Olympics: ಟೋಕಿಯೊ ಒಲಿಂಪಿಕ್ಸ್​ನಲ್ಲಿ ಭಾರತ ಯಾವ್ಯಾವ ಕ್ರೀಡೆಗಳಲ್ಲಿ ಪದಕ ಗೆದ್ದಿತ್ತು ಗೊತ್ತಾ?

|

Updated on: Jul 12, 2024 | 4:57 PM

Olympics: ಕಳೆದ ಬಾರಿ ಅಂದರೆ 2020 ರಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದಿಂದ 126 ಸ್ಪರ್ಧಿಗಳು ಭಾಗವಹಿಸಿದ್ದು, 7 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಹಾಗಿದ್ದರೆ ಕಳೆದ ಬಾರಿ ಭಾರತ ಯಾವ್ಯಾವ ಕ್ರೀಡೆಗಳಲ್ಲಿ ಪದಕ ಗೆದ್ದಿತ್ತು ಎಂಬುದನ್ನು ನೋಡುವುದಾದರೆ..

Olympics: ಟೋಕಿಯೊ ಒಲಿಂಪಿಕ್ಸ್​ನಲ್ಲಿ ಭಾರತ ಯಾವ್ಯಾವ ಕ್ರೀಡೆಗಳಲ್ಲಿ ಪದಕ ಗೆದ್ದಿತ್ತು ಗೊತ್ತಾ?
ಟೋಕಿಯೊ ಒಲಿಂಪಿಕ್ಸ್‌
Follow us on

ಪ್ಯಾರಿಸ್ ಒಲಿಂಪಿಕ್ಸ್‌ಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಒಲಿಂಪಿಕ್ಸ್ ಜುಲೈ 26 ರಿಂದ ಆಗಸ್ಟ್ 11 ರವರೆಗೆ ಫ್ರೆಂಚ್ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆಯಲಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಈ ಮಹಾ ಕ್ರೀಡಾಕೂಟಕ್ಕೆ ಭಾರತವೂ ನೂರಾರು ಸ್ಪರ್ಧಿಗಳನ್ನು ಕಳಿಸಿ ಕೊಟ್ಟಿದೆ. ಕಳೆದ ಬಾರಿಗಿಂತ ಈ ಬಾರಿ ಸ್ಪರ್ಧಿಗಳ ಸಂಖ್ಯೆ ಕಡಿಮೆ ಇದ್ದರೂ, ಕಳೆದ ಬಾರಿಗಿಂತ ಈ ಬಾರಿ ಪದಕಗಳ ನಿರೀಕ್ಷೆ ಕೊಂಚ ಜಾಸ್ತಿಯೆ ಇದೆ. ಈ ಬಾರಿ ಭಾರತದಿಂದ ಒಟ್ಟು 112 ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸಲಿದ್ದು, ಇದರಲ್ಲಿ 65 ಪುರುಷ ಆಟಗಾರರು ಮತ್ತು 47 ಮಹಿಳಾ ಆಟಗಾರ್ತಿಯರು ಸೇರಿದ್ದಾರೆ. ಆದರೆ ಕಳೆದ ಬಾರಿ ಅಂದರೆ 2020 ರಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದಿಂದ 126 ಸ್ಪರ್ಧಿಗಳು ಭಾಗವಹಿಸಿದ್ದು, 7 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಹಾಗಿದ್ದರೆ ಕಳೆದ ಬಾರಿ ಭಾರತ ಯಾವ್ಯಾವ ಕ್ರೀಡೆಗಳಲ್ಲಿ ಪದಕ ಗೆದ್ದಿತ್ತು ಎಂಬುದನ್ನು ನೋಡುವುದಾದರೆ..

ವಾಸ್ತವವಾಗಿ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಆಟಗಾರರಿಂದ ಐತಿಹಾಸಿಕ ಪ್ರದರ್ಶನ ಕಂಡುಬಂದಿತ್ತು. ಕಳೆದ ಬಾರಿ ಭಾರತ ಒಟ್ಟು 7 ಪದಕಗಳನ್ನು ಪಡೆದಿತ್ತು. ಇಲ್ಲಿಯವರೆಗೆ, ಇದು ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಆಟಗಾರರ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದರೊಂದಿಗೆ ಭಾರತ 2012 ರ ಲಂಡನ್ ಒಲಿಂಪಿಕ್ಸ್‌ನ ದಾಖಲೆಯನ್ನು ಮುರಿದಿತ್ತು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ ಒಟ್ಟು 6 ಪದಕಗಳನ್ನು ಗೆದ್ದಿತ್ತು.

ಮೊದಲ ದಿನವೇ ಪದಕ

2020ರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕೀರ್ತಿ ತರುವ ಜವಾಬ್ದಾರಿ 126 ಆಟಗಾರರ ಮೇಲಿತ್ತು. ಅದರಲ್ಲಿ 71 ಪುರುಷರು ಮತ್ತು 55 ಮಹಿಳೆಯರು ಭಾಗವಹಿಸಿದ್ದರು. ಈ ಕ್ರೀಡಾಕೂಟದಲ್ಲಿ ಭಾರತ ಮೊದಲ ದಿನವೇ ಇತಿಹಾಸವನ್ನು ಸೃಷ್ಟಿಸಿತ್ತು. ಮೊದಲ ದಿನವೇ ಮೀರಾಬಾಯಿ ಚಾನು ಭಾರತಕ್ಕೆ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಮೊದಲ ದಿನವೇ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು ಇದೇ ಮೊದಲು.

ಲೊವ್ಲಿನಾ- ಸಿಂಧುಗೆ ಪದಕ

ಬಾಕ್ಸಿಂಗ್‌ ವಿಭಾಗದಲ್ಲಿ ಲೊವ್ಲಿನಾ ಬೊರ್ಗೊಹೈನ್ ಕಂಚಿನ ಪದಕವನ್ನು ಗೆದ್ದಿದ್ದರು. ನಂತರ ಬ್ಯಾಡ್ಮಿಂಟನ್​ನಲ್ಲಿ ಇತಿಹಾಸ ನಿರ್ಮಿಸಿದ ಪಿವಿ ಸಿಂಧು ಕೂಡ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಭಾರತದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸಿಂಧು ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಸುಶೀಲ್ ಕುಮಾರ್ ಕುಸ್ತಿಯಲ್ಲಿ ಎರಡು ಪದಕ ಗೆದ್ದಿದ್ದರು. ಇನ್ನು ಪುರುಷರ ಕುಸ್ತಿಯಲ್ಲಿ ರವಿಕುಮಾರ್ ದಹಿಯಾ ಭಾರತಕ್ಕೆ ಬೆಳ್ಳಿ ಪದಕ ಮತ್ತು ಬಜರಂಗ್ ಪುನಿಯಾ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

41 ವರ್ಷಗಳ ನಂತರ ಪದಕ

ಟೋಕಿಯೊ ಒಲಿಂಪಿಕ್ಸ್​ನಲ್ಲಿ ಭಾರತ ಹಾಕಿ ತಂಡ ಕಂಚಿನ ಪದಕ ಗೆದ್ದು 41 ವರ್ಷಗಳ ಬರಗಾಲಕ್ಕೆ ತೆರೆ ಎಳೆದಿತ್ತು. ಭಾರತ ಪುರುಷರ ಹಾಕಿ ತಂಡವು ಜರ್ಮನಿಯನ್ನು 5-4 ಅಂತರದಿಂದ ಸೋಲಿಸುವ ಮೂಲಕ ಈ ಐತಿಹಾಸಿಕ ಜಯ ಸಾಧಿಸಿತು. 1980 ರಲ್ಲಿ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನಂತರ ಇದು ಭಾರತದ ಮೊದಲ ಪೋಡಿಯಂ ಫಿನಿಶ್ ಆಗಿತ್ತು.

ಕೊನೆಯ ದಿನ ಚಿನ್ನ

2020 ರ ಟೋಕಿಯೊ ಒಲಿಂಪಿಕ್ಸ್‌ನ ಮೊದಲ ದಿನವೇ ಭಾರತ ಹೇಗೆಎ ಇತಿಹಾಸ ಸೃಷ್ಟಿಸಿತ್ತೋ, ಕೊನೆಯ ದಿನವೂ ಅದೇ ರೀತಿಯ ಪ್ರದರ್ಶನ ಕಂಡುಬಂದಿತ್ತು. ನೀರಜ್ ಚೋಪ್ರಾ ಜಾವೆಲಿನ್ ಥ್ರೋನಲ್ಲಿ 87.58 ಮೀಟರ್‌ ದೂರ ಎಸೆದು ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದರು. ಈ ಮೂಲಕ ನೀರಜ್ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ನಲ್ಲಿ ಭಾರತಕ್ಕೆ ಪದಕ ಗೆದ್ದ ಮೊದಲ ಭಾರತೀಯ ಎನಿಸಿಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:56 pm, Fri, 12 July 24