India vs England Test Series: ಜೋ ರೂಟ್ ಪ್ರಸ್ತುತವಾಗಿ ವಿಶ್ವದ ಸರ್ವಶ್ರೇಷ್ಠ ಬ್ಯಾಟ್ಸ್​ಮನ್​ ಅಲ್ಲ: ಗಾವಸ್ಕರ್

ರೂಟ್ ನಿರರ್ಗಳವಾದ ಬ್ಯಾಟಿಂಗ್ ಮೂಲಕ ರನ್ ಗಳಿಸಿ ಟೀಮನ್ನು ಆದ್ಭುತವಾಗಿ ಲೀಡ್ ಮಾಡುತ್ತಾ ಸತತವಾಗಿ ಜಯಗಳನ್ನು ದೊರಕಿಸಿಕೊಡುತ್ತಿದ್ದರೂ  ವಿರಾಟ್ ಕೊಹ್ಲಿ,  ಸ್ಟೀವ್ ಸ್ಮಿತ್ ಮತ್ತು ಕೇನ್ ವಿಲಿಯಮ್ಸನ್​ ಅವರಷ್ಟು ಶ್ರೇಷ್ಠರಲ್ಲ ಅಂತ ಗಾವಸ್ಕರ್ ಹೇಳಿದ್ದಾರೆ.

India vs England Test Series: ಜೋ ರೂಟ್ ಪ್ರಸ್ತುತವಾಗಿ ವಿಶ್ವದ ಸರ್ವಶ್ರೇಷ್ಠ ಬ್ಯಾಟ್ಸ್​ಮನ್​ ಅಲ್ಲ: ಗಾವಸ್ಕರ್
ಜೋ ರೂಟ್​
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 11, 2021 | 5:40 PM

ಪ್ರಸ್ತುತ ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ಟೀಮಿನ ಕ್ಯಾಪ್ಟನ್ ಜೋ ರೂಟ್ ನಿಸ್ಸಂದೇಹವಾಗಿ ತಮ್ಮ ಕ್ರಿಕೆಟ್ ಕರೀಯರ್​ನ ಉತ್ಕೃಷ್ಟ ಫಾರಂನಲ್ಲಿದ್ದಾರೆ. ಉಪಖಂಡದ ಪಿಚ್​​ಗಳಲ್ಲಿ ಸತತವಾಗಿ ಮೂರು ಶತಕಗಳನ್ನು ಬಾರಿಸುವುದು ಸುಲಭದ ಮಾತಲ್ಲ. ಆದರೆ ರೂಟ್, ಶ್ರೀಲಂಕಾದಲ್ಲಿ 228 ಮತ್ತು 186ರನ್​ಗಳ ಇನ್ನಿಂಗ್ಸ್​ಗಳನ್ನಾಡಿ ಭಾರತದ ವಿರುದ್ಧ ಚೆನೈನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಅಮೋಘ ದ್ವಿಶತಕ (218) ಬಾರಿಸಿದರು. ಅವರು ನಿಷ್ಕಂಳಕವಾಗಿ ಟನ್​ಗಟ್ಟಲೆ ರನ್ ಗಳಿಸುತ್ತಿರುವುದನ್ನು ನೋಡಿ ಕೆಲ ಕ್ರಿಕೆಟ್ ಪರಿಣಿತರು ಮತ್ತು ಕಾಮೆಂಟೇಟರ್​ಗಳು ಅದರಲ್ಲೂ ವಿಶೇಷವಾಗಿ ಇಂಗ್ಲಿಷ್ ಕಾಮೆಂಟೇಟರ್​ಗಳು ಅವರನ್ನು ಸಮಕಾಲೀನ ಕ್ರಿಕೆಟ್​ನ ಅತಿಶ್ರೇಷ್ಠ ಬ್ಯಾಟ್ಸ್​ಮನ್ ಎಂದು ಬಣ್ಣಿಸುತ್ತಿದ್ದಾರೆ. ಆದರೆ ಭಾರತದ ಲೆಜಂಡರಿ ಆರಂಭ ಆಟಗಾರ ಸುನಿಲ್ ಗಾವಸ್ಕರ್ ಈ ವಾದವನ್ನು ಒಪ್ಪುತ್ತಿಲ್ಲ.

ರೂಟ್ ನಿರರ್ಗಳವಾದ ಬ್ಯಾಟಿಂಗ್ ಮೂಲಕ ರನ್ ಗಳಿಸಿ ಟೀಮನ್ನು ಆದ್ಭುತವಾಗಿ ಲೀಡ್ ಮಾಡುತ್ತಾ ಸತತವಾಗಿ ಜಯಗಳನ್ನು ದೊರಕಿಸಿಕೊಡುತ್ತಿದ್ದರೂ ಬಾರತದ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ನ್ಯೂಜಿಲೆಂಡ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್​ ಅವರಷ್ಟು ಶ್ರೇಷ್ಠರಲ್ಲ ಎಂದು ಮೊದಲ ಟೆಸ್ಟ್​ನಲ್ಲಿ ಕಾಮೆಂಟರಿ ನೀಡುವಾಗ ಗಾವಸ್ಕರ್ ಹೇಳಿದರು.

‘ರೂಟ್ ಅತ್ಯುತ್ತಮ ಬ್ಯಾಟ್ಸ್​ಮನ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅವರೀಗ ವಿಶ್ವದ ಶ್ರೇಷ್ಠ ಬ್ಯಾಟ್ಸ್​ಮನ್​ ಅಂತ ನಾನು ಖಂಡಿತವಾಗಿಯೂ ಭಾವಿಸುವುದಿಲ್ಲ. ಆ ಪಟ್ಟಕ್ಕೆ ನಾಲ್ವರು ದಾವೆದಾರರಿದ್ದಾರೆ, ಅವರಲ್ಲಿ ರೂಟ್ ಕೂಡ ಒಬ್ಬರು. ಆದರೆ, ಉಳಿದ ಮೂವರಿಗಿಂತ ಅವರು ಒಂದಷ್ಟು ಕಡಿಮೆ ಎಂದೇ ನಾನು ಭಾವಿಸುತ್ತೇನೆ,’ ಎಂದು ಸನ್ನಿ ಹೇಳಿದರು.

Joe Root

ಸುನಿಲ್ ಗಾವಸ್ಕರ್

ಚೆನೈನಲ್ಲಿ ರೂಟ್ ಪ್ರದರ್ಶಿದ ಬ್ಯಾಟಿಂಗ್​ ಕಲೆಯನ್ನು ಅಪಾರವಾಗಿ ಪ್ರಶಂಸಿದ ಗಾವಸ್ಕರ್, ಅವರ ಡಬಲ್ ಶತಕ ಇಂಗ್ಲೆಂಡ್​ನ ಗೆಲುವಿಗೆ ಅಡಿಪಾಯವಾಯಿತು ಎಂದರು. ಚೆಂಡಿನ ತಿರುವನ್ನು ಹೊಸಕಿ ಹಾಕುವಲ್ಲಿ ಅವರು ಪ್ರದರ್ಶಿದ ಪುಟ್​ವರ್ಕ್​ ನಂಬಲಸದಳವಾಗಿತ್ತು ಎಂದು ಸನ್ನಿ ಹೇಳಿದರು.

ಇದನ್ನೂ ಓದಿ: India vs England Test Series: ಎರಡನೇ ಟೆಸ್ಟ್​ ಪಂದ್ಯವನ್ನೂ ಭಾರತ ಸೋತರೆ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ: ಮಾಂಟಿ ಪನೆಸಾರ್

‘ರೂಟ್ ಚೆನೈನಲ್ಲಿ ಬಾರಿಸಿದ ಡಬಲ್ ಸೆಂಚುರಿಯ ಬಗ್ಗೆ ಮಾತಾಡುವುದಾದರೆ ಅವರಲ್ಲಿದ್ದ ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಧೋರಣೆ ಬಹಳ ಪ್ರಭಾವಕಾರಿಯಾಗಿತ್ತು. ತಾನೆದುರಿಸಿದ ಪ್ರಥಮ ಎಸೆತದಿಂದಲೇ ಅವರು ಆತ್ಮವಿಶ್ವಾಸದ ಮೂಟೆಯಾಗಿದ್ದರು. ಸ್ಪಿನ್ನರ್​ಗಳನ್ನು ಎದುರಿಸಿ ಅಡುವಾಗ ಅವರ ಫುಟ್​ವರ್ಕ್ ಅಪ್ರತಿಮವಾಗಿತ್ತು. ಫ್ರಂಟ್​ಫುಟ್​ನಲ್ಲಾಡುವಾಗ ಅವರು ಚೆಂಡಿನ ತಿರುವನ್ನು ಹೊಸಕಿ ಹಾಕಿದರು ಮತ್ತು ಹಿಂದೆ ಸರಿದು ಆಡುವಾಗ ಎಸೆತವನ್ನು ಕಟ್ ಮಾಡಲು ಇಲ್ಲವೇ ಪುಲ್ ಮಾಡಲು ಅವರಲ್ಲಿ ಸಾಕಷ್ಟು ಸಮಯವಿತ್ತು. ಇದು ಖಂಡಿತವಾಗಿಯೂ ವಿಶ್ವದರ್ಜೆಯ ಬ್ಯಾಟ್ಸ್​ಮನೊಬ್ಬನ ಲಕ್ಷಣ,’ ಎಂದು ಗಾವಸ್ಕರ್ ಹೇಳಿದರು.

Joe Root

ವಿಕೆಟ್​ ಪತನವನ್ನು ಸಂಭ್ರಮಿಸುತ್ತಿರುವ ಇಂಗ್ಲಿಷ್ ಆಟಗಾರರು

ಉಪಖಂಡದ ಪಿಚ್​ಗಳಲ್ಲಿ ಆಡುವಾಗ ಸ್ವೀಪ್ ಶಾಟ್ ಮುನ್ನೆಲೆಗೆ ಬರುತ್ತದೆ. ಈ ಹೊಡೆತದಿಂದಲೇ ಬ್ಯಾಟ್ಸ್​ಮನ್​ಗಳು ಬಹಳಷ್ಟು ರನ್ ಶೇಖರಿಸುತ್ತಾರೆ. ರೂಟ್ ಈ ಹೊಡೆತವನ್ನು ಪರಿಪೂರ್ಣತೆಯಿಂದಆಡಿದರು ಅಂತ ಗಾವಸ್ಕರ್ ಹೇಳಿದರು.

‘ಬಾರತೀಯ ಸ್ಪಿನ್ನರ್​ಗಲ ವಿರುದ್ಧ ರೂಟ್ ಸ್ವೀಪ್​ ಶಾಟ್​ ಅನ್ನು ಬಹಳ ಲೆಕ್ಕಾಚಾರದಿಂದ ಆಡಿದರು. ಯಾವ ಎಸೆತವನ್ನು ಈ ಹೊಡೆತಕ್ಕೆ ಆರಿಸಿಕೊಳ್ಳಬೇಕು ಎನ್ನುವ ಬಗ್ಗೆ ಅವರ ಮನಸ್ಸಿನಲ್ಲಿ ಸ್ಪಷ್ಟತೆಯಿತ್ತೇ ವಿನಃ ಗೊಂದಲವಿರಲಿಲ್ಲ. ಅವರ ಲೆಕ್ಕಾಚಾರ ಅತ್ಯಂತ ಸಮಂಜಸವಾಗಿತ್ತು. ಹಾಗಾಗೇ ಅವರು ಉಪಖಂಡದಲ್ಲಿ ಆಡಿದ ಮೂರು ಟೆಸ್ಟ್​ಗಳಲ್ಲಿ ಶತಕಗಳನ್ನು ಬಾರಿಸಿದ್ದಾರೆ,’ ಎಂದು ಗಾವಸ್ಕರ್ ಹೇಳಿದರು.

Published On - 5:05 pm, Thu, 11 February 21