ಬರೋಬ್ಬರಿ 175 ರನ್ ನೀಡಿದ ಯುಜ್ವೇಂದ್ರ ಚಹಲ್

Middlesex vs Northamptonshire: ಕೌಂಟಿ ಚಾಂಪಿಯನ್​​ಶಿಪ್ ಟೆಸ್ಟ್ ಟೂರ್ನಿಯ 38ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಿಡ್ಲ್​ಸೆಕ್ಸ್ ತಂಡವು ಮೊದಲ ಇನಿಂಗ್ಸ್​ನಲ್ಲಿ 625 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಶುರು ಮಾಡಿರುವ ನಾರ್ಥಾಂಪ್ಟನ್‌ಶೈರ್ ತಂಡವು 2ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 126 ರನ್ ಗಳಿಸಿದೆ.

ಬರೋಬ್ಬರಿ 175 ರನ್ ನೀಡಿದ ಯುಜ್ವೇಂದ್ರ ಚಹಲ್
Yuzvendra Chahal

Updated on: Jul 24, 2025 | 10:38 AM

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್​ಶಿಪ್ ಡಿವಿಷನ್-2 ಟೂರ್ನಿಯ 38ನೇ ಪಂದ್ಯದಲ್ಲಿ ಯುಜ್ವೇಂದ್ರ ಚಹಲ್ ಬರೋಬ್ಬರಿ 175 ರನ್​ಗಳನ್ನು ನೀಡಿದ್ದಾರೆ. ನಾರ್ತ್​ವುಡ್​ನ ಎಂಟಿಎಸ್​ ಗ್ರೌಂಡ್​ನಲ್ಲಿ ನಡೆಯುತ್ತಿರುವ ಮಿಡ್ಲ್‌ಸೆಕ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ನಾರ್ಥಾಂಪ್ಟನ್‌ಶೈರ್ ತಂಡದ ನಾಯಕ ಲೂಯಿಸ್ ಮೆಕ್‌ಮ್ಯಾನಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಮಿಡ್ಲ್​ಸೆಕ್ಸ್ ಪರ ಆರಂಭಿಕ ದಾಂಡಿಗರಾದ ಸ್ಯಾಮ್ ರಾಬ್ಸನ್ (57) ಹಾಗೂ ಮ್ಯಾಕ್ಸ್ ಹೋಲ್ಡನ್ (151) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

ಇನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕೇನ್ ವಿಲಿಯಮ್ಸನ್ 114 ರನ್​ಗಳ ಇನಿಂಗ್ಸ್ ಆಡಿದರು. ಹಾಗೆಯೇ ನಾಯಕ ಲ್ಯೂಸ್ ಡು ಪ್ಲೂಯ್ ಅಜೇಯ 105 ರನ್​ ಬಾರಿಸಿದರು. ಈ ಮೂಲಕ ಮಿಡ್ಲ್​ಸೆಕ್ಸ್ ತಂಡವು ಮೊದಲ ಇನಿಂಗ್ಸ್​ನಲ್ಲೇ ಪರಾಕ್ರಮ ಮರೆದರು.

ಚಹಲ್ ದುಬಾರಿ:

ಮಿಡ್ಲ್​ಸೆಕ್ಸ್ ಬ್ಯಾಟರ್​ಗಳ ಅಬ್ಬರ ನಡುವೆ ನಾರ್ಥಾಂಪ್ಟನ್‌ಶೈರ್ ತಂಡದ ಪರ ಕಣಕ್ಕಿಳಿದ ಭಾರತದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ದುಬಾರಿಯಾಗಿ ಪರಿಣಮಿಸಿದರು. 43 ಓವರ್​ಗಳನ್ನು ಎಸೆದ ಚಹಲ್ ನೀಡಿರುವುದು ಬರೋಬ್ಬರಿ 175 ರನ್​ಗಳು. ಇದರ ನಡುವೆ ಒಂದೇ ಒಂದು ವಿಕೆಟ್ ಪಡೆಯಲು ಕೂಡ ಸಾಧ್ಯವಾಗಿಲ್ಲ. ಅಂದರೆ ಯುಜ್ವೇಂದ್ರ ಚಹಲ್ ಪ್ರತಿ ಓವರ್​ಗೆ 4.10 ರ ಸರಾಸರಿಯಲ್ಲಿ ರನ್ ಬಿಟ್ಟು ಕೊಟ್ಟರು.

ವಿಶೇಷ ಎಂದರೆ ಇದು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಚಹಲ್ ಅವರ 2ನೇ ಕಳಪೆ ಪ್ರದರ್ಶನವಾಗಿದೆ. ಇದಕ್ಕೂ ಮುನ್ನ 2012 ರಲ್ಲಿ ತಮಿಳನಾಡು ವಿರುದ್ಧದ ಪಂದ್ಯದಲ್ಲಿ ಹರ್ಯಾಣ ಪರ ಕಣಕ್ಕಿಳಿದಿದ್ದ ಯುಜ್ವೇಂದ್ರ ಚಹಲ್ 235 ರನ್​ಗಳನ್ನು ನೀಡಿದ್ದರು. ಇದೀಗ ಕೌಂಟಿ ಟೆಸ್ಟ್ ಕ್ರಿಕೆಟ್​ನಲ್ಲೂ 175 ರನ್ ಬಿಟ್ಟು ಕೊಡುವ ಮೂಲಕ ದುಬಾರಿ ಎನಿಸಿಕೊಂಡಿದ್ದಾರೆ.

ಬೃಹತ್ ಮೊತ್ತ ಪೇರಿಸಿದ ಮಿಡ್ಲ್‌ಸೆಕ್ಸ್:

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಿಡ್ಲ್​ಸೆಕ್ಸ್ ಪರ ಮ್ಯಾಕ್ಸ್ ಹೋಲ್ಡನ್ (151), ಕೇನ್ ವಿಲಿಯಮ್ಸನ್ (114) ಹಾಗೂ ಲ್ಯೂಸ್ ಡು ಪ್ಲೂಯ್ (105) ಭರ್ಜರಿ ಶತಕ ಸಿಡಿಸಿದರು. ಈ ಶತಕಗಳ ನೆರವಿನೊಂದಿಗೆ ಮಿಡ್ಲ್​ಸೆಕ್ಸ್ ತಂಡವು ಮೊದಲ ಇನಿಂಗ್ಸ್​ನಲ್ಲಿ 8 ವಿಕೆಟ್ ಕಳೆದುಕೊಂಡು 625 ರನ್ ಬಾರಿಸಿ ಡಿಕ್ಲೇರ್ ಘೋಷಿಸಿದೆ.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿರುವ ನಾರ್ಥಾಂಪ್ಟನ್‌ಶೈರ್ ತಂಡವು 2ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 126 ರನ್ ಕಲೆಹಾಕಿದೆ.

ಮಿಡ್ಲ್‌ಸೆಕ್ಸ್ ಪ್ಲೇಯಿಂಗ್ 11: ಸ್ಯಾಮ್ ರಾಬ್ಸನ್ , ಮ್ಯಾಕ್ಸ್ ಹೋಲ್ಡನ್ , ಕೇನ್ ವಿಲಿಯಮ್ಸನ್ , ಲ್ಯೂಸ್ ಡು ಪ್ಲೂಯ್ (ನಾಯಕ) , ರಿಯಾನ್ ಹಿಗ್ಗಿನ್ಸ್ , ಬೆನ್ ಗೆಡೆಸ್ , ಜೋ ಕ್ರಾಕ್ನೆಲ್ (ವಿಕೆಟ್ ಕೀಪರ್) , ಜಾಫರ್ ಗೋಹರ್ , ಟೋಬಿ ರೋಲ್ಯಾಂಡ್-ಜೋನ್ಸ್ , ಟಾಮ್ ಹೆಲ್ಮ್ , ನೋಹ್ ಕಾರ್ನ್ವೆಲ್.

ಇದನ್ನೂ ಓದಿ: ಟಾಸ್ ಸೋಲುವುದರಲ್ಲೂ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ

ನಾರ್ಥಾಂಪ್ಟನ್‌ಶೈರ್ ಪ್ಲೇಯಿಂಗ್ 11: ರಿಕಾರ್ಡೊ ವಾಸ್ಕೊನ್ಸೆಲೋಸ್ , ಲೂಯಿಸ್ ಮೆಕ್‌ಮ್ಯಾನಸ್ (ನಾಯಕ) , ಆದಿ ಶರ್ಮಾ , ಜೇಮ್ಸ್ ಸೇಲ್ಸ್ , ಜಾರ್ಜ್ ಬಾರ್ಟ್ಲೆಟ್ , ಸೈಫ್ ಜೈಬ್ , ರಾಬ್ ಕಿಯೋಘ್ , ಡೊಮಿನಿಕ್ ಲೀಚ್ , ಬೆನ್ ಸ್ಯಾಂಡರ್ಸನ್ , ಲಿಯಾಮ್ ಗುತ್ರೀ , ಯುಜ್ವೇಂದ್ರ ಚಹಲ್.