ಭಾರತದ ರಾಷ್ಟ್ರೀಯ ಟೇಬಲ್ ಟೆನಿಸ್ ಕೋಚ್ ಸೌಮ್ಯದೀಪ್ ರಾಯ್ ವಿರುದ್ಧದ ಮ್ಯಾಚ್ ಫಿಕ್ಸಿಂಗ್ ಆರೋಪವನ್ನು ದೆಹಲಿ ಕೋರ್ಟ್ ಎತ್ತಿ ಹಿಡಿದಿದೆ. ಜೊತೆಗೆ ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ (Table Tennis Federation of India) ವಿರುದ್ಧವೂ ಆರೋಪ ಮಾಡಿದೆ. ಭಾರತದ ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ (Manika Batra) ಅವರು ಸೌಮ್ಯದೀಪ್ ಅವರು ಒಲಂಪಿಕ್ ಅರ್ಹತಾ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡುವಂತೆ ಮಣಿಕಾ ಅವರನ್ನು ಕೇಳಿದ್ದರು ಎಂದು ಆರೋಪಿಸಿದ್ದರು. ಇದಾದ ಬಳಿಕ ದೆಹಲಿ ಕೋರ್ಟ್ ಪ್ರಕರಣದ ತನಿಖೆಯನ್ನು ಆರಂಭಿಸಿತ್ತು. ಕೋಚ್ ವಿರುದ್ಧ ಮಾಡಿದ್ದ ಮ್ಯಾಚ್ ಫಿಕ್ಸಿಂಗ್ ಆರೋಪ ಸತ್ಯ ಎಂದು ಸಾಬೀತಾಗಿದೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ರಾಷ್ಟ್ರೀಯ ಕೋಚ್‌ನ ಸಹಾಯವನ್ನು ಪಡೆಯಲು ಮನಿಕಾ ಬಾತ್ರಾ ನಿರಾಕರಿಸಿದ್ದರು. ನಂತರ ಫೆಡರೇಶನ್ ಮಣಿಕಾಗೆ ಶೋಕಾಸ್ ನೋಟಿಸ್ ನೀಡಿತು. ಇದಕ್ಕೆ ಪ್ರತಿಕ್ರಿಯಿಸಿದ ಮಣಿಕಾ, ರಾಷ್ಟ್ರೀಯ ಕೋಚ್ ಫಿಕ್ಸಿಂಗ್ ಮಾಡಿಕೊಳ್ಳುವಂತೆ ನನ್ನ ಬಳಿ ಕೇಳಿಕೊಂಡಿದ್ದರು. ಆದ್ದರಿಂದ ಅವರು ತನ್ನೊಂದಿಗೆ ಕೋಚ್ ಆಗಿ ಕುಳಿತಿದ್ದರೆ, ಪಂದ್ಯದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಮನಿಕಾ ಹೇಳಿಕೊಂಡಿದ್ದರು.
ರಾಷ್ಟ್ರೀಯ ಕೋಚ್ ವಿರುದ್ಧ ಆರೋಪ ಮಾಡಿದ್ದ ಮನಿಕಾ
ಟಿಟಿಎಫ್‌ಐ ಕಾರ್ಯದರ್ಶಿ ಅರುಣ್ ಬ್ಯಾನರ್ಜಿ ಅವರಿಗೆ ನೀಡಿದ ಉತ್ತರದಲ್ಲಿ ಮಣಿಕಾ, ಮಾರ್ಚ್ 2021 ರಲ್ಲಿ ದೋಹಾದಲ್ಲಿ ನಡೆದ ಅರ್ಹತಾ ಪಂದ್ಯಾವಳಿಯಲ್ಲಿ ರಾಷ್ಟ್ರೀಯ ತರಬೇತುದಾರರು ತಾನು ಕೋಚಿಂಗ್ ಮಾಡುತ್ತಿರುವ ಆಟಗಾರ್ತಿಯ ವಿರುದ್ಧದ ಪಂದ್ಯದಲ್ಲಿ ಸೋಲುವಂತೆ ನನಗೆ ಒತ್ತಡ ಹೇರಿದರು. ಇದರಿಂದ ಅವರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬಹುದು ಎಂಬುದು ಅವರ ಕಾರಣವಾಗಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ ರಾಷ್ಟ್ರೀಯ ಕೋಚ್ ನನ್ನ ಬಳಿ ಮ್ಯಾಚ್-ಫಿಕ್ಸಿಂಗ್ ಮಾಡಿಕೊಳ್ಳುವಂತೆ ಒತ್ತಾಯ ಹೇರಿದ್ದರು ಎಂದು ಹೇಳಿಕೊಂಡಿದ್ದರು. ಸುರ್ತಿತಾ ಮುರ್ಖಾಜಿ ವಿರುದ್ಧದ ಪಂದ್ಯದಲ್ಲಿ ಉದ್ದೇಶಪೂರ್ವಕವಾಗಿ ಸೋಲುವಂತೆ ಮಾಣಿಕಾಗೆ ಸೌಮ್ಯದೀಪ್ ಕೇಳಿಕೊಂಡಿದ್ದರು ಎನ್ನಲಾಗಿದೆ. ಸೌಮ್ಯದೀಪ್ ಕೋರಿಕೆಗೆ ನಾನು ಯಾವುದೇ ಭರವಸೆ ನೀಡಲಿಲ್ಲ ಮತ್ತು ತಕ್ಷಣವೇ ಟಿಟಿಎಫ್‌ಐಗೆ ತಿಳಿಸಿದ್ದೇನೆ. ಆದರೆ, ಅವರ ಒತ್ತಡ ಮತ್ತು ಬೆದರಿಕೆ ನನ್ನ ಆಟದ ಮೇಲೆ ಪರಿಣಾಮ ಬೀರಿತು ಎಂದು ಮನಿಕಾ ಹೇಳಿಕೊಂಡಿದ್ದಾರೆ. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದಾಗಿನಿಂದ ಸೌಮ್ಯದೀಪ್ ರಾಯ್ ಅವರನ್ನು ರಾಷ್ಟ್ರೀಯ ಶಿಬಿರದಿಂದ ಹೊರಗಿಡಲಾಗಿದೆ.
ಇದನ್ನೂ ಓದಿ:IPL 2022: ಐಪಿಎಲ್ ಹರಾಜಿಗೂ ಮುನ್ನ ಪಂಜಾಬ್ ತಂಡಕ್ಕೆ ಆಘಾತ; ಬ್ಯಾಟಿಂಗ್ ಕೋಚ್ ವಾಸಿಂ ಜಾಫರ್ ರಾಜೀನಾಮೆ!