ತಂದೆ-ತಾಯಿಯೊಂದಿಗೆ ಪ್ರಧಾನಿ ಮೋದಿಯವರನ್ನು ಭೇಟಿಯಾದ ಚೆಸ್ ಚಾಂಪಿಯನ್‌ ಗುಕೇಶ್

|

Updated on: Dec 28, 2024 | 9:09 PM

Guhesh Meets Modi: ಭಾರತದ 18 ವರ್ಷದ ಗ್ರ್ಯಾಂಡ್‌ಮಾಸ್ಟರ್ ಡಿ. ಗುಕೇಶ್ ಅವರು ಸಿಂಗಾಪುರದಲ್ಲಿ ನಡೆದ 2024ರ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಗೆಲುವು ಸಾಧಿಸಿದ ನಂತರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಪ್ರಧಾನಿ ಮೋದಿ ಅವರು ಗುಕೇಶ್ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿ, ಅವರ ನಿರ್ಣಯ ಮತ್ತು ಸಮರ್ಪಣೆಯನ್ನು ಪ್ರಶಂಸಿಸಿದರು. ಗುಕೇಶ್ ಅವರು ಪ್ರಧಾನಿ ಮೋದಿಯವರಿಗೆ ಚೆಸ್ ಬೋರ್ಡ್ ಅನ್ನು ಉಡುಗೊರೆಯಾಗಿ ನೀಡಿದರು.

ತಂದೆ-ತಾಯಿಯೊಂದಿಗೆ ಪ್ರಧಾನಿ ಮೋದಿಯವರನ್ನು ಭೇಟಿಯಾದ ಚೆಸ್ ಚಾಂಪಿಯನ್‌ ಗುಕೇಶ್
ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಗುಕೇಶ್
Follow us on

ಇದೇ ತಿಂಗಳಲ್ಲಿ ಅಂದರೆ ಡಿಸೆಂಬರ್ 12 ರಂದು ಸಿಂಗಾಪುರದಲ್ಲಿ ನಡೆದಿದ್ದ 2024 ರ ವಿಶ್ವ ಚೆಸ್ ಚಾಂಪಿಯನ್‌ಶಿಪ್​ನಲ್ಲಿ ಗೆಲುವು ಸಾಧಿಸುವ ಮೂಲಕ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದ ಭಾರತದ 18 ವರ್ಷದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್ ತಮ್ಮ ಕುಟುಂಬದೊಂದಿಗೆ ಇಂದು ಪ್ರಧಾನಿ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಅತಿ ಕಿರಿಯ ವಯಸ್ಸಿನಲ್ಲೇ ಐತಿಹಾಸಿಕ ಸಾಧನೆ ಮಾಡಿದ ಗುಕೇಶ್​ರನ್ನು ಆತ್ಮೀಯವಾಗಿ ಬರಮಾಡಿಕೊಂಡ ಪ್ರಧಾನಿ ಮೋದಿ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದೆ

ಪ್ರಧಾನಿ ಮೋದಿಯವರ ನಿವಾಸದಲ್ಲಿ ನಡೆದ ಈ ಭೇಟಿಯ ಫೋಟೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ ಅವರು ‘ಚೆಸ್ ಚಾಂಪಿಯನ್ ಭಾರತದ ಹೆಮ್ಮೆಯ ಡಿ ಗುಕೇಶ್ ಅವರನ್ನು ಭೇಟಿ ಮಾಡಿದ್ದು ಸಂತಸ ತಂದಿದೆ. ಕಳೆದ ಕೆಲವು ವರ್ಷಗಳಿಂದ ನಾನು ಅವರೊಂದಿಗೆ ನಿಕಟವಾಗಿ ಸಂವಹನ ನಡೆಸುತ್ತಿದ್ದೇನೆ. ಅವರ ನಿರ್ಣಯ ಮತ್ತು ಸಮರ್ಪಣೆ ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಅವರ ಆತ್ಮವಿಶ್ವಾಸ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ವಾಸ್ತವವಾಗಿ ಕೆಲವು ವರ್ಷಗಳ ಹಿಂದೆ ನಾನು ಅವರ ವೀಡಿಯೊವೊಂದನ್ನು ನೋಡಿದ್ದೆ ಅದರಲ್ಲಿ ಅವರು ನಾನು ಕಿರಿಯ ವಿಶ್ವ ಚಾಂಪಿಯನ್ ಆಗುವುದಾಗಿ ಹೇಳಿದ್ದರು. ಇದೀಗ ಅವರ ಹೇಳಿದಂತೆಯೇ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಇನ್ನು ದೇಶದ ಹೆಮ್ಮೆಯ ಪ್ರಧಾನಿಯನ್ನು ಭೇಟಿಯಾದ ಗುಕೇಶ್ ಅವರಿಗೆ ಚೆಸ್ ಬೋರ್ಡ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆಯೂ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಮೋದಿ, ಗುಕೇಶ್ ಅವರು ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಚೆಸ್ ಬೋರ್ಡ್ ಅನ್ನು ಉಡುಗೊರೆಯಾಗಿ ಸ್ವೀಕರಿಸಲು ನನಗೆ ತುಂಬಾ ಸಂತೋಷವಾಗಿದೆ. ಗುಕೇಶ್ ಮತ್ತು ಅವರ ಎದುರಾಳಿ ಡಿಂಗ್ ಲಿರೆನ್ ಇಬ್ಬರೂ ಸಹಿ ಮಾಡಿರುವ ಚೆಸ್ ಬೋರ್ಡ್ ಅಮೂಲ್ಯವಾದ ಸ್ಮರಣಿಕೆಯಾಗಿದೆ ಎಂದಿದ್ದಾರೆ.

ರೋಚಕ ಹಣಾಹಣಿಯಲ್ಲಿ ಗೆದ್ದಿದ್ದ ಗುಕೇಶ್

ಹದಿನೈದು ದಿನಗಳ ಕಾಲ ನಡೆದ ವಿಶ್ವ ಚೆಸ್ ಪಂದ್ಯಾವಳಿಯಲ್ಲಿ ಉಭಯ ಆಟಗಾರರು ಪ್ರಬಲ ಪೈಪೋಟಿ ನೀಡಿದ್ದರು. ಹೀಗಾಗಿ ಮೊದಲ 13 ಸುತ್ತುಗಳಲ್ಲಿ ಇಬ್ಬರೂ ತಲಾ 2 ಪಂದ್ಯ ಗೆದ್ದಿದ್ದರೆ, ಉಳಿದ 9 ಪಂದ್ಯಗಳು ಡ್ರಾ ಆಗಿದ್ದವು. ಆದ್ದರಿಂದ ಇಬ್ಬರ ಬಳಿಯೂ ತಲಾ 6.5 ಅಂಕಗಳಿದ್ದವು. ಇಂತಹ ಪರಿಸ್ಥಿತಿಯಲ್ಲಿ 14ನೇ ಸುತ್ತು ಇಬ್ಬರಿಗೂ ನಿರ್ಣಾಯಕವಾಗಿತ್ತು. ಒಂದು ವೇಳೆ ಆ ಪಂದ್ಯವೂ ಡ್ರಾ ಆಗಿದ್ದರೆ ಇಬ್ಬರೂ ತಲಾ 7 ಅಂಕ ಗಳಿಸಿ ಟೈಬ್ರೇಕರ್ ಮೂಲಕ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಆದರೆ ಇದಕ್ಕೆ ಅವಕಾಶ ನೀಡಿದ ಗುಕೇಶ್ ಅಂತಿಮವಾಗಿ 7.5- 6.5 ಅಂಕಗಳ ಅಂತರದಿಂದ ಪಂದ್ಯ ಗೆದ್ದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ