ಐಪಿಎಲ್​ನಿಂದ ನಿರ್ಧಾರವಾಗಲಿದೆ ಡುಪ್ಲೆಸಿಸ್ ವಿಶ್ವಕಪ್​ ಭವಿಷ್ಯ..!

| Updated By: ಝಾಹಿರ್ ಯೂಸುಫ್

Updated on: Dec 07, 2023 | 4:14 PM

Faf du Plessis: ಐಪಿಎಲ್​ನಲ್ಲಿ 123 ಇನಿಂಗ್ಸ್​ ಆಡಿರುವ ಡುಪ್ಲೆಸಿಸ್​ 37ರ ಸರಾಸರಿಯಲ್ಲಿ ಒಟ್ಟು 4133 ರನ್ ಪೇರಿಸಿದ್ದಾರೆ. ಈ ವೇಳೆ 33 ಅರ್ಧಶತಕ, 374 ಫೋರ್ ಹಾಗೂ 145 ಸಿಕ್ಸ್​ಗಳನ್ನು ಸಿಡಿಸಿದ್ದಾರೆ. ಹೀಗಾಗಿ ಈ ಬಾರಿಯೂ ಐಪಿಎಲ್​ನಿಂದ ಫಾಫ್ ಕಡೆಯಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು.

ಐಪಿಎಲ್​ನಿಂದ ನಿರ್ಧಾರವಾಗಲಿದೆ ಡುಪ್ಲೆಸಿಸ್ ವಿಶ್ವಕಪ್​ ಭವಿಷ್ಯ..!
Faf du Plessis
Follow us on

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕ ಫಾಫ್ ಡುಪ್ಲೆಸಿಸ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ಮರಳುವ ಸೂಚನೆ ನೀಡಿದ್ದಾರೆ. ಈಗಾಗಲೇ ಸೌತ್ ಆಫ್ರಿಕಾ ತಂಡದ ಕೋಚ್ ವಾಲ್ಟರ್ ಜೊತೆಗೂ ಮಾತುಕತೆ ನಡೆದಿದೆ. ಆದರೆ ಅವರ ಕಂಬ್ಯಾಕ್ ಭವಿಷ್ಯ ನಿರ್ಧರಿಸಿರುವುದು ಐಪಿಎಲ್​ ಎಂಬುದು ವಿಶೇಷ.

ಅಂದರೆ ಮುಂಬರುವ ಟಿ20 ವಿಶ್ವಕಪ್​ನಲ್ಲಿ ಸೌತ್ ಆಫ್ರಿಕಾ ಪರ ಕಣಕ್ಕಿಳಿಯಲು ಫಾಫ್ ಡುಪ್ಲೆಸಿಸ್ ಆಸಕ್ತರಾಗಿದ್ದಾರೆ. ಆದರೆ ಅವರು 2020 ರಿಂದ ಸೌತ್ ಆಫ್ರಿಕಾ ಪರ ಯಾವುದೇ ಪಂದ್ಯವಾಡಿಲ್ಲ. ಅಲ್ಲದೆ 2021 ಹಾಗೂ 2022 ರ ಟಿ20 ವಿಶ್ವಕಪ್ ತಂಡಕ್ಕೂ ಆಯ್ಕೆಯಾಗಿರಲಿಲ್ಲ.

ಇದಾಗ್ಯೂ ಫಾಫ್ ಡುಪ್ಲೆಸಿಸ್ ವಿಶ್ವದ ಹಲವು ಟಿ20 ಟೂರ್ನಿಗಳ ಮೂಲಕ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಐಪಿಎಲ್ 2023 ರಲ್ಲಿ ಆರ್​ಸಿಬಿ ಪರ 14 ಪಂದ್ಯಗಳಿಂದ 730 ರನ್ ಪೇರಿಸಿದ್ದರು. ಈ ಒಂದು ಪ್ರದರ್ಶನ ಫಾಫ್ ಡುಪ್ಲೆಸಿಸ್ ಅವರ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ.

ಇದೇ ಕಾರಣದಿಂದಾಗಿ ಸೌತ್ ಆಫ್ರಿಕಾ ಪರ ಮತ್ತೆ ಟಿ20 ವಿಶ್ವಕಪ್​ ಆಡಲು ನಿರ್ಧರಿಸಿದ್ದಾರೆ. ಆದರೆ 39 ವರ್ಷದ ಫಾಫ್ ಡುಪ್ಲೆಸಿಸ್​ ಅವರನ್ನು ಯಾವ ಮಾನದಂಡದ ಮೇಲೆ ಆಯ್ಕೆ ಮಾಡುವುದು ಎಂಬ ಪ್ರಶ್ನೆ ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ಮುಂದಿದೆ.

ಹೀಗಾಗಿ ಮುಂಬರುವ ಐಪಿಎಲ್​ ತನಕ ಕಾದು ನೋಡಲು ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ. ಏಕೆಂದರೆ ಈ ಬಾರಿಯ ವಿಶ್ವಕಪ್​ನಲ್ಲಿ ಫಾಫ್ ಡುಪ್ಲೆಸಿಸ್ ಕಡೆಯಿಂದ ಉತ್ತಮ ಪ್ರದರ್ಶನ ಮೂಡಿಬಂದರೆ ಅದನ್ನೇ ಮಾನದಂಡವಾಗಿ ತೆಗೆದುಕೊಳ್ಳಲಿದೆ.

ಏಕೆಂದರೆ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಜೂನ್ 4 ರಿಂದ ಟಿ20 ವಿಶ್ವಕಪ್ ಶುರುವಾಗಲಿದೆ. ಹೀಗಾಗಿ ಇಲ್ಲಿ ಫಾರ್ಮ್​ನಲ್ಲಿರುವ ಆಟಗಾರರಿಗೆ ಮಣೆ ಹಾಕಲು ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ ನಿರ್ಧರಿಸಿದ್ದು, ಅದರಂತೆ ಆರ್​ಸಿಬಿ ಪರ ಅಬ್ಬರಿಸಿದರೆ ಫಾಫ್ ಡುಪ್ಲೆಸಿಸ್​ಗೆ ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ಸಿಗುವುದು ಖಚಿತ ಎನ್ನಬಹುದು.

ಸೌತ್ ಆಫ್ರಿಕಾ ಪರ ಫಾಫ್ ಪ್ರದರ್ಶನ ಹೇಗಿದೆ?

ಫಾಫ್ ಡುಪ್ಲೆಸಿಸ್ ಸೌತ್ ಆಫ್ರಿಕಾ ಪರ ಒಟ್ಟು 50 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 35.53 ರ ಸರಾಸರಿಯಲ್ಲಿ ಒಟ್ಟು 1 ಶತಕ ಹಾಗೂ 10 ಅರ್ಧಶತಕಗಳೊಂದಿಗೆ ಒಟ್ಟು 1528 ರನ್ ಕಲೆಹಾಕಿದ್ದಾರೆ.

ಇದನ್ನೂ ಓದಿ: IPL 2024: ವರ್ಷದ ಕ್ರೀಡಾ ಫ್ರಾಂಚೈಸ್ ಪ್ರಶಸ್ತಿ ಪಡೆದ RCB

ಇನ್ನು ಐಪಿಎಲ್​ನಲ್ಲಿ 123 ಇನಿಂಗ್ಸ್​ ಆಡಿರುವ ಡುಪ್ಲೆಸಿಸ್​ 37ರ ಸರಾಸರಿಯಲ್ಲಿ ಒಟ್ಟು 4133 ರನ್ ಪೇರಿಸಿದ್ದಾರೆ. ಈ ವೇಳೆ 33 ಅರ್ಧಶತಕ, 374 ಫೋರ್ ಹಾಗೂ 145 ಸಿಕ್ಸ್​ಗಳನ್ನು ಸಿಡಿಸಿದ್ದಾರೆ. ಹೀಗಾಗಿ ಈ ಬಾರಿಯೂ ಐಪಿಎಲ್​ನಿಂದ ಫಾಫ್ ಕಡೆಯಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು.