India vs England Test Series: ಎರಡನೇ ಟೆಸ್ಟ್​ ಪಂದ್ಯವನ್ನೂ ಭಾರತ ಸೋತರೆ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ: ಮಾಂಟಿ ಪನೆಸಾರ್

ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿ ನಾಯಕತ್ವವನ್ನು ಕೆಲವರು ಬಲವಾಗಿ ಟೀಕಿಸುತ್ತಿದ್ದಂತೆಯೇ ಇಂಗ್ಲೆಂಡಿನ ಮಾಜಿ ಸ್ಪಿನ್ನರ್ ಮಾಂಟಿ ಪನೆಸಾರ್ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಎರಡನೇ ಟೆಸ್ಟ್​ ಪಂದ್ಯವನ್ನೂ ಭಾರತ ಸೋತರೆ, ಟೀಮಿನ ನಾಯಕನಾಗಿ ಕೊಹ್ಲಿಯ ಕರೀಯರ್ ಕೊನೆಗೊಳ್ಳಲಿದೆ ಅಂತ ಹೇಳಿದ್ದಾರೆ.

India vs England Test Series: ಎರಡನೇ ಟೆಸ್ಟ್​ ಪಂದ್ಯವನ್ನೂ ಭಾರತ ಸೋತರೆ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ: ಮಾಂಟಿ ಪನೆಸಾರ್
ವಿರಾಟ್ ಕೊಹ್ಲಿ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 10, 2021 | 10:10 PM

ಮೊದಲ ಟೆಸ್ಟ್​ನಲ್ಲಿ ಪ್ರವಾಸಿ ಇಂಗ್ಲೆಂಡ್​ಗೆ ಭಾರತ ಸುಲಭವಾಗಿ ಶರಣಾಗಿರುವುದು ಟೀಮಿನ ನಾಯಕ ವಿರಾಟ್ ಕೊಹ್ಲಿ ಅವರ ನಾಯಕತ್ವದ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಸೃಷ್ಟಿಸಿದೆ. ಗೆಲ್ಲಲು ನಾಲ್ಕನೇ ಇನ್ನಿಂಗ್ಸ್​ನಲ್ಲಿ 420 ರನ್​ಗಳ ಭಾರಿ ಮೊತ್ತ ಗಳಿಸಬೇಕಿದ್ದ ಕೊಹ್ಲಿ ಪಡೆ 192 ರನ್​ಗಳಿಗೆ ಎಲ್ಲ ವಿಕೆಟ್​ಗಳನ್ನು ಕಳೆದುಕೊಂಡು 227 ರನ್​ಗಳ ಸೋಲು ಅನುಭವಿಸಿತು. ಈ ಸೋಲು ಸ್ವದೇಶದಲ್ಲಿ ಭಾರತದ 14 ಟೆಸ್ಟ್​ಗಳ ಅಜೇಯ ದಾಖಲೆಯನ್ನು ಅಳಿಸಿಹಾಕಿತು. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಚೆನೈನಲ್ಲಿ ಭಾರತ 22 ವರ್ಷಗಳ ನಂತರ ಸೋಲು ಅನುಭವಿಸಿತು.

ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿ ನಾಯಕತ್ವವನ್ನು ಕೆಲವರು ಬಲವಾಗಿ ಟೀಕಿಸುತ್ತಿದ್ದಂತೆಯೇ ಇಂಗ್ಲೆಂಡಿನ ಮಾಜಿ ಸ್ಪಿನ್ನರ್ ಮಾಂಟಿ ಪನೆಸಾರ್ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಎರಡನೇ ಟೆಸ್ಟ್​ ಪಂದ್ಯವನ್ನೂ ಭಾರತ ಸೋತರೆ, ಟೀಮಿನ ನಾಯಕನಾಗಿ ಕೊಹ್ಲಿಯ ಕರೀಯರ್ ಕೊನೆಗೊಳ್ಳಲಿದೆ ಅಂತ ಹೇಳಿದ್ದಾರೆ.

ಸುದ್ದಿಸಂಸ್ಥೆಯೊಂದರ ಜೊತೆ ಮಾತಾಡಿರುವ ಪನೆಸಾರ್, ‘ನಿಸ್ಸಂದೇಹವಾಗಿ ವಿರಾಟ್ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರು. ಆದರೆ ಅವರ ನಾಯಕತ್ವದಲ್ಲಿ ಇಂಡಿಯಾದ ಟೀಮ್ ಕಳಪೆ ಪ್ರದರ್ಶನಗಳನ್ನು ನೀಡುತ್ತಿದೆ. ಅವರ ನಾಯಕತ್ವದಲ್ಲಿ ಆಡಿರುವ ಕಡೆಯ 4 ಟೆಸ್ಟ್​ಗಳನ್ನು ಇಂಡಿಯಾ ಸೋತಿದೆ. ಅಜಿಂಕ್ಯಾ ರಹಾನೆ ನಾಯಕನಾಗಿ ಅತ್ಯುತ್ತಮವಾಗಿ ಟೀಮನ್ನು ಮುನ್ನಡೆಸಿರುವುದರಿಂದ ಕೊಹ್ಲಿ ನಿಶ್ಚಿತವಾಗಿಯೂ ಭಾರೀ ಒತ್ತಡದಲ್ಲಿರುತ್ತಾರೆ,’ ಎಂದು ಹೇಳಿದ್ದಾರೆ.

Monty Panesar

ಮಾಂಟಿ ಪನೆಸಾರ್

‘ಅವರ ನಾಯಕತ್ವದಲ್ಲಿ ಈಗಾಗಲೇ ಇಂಡಿಯಾ 4 ಟೆಸ್ಟ್​ಗಳನ್ನು ಸೋತಿರುವುದರಿಂದ ಸೋಲುಗಳ ಸಂಖ್ಯೆ 5ಕ್ಕೇರಿದರೆ ಅವರು ನಾಯಕತ್ವದಿಂದ ತಾವಾಗಿಯೇ ಕೆಳಗಿಳಿಯಬಹುದೆಂದು ಭಾವಿಸುತ್ತೇನೆ,’ ಎಂದು ಪನೆಸಾರ್ ಹೇಳಿದ್ದಾರೆ.

ಕೊಹ್ಲಿ ನಾಯಕತ್ವದಲ್ಲಿ ಭಾರತ 2020ರಲ್ಲಿ ನ್ಯೂಜಿಲೆಂಡ್ ವಿರುದ್ಧ 2, ಆಸ್ಟ್ರೇಲಿಯಾ ವಿರುದ್ಧ 1 ಮತ್ತು ಈಗ ಇಂಗ್ಲೆಂಡ್ ವಿರುದ್ಧ 1 ಟೆಸ್ಟ್​ ಸೋತಿದೆ. ಕೊಹ್ಲಿ ನಾಯಕತ್ವ ಕುರಿತು ನೆಗೆಟಿವ್ ಕಾಮೆಂಟ್​ಗಳನ್ನು ಮಾಡಿರುವ ಪನೆಸಾರ್, ವೈಯಕ್ತಿಕ ಉದಾಹರಣೆಯೋಮದಿಗೆ ಆಂಗ್ಲರ ತಂಡವನ್ನು ಮುನ್ನಡೆಸಿದ ಅವರ ನಾಯಕ ಜೋ ರೂಟ್​ ಅವರನ್ನು ಮನಸಾರೆ ಕೊಂಡಾಡಿದ್ದಾರೆ.

ಇದನ್ನೂ ಓದಿ: ಭಾರತದ ಸೋಲಿಗೆ ಪಿಚ್ ಕಾರಣ ಎಂದ ವಿರಾಟ್ ಕೊಹ್ಲಿ, ಬೌಲರ್​ಗಳಿಂದ ಗೆಲುವು ದಕ್ಕಿತು ಎಂದ ಜೋ ರೂಟ್

‘ಚೆನೈಯಲ್ಲಿ ಇಂಗ್ಲೆಂಡ್ ಪಡೆದ ಗೆಲುವು ಅಪ್ರತಿಮವಾದದ್ದು. ಐದು ದಿನಗಳ ಕಾಲ ಟೀಮಿನ ಪ್ರದರ್ಶನವನ್ನು ಗಮನಿಸಿದರೆ ಈ ಟೀಮಿನ ಆತ್ಮವಿಶ್ವಾಸ ಯಾವ ಮಟ್ಟದಲ್ಲಿದೆ ಎನ್ನುವುದು ಗೊತ್ತಾಗುತ್ತದೆ. ಟೀಮನ್ನು ಅದ್ಭುತವಾಗಿ ಮುನ್ನಡೆಸಿದ ಜೋ ರೂಟ್ ಅಭಿನಂದನಾರ್ಹರು. ಟೀಮಿನ ಪ್ರತಿಯೊಬ್ಬ ಸದಸ್ಯ ಗೆಲುವಿಗೆ ತನ್ನ ಕಾಣಿಕೆಯನ್ನು ನೀಡಿದ್ದು ಯಾಕೆ ಒಂದು ಟೀಮ್ ಗೇಮ್ ಉತ್ಕೃಷ್ಟವೆನಿಸಿಕೊಳ್ಳುತ್ತದೆ ಎನ್ನುವುದು ವಿದಿತವಾಗುತ್ತದೆ. ಇಂಗ್ಲಿಷ್ ಅಟಗಾರರೆಲ್ಲ ಗೆದ್ದ ಕ್ಷಣವನ್ನು ಯಾವತ್ತೂ ಮರೆಯಲಾರರು. ಅದು ಶಾಶ್ವತವಾಗಿ ಅವರ ಸ್ಮೃತಿಪಟಲದಲ್ಲಿ ಉಳಿಯಲಿದೆ,’ ಎಂದು ಪನೆಸಾರ್ ಹೇಳಿದ್ದಾರೆ.

ಮೊದಲ ಟೆಸ್ಟ್ ದಯನೀಯವಾಗಿ ಸೋತಿರುವ ಭಾರತ ಚೆನೈಯಲ್ಲೇ ನಡೆಯಲಿರುವ ಎರಡನೇ ಟೆಸ್ಟ್​ನಲ್ಲಿ ಪುಟಿದೆದ್ದು ತನ್ನ ಸಾಮರ್ಥ್ಯಕ್ಕೆ ಮೀರಿದ ಪ್ರದರ್ಶನವನ್ನು ನೀಡುವ ನಿರೀಕ್ಷೆಯನ್ನು ಭಾರತದ ಕ್ರಿಕೆಟ್ ಪ್ರೇಮಿ ಇಟ್ಟುಕೊಂಡಿದ್ದಾನೆ.

Published On - 10:07 pm, Wed, 10 February 21