ಚೆನೈನ ಚೆಪಾಕ್ ಮೈದಾನದಲ್ಲಿ ಭಾರತ ಮೊದಲ ಟೆಸ್ಟ್ನಲ್ಲಿ ಇಂಗ್ಲೆಂಡ್ಗೆ ಸೋತರೂ ಎರಡನೇ ಇನ್ನಿಂಗ್ಸ್ನಲ್ಲಿ ಆಂಗ್ಲರಿಗಿಂತ ಹೆಚ್ಚು ರನ್ ಗಳಿಸಿದರು. ಇಂಗ್ಲಿಷ್ ಬ್ಯಾಟ್ಸ್ಮನ್ಗಳು ದ್ವಿತೀಯ ಇನ್ನಿಂಗ್ಸ್ನಲ್ಲಿ 178 ರನ್ಗಳಿಗೆ ಆಲೌಟ್ ಆದರೆ ಭಾರತೀಯರು ಎಲ್ಲ ವಿಕೆಟ್ಗಳನ್ನು ಕಳೆದುಕೊಳ್ಳುವ ಮುನ್ನ 192 ರನ್ ಗಳಿಸಿದರು. ಭಾರತೀಯರು ಸಮಾಧಾನಪಟ್ಟು ಕೊಳ್ಳಬಹುದಾದ ಅಂಶ ಇದೊಂದೇ. ಟೆಸ್ಟ್ನ ಕೊನೆಯ ದಿನವಾಗಿದ್ದ ಇಂದು ಭೋಜನ ವಿರಾಮಕ್ಕೆ ಮೊದಲು ಭಾರತ 5 ವಿಕೆಟ್ ಕಳೆದುಕೊಂಡಾಗಲೇ ಪಂದ್ಯದ ಫಲಿತಾಂಶ ಗೋಡೆಯ ಮೇಲಿನ ಬರಹವಾಗಿತ್ತು. ಕಳೆದ ವರ್ಷ ಒಂದೇ ಒಂದು ಶತಕ ದಾಖಲಿಸಿಲು ವಿಫಲರಾದ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಬಾಲಂಗೋಚಿಗಳು ಅಂದರೆ ಟೇಲ್ಎಂಡರ್ಗಳ ನೆರವು ಪಡೆದು ಶತಕ ಬಾರಿಸಿಬಹುದೇ ಎಂಬ ಕುತೂಹಲ ಲಂಚ್ ವಿರಾಮ ನಂತರದ ಆಟದಲ್ಲಿ ಉಳಿದಿತ್ತು. ಆದರೆ ಕೊಹ್ಲಿಗೆ (72) ಅದು ಸಾಧ್ಯವಾಗಲಿಲ್ಲ.
ಭಾರತೀಯರು ಈ ಪಂದ್ಯ ಸೋತಿರುವುದಕ್ಕೆ ಕೆಲವು ಕಾರಣಗಳಿರಬಹುದು. ಆದರೆ, ಇಂಗ್ಲೆಂಡ್ ಭಾರತಕ್ಕಿಂತ ಬಹಳ ಉತ್ಕೃಷ್ಟವಾದ ಪ್ರದರ್ಶನ ನೀಡಿತು ಎನ್ನುವುದು ನಿರ್ವಿವಾದಿತ. ಅದರ ನಾಯಕ ಜೋ ರೂಟ್ ವೈಯಕ್ತಿಕ ಉದಾಹರಣೆ ಮೂಲಕ ಟೀಮನ್ನು ಮುನ್ನಡೆಸಿದರು. ತಮ್ಮ ನಾಯಕತ್ವದಲ್ಲಿ ಉಪಖಂಡದಲ್ಲಿ ಆಡಿರುವ ಎಲ್ಲ 6 ಟೆಸ್ಟ್ ಪಂದ್ಯಗಳನ್ನು ಅವರು ಗೆದ್ದಿದ್ದಾರೆ. ಹಾಗೆಯೇ, ಇಂಗ್ಲೆಂಡ್ಗೆ ನಾಯಕನಾಗಿ ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ಮೈಕೆಲ್ ವಾನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ವಾನ್ ತಾನು ನಾಯಕತ್ವ ವಹಿಸಿದ 51 ಟೆಸ್ಟ್ಗಳಲ್ಲಿ 26 ಗೆದ್ದಿದ್ದರೆ, 47 ಟೆಸ್ಟ್ಗಳಲ್ಲಿ ಅ ಜವಾಬ್ದಾರಿ ನಿರ್ವಹಿಸಿರುವ ರೂಟ್ ಸಹ 26 ಟೆಸ್ಟ್ಗಳನ್ನು ತಮ್ಮ ದೇಶಕ್ಕೆ ಗೆದ್ದುಕೊಟ್ಟಿದ್ದಾರೆ.
ಕೇವಲ ಎರಡು ವಾರಗಳ ಹಿಂದಷ್ಟೇ ಶ್ರೀಲಂಕಾವನ್ನು ಆದರ ನೆಲದಲ್ಲೇ ಮಣಿಸಿ ಭಾರತಕ್ಕೆ ಬಂದಿರುವ ರೂಟ್ ತಂಡ ಭಾರತ ವಿರುದ್ಧ ಆಡುವ ನಾಲ್ಕು-ಟೆಸ್ಟ್ಗಳ ಸರಣಿಯ ಮೊದಲ ಟೆಸ್ಟ್ನಲ್ಲೂ ಸುಲಭ ಜಯ ಸಾಧಿಸ ಶುಭಾರಂಭ ಮಾಡಿದೆ. ತಂಡದ ಕೆಲವು ಆಟಗಾರರು ಮೊದಲ ಬಾರಿಗೆ ಭಾರತದಲ್ಲಿ ಆಡುತ್ತಿದ್ದರೂ, ಇಲ್ಲಿನ ವಾತಾವರಣಕ್ಕೆ ಮತ್ತು ಪಿಚ್ಗಳಿಗೆ ಹೊಂದಿಕೊಂಡು ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 13ರನ್ಗಳಿಂದ ಶತಕ ವಂಚಿತರಾದ ಡಾಮಿನಿಕ್ ಸಿಬ್ಲೀ, ಸ್ಪಿನ್ನರ್ಗಳಾದ ಜ್ಯಾಕ್ ಲೀಚ್ (6 ವಿಕೆಟ್) ಮತ್ತು ಡಾಮ್ ಬೆಸ್ (5 ವಿಕೆಟ್) ಮತ್ತು ಮೂರನೇ ಕ್ರಮಾಂಕದಲ್ಲಿ ಆಡಿದ ಡೇನಿಯಲ್ ಲಾರೆನ್ಸ್, ವಿಕೆಟ್ಕೀಪರ್-ಬ್ಯಾಟ್ಸ್ಮನ್ ಆಲ್ಲೀ ಪೋಪ್ ಮೊದಲಾದವರೆಲ್ಲ ಪ್ರಥಮ ಬಾರಿಗೆ ಭಾರತದಲ್ಲಿ ಆಡುತ್ತಿದ್ದಾರೆ.
ಇದನ್ನೂ ಓದಿ: ಚೆನೈ ಟೆಸ್ಟ್ನಲ್ಲಿ 114 ವರ್ಷ ಹಿಂದಿನ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್
ಸೋಲಿನ ನಂತರ ಪ್ರವಾಸಿ ತಂಡ ಟೀಮ್ ಇಂಡಿಯಾಗಿಂತ ಹೆಚ್ಚು ವೃತ್ತಿಪರತೆ, ಶಿಸ್ತು ಮತ್ತು ಸಂಕಲ್ಪವನ್ನು ಪ್ರದರ್ಶಿಸಿತು ಎನ್ನುವುದನ್ನು ಅಂಗೀಕರಿಸಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ‘ನಮ್ಮ ಬಾಡಿ ಲಾಂಗ್ವೇಜ್ ಮತ್ತು ಸಂಕಲ್ಪ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಎರಡನೇ ಇನ್ನಿಂಗ್ಸ್ನಲ್ಲಿ ನಮ್ಮ ಪ್ರದರ್ಶನ ಉತ್ತಮವಾಗಿತ್ತು. ಮೊದಲ ಇನ್ನಿಂಗ್ಸ್ನ ಬ್ಯಾಟಿಂಗ್ ಬಗ್ಗೆ ಹೇಳುವುದಾದರೆ ಪ್ರಮುಖ ಬ್ಯಾಟ್ಸ್ಮನ್ಗಳಿಗಿಂತ ಕೆಲ ಕ್ರಮಾಂಕದ ಆಟಗಾರರು ಚೆನ್ನಾಗಿ ಆಡಿದರು’ ಎಂದರು.
‘ಈ ಪಂದ್ಯದ ಕೆಲ ಹಂತಗಳಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದೆವು. ಆದರೆ ಉಳಿದ ಹಂತಗಳಲ್ಲಿ ಬಹಳಷ್ಟು ಸುಧಾರಣೆಯಾಗಬೇಕಿದೆ. ಇಂಗ್ಲೆಂಡ್ ತಂಡ ನಮಗಿಂತ ಹೆಚ್ಚು ವೃತ್ತಿಪರತೆ ಪ್ರದರ್ಶಿಸಿತು ಎನ್ನುವುದರಲ್ಲಿ ಎರಡು ಮಾತಿಲ್ಲ. ನಮ್ಮ ಮನಸ್ಥಿತಿ ಸರಿಯಾಗಿದೆಯಾ ಅಂತ ಪರೀಕ್ಷಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ’ ಎಂದು ಕೊಹ್ಲಿ ಹೇಳಿದರು.
ವಾಷಿಂಗ್ಟನ್ ಸುಂದರ್ ಮೊದಲ ಇನ್ನಿಂಗ್ಸ್ನಲ್ಲಿ 98 ರನ್ ಖರ್ಚು ಮಾಡಿ ಒಂದೂ ವಿಕೆಟ್ ಪಡೆಯದೆ ಹೋದರು ಮತ್ತು ಕೊಹ್ಲಿ ಎರಡನೇ ಇನ್ನಿಂಗ್ಸ್ನಲ್ಲಿ ಅವರಿಗೆ ಕೇವಲ ಒಂದು ಓವರ್ ಬೌಲ್ ಮಾಡುವ ಅವಕಾಶ ನೀಡಿದರು. ಹಾಗೆಯೇ, ಅಕ್ಸರ್ ಪಟೇಲ್ ಸ್ಥಾನದಲ್ಲಿ ಆಡಲು ಬಂದ ಶಾಹಭಾಜ್ ನದೀಮ್ ಮೊದಲ ಇನ್ನಿಂಗ್ಸ್ನಲ್ಲಿ 167 ರನ್ ನೀಡಿ 2 ವಿಕೆಟ್ ಪಡೆದರೆ ಎರಡನೇ ಇನ್ನಿಂಗ್ಸ್ನಲ್ಲಿ 66 ರನ್ಗೆ 2 ವಿಕೆಟ್ ಪಡೆದರು.
‘ಬೌಲಿಂಗ್ ಯೂನಿಟ್ ಸಾಮೂಹಿಕವಾಗಿ (ವೇಗದ ಬೌಲರ್ಗಳು ಮತ್ತು ಆಶ್ವಿನ್) ಮೊದಲ ಇನ್ನಿಂಗ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡಿತು. ವಿಷಾದಕರ ಸಂಗತಿಯೇನೆಂದರೆ, ನಾವು ಜಾಸ್ತಿ ರನ್ಗಳನ್ನು ನೀಡಿದೆವು ಮತ್ತು ಅವರ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹೇರಲು ವಿಫಲರಾದೆವು. ಆದರೆ, ಗಮನಿಸಬೇಕಾದ ಸಂಗತಿಯೇನೆಂದರೆ, ಪಿಚ್ ಬಹಳ ನಿಧಾನ ಗತಿಯದಾಗಿತ್ತು ಮತ್ತು ಇಂಗ್ಲಿಷ್ ಬ್ಯಾಟ್ಸ್ಮನ್ಗಳಿಗೆ ಬ್ಯಾಕ್ಫುಟ್ನಲ್ಲಿ ಆಡಲು ಮತ್ತು ಸ್ಟ್ರೈಕ್ ರೊಟೇಟ್ ಮಾಡಲು ಅವಕಾಶ ಕಲ್ಪಿಸಿತು. ನದೀಮ್ ಮತ್ತು ಸುಂದರ್ ಅವರ ನಿರಾಶೆಗೊಳಿಸಿದ್ದು ನಿಜ. ಬೌಲರ್ಗಳು ಬ್ಯಾಟ್ಸ್ಮನ್ಗಳ ಮೇಲೆ ನಿರಂತರವಗಿ ಒತ್ತಡ ಹೇರುತ್ತಿರಬೇಕು. ಅದರೆ ಟೆಸ್ಟ್ ಕ್ರಿಕೆಟ್ಗೆ ಅವರಿನ್ನೂ ಹೊಸಬರು, ಮುಂದಿನ ದಿನಗಳಲ್ಲಿ ಅವರ ಪ್ರದರ್ಶನಗಳಲ್ಲಿ ಸುಧಾರಣೆ ಬರುತ್ತದೆ’ ಎಂದು ಕೊಹ್ಲಿ ಹೇಳಿದರು.
ಈ ಟೆಸ್ಟ್ನಲ್ಲಿ ಟಾಸ್ ಪ್ರಮುಖ ಪಾತ್ರ ನಿರ್ವಹಿಸಿತು ಎಂದು ಹೇಳಿದ ಕೊಹ್ಲಿ ಹೇಳಿದರಾದರೂ, ಇಂಗ್ಲೆಂಡ್ ಭಾರತಕ್ಕಿಂತ ಅ್ಯತ್ಯುತ್ತಮವಾಗಿ ಅಡಿತು ಎಂದರು.
ಇದನ್ನೂ ಓದಿ: ವಿಚಿತ್ರ ರೀತಿಯಲ್ಲಿ ಔಟ್ ಆದ ಚೇತೇಶ್ವರ ಪೂಜಾರ; ಇಲ್ಲಿದೆ ವೈರಲ್ ವಿಡಿಯೋ
‘ನಿಸ್ಸಂದೇಹವಾಗಿ ಟಾಸ್ ಈ ಪಂದ್ಯದಲ್ಲಿ ದೊಡ್ಡ ಪಾತ್ರ ನಿರ್ವಹಿಸಿತು. ಆದರೆ, ಇಂಗ್ಲೆಂಡ್ ಟೀಮಿನ ಉತ್ಕೃಷ್ಟ ಪ್ರದರ್ಶನಕ್ಕೆ ಟಾಸ್ ಒಂದೇ ಕಾರಣವಾಗಿರಲಿಲ್ಲ. ನಮ್ಮ ಸೋಲಿಗೆ ನೆಪಗಳನ್ನು ನೀಡಲಾರೆ. ವೈಫಲ್ಯಗಳನ್ನು ಅಂಗೀಕರಿಸಿ ಅವುಗಳನ್ನು ಸುಧಾರಿಸಿಕೊಳ್ಳುವ ತಂಡ ನಮ್ಮದು. ಒಂದು ಮಾತು ಮಾತ್ರ ನಿಜ, ಮುಂದಿನ ಟೆಸ್ಟ್ಗಳಲ್ಲಿ ನಾವು ಹೋರಾಟವನ್ನು ತೀವ್ರಗೊಳಿಸಲಿದ್ದೇವೆ. ಮೊದಲ ಟೆಸ್ಟ್ನಲ್ಲಾದಂತೆ ಉಳಿದ ಟೆಸ್ಟ್ಗಳು ನಮ್ಮ ಹಿಡಿತದಿಂದ ಜಾರಿದರೂ ನಾವು ಎದೆಗುಂದುವುದಿಲ್ಲ, ಹೋರಾಡುವುದನ್ನು ಮುಂದುವರೆಸುತ್ತೇವೆ,’ ಎಂದು ಕೊಹ್ಲಿ ಹೇಳಿದರು.
ಟೀಮಿನ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ಇಂಗ್ಲಿಷ್ ನಾಯಕ ರೂಟ್ ಯಶಸ್ಸಿನ ಶ್ರೇಯಸ್ಸನ್ನು ಬೌಲರ್ಗಳಿಗೆ ನೀಡಿದರು.
‘ನಮಗೆ ಪರಿಚಿತವಲ್ಲದ ಕಂಡೀಷನ್ಗಲ್ಲಿ ಭಾರತದಂಥ ಪ್ರಬಲ ಟೀಮಿನ 20 ವಿಕೆಟ್ಗಳನ್ನು ಪಡೆಯುವುದು ಸುಲಭದ ಮಾತಲ್ಲ, ನಮ್ಮ ಬೌಲರ್ಗಳ ಸಾಧನೆಯನ್ನು ಎಷ್ಟು ಹೊಗಳಿದರೂ ಸಾಲದು. ಪಿಚ್ ಅನ್ನು ನೋಡಿದಾಕ್ಷಣ ಇದು ಬ್ಯಾಟಿಂಗ್ಗೆ ನೆರವಾಗಲಿದೆ ಅಂತ ಅರ್ಥಮಾಡಿಕೊಂಡೆ. ನನ್ನ ಮತ್ತು ಸಿಬ್ಲೀ ಮಧ್ಯೆದ 200ರನ್ಗಳ ಜೊತೆಗಾರಿಕೆ, ನಮಗೆ ಮುಮೆಂಟಮ್ ನೀಡಿತು. ಇತರ ಆಡಗಾರರು ಸಹ ಸಂದರ್ಭಕ್ಕೆ ತಕ್ಕ ಪ್ರದರ್ಶನಗಳನ್ನು ನೀಡಿದರು’ ಎಂದು ರೂಟ್ ಹೇಳಿದರು.
ತಂಡಗಳ ನಡುವಿನ ದ್ವಿತೀಯ ಟೆಸ್ಟ್ ಇದೇ ಮೈದಾನದಲ್ಲಿ ಅದರೆ ಮತ್ತೊಂದು ಪಿಚ್ ಮೇಲೆ ಫೆಬ್ರವರಿ 13ರಿಂದ ಆರಂಭವಾಗಲಿದೆ.
India vs England Test Series | ಇಂಗ್ಲೆಂಡ್ ವಿರುದ್ಧದ ಭಾರತದ ಜಯ ಖಚಿತ: ಇದು ಡೇವಿಡ್ ಲಾಯ್ಡ್ ನುಡಿದ ಭವಿಷ್ಯ
Published On - 6:18 pm, Tue, 9 February 21