ಕೌಂಟಿ ಚಾಂಪಿಯನ್​ಶಿಪ್​ನಲ್ಲಿ ಚಹಲ್ ಚಮತ್ಕಾರ; ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್ ಪಡೆದ ಗೂಗ್ಲಿ ಮಾಸ್ಟರ್

|

Updated on: Sep 13, 2023 | 1:13 PM

Yuzvendra Chahal: ಭಾರತ ಏಷ್ಯಾಕಪ್​ ಮತ್ತು ವಿಶ್ವಕಪ್​ ತಂಡದಿಂದ ಹೊರಗಿರುವ ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್​ ಮೊದಲ ಬಾರಿಗೆ ಕೌಂಟಿ ಚಾಂಪಿಯನ್​ಶಿಪ್​ನಲ್ಲಿ ಕೆಂಟ್ ತಂಡದ ಪರ ಪಾದಾರ್ಪಣೆ ಮಾಡಿದ್ದು, ನಾಟಿಂಗ್​ಹ್ಯಾಮ್​ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್​ ಪಡೆದು, ತನ್ನನ್ನು ಕಡೆಗಣಿಸಿದವರಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ.

ಕೌಂಟಿ ಚಾಂಪಿಯನ್​ಶಿಪ್​ನಲ್ಲಿ ಚಹಲ್ ಚಮತ್ಕಾರ; ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್ ಪಡೆದ ಗೂಗ್ಲಿ ಮಾಸ್ಟರ್
ಯುಜ್ವೇಂದ್ರ ಚಹಲ್
Follow us on

ಭಾರತ ಏಷ್ಯಾಕಪ್ (Asia cup)​ ಮತ್ತು ವಿಶ್ವಕಪ್ (ODI World Cup)​ ತಂಡದಿಂದ ಹೊರಗಿರುವ ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ (Yuzvendra Chahal)​ ಮೊದಲ ಬಾರಿಗೆ ಕೌಂಟಿ ಚಾಂಪಿಯನ್​ಶಿಪ್​ನಲ್ಲಿ ಆಡುತ್ತಿದ್ದಾರೆ. ಈ ಚಾಂಪಿಯನ್​ಶಿಪ್​ನಲ್ಲಿ ಕೆಂಟ್ ತಂಡದ ಪರ ಪಾದಾರ್ಪಣೆ ಮಾಡಿದ್ದ ಚಹಲ್, ನಾಟಿಂಗ್​ಹ್ಯಾಮ್​ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್​ ಪಡೆದು, ತನ್ನನ್ನು ಕಡೆಗಣಿಸಿದವರಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ. ವಾಸ್ತವವಾಗಿ ಈ ಬಾರಿಯ ವಿಶ್ವಕಪ್ ಭಾರತದಲ್ಲಿ ನಡೆಯುತ್ತಿರುವುದರಿಂದ ಬಹಳ ದಿನಗಳಿಂದ ತಂಡದಿಂದ ದೂರ ಉಳಿದಿರುವ ಚಹಲ್, ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಬಿಸಿಸಿಐ ಚಹಲ್ ಬದಲು ಕುಲ್ದೀಪ್​ಗೆ ಸ್ಥಾನ ನೀಡಿತ್ತು. ಹೀಗಾಗಿ ವಿಶ್ವಕಪ್ ಹಾಗೂ ಏಷ್ಯಾಕಪ್ ತಂಡದಲ್ಲಿ ಸ್ಥಾನ ಸಿಗದೆ ಹಿನ್ನಲೆ ಕಳೆದ ವಾರವಷ್ಟೆ ಚಹಲ್, ಕೌಂಟಿ ಚಾಂಪಿಯನ್​ಶಿಪ್​ನಲ್ಲಿ (County Championship) ಕೆಂಟ್ ತಂಡದ ಪರ ಆಡುವುದಾಗಿ ಹೇಳಿಕೊಂಡಿದ್ದರು.

3 ವಿಕೆಟ್ ಉರುಳಿಸಿದ ಚಹಲ್

ಇನ್ನು ಕೆಂಟ್ ಪರ ಮೊದಲ ಬಾರಿಗೆ ಆಡುತ್ತಿರುವ ಯುಜುವೇಂದ್ರ ಚಹಲ್, ಈ ಪಂದ್ಯದಲ್ಲಿ ಒಟ್ಟು 29 ಓವರ್​ ಬೌಲ್ ಮಾಡಿದರು. ಅದರಲ್ಲಿ 10 ಮೇಡನ್ ಓವರ್ ಬೌಲ್ ಮಾಡಿದ ಚಹಲ್ ತಮ್ಮ ಸ್ಪೆಲ್​ನಲ್ಲಿ 63 ರನ್​ಗಳನ್ನು ವ್ಯಯಿಸಿ 3 ಬ್ಯಾಟ್ಸ್​ಮನ್​ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರು. ಈ ವೇಳೆ ಚಹಲ್, ಲಿಂಡನ್ ಜೇಮ್ಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

2ನೇ ಇನ್ನಿಂಗ್ಸ್ ಆರಂಭಿಸಿರುವ ನಾಟಿಂಗ್‌ಹ್ಯಾಮ್‌ಶೈರ್‌

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಂಟ್ ತಂಡ 10 ವಿಕೆಟ್ ಕಳೆದುಕೊಂಡು 446 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ಕೆಂಟ್ ಪರ, ಝಾಕ್ ಕಾರ್ವೆ 158 ರನ್‌ಗಳ ಇನ್ನಿಂಗ್ಸ್‌ ಆಡಿದರು. ಇವರನ್ನು ಹೊರತುಪಡಿಸಿ, ಜಾಕ್ ಲಿನ್ನಿಂಗ್ 64 ರನ್‌ಗಳ ಕೊಡುಗೆ ನೀಡಿದರೆ, ಡಿ ಬೆಲ್ 60 ರನ್‌ಗಳ ಇನ್ನಿಂಗ್ಸ್ ಆಡಿದರು. ಈ ಗುರಿ ಬೆನ್ನಟ್ಟಿದ ನಾಟಿಂಗ್‌ಹ್ಯಾಮ್‌ಶೈರ್‌ ತಂಡ 265 ರನ್​ಗಳಿಗೆ ಆಲೌಟ್ ಆಗಿದೆ. ಇದೀಗ 2ನೇ ಇನ್ನಿಂಗ್ಸ್ ಆರಂಭಿಸಿರುವ ನಾಟಿಂಗ್‌ಹ್ಯಾಮ್‌ಶೈರ್‌ ತಂಡ ದಿನದಾಟದಂತ್ಯಕ್ಕೆ 5 ವಿಕೆಟ್​ ಕಳೆದುಕೊಂಡು 177 ರನ್ ಕಲೆಹಾಕಿದೆ.

ಭಾರತ ವಿಶ್ವಕಪ್ ತಂಡದಲ್ಲಿಲ್ಲ ಸ್ಥಾನ; ಕೌಂಟಿ ಕ್ರಿಕೆಟ್​ನತ್ತ ಮುಖಾಮಾಡಿದ ಯುಜ್ವೇಂದ್ರ ಚಹಲ್

ಟೀಂ ಇಂಡಿಯಾ ಪರ ಚಹಲ್ ಪ್ರದರ್ಶನ

ಪ್ರಸ್ತುತ ಭಾರತ ತಂಡದಿಂದ ದೂರ ಉಳಿದಿರುವ ಚಹಲ್, ಟೀಂ ಇಂಡಿಯಾ ಪರ 72 ಏಕದಿನ ಪಂದ್ಯಗಳಲ್ಲಿ 5.27 ರ ಎಕಾನಮಿಯೊಂದಿಗೆ 121 ವಿಕೆಟ್ಗಳನ್ನು ಪಡೆದಿದ್ದಾರೆ. ಇದಲ್ಲದೇ 80 ಟಿ20 ಪಂದ್ಯಗಳಲ್ಲಿ 96 ವಿಕೆಟ್ ಪಡೆದಿರುವ ಚಹಲ್​ಗೆ ಭಾರತ ಟೆಸ್ಟ್ ತಂಡದಲ್ಲಿ ಆಡುವ ಅವಕಾಶ ಇನ್ನು ಸಿಕ್ಕಿಲ್ಲ. ಹೀಗಾಗಿ ಪ್ರತಿ ಸಂದರ್ಶನಗಳಲ್ಲೂ ಭಾರತ ಟೆಸ್ಟ್ ತಂಡದಲ್ಲಿ ಆಡುವುದೇ ನನ್ನ ಜೀವನದ ಗುರಿ ಎಂದು ಹೇಳಿಕೊಳ್ಳುವ ಚಹಲ್​ಗೆ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿನ ಪ್ರದರ್ಶನ ಹೊಸ ವೇದಿಕೆಯನ್ನು ಸೃಷ್ಟಿಸಿಕೊಟ್ಟಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:11 pm, Wed, 13 September 23