ಗಾಯಗೊಂಡಿರುವ ಬಾಬರ್ ಮತ್ತು ಇಮಾಮ್ ಮೊದಲ ಟೆಸ್ಟ್ ಆಡುವುದಿಲ್ಲ: ಪಿಸಿಬಿ
ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಗಾಯಾಳುಗಳ ಚಿಂತೆ ಕಾಡುತ್ತಿದೆ. ಹೆಬ್ಬಟ್ಟಿನ ಮೂಳೆ ಮುರಿದುಕೊಂಡಿರುವ ನಾಯಕ ಬಾಬರ್ ಅಜಂ ಮತ್ತು ಆರಂಭ ಆಟಗಾರ ಇಮಾಮ್ ಉಲ್ ಹಕ್ 26ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ನಲ್ಲಿ ಅಡುವುದಿಲ್ಲವೆಂದು ಪಿಸಿಬಿ ಹೇಳಿದೆ.
ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಟಿ20ಐ ಸರಣಿಯಲ್ಲಿ 0-2 ಹಿನ್ನಡೆ ಅನುಭವಿಸುತ್ತಿರುವ ಪಾಕಿಸ್ತಾನಕ್ಕೆ ಟೆಸ್ಟ್ ಸರಣಿ ಆರಂಭಕ್ಕೆ ಮೊದಲು ಮತ್ತೊಂದು ಆಘಾತ ಎದುರಾಗಿದೆ. ಟೀಮಿನ ನಾಯಕ ಬಾಬರ್ ಆಜಂ ಮತ್ತು ಆರಂಭ ಆಟಗಾರ ಇಮಾಮ್ ಉಲ್ ಹಕ್ ಗಾಯಗೊಂಡಿದ್ದು ಇಬ್ಬರೂ 26ರಂದು ಮೌಂಟ್ ಮ್ಯಾಗ್ನುಯಿಯಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ನಲ್ಲಿ ಆಡುವುದಿಲ್ಲ.
ಅವರ ಗಾಯಗಳ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ಜನವರಿ 3 ರಂದು ಶುರುವಾಗುವ ಎರಡನೇ ಟೆಸ್ಟ್ಗೆ ಅವರಿಬ್ಬರು ಲಭ್ಯರಾಗುವರೆ ಎನ್ನುವುದನ್ನು ನಂತರ ತಿಳಿಸಲಾಗುವುದೆಂದು ಹೇಳಿದೆ.
ಬಾಬರ್ ಅನುಪಸ್ಥಿತಿಯಲ್ಲಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಮೊಹಮ್ಮದ್ ರಿಜ್ವಾನ್ ಟೀಮಿನ ನಾಯಕತ್ವ ವಹಿಸಲಿದ್ದಾರೆಂದು ಹೇಳಿರುವ ಪಿಸಿಬಿ, ಬಾಬರ್ ಮತ್ತು ಇಮಾಮ್ ಇಬ್ಬರೂ ನೆಟ್ಸ್ನಲ್ಲಿ ಹೆಬ್ಬಟ್ಟಿನ ಮೂಳೆಗಳನ್ನು ಮುರಿದುಕೊಂಡಿದ್ದು ಚೇತರಿಸಿಕೊಳ್ಳಲು ಕನಿಷ್ಠ 2-3 ವಾರ ಬೇಕಾಗಬಹುದು ಎಂದು ತಿಳಿಸಿದೆ.
24 ವರ್ಷದ ಇಮ್ರಾನ್ ಬಟ್ರನ್ನು ಬದಲೀ ಆಟಗಾರನಾಗಿ ಪಾಕಿಸ್ತಾನ ತಂಡದಲ್ಲಿ ಸೇರಿಸಲಾಗಿದೆ. 2019-20ರ ಡೊಮೆಸ್ಟಿಕ್ ಸೀಸನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಬಟ್ 62 ರ ಸರಾಸರಿಯಲ್ಲಿ 4 ಶತಕ ಮತ್ತು 3 ಅರ್ಧ ಶತಕಗಳನ್ನೊಳಗೊಂಡಂತೆ 934 ರನ್ ಬಾರಿಸಿದ್ದರು.
ನ್ಯೂಜಿಲೆಂಡ್-ಪಾಕಿಸ್ತಾನ ನಡುವೆ ಟಿ20ಐ ಸರಣಿಯ ಕೊನೆ ಪಂದ್ಯ ನಾಳೆ ನೇಪಿಯರ್ನಲ್ಲಿ ನಡೆಯಲಿದ್ದು ಸರಣಿ ಅದಾಗಲೇ ಅತಿಥೇಯರ ಪಾಲಾಗಿರುವುದರಿಂದ ಇದು ಔಪಚಾರಿಕತೆಗಾಗಿ ನಡೆಯಲಿದೆ. ಪಾಕಿಸ್ತಾನದ ಹೆಡ್ ಕೋಚ್ ಮಿಸ್ಬಾ ಉಲ್ ಹಕ್, ಆಜಂ ಮತ್ತು ಇಮಾಮ್ ಅವರಿಗಾಗಿರುವ ಗಾಯಗಳ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದಾರೆ.
‘ಎರಡನೇ ಟೆಸ್ಟ್ ಶುರುವಾಗಲು ಇನ್ನೂ ಎರಡು ವಾರಗಳ ಸಮಯವಿದೆ. ಆದರೆ, ನೆಟ್ಸ್ನಲ್ಲಿ ಅಭ್ಯಾಸ ಮಾಡದೆ ಟೆಸ್ಟ್ನಲ್ಲಿ ಆಡುವುದು ಬಾಬರ್ಗೆ ಕಷ್ಟವಾಗಲಿದೆ. ಹಾಗಾಗಿ ಅವರನ್ನು ಆಡಿಸುವುದಕ್ಕೆ ಅವಸರ ಮಾಡುತ್ತಿಲ್ಲ. ಅವರ ಅನುಪಸ್ಥಿತಿ ಮತ್ತು ಟಿ20ಐ ಸರಣಿಯನ್ನು ಸೋತಿರುವುದರಿಂದ ಪಾಕಿಸ್ತಾನದ ಆಟಗಾರರು ಕೊನೆಯ ಟಿ20 ಪಂದ್ಯ ಮತ್ತು ಟೆಸ್ಟ್ಗಳಲ್ಲಿ ತಮ್ಮೆಲ್ಲ ಸಾಮರ್ಥ್ಯವನ್ನು ಒರೆಗೆ ಹಚ್ಚಬೇಕಿದೆ’ ಎಂದು ಮಿಸ್ಬಾ ಹೇಳಿದರು.
Published On - 7:48 pm, Mon, 21 December 20