ಆರನೇ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ (T20 World Cup) ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಟೀಮ್ ಇಂಡಿಯಾ (Team India) ಸೂಪರ್ 12 ಹಂತದಲ್ಲೇ ಹೊರಬಿದ್ದಿತು. ಆರಂಭದ ಎರಡು ಪಂದ್ಯಗಳಲ್ಲಿ ಅನುಭವಿಸಿದ ಸೋಲು ವಿರಾಟ್ ಕೊಹ್ಲಿ (Virat Kohli) ಪಡೆಯನ್ನು ಟೂರ್ನಿಯಿಂದಲೇ ಔಟ್ ಆಗುವಂತೆ ಮಾಡಿತು. ಟಿ20 ವಿಶ್ವಕಪ್ಗಾಗಿ ಭಾರತ ಸಾಕಷ್ಟು ತಯಾರಿ ನಡೆಸಿತ್ತು. ಎಂಎಸ್ ಧೋನಿ (MS Dhoni) ಅವರನ್ನು ಮೆಂಟರ್ ಆಗಿ ನೇಮಿಸಿದ್ದಲ್ಲದೆ ಬಿಸಿಸಿಐ (BCCI) ಆಯ್ಕೆ ಸಮಿತಿ 15 ಸದಸ್ಯರ ತಂಡದಲ್ಲೂ ಹೊಸ ಪ್ರಯೋಗ ನಡೆಸಿತ್ತು. ಪ್ರಮುಖವಾಗಿ ಅನುಭವಿ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ (Yuzvendra Chahal) ಅವರನ್ನು ಕೈಬಿಟ್ಟು ರಾಹುಲ್ ಚಹಾರ್ (Rahul Chahar) ಅವರನ್ನು ಆಯ್ಕೆ ಮಾಡಿತು. ಈ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬಂದಿದ್ದವು. ಸದ್ಯ ಟಿ20 ವಿಶ್ವಕಪ್ಗೆ ಆಯ್ಕೆಯಾಗದ ಬಗ್ಗೆ ಸ್ವತಃ ಚಹಾಲ್ ಅವರೇ ಮೌನ ಮುರಿದಿದ್ದಾರೆ.
ಟಿ20 ವಿಶ್ವಕಪ್ಗೆ ಭಾರತ ತಂಡ ಪ್ರಕಟವಾದಾಗ ಚಹಾಲ್ ಹೆಸರಿಲ್ಲದಿದ್ದಿದ್ದು ಸ್ವತಃ ಕ್ರಿಕೆಟ್ ಪಂಡಿತರಿಗೇ ಅಚ್ಚರಿ ಉಂಟುಮಾಡಿತ್ತು. ಇದರ ನಡುವೆ ವಿರಾಟ್ ಕೊಹ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಯುಎಇಯ ಪಿಚ್‌ಗಳನ್ನು ಪರಿಗಣಿಸಿ ಚಹಾಲ್ ಬದಲು ರಾಹುಲ್ ಚಾಹರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದರು. ಚಾಹರ್ ಅವರು ಸ್ಟಂಪ್ ಮೇಲೆ ದಾಳಿ ಮಾಡಿ ಅಲ್ಲಿ ವಿಕೆಟ್ ಪಡೆಯುತ್ತಾರೆ. ಅದೇ ವಿಷಯ ರಾಹುಲ್ ಚಾಹರ್ಗೆ ವರದಾನವಾಯಿತು ಎಂದು ಹೇಳಿದ್ದರು.
ಆದರೆ, ಇಲ್ಲಿ ನಡೆದಿದ್ದೇ ಬೇರೆ. ಟಿ20 ವಿಶ್ವಕಪ್ನಲ್ಲಿ ರಾಹುಲ್ ಚಾಹರ್ ಆಡುವ ಬಳಗದಲ್ಲಿ ಕಾಣಿಸಿದ್ದೇ ಕಮ್ಮಿ. ಆಡಿದ ಪಂದ್ಯಗಳಲ್ಲೂ ಫ್ಲಾಪ್ ಆದರು. ಇದಕ್ಕೂ ಮುನ್ನ ನಡೆದ ಯುಎಇನ ಐಪಿಎಲ್ 2021 ಲೀಗ್ನಲ್ಲಿ ರಾಹುಲ್ ಚಾಹರ್ ಮುಂಬೈ ಇಂಡಿಯನ್ಸ್ ಪರ ಕೇವಲ 4 ಪಂದ್ಯಗಳನ್ನು ಆಡಿದ್ದರು. ಮತ್ತು ಕೇವಲ 2 ವಿಕೆಟ್ ಪಡೆದಿದ್ದರು. ಚಹಾಲ್ ಯುಎಇ ಪಿಚ್‌ಗಳಲ್ಲಿ 9 ಪಂದ್ಯಗಳಲ್ಲಿ 14 ವಿಕೆಟ್ ಪಡೆದರು. ಯುಎಇ ಪಿಚ್‌ಗಳಲ್ಲಿ ರಾಹುಲ್ ಚಾಹರ್‌ಗಿಂತ ಚಹಾಲ್ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ, ನಂತರದಲ್ಲೂ ಚಹಾಲ್ರನ್ನು ವಿಶ್ವಕಪ್ಗೆ ಆಯ್ಕೆ ಮಾಡಲಿಲ್ಲ.
ಈ ಬಗ್ಗೆ ಮೌನಮುರಿದ ಯುಜ್ವೇಂದ್ರ ಚಹಾಲ್, “ಕಳೆದ ನಾಲ್ಕು ವರ್ಷಗಳಲ್ಲಿ ನಾನು ಯಾವುದೇ ಸರಣಿಯಿಂದ ಹೊರಬಿದ್ದಿರಲಿಲ್ಲ. ಆದರೆ, ಪ್ರಮುಖ ಟೂರ್ನಿಯಿಂದ ನಾನು ಡ್ರಾಪ್ ಆದೆ. ಇದು ನನಗೆ ತುಂಬಾನೇ ಬೇಸರ ಮೂಡಿಸಿತು. ನಾನು ಎರಡು- ಮೂರು ದಿನ ಕುಗ್ಗಿದ್ದೆ. ಬಳಿಕ ಐಪಿಎಲ್ ಎರಡನೇ ಚರಣ ಇದ್ದ ಕಾರಣ ಅದರ ಮೇಲೆ ಗಮನ ಹರಿಸಿದೆ. ನನ್ನ ಕೋಚ್ ಬಳಿ ಹೋಗಿ ಸಾಕಷ್ಟು ಮಾತುಕತೆ ನಡೆಸಿದೆ” ಎಂದು ಚಹಾಲ್ ಹೇಳಿದ್ದಾರೆ.
“ನನ್ನ ಹೆಂಡತಿ ಮತ್ತು ಕುಟುಂಬದವರು ನನಗೆ ತುಂಬಾನೆ ಸಹಾಯ ಮಾಡಿದರು. ಅದರಲ್ಲೂ ನನ್ನ ಅಭಿಮಾನಿಗಳು ಪ್ರೇರಣಾ ಪೋಸ್ಟ್ ಹಾಕಿದ್ದು ನನಗೆ ಮತ್ತಷ್ಟು ಧೈರ್ಯ ನೀಡಿತು. ಇವರೆಲ್ಲ ನನ್ನ ಜೊತೆಗೆ ಇದ್ದರು. ನನ್ನ ಶಕ್ತಿಯಿಂದ ಕಮ್ಬ್ಯಾಕ್ ಮಾಡಲು ಪ್ರಯತ್ನ ಪಟ್ಟೆ. ನಾನು ತುಂಬಾ ಸಮಯ ಸುಮ್ಮನಿರಲು ಸಾಧ್ಯವಿರಲಿಲ್ಲ. ಯಾಕಂದ್ರೆ ಅದು ನನ್ನ ಐಪಿಎಲ್ ಫಾರ್ಮ್ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಗೊತ್ತಿತ್ತು” ಎಂದು ಟೀಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಚಹಾಲ್ ಮಾತುಗಳನ್ನಾಡಿದ್ದಾರೆ.
Shoaib Akhtar: ಕಾಲಿನ ಶೂನಿಂದ ಬಿಯರ್ ಕುಡಿದು ಆಸೀಸ್ ಆಟಗಾರರ ಸೆಲೆಬ್ರೇಷನ್ ಕಂಡು ಅಸಹ್ಯ ಎಂದ ಅಖ್ತರ್
(Yuzvendra Chahal opened up on his T20 World Cup squad snub for the first time Here is What he says)
Published On - 9:26 am, Tue, 16 November 21