ಭಾರತ ಉಪಖಂಡದ ಪಿಚ್ಗಳಲ್ಲಿ ಉತ್ಕೃಷ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ಜ್ಯಾಕ್ ಕ್ಯಾಲಿಸ್ ಅವರನ್ನು ಜನವರಿ 14ರಿಂದ ಆರಂಭಗೊಳ್ಳಲಿರುವ ಶ್ರೀಲಂಕಾ ಪ್ರವಾಸಕ್ಕೆ ಇಂಗ್ಲೆಂಡ್ ಟೀಮಿನ ಬ್ಯಾಟಿಂಗ್ ಕನ್ಸಲ್ಟಂಟ್ ಆಗಿ ನೇಮಕ ಮಾಡಿಕೊಳ್ಳಲಾಗಿದೆಯೆಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ)ಸೋಮವಾರ ಬಿಡುಗಡೆ ಮಾಡಿರುವ ಪ್ರಕಟಣೆಯೊಂದರಲ್ಲಿ ತಿಳಿಸಿದೆ.
ಕ್ರಿಕೆಟ್ ಇತಿಹಾಸದ ಸರ್ವಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ಕ್ಯಾಲಿಸ್ ಅವರನ್ನು ಇಸಿಬಿ ಆಯ್ಕೆ ಮಾಡಿರುವುದಕ್ಕೆ ಕ್ರಿಕೆಟ್ ವಲಯಗಳಲ್ಲಿ ಆಶ್ಚರ್ಯ ವ್ಯಕ್ತವಾಗುತ್ತಿದೆ. ಇಂಗ್ಲೆಂಡ್ ಮಾಜಿ ಆಟಗಾರರಾಗಿರುವ ಜೊನಾಥನ್ ಟ್ರಾಟ್ ಮತ್ತು ಮಾರ್ಕಸ್ ಟ್ರೆಸ್ಕೋಥಿಕ್ ಕಳೆದ 12-ತಿಂಗಳ ಅವಧಿಯಲ್ಲಿ ಈ ಹುದ್ದೆಯನ್ನು ಅಲಂಕರಿಸಿದ್ದರು.
ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲೂ ಒಬ್ಬರಾಗಿದ್ದ 45 ವರ್ಷ ವಯಸ್ಸಿನ ಕ್ಯಾಲಿಸ್ ಟೆಸ್ಟ್ಗಳಲ್ಲಿ 55.37 ಸರಾಸರಿಯೊಂದಿಗೆ 13,206 ರನ್ ಗಳಿಸಿ ನಿವೃತ್ತರಾದರು. ಉಪಖಂಡದ ಪಿಚ್ಗಳ ಮೇಲೆ ಅವರು 8 ಶತಕಗಳನ್ನು ಬಾರಿಸಿದ್ದು 55.82 ಸರಾಸರಿ ಹೊಂದಿದ್ದಾರೆ.
ಪ್ರಾಯಶಃ ಇದೇ ಕಾರಣಕ್ಕೆ ಅವರನ್ನು ಇಸಿಬಿ ಅಯ್ಕೆ ಮಾಡಿಕೊಂಡಿರಬಹುದು. ಶ್ರೀಲಂಕಾದಲ್ಲಿ ಎರಡು ಟೆಸ್ಟ್ಗಳನ್ನಾಡಲಿರುವ ಇಂಗ್ಲೆಂಡ್ ನಂತರ ಭಾರತ ಪ್ರವಾಸ ಕೈಗೊಳ್ಳಲಿದೆ. ಆದರೆ, ಕ್ಯಾಲಿಸ್ ಸೇವೆಯನ್ನು ಭಾರತದ ಪ್ರವಾಸಕ್ಕೂ ವಿಸ್ತರಿಸುವ ಬಗ್ಗೆ ಇಸಿಬಿ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.
ಟೀಮಿನ ಸಹಾಯಕ ಕೋಚ್ ಆಗಿರುವ ಮಾಜಿ ಆಟಗಾರ ಗ್ರಹಾಂ ಥೋರ್ಪ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು ಅವರ ಸ್ಥಾನದಲ್ಲಿ ಮತ್ತೊಬ್ಬ ಮಾಜಿ ಆಟಗಾರ ಪಾಲ್ ಕಾಲಿಂಗ್ವುಡ್ಗೆ ಜವಾಬ್ದಾರಿ ವಹಿಸಲಾಗಿದೆ.