ಟೀಂ ಇಂಡಿಯಾ (Team India) 2022 ರ ವರ್ಷವನ್ನು ಗೆಲುವಿನೊಂದಿಗೆ ಕೊನೆಗೊಳಿಸಿದೆ. ಮೀರ್‌ಪುರದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದ ಟೀಂ ಇಂಡಿಯಾ (India Vs Bangladesh) 2-0 ಅಂತರದಿಂದ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ. ಆದರೆ ಹಲವು ಪ್ರಮುಖ ಪಂದ್ಯಾವಳಿಗಳ ಸೋಲುಗಳೊಂದಿಗೆ ವರ್ಷ ಮುಗಿಸಿರುವ ಭಾರತಕ್ಕೆ 2023ರಲ್ಲಿ ದೊಡ್ಡ ದೊಡ್ಡ ಸವಾಲುಗಳೇ ಎದುರಾಗುತ್ತಿವೆ. ಮುಂದಿನ ವರ್ಷ ಎರಡು ಐಸಿಸಿ ಈವೆಂಟ್ಗಳು ನಡೆದರೆ, ಏಷ್ಯಾಕಪ್ ಕೂಡ ಮುಂದಿನ ವರ್ಷವೇ ನಡೆಯಲಿದೆ. ಹೀಗಾಗಿ ಭಾರತ ಮುಂದಿನ ವರ್ಷದ ಸವಾಲುಗಳಿಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕಿದೆ. ಆದರೆ ಅದಕ್ಕೂ ಮುನ್ನ ಈ ವರ್ಷ ಟೀಂ ಇಂಡಿಯಾ ಪರ ಯಾವ ಆಟಗಾರ ಉತ್ತಮ ಪ್ರದರ್ಶನ ನೀಡಿದ್ದಾನೆ ಎಂಬುದರ ರಿಪೋರ್ಟ್ ಕಾರ್ಡ್ ಇಲ್ಲಿದೆ.
ಭಾರತದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಎರಡು ಶತಕಗಳನ್ನು ಬಾರಿಸುವ ಮೂಲಕ ಈ ವರ್ಷ ಬರವನ್ನು ಅಂತ್ಯಗೊಳಿಸಿದ್ದಾರೆ. ಆದರೆ 2022ರಲ್ಲಿ ಭಾರತ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಅವರಲ್ಲ ಎಂಬುದು ಗಮನಾರ್ಹ. ನಾಯಕ ರೋಹಿತ್ ಶರ್ಮಾ ಅವರಿಗೆ ಈ ವರ್ಷ ಮರೆಯಲಾಗದ ವರ್ಷ. ಯಾಕೆಂದರೆ ಈ ವರ್ಷ ಏಷ್ಯಾಕಪ್ ಅಥವಾ ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಈ ವರ್ಷ ಟೆಸ್ಟ್, ಏಕದಿನ ಮತ್ತು ಟಿ20 ಗಳಲ್ಲಿ ಟೀಂ ಇಂಡಿಯಾದ ಕೆಲವು ಆಟಗಾರರು ಗಮನಾರ್ಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಹವರ ಪಟ್ಟಿ ಇಲ್ಲಿದೆ.
IND vs SL: ಲಂಕಾ ವಿರುದ್ಧದ ಟಿ20 ಸರಣಿಗೆ ಯಾರಿಗೆಲ್ಲಾ ಅವಕಾಶ? ಸಂಭಾವ್ಯ ಟೀಂ ಇಂಡಿಯಾ ಹೀಗಿದೆ
ಟೆಸ್ಟ್ ಕ್ರಿಕೆಟ್ ಕುರಿತು ಮಾತನಾಡುವುದಾದರೆ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಈ ವರ್ಷ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ರಿಷಬ್ ಪಂತ್ 7 ಪಂದ್ಯಗಳಲ್ಲಿ 61.81 ಸರಾಸರಿಯಲ್ಲಿ 680 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಪಂತ್ ಎರಡು ಶತಕ ಮತ್ತು ನಾಲ್ಕು ಅರ್ಧ ಶತಕಗಳನ್ನು ಸಹ ಬಾರಿಸಿದ್ದಾರೆ. ಆದರೆ ಈ ಟಾಪ್ 5 ಆಟಗಾರರಲ್ಲಿ ಭಾರತದ ಯಾವುದೇ ಸ್ಟಾರ್ ಆಟಗಾರ ಸ್ಥಾನ ಪಡೆದಿಲ್ಲ.
ಶ್ರೇಯಸ್ ಅಯ್ಯರ್ ಏಕದಿನ ಕ್ರಿಕೆಟ್‌ನಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡುವ ಮೂಲಕ ದಾಖಲೆ ಬರೆದಿದ್ದಾರೆ. ಈ ವರ್ಷ 17 ಏಕದಿನ ಪಂದ್ಯಗಳಲ್ಲಿ ಶ್ರೇಯಸ್ 55.69 ಸರಾಸರಿಯಲ್ಲಿ ಶತಕ ಮತ್ತು 6 ಅರ್ಧಶತಕ ಸೇರಿದಂತೆ 724 ರನ್ ಗಳಿಸಿದ್ದಾರೆ. ಆದರೆ ಇಲ್ಲೂ ಕೂಡ ಸ್ಟಾರ್ ಕ್ರಿಕೆಟಿಗರ ಹೆಸರಿಲ್ಲ.
ಸೂರ್ಯಕುಮಾರ್ ಯಾದವ್ ಈ ವರ್ಷದ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಸೂರ್ಯ 31 ಪಂದ್ಯಗಳಲ್ಲಿ 46.56 ಸರಾಸರಿಯಲ್ಲಿ 1164 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು ಒಂಬತ್ತು ಅರ್ಧಶತಕಗಳು ಸೇರಿವೆ. ವಿರಾಟ್ ಕೊಹ್ಲಿ 20 ಪಂದ್ಯಗಳಲ್ಲಿ 781 ರನ್ ಗಳಿಸುವ ಮೂಲಕ ಈ ಭಾರತೀಯ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಈ ವರ್ಷ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಶ್ರೇಯಸ್ ಅಯ್ಯರ್ 40 ಇನ್ನಿಂಗ್ಸ್‌ಗಳಲ್ಲಿ 48.75 ಸರಾಸರಿಯಲ್ಲಿ ಒಟ್ಟು 1609 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ರೋಹಿತ್ ಶರ್ಮಾ ಐದನೇ ಸ್ಥಾನದಲ್ಲಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:24 pm, Mon, 26 December 22