AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಸ್ಟಿಯಾನೊ ರೊನಾಲ್ಡೊ!

ಕ್ರೀಡಾ ಜಗತ್ತಿನ ಬಹುನಿರೀಕ್ಷಿತ ವಿವಾಹವೊಂದು ಕೊನೆಗೂ ನೆರವೇರಿದೆ. ಜಾಗತಿಕ ಫುಟ್‌ಬಾಲ್ ಐಕಾನ್ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಅವರ ದೀರ್ಘಕಾಲದ ಒಡನಾಡಿ ಜಾರ್ಜಿನಾ ರೋಡ್ರಿಗಸ್ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪೋರ್ಚುಗಲ್‌ನ ಮನಮೋಹಕ ಕರಾವಳಿ ತೀರವಾದ ಕ್ಯಾಸ್ಕೈಸ್‌ನಲ್ಲಿ ಅತ್ಯಂತ ರಹಸ್ಯವಾಗಿ ಹಾಗೂ ಸರಳವಾಗಿ ನಡೆದ ಈ ವಿವಾಹ ಮಹೋತ್ಸವ, ಸದ್ಯ ಇಡೀ ವಿಶ್ವದಾದ್ಯಂತ ಕ್ರೀಡಾಭಿಮಾನಿಗಳು ಮತ್ತು ಮಾಧ್ಯಮಗಳ ಗಮನ ಸೆಳೆದಿದೆ.

ಮಕ್ಕಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಸ್ಟಿಯಾನೊ ರೊನಾಲ್ಡೊ!
Cristiano Ronaldo - Georgina RodriguezImage Credit source: CR7
ಝಾಹಿರ್ ಯೂಸುಫ್
|

Updated on: Aug 12, 2026 | 12:37 PM

Share

ಫುಟ್‌ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ, ತಮ್ಮ ದೀರ್ಘಕಾಲದ ಗೆಳತಿ ಜಾರ್ಜಿನಾ ರೋಡ್ರಿಗಸ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪೋರ್ಚುಗಲ್‌ನ ಲಿಸ್ಬನ್ ಬಳಿಯ ಐಷಾರಾಮಿ ಕರಾವಳಿ ಪಟ್ಟಣವಾದ ಕ್ಯಾಸ್ಕೈಸ್‌ನಲ್ಲಿ ಆಗಸ್ಟ್ 11, 2026ರ ಮಂಗಳವಾರದಂದು ಇವರ ವಿವಾಹ ಮಹೋತ್ಸವ ಅತ್ಯಂತ ಸರಳವಾಗಿ ನೆರವೇರಿದೆ.

ಯಾವುದೇ ಅದ್ದೂರಿ ಸಾರ್ವಜನಿಕ ಪ್ರದರ್ಶನಕ್ಕೆ ಅವಕಾಶ ನೀಡದ ರೊನಾಲ್ಡೊ, ಕೇವಲ ತಮ್ಮ ಐದು ಮಕ್ಕಳು ಮತ್ತು ಆಪ್ತ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ಮದುವೆಯಾಗಿದ್ದಾರೆ. ಮದುವೆಯ ನಂತರ ಇವರಿಬ್ಬರೂ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿವಾಹದ ಉಂಗುರಗಳ ಚಿತ್ರವನ್ನು ಹಂಚಿಕೊಂಡು, “C❤️G” ಎಂಬ ಸರಳ ಶೀರ್ಷಿಕೆಯೊಂದಿಗೆ ಈ ಸಂತಸದ ಸುದ್ದಿಯನ್ನು ಜಗತ್ತಿಗೆ ಖಚಿತಪಡಿಸಿದ್ದಾರೆ.

ವಿಶೇಷ ದಿನಾಂಕ:

ಜಾರ್ಜಿನಾ ರೋಡ್ರಿಗಸ್ ಅವರು ಆಗಸ್ಟ್ 11, 2025 ರಂದು ತಮ್ಮ ನಿಶ್ಚಿತಾರ್ಥವನ್ನು ಅಧಿಕೃತವಾಗಿ ಘೋಷಿಸಿದ್ದರು. ನಿಖರವಾಗಿ ಒಂದು ವರ್ಷದ ನಂತರ, ಅಂದರೆ ಆಗಸ್ಟ್ 11, 2026 ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ತಮ್ಮ ಪ್ರೀತಿಯನ್ನು ದಾಂಪತ್ಯ ಬಂಧನವಾಗಿ ಪರಿವರ್ತಿಸಿಕೊಂಡಿದ್ದಾರೆ.

ಮಕ್ಕಳೇ ಅತಿಥಿಗಳು:

ಈ ಮದುವೆಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಐದು ಮಕ್ಕಳಾದ ಕ್ರಿಸ್ಟಿಯಾನೊ ಜೂನಿಯರ್ (16), ಅವಳಿ ಮಕ್ಕಳಾದ ಇವಾ ಮಾರಿಯಾ ಮತ್ತು ಮಾಟಿಯೊ (9), ಅಲಾನಾ ಮಾರ್ಟಿನಾ (8) ಮತ್ತು ಬೆಲ್ಲಾ ಎಸ್ಮೆರಾಲ್ಡಾ (4) ಪ್ರಮುಖ ಅತಿಥಿಗಳಾಗಿ ಕಾಣಿಸಿಕೊಂಡಿದ್ದು ವಿಶೇಷ.

ಅಪೂರ್ವ ವಿವಾಹದ ಉಂಗುರ:

ನಿಶ್ಚಿತಾರ್ಥದ ಸುಂದರ ಕ್ಷಣದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಜಾರ್ಜಿನಾ ರೊಡ್ರಿಗಸ್ ಅವರಿಗೆ ತೊಡಿಸಿದ ವಜ್ರದ ಉಂಗುರ ಎಲ್ಲರ ಗಮನ ಸೆಳೆದಿದೆ. ಅವರ ಕೈಯನ್ನು ಅಲಂಕರಿಸಿದ ಈ ಅತ್ಯಮೂಲ್ಯ ಉಂಗುರದ ಮೌಲ್ಯ ಸುಮಾರು 5 ಮಿಲಿಯನ್ ಡಾಲರ್, ಅಂದರೆ ಭಾರತೀಯ ಕರೆನ್ಸಿಯಲ್ಲಿ ಅಂದಾಜು 41 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಎಂದು ಅಂದಾಜಿಸಲಾಗಿದೆ.

ಸುಳ್ಳು ಸುದ್ದಿಗಳಿಗೆ ಬ್ರೇಕ್:

ಮದುವೆಗೆ ಮುನ್ನ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದ ಎಲ್ಲಾ ಸುಳ್ಳು ಸುದ್ದಿಗಳಿಗೆ ಈ ಸರಳ ವಿವಾಹವು ತೆರೆ ಎಳೆದಿದೆ. ಕಳೆದ ಕೆಲವು ದಿನಗಳಿಂದ ಎಐ (AI) ಸೃಷ್ಟಿಸಿದ ನಕಲಿ ಫೋಟೋಗಳು ಮತ್ತು ವದಂತಿಗಳು ಜೋರಾಗಿದ್ದವು. ರೊನಾಲ್ಡೊ ಮಡೈರಾದ ಫಂಚಲ್ ಕ್ಯಾಥೆಡ್ರಲ್‌ನಲ್ಲಿ $12 ಮಿಲಿಯನ್ ವೆಚ್ಚದಲ್ಲಿ ಭಾರಿ ಮದುವೆ ಮಾಡಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ರಿಎಂಟ್ರಿಗೆ ಒಪ್ಪಿಗೆ, ಷರತ್ತಿಗೆ ನೋ ಎಂದ ಗುಜರಾತ್ ಟೈಟಾನ್ಸ್!

ಇದನ್ನು ನಂಬಿ ಆಗಸ್ಟ್ 8 ರಂದು ನೂರಾರು ಅಭಿಮಾನಿಗಳು ಚರ್ಚ್ ಬಳಿ ಜಮಾಯಿಸಿದ್ದರು. ಆದರೆ ಅಲ್ಲಿ ಬೇರೆ ದಂಪತಿಗಳ ಮದುವೆ ನಡೆಯುತ್ತಿತ್ತು. ಅಷ್ಟೇ ಅಲ್ಲದೆ ರೊನಾಲ್ಡೊ-ಜಾರ್ಜಿಯಾ ಮದುವೆಗೆ ಲಿಯೋನೆಲ್ ಮೆಸ್ಸಿ ಮತ್ತು ಕೈಲಿಯನ್ ಎಂಬಾಪೆ ಅತಿಥಿಗಳಾಗಿ ಬರಲಿದ್ದಾರೆ ಎಂಬ ಸುದ್ದಿಗಳೂ ಹರಿದಾಡಿದ್ದವು. ಇದೀಗ ಸರಳ ವಿವಾಹದೊಂದಿಗೆ ಈ ಎಲ್ಲಾ ಸುಳ್ಳು ಸುದ್ದಿಗಳಿಗೆ ರೊನಾಲ್ಡೊ ಬ್ರೇಕ್ ಹಾಕಿದ್ದಾರೆ.

Follow Us