯದಲ್ಲಿ ಜೈಸ್ವಾಲ್ ಭರ್ಜರಿ ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಜೈಸ್ವಾಲ್ ತಂಡದೊಂದಿಗೆ ಭಾರತಕ್ಕೆ ವಾಪಸ್ಸಾಗಿದ್ದು ದೇಶೀಯ ಕ್ರಿಕೆಟ್‌ನತ್ತ ಗಮನಹರಿಸಲು ಮುಂದಾಗಿದ್ದಾರೆ. ಈ ನಡುವೆ ಜೈಸ್ವಾಲ್ ಮುಂಬೈ ತಂಡದಲ್ಲೇ ಮುಂದುವರೆಯಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ವಾಸ್ತವವಾಗಿ ವೃತ್ತಿಜೀವನದ ಆರಂಭದಿಂದ ಯಶಸ್ವಿ ಜೈಸ್ವಾಲ್ ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಪರ ಆಡುತ್ತಿದ್ದರು. ಬಹಳ ಸಮಯದಿಂದಲೂ ಜೈಸ್ವಾಲ್ ಮುಂಬೈ ತಂಡದ ಭಾಗವಾಗಿದ್ದರು. ಆದಾಗ್ಯೂ ಈ ವರ್ಷದ ಆರಂಭದಲ್ಲಿ ಜೈಸ್ವಾಲ್ ಗೋವಾ ಪರ ಆಡಲು ನಿರ್ಧರಿಸಿ, ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನಿಂದ ಎನ್‌ಒಸಿ ಸಹ ಪಡೆದಿದ್ದರು. ಆ ಪ್ರಕಾರ ಜೈಸ್ವಾಲ್ ಮುಂಬರುವ ದೇಶೀ ಟೂರ್ನಿಯಲ್ಲಿ ಗೋವಾ ಪರ ಬ್ಯಾಟ್ ಹಿಡಿದು ಅಬ್ಬರಿಸಬೇಕಿತ್ತು. ಆದರೆ ರೋಹಿತ್ ಶರ್ಮಾ ಅವರ ಆಜ್ಞೆಯ ಮೇರೆಗೆ ಜೈಸ್ವಾಲ್ ತಮ್ಮ ನಿರ್ಧಾರದಿಂದ ಯು-ಟರ್ನ್ ತೆಗೆದುಕೊಂಡಿದ್ದು, ಮುಂಬೈನಲ್ಲೇ ಉಳಿಯಲು ನಿರ್ಧರಿಸಿದ್ದಾರೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಅಜಿಂಕ್ಯ ನಾಯಕ್ ಬಹಿರಂಗಪಡಿಸಿದ್ದಾರೆ.
ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಅಜಿಂಕ್ಯ ನಾಯಕ್ ಮಾತನಾಡಿ, ‘ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಅವರ ಮನವೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ. 42 ಬಾರಿ ರಣಜಿ ಟ್ರೋಫಿ ಗೆದ್ದಿರುವ ಮುಂಬೈನಂತಹ ತಂಡಕ್ಕಾಗಿ ಆಡುವುದು ಅತ್ಯಂತ ಗೌರವದ ವಿಷಯ. ಅಲ್ಲದೆ ಮುಂಬೈ ಕ್ರಿಕೆಟ್‌ನಿಂದಾಗಿಯೇ ಜೈಸ್ವಾಲ್ಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಸಿಕ್ಕಿತು. ಇದರಿಂದ ಜೈಸ್ವಾಲ್ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಪಡೆಯಲು ಸಾಧ್ಯವಾಯಿತು ಎಂಬುದನ್ನು ರೋಹಿತ್, ಜೈಸ್ವಾಲ್ಗೆ ಮನವರಿಕೆ ಮಾಡಿಕೊಟ್ಟರು. ಹೀಗಾಗಿ ರೋಹಿತ್ ಮಾತಿಗೆ ತಲೆಬಾಗಿರುವ ಜೈಸ್ವಾಲ್, ಮುಂಬರುವ ದೇಶೀ ಟೂರ್ನಿಯಲ್ಲಿ ಮುಂಬೈ ಪರ ಆಡಲಿದ್ದಾರೆ ಎಂದಿದ್ದಾರೆ.
ಯಶಸ್ವಿ ಜೈಸ್ವಾಲ್ ಬಗ್ಗೆ ಹೇಳುವುದಾದರೆ, 2019 ರಲ್ಲಿ ಮುಂಬೈ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅವರು 43 ಪ್ರಥಮ ದರ್ಜೆ ಪಂದ್ಯಗಳಲ್ಲಿ 66.58 ಸರಾಸರಿಯಲ್ಲಿ 4233 ರನ್ ಗಳಿಸಿದ್ದಾರೆ, ಇದರಲ್ಲಿ 15 ಶತಕಗಳು ಮತ್ತು 15 ಅರ್ಧಶತಕಗಳು ಸೇರಿವೆ. ಹಾಗೆಯೇ 33 ಲಿಸ್ಟ್ ಎ ಪಂದ್ಯಗಳಲ್ಲಿ, ಯಶಸ್ವಿ 52.62 ಸರಾಸರಿಯಲ್ಲಿ 1526 ರನ್‌ಗಳನ್ನು ಗಳಿಸಿದ್ದಾರೆ, ಇದರಲ್ಲಿ ಐದು ಶತಕಗಳು ಮತ್ತು ಏಳು ಅರ್ಧಶತಕಗಳು ಸೇರಿವೆ.
ICC Test Rankings: ಜೈಸ್ವಾಲ್ಗೆ ಮುಂಬಡ್ತಿ, ಅತ್ಯಧಿಕ ರನ್ ಗಳಿಸಿದ ಗಿಲ್ ಟಾಪ್ 10 ರಿಂದ ಔಟ್..!
ಭಾರತ ಪರ ಜೈಸ್ವಾಲ್ ಇದುವರೆಗೆ 24 ಟೆಸ್ಟ್ ಪಂದ್ಯಗಳಲ್ಲಿ 50.20 ಸರಾಸರಿಯಲ್ಲಿ 2209 ರನ್ ಗಳಿಸಿದ್ದಾರೆ. ಇದರಲ್ಲಿ 6 ಶತಕಗಳು ಮತ್ತು 12 ಅರ್ಧಶತಕಗಳು ಸೇರಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಅತ್ಯುತ್ತಮ ಸ್ಕೋರ್ ಔಟಾಗದೆ 214 ರನ್‌ಗಳಾಗಿವೆ. ಹಾಗೆಯೇ ಏಕದಿನ ಪಂದ್ಯದಲ್ಲಿ ಜೈಸ್ವಾಲ್ 15 ಸರಾಸರಿಯಲ್ಲಿ 15 ರನ್ ಗಳಿಸಿದ್ದರೆ, 23 ಟಿ20 ಪಂದ್ಯಗಳಲ್ಲಿ 36.15 ಸರಾಸರಿಯಲ್ಲಿ 723 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕವೂ ಸೇರಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ