Fact Check: ಧೋನಿ ಗೌರವಾರ್ಥವಾಗಿ 7 ರೂ. ನಾಣ್ಯ ಬಿಡುಗಡೆ ಮಾಡಲಿದೆ ಆರ್‌ಬಿಐ?: ನಿಜಾಂಶ ಇಲ್ಲಿದೆ ನೋಡಿ
ಮಹೇಂದ್ರ ಸಿಂಗ್ ಧೋನಿ ಗೌರವಾರ್ಥವಾಗಿ ಆರ್‌ಬಿಐ ಹೊಸ 7 ರೂ. ನಾಣ್ಯಗಳನ್ನು ಬಿಡುಗಡೆ ಮಾಡಲಿದೆ ಎಂದು ಅನೇಕ ಫೇಸ್ಬುಕ್ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ನಾಣ್ಯದ ಮುಂಭಾಗ ಏಳು ಎಂದು ಬರೆಯಲಾಗಿದೆ ಹಾಗೆಯೆ ಬ್ಯಾಕ್ ಸೈಡ್ ಮಹೆಂಧ್ರ ಸಿಂಗ್ ಧೋನಿ, ಟ್ರೋಫಿ ಕಲೆಕ್ಟರ್ ಎಂದು ಮುದ್ರಿಸಲಾಗಿದೆ
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಗೌರವಾರ್ಥವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಏಳು ರೂಪಾಯಿಯ ಹೊಸ ನಾಣ್ಯವನ್ನು ಬಿಡುಗಡೆ ಮಾಡಲಿದೆ ಎಂದು ಹೇಳುವ ಇನ್ಫೋಗ್ರಾಫಿಕ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಭಾರತೀಯ ಕ್ರಿಕೆಟ್‌ಗೆ ಧೋನಿ ಅವರ ಅದ್ಭುತ ಕೊಡುಗೆಯನ್ನು ಸ್ಮರಿಸಲು ಈ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಅನೇಕ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.
ನಾಣ್ಯದ ಮುಂಭಾಗ ಏಳು ಎಂದು ಬರೆಯಲಾಗಿದೆ ಹಾಗೆಯೆ ಬ್ಯಾಕ್ ಸೈಡ್ ಮಹೆಂಧ್ರ ಸಿಂಗ್ ಧೋನಿ, ಟ್ರೋಫಿ ಕಲೆಕ್ಟರ್ ಎಂದು ಮುದ್ರಿಸಲಾಗಿದೆ. ಫೇಸ್ಬುಕ್ ಬಳಕೆದಾರರು ಈ ಫೋಟೋವನ್ನು ಹಂಚಿಕೊಂಡು, ‘‘ನಮ್ಮ THA_7A ಎಲ್ಲೆಡೆ ಇದ್ದಾನೆ. ಮಹೇಂದ್ರ ಸಿಂಗ್ ಧೋನಿ ಗೌರವಾರ್ಥವಾಗಿ ಆರ್‌ಬಿಐ ಹೊಸ 7 ರೂ. ನಾಣ್ಯಗಳನ್ನು ಬಿಡುಗಡೆ ಮಾಡಲಿದೆ. ಮತ್ತೊಮ್ಮೆ ಮಿಂಚಿದ ಥಾಲಾ’’ ಎಂದು ಬರೆದಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಂಶವನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಇದು ಸುಳ್ಳು ಎಂಬುದು ಕಂಡುಬಂದಿದೆ. ನಿಜಾಂಶ ತಿಳಿಯಲು ನಾವು ಮೊದಲಿಗೆ ಭಾರತೀಯ ರಿಸರ್ವ್ ಬ್ಯಾಂಕ್ (https://www.rbi.org.in/) ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿದ್ದೇವೆ. ಇಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಗೌರವಾರ್ಥವಾಗಿ ಆರ್‌ಬಿಐ 7 ರೂ. ವಿನ ಹೊಸ ನಾಣ್ಯವನ್ನು ಬಿಡುಗಡೆ ಮಾಡುವ ಬಗ್ಗೆ ಏನಾದರು ಸುದ್ದಿಯ ಇದೆಯೇ ಎಂದು ಪರಿಶೀಲಿದ್ದೇವೆ. ಆದರೆ, ನಮಗೆ ಯಾವುದೇ ಮಾಹಿತಿ ಸಿಗಲಿಲ್ಲ.
ಹೆಚ್ಚುವರಿಯಾಗಿ, ಪ್ರಸ್ತುತ ಚಲಾವಣೆಯಲ್ಲಿರುವ ನಾಣ್ಯಗಳ ಪಟ್ಟಿ ಆರ್‌ಬಿಐ ವೆಬ್‌ಸೈಟ್‌ನಲ್ಲಿಯೂ ಲಭ್ಯವಿದೆ. ಸ್ಮರಣಾರ್ಥ ನಾಣ್ಯಗಳು ಗಮನಾರ್ಹ ಘಟನೆಗಳು ಅಥವಾ ವ್ಯಕ್ತಿಗಳನ್ನು ಗುರುತಿಸುವ ವಿಶೇಷ ನಾಣ್ಯಗಳಾಗಿವೆ. ಅವುಗಳನ್ನು ಚಲಾವಣೆಯಿಲ್ಲದ ಕಾನೂನು ಟೆಂಡರ್ (NCLT) ಎಂದು ವರ್ಗೀಕರಿಸಲಾಗಿದೆ. ಅಂದರೆ ಅವುಗಳನ್ನು ಸಾಮಾನ್ಯ ಚಲಾವಣೆಯಲ್ಲಿ ಬಳಸಲಾಗುವುದಿಲ್ಲ. ಇಲ್ಲಿಯವರೆಗೆ ಭಾರತ ಸರ್ಕಾರವು ಬಿಡುಗಡೆ ಮಾಡಿದ ಸ್ಮರಣಾರ್ಥ ನಾಣ್ಯಗಳ ಪಟ್ಟಿಯನ್ನು ಇಲ್ಲಿ ಕಾಣಬಹುದು.
ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ( SPMCIL ) ನ ವೆಬ್‌ಸೈಟ್
ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರಿಗೆ ಗೌರವ ಸೂಚಿಸಲಾಗಿದೆ ಎನ್ನಲಾದ 7 ರೂ. ನಾಣ್ಯ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಮುಂಬೈ, ಕೋಲ್ಕತ್ತಾ, ನೋಯ್ಡಾ ಮತ್ತು ಹೈದರಾಬಾದ್‌ನಲ್ಲಿ ಶಾಖೆಗಳನ್ನು ನಿರ್ವಹಿಸುವ ಮತ್ತು ಎಲ್ಲಾ ನಾಣ್ಯಗಳನ್ನು ತಯಾರಿಸುವ ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ( SPMCIL ) ನ ವೆಬ್‌ಸೈಟ್‌ನಲ್ಲಿ ಇದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ಇದರ ಹೊರತಾಗಿ, 7 ರೂ. ಹೊಸ ನಾಣ್ಯದ ವಿತರಣೆಯ ಕುರಿತಾದ ಹಕ್ಕನ್ನು ನಿರಾಕರಿಸುವ ಪತ್ರಿಕಾ ಮಾಹಿತಿ ಬ್ಯೂರೋ (PIB) ನ ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. PIB ಬರೆದುಕೊಂಡಿರುವ ಪ್ರಕಾರ, ‘‘ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆಗಾಗಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಗೌರವಿಸಲು 7 ರೂಪಾಯಿಯ ಹೊಸ ನಾಣ್ಯವನ್ನು ನೀಡಲಾಗುವುದು ಎಂದು ಹೇಳುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. #PIBFactCheck, ಚಿತ್ರದಲ್ಲಿ ಮಾಡಿರುವ ಹಕ್ಕು ನಕಲಿಯಾಗಿದೆ. ಆರ್ಥಿಕ ವ್ಯವಹಾರಗಳ ಇಲಾಖೆಯು ಅಂತಹ ಯಾವುದೇ ಘೋಷಣೆ ಮಾಡಿಲ್ಲ.’’ ಎಂದು ಟ್ವೀಟ್ ಮಾಡಿದೆ.
An image circulating on social media claims that a new ₹7 coin will be released to honor Mahendra Singh Dhoni for his contributions to Indian Cricket.#PIBFactCheck
✔️ The claim made in the image is #fake.
✔️ The Department of Economic Affairs has made NO such announcement. pic.twitter.com/rgFwmVUPbL
— PIB Fact Check (@PIBFactCheck) November 14, 2024
ಈ ಮೂಲಕ ಮಹೇಂದ್ರ ಸಿಂಗ್ ಧೋನಿ ಅವರ ಗೌರವಾರ್ಥವಾಗಿ ಭಾರತೀಯ ರಿಸರ್ವ್ ಬ್ಯಾಂಕ್ 7 ರೂ. ವಿನ ಹೊಸ ನಾಣ್ಯವನ್ನು ಬಿಡುಗಡೆ ಮಾಡಿದೆ ಎಂಬ ವೈರಲ್ ಫೋಟೋ ನಕಲಿ ಎಂದು ಟಿವಿ9 ಕನ್ನಡ ಫ್ಯಾಕ್ಟ್ ಚೆಕ್ ಸ್ಪಷ್ಟವಾಗಿ ಹೇಳುತ್ತದೆ. ಆರ್‌ಬಿಐ ಅಂತಹ ಯಾವುದೇ ಘೋಷಣೆ ಇದುವರೆಗೆ ಮಾಡಿಲ್ಲ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:54 pm, Fri, 15 November 24