- Kannada News Photo gallery Cricket photos Team India's ICC Ranking Shock: Gill's Drop, Jaiswal's Rise After England Series
ICC Test Rankings: ಜೈಸ್ವಾಲ್ಗೆ ಮುಂಬಡ್ತಿ, ಅತ್ಯಧಿಕ ರನ್ ಗಳಿಸಿದ ಗಿಲ್ ಟಾಪ್ 10 ರಿಂದ ಔಟ್..!
ICC Test Rankings: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಂತರ ಟೀಂ ಇಂಡಿಯಾದ ಆಟಗಾರರ ಐಸಿಸಿ ಶ್ರೇಯಾಂಕದಲ್ಲಿ ಏರುಪೇರು ಕಂಡುಬಂದಿದೆ. ಯಶಸ್ವಿ ಜೈಸ್ವಾಲ್ ಐದನೇ ಸ್ಥಾನಕ್ಕೇರಿದರೆ, ಶುಭ್‌ಮನ್ ಗಿಲ್ 13ನೇ ಸ್ಥಾನಕ್ಕೆ ಕುಸಿದಿದ್ದಾರೆ. ರಿಷಭ್ ಪಂತ್ ಎಂಟನೇ ಸ್ಥಾನಕ್ಕೆ ಕುಸಿದಿದ್ದಾರೆ. ಜೈಸ್ವಾಲ್ ಅವರ ಅದ್ಭುತ ಪ್ರದರ್ಶನ ಮತ್ತು ಗಿಲ್ ಅವರ ಶ್ರೇಯಾಂಕದಲ್ಲಿನ ಇಳಿಕೆ ಚರ್ಚೆಯ ವಿಷಯವಾಗಿದೆ.
Updated on: Aug 06, 2025 | 3:53 PM

ಇಂಗ್ಲೆಂಡ್ ಪ್ರವಾಸವನ್ನು ಡ್ರಾದೊಂದಿಗೆ ಮುಗಿಸಿರುವ ಟೀಂ ಇಂಡಿಯಾ ಭಾರತಕ್ಕೆ ವಾಪಸ್ಸಾಗಿದೆ. ಆದಾಗ್ಯೂ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕೆಲವು ಆಟಗಾರರಿಗೆ ಇದೀಗ ಐಸಿಸಿ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಆಘಾತ ಎದುರಾಗಿದೆ. ಇನ್ನು ಕೆಲವರಿಗೆ ಮುಂಬಡ್ತಿಯೂ ಸಿಕ್ಕದೆ. ಆದರೆ ಸರಣಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ್ದ ನಾಯಕ ಗಿಲ್ 4 ಸ್ಥಾನ ಕುಸಿತ ಕಂಡಿದ್ದು, ಟಾಪ್ 10 ರೊಳಗಿಂದ ಹೊರಬಿದ್ದಿದ್ದಾರೆ.

ಟಾಪ್ 10 ರೊಳಗೆ ಸ್ಥಾನ ಪಡೆದಿರುವ ಟೀಂ ಇಂಡಿಯಾ ಆಟಗಾರರ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್ ಅಗ್ರಸ್ಥಾನದಲ್ಲಿದ್ದಾರೆ. ಓವಲ್ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಜೈಸ್ವಾಲ್ ಇದೀಗ ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಐದನೇ ಸ್ಥಾನವನ್ನು ತಲುಪಿದ್ದಾರೆ.

ಉಳಿದಂತೆ ಟೆಸ್ಟ್ ರ್ಯಾಂಕಿಂಗ್ನಲ್ಲಿ ಜೋ ರೂಟ್ ಮೊದಲ ಸ್ಥಾನದಲ್ಲಿದ್ದರೆ, ಅವರ ತಂಡದ ಸಹ ಆಟಗಾರ ಹ್ಯಾರಿ ಬ್ರೂಕ್ ಎರಡನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಇಂಜುರಿಯಿಂದಾಗಿ ಸರಣಿಯ ಕೊನೆಯ ಪಂದ್ಯದಿಂದ ಹೊರಗುಳಿದಿದ್ದ ರಿಷಭ್ ಪಂತ್ ಎಂಟನೇ ಸ್ಥಾನಕ್ಕೆ ಕುಸಿದಿದ್ದಾರೆ. ಹಾಗೆಯೇ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 754 ರನ್ ಗಳಿಸಿದ್ದರೂ ನಾಯಕ ಶುಭ್‌ಮನ್ ಗಿಲ್ ದೊಡ್ಡ ಹಿನ್ನಡೆ ಅನುಭವಿಸಿದ್ದಾರೆ. ಅವರ ಶ್ರೇಯಾಂಕ ಕುಸಿದಿದ್ದು ಇದೀಗ 13 ನೇ ಸ್ಥಾನಕ್ಕೆ ಜಾರಿದ್ದಾರೆ. ಇದಕ್ಕೂ ಮೊದಲು ಅವರು 9 ನೇ ಸ್ಥಾನದಲ್ಲಿದ್ದರು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ 5 ಪಂದ್ಯಗಳಲ್ಲಿ 41.10 ಸರಾಸರಿಯಲ್ಲಿ 411 ರನ್ ಗಳಿಸಿದ ಯಶಸ್ವಿ ಜೈಸ್ವಾಲ್ ಈ ಸರಣಿಯಲ್ಲಿ ಎರಡು ಶತಕ ಮತ್ತು ಎರಡು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇದರಲ್ಲಿ ಅವರ ಅತ್ಯುತ್ತಮ ಸ್ಕೋರ್ 118 ರನ್‌ಗಳಾಗಿದೆ.

ಟೀಂ ಇಂಡಿಯಾ ಪರ ಇದುವರೆಗೆ 24 ಟೆಸ್ಟ್ ಪಂದ್ಯಗಳನ್ನಾಡಿರುವ ಜೈಸ್ವಾಲ್ 50.2 ಸರಾಸರಿಯಲ್ಲಿ 2209 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಆರು ಶತಕಗಳು, ಎರಡು ದ್ವಿಶತಕಗಳು ಮತ್ತು 12 ಅರ್ಧಶತಕಗಳು ಸೇರಿವೆ. ಭವಿಷ್ಯದಲ್ಲಿ ನಡೆಯಲಿರುವ ಪಂದ್ಯಗಳಲ್ಲಿಯೂ ಅವರಿಂದ ಬಲವಾದ ಪ್ರದರ್ಶನವನ್ನು ಭಾರತೀಯ ಅಭಿಮಾನಿಗಳು ನಿರೀಕ್ಷಿಸುತ್ತಾರೆ.
