India vs England Test Series: ಚೆನೈ ಟೆಸ್ಟ್ನಲ್ಲಿ 114 ವರ್ಷ ಹಿಂದಿನ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್
ಸ್ಪಿನ್ನರ್ ಒಬ್ಬ ಇನ್ನಿಂಗ್ಸ್ನ ಮೊದಲ ಓವರ್ನ ಮೊದಲ ಎಸೆತದಲ್ಲೇ ವಿಕೆಟ್ ಪಡೆಯುವ ಘಟನೆ ಈ ಹಿಂದೆ 1907ರಲ್ಲಿ ನಡೆದಿತ್ತು. ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಬರ್ಟ್ ವೊಗ್ಲರ್, ಇಂಗ್ಲೆಂಡ್ ವಿರುದ್ಧ ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಪಡೆದಿದ್ದರು.
ಚೆನೈ: ಭಾರತ ಮತ್ತು ಇಂಗ್ಲೆಂಡ್ ನಡುವೆ ಚೆನೈನ ಚೆಪಾಕ್ ಮೈದಾನದಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಸೋಮವಾರದಂದು ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಆಲೌಟ್ ಆದ ನಂತರ ಪ್ರವಾಸಿ ತಂಡ ಅತಿಥೇಯರ ಮೇಲೆ ಫಾಲೋ-ಆನ್ ಹೇರದೆ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟ್ ಮಾಡಲು ಶುರುಮಾಡಿತು. ಭಾರತದ ಏಸ್ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 100 ವರ್ಷಗಳಿಗೂ ಮಿಗಿಲಾದ ಒಂದು ದಾಖಲೆಯನ್ನು ಸರಿಗಟ್ಟಿ ಅಪರೂಪದ ಸಾಧನೆ ಮಾಡಿದರು. ಪ್ರಾಯಶಃ ಬಹಳಷ್ಟು ಕ್ರಿಕೆಟ್ ಪ್ರೇಮಿಗಳ ಗಮನಕ್ಕೆ ಈ ವಿಷಯ ಬಂದಿರಲಿಕ್ಕಿಲ್ಲ.
ಟೆಸ್ಟ್ ಪಂದ್ಯವೊಂದರಲ್ಲಿ ಇನ್ನಿಂಗ್ಸ್ನ ಮೊದಲ ಎಸೆತದಲ್ಲೇ ವಿಕೆಟ್ ಪತನಗೊಳ್ಳುವುದು ಅಪರೂಪದ ಸಂಗತಿಯೇನಲ್ಲ. ಆದರೆ, ಆರಂಭಿಕ ಓವರ್ಗಳನ್ನು ಸಾಮಾನ್ಯವಾಗಿ ವೇಗದ ಬೌಲರ್ಗಳು ಎಸೆಯುವುದರಿಂದ ಸ್ಪಿನ್ನರ್ಗಳಿಗೆ ಅಂಥ ಸಾಧನೆ ಮಾಡುವ ಅವಕಾಶ ಇರುವುದಿಲ್ಲ.
ಈ ಹಿನ್ನೆಲೆಯಲ್ಲೇ ಅಶ್ವಿನ್ ಸಾಧನೆ ಅಪೂರ್ವ ಎನಿಸಿದೆ. ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ಶುರುಮಾಡಿದಾಗ ಲಂಚ್ ವಿರಾಮದ ಮೊದಲು ಒಂದು ಓವರ್ ಬೌಲ್ ಮಾಡುವ ಸಮಯ ಮಾತ್ರ ಇದ್ದುದ್ದರಿಂದ ಭಾರತದ ಕ್ಯಾಪ್ಟನ್ ಆ ಓವರ್ ಅನ್ನು ಅಶ್ವಿನ್ ಅವರಿಂದ ಬೌಲ್ ಮಾಡಿಸಿದರು. ಅವರ ನಿರ್ಧಾರ ಸ್ಪಾಟ್-ಆನ್ ಆಗಿತ್ತು. ಸ್ಥಳೀಯ ಹುಡುಗ ಆಶ್ವಿನ್ ಮೊದಲ ಎಸೆತದಲ್ಲೇ ಆಂಗ್ಲರ ಓಪನಿಂಗ್ ಬ್ಯಾಟ್ಸ್ಮನ್ ರೋರಿ ಬರ್ನ್ಸ್ರನ್ನು ಔಟ್ ಮಾಡಿ 114 ವರ್ಷಗಳ ಹಿಂದಿನ ಸಾಧನೆಯನ್ನು ಸರಿಗಟ್ಟಿದರು.
ಸ್ಪಿನ್ನರ್ನ್ನೊಬ್ಬ ಇನ್ನಿಂಗ್ಸ್ ಒಂದರ ಮೊದಲ ಎಸೆತದಲ್ಲೇ ವಿಕೆಟ್ ಪಡೆಯುವ ಘಟನೆ ಈ ಹಿಂದೆ 1907 ರಲ್ಲಿ ಸಂಭವಿಸಿತ್ತು. ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಬರ್ಟ್ ವೊಗ್ಲರ್ ಇನ್ನಿಂಗ್ಸ್ ಶುರುವಾದಾಗ ದಾಳಿ ಆರಂಭಿಸಿ ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಪಡೆದಿದ್ದರು. ಹಾಗೆ ನೋಡಿದರೆ, ಇಂಗ್ಲೆಂಡ್ ಬಾಬ್ಬಿ ಪೀಲ್ ಇಂಥ ಸಾಧನೆ ಮಾಡಿದ ವಿಶ್ವದ ಮೊದಲ ಸ್ಪಿನ್ನರ್ ಆಗಿದ್ದಾರೆ, ಆ ಟೆಸ್ಟ್ ನಡೆದಿದ್ದು 133 ವರ್ಷಗಳ ಹಿಂದೆ, 1888ರಲ್ಲಿ!
ಓದುಗರಿಗೆ ಗೊತ್ತಿರುವಂತೆ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ ಅಶ್ವಿನ್ 146 ರನ್ ನೀಡಿ ಬರ್ನ್ಸ್, ಒಲ್ಲೀ ಪೊಪ್ ಮತ್ತು ಜೇಮ್ಸ್ ಆ್ಯಂಡರ್ಸನ್ ಅವರ ವಿಕೆಟ್ಗಳನ್ನು ಪಡೆದಿದ್ದರು. ತಮ್ಮ 55 ಓವರ್ಗಳ ಸ್ಪೆಲ್ನಲ್ಲಿ ಅಶ್ವಿನ್ ತಮ್ಮ ಕರೀಯರ್ನಲ್ಲಿ ಮೊದಲ ಬಾರಿಗೆ ನೋ ಬಾಲ್ಗಳನ್ನು ಎಸೆದರು. ಟೆಸ್ಟ್ ಕ್ರಿಕೆಟ್ ಆವೃತ್ತಿಯಲ್ಲಿ 20,600 ಎಸೆತಗಳನ್ನು ಬೌಲ್ ಮಾಡಿದ ನಂತರ (ಇಂಗ್ಲೆಂಡ್ ಇನ್ನಿಂಗ್ಸ್ನ 137ನೇ ಓವರ್) ಅಶ್ವಿನ್ ಮೊದಲ ನೋಬಾಲ್ ಎಸೆದರು! ಸೋಜಿಗದ ಸಂಗತಿಯೆಂದರೆ ಅದಾದ 40 ಓವರ್ಗಳ ನಂತರ ಅಶ್ವಿನ್ ಮತ್ತೊಂದು ನೋಬಾಲ್ ಬೌಲ್ ಮಾಡಿದರು. ಈ ಇನ್ನಿಂಗ್ಸ್ನಲ್ಲಿ ಅವರು ಸತತವಾಗಿ 55.1 ಓವರ್ಳನ್ನು ಬೌಲ್ ಮಾಡಿ ತಾವು ಹಿಂದೆ ಸ್ಥಾಪಿಸಿದ್ದ ಸತತ 53 ಓವರ್ಗಳ (ಆಸ್ಟ್ರೇಲಿಯಾ ವಿರುದ್ಧ 2011-12ಸರಣಿಯ ಅಡಿಲೇಡ್ ಟೆಸ್ಟ್) ಸಾಧನೆಯನ್ನು ಉತ್ತಮಪಡಿಸಿದರು.
ಇಂಗ್ಲೆಂಡ್ನ ಎರಡನೇ ಇನ್ನಿಂಗ್ಸ್ನಲ್ಲಿ ಉತ್ಕೃಷ್ಟ ಬೌಲಿಂಗ್ ಪ್ರದರ್ಶನ ನೀಡಿದ ಆಶ್ವಿನ್ 61ರನ್ಗಳಿಗೆ 6 ವಿಕೆಟ್ ಪಡೆದರು. ಮೊದಲ ಟೆಸ್ಟ್ ಗೆಲ್ಲಲು ಭಾರತಕ್ಕೆ 419ರನ್ಗಳ ಅವಶ್ಯಕತೆಯಿದೆ.
Published On - 5:16 pm, Mon, 8 February 21