Hockey Asia Cup 2025: ಜಪಾನ್ ವಿರುದ್ಧ ಗೆದ್ದು ಸೂಪರ್-4 ಸುತ್ತಿಗೆ ಎಂಟ್ರಿಕೊಟ್ಟ ಭಾರತ ತಂಡ

Hockey Asia Cup 2025: ಭಾರತದ ಹಾಕಿ ತಂಡವು ರಾಜ್‌ಗಿರ್‌ನಲ್ಲಿ ನಡೆಯುತ್ತಿರುವ ಏಷ್ಯಾಕಪ್‌ನಲ್ಲಿ ಜಪಾನ್ ವಿರುದ್ಧ 3-2 ಅಂತರದ ಜಯ ಸಾಧಿಸಿದೆ. ಹರ್ಮನ್‌ಪ್ರೀತ್ ಸಿಂಗ್ ಅವರು ಎರಡು ಗೋಲುಗಳನ್ನು ಗಳಿಸಿದರು. ಈ ಗೆಲುವಿನೊಂದಿಗೆ ಭಾರತ ಸೂಪರ್ 4 ಹಂತಕ್ಕೆ ಪ್ರವೇಶಿಸಿದೆ. ಪೂಲ್-ಎಯಲ್ಲಿ ಭಾರತ 6 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.

Hockey Asia Cup 2025: ಜಪಾನ್ ವಿರುದ್ಧ ಗೆದ್ದು ಸೂಪರ್-4 ಸುತ್ತಿಗೆ ಎಂಟ್ರಿಕೊಟ್ಟ ಭಾರತ ತಂಡ
Hockey Asia Cup 2025

Updated on: Aug 31, 2025 | 6:14 PM

ಬಿಹಾರದ ರಾಜ್‌ಗಿರ್‌ನಲ್ಲಿ ನಡೆಯುತ್ತಿರುವ ಹಾಕಿ ಏಷ್ಯಾಕಪ್‌ನಲ್ಲಿ (Hockey Asia Cup 2025) ಆತಿಥೇಯ ಭಾರತ ತಂಡದ ಅಜೇಯ ಓಟ ಮುಂದುವರೆಸಿದೆ. ಪೂಲ್-ಎ ನ ಮೊದಲ ಪಂದ್ಯದಲ್ಲಿ ಚೀನಾ ತಂಡವನ್ನು 4-3 ಅಂತರದಿಂದ ಮಣಿಸಿ ಪಂದ್ಯಾವಳಿಯಲ್ಲಿ ಗೆಲುವಿನ ಶುಭಾರಂಭ ಮಾಡಿದ್ದ ಹರ್ಮನ್​ಪ್ರೀತ್ ಸಿಂಗ್ (Harmanpreet Singh) ನಾಯಕತ್ವದ ಭಾರತ ಹಾಕಿ ತಂಡ ಇದೀಗ ಜಪಾನ್ ವಿರುದ್ಧದ ಎರಡನೇ ಪಂದ್ಯವನ್ನು 3-2 ಅಂತರದಿಂದ ಗೆದ್ದುಕೊಂಡಿದೆ. ಚೀನಾ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ನಾಯಕ ಹರ್ಮನ್​ಪ್ರೀತ್ ಸಿಂಗ್ ಇದೀಗ ಜಪಾನ್ ವಿರುದ್ಧದ ಎರಡನೇ ಪಂದ್ಯದಲ್ಲೂ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರೆಸಿ ತಂಡದ ಪರ ಅತ್ಯಧಿಕ ಗೋಲು ಅಂದರೆ 2 ಗೋಲುಗಳನ್ನು ಬಾರಿಸಿದರು. ಹರ್ಮನ್​ಪ್ರೀತ್ ಮಾತ್ರವಲ್ಲದೆ ರಾಜ್ ಕುಮಾರ್ ಪಾಲ್ ಕೂಡ ತಂಡದ ಪರ ಒಂದು ಗೋಲು ದಾಖಲಿಸಿದರು.

ಆಟ ಹೀಗಿತ್ತು

ಭಾರತ ತಂಡ ಆರಂಭದಿಂದಲೇ ಆಟದ ಮೇಲೆ ನಿಯಂತ್ರಣ ಸಾಧಿಸಿತು. ಅದರಂತೆ ಪಂದ್ಯದ ನಾಲ್ಕನೇ ನಿಮಿಷದಲ್ಲಿ, ಮನ್ದೀಪ್ ಸಿಂಗ್ ಭಾರತದ ಪರ ಮೊದಲ ಗೋಲು ಗಳಿಸಿದರು. ಆ ಬಳಿಕ ಸಿಕ್ಕ ಪೆನಾಲ್ಟಿ ಕಾರ್ನರ್‌ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ನಾಯಕ ಹರ್ಮನ್ಪ್ರೀತ್ ಸಿಂಗ್ ಯಶಸ್ವಿಯಾದರು. ಪಂದ್ಯದ 13ನೇ ನಿಮಿಷದಲ್ಲಿ ಜಪಾನ್‌ಗೆ ಎರಡು ಪೆನಾಲ್ಟಿ ಕಾರ್ನರ್‌ಗಳು ದೊರೆತವು, ಆದರೆ ತಂಡಕ್ಕೆ ಒಮ್ಮೆಯೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ.

ಜಪಾನ್ ಪರ ಕೊಸೇ ಕವಾಬೆ 38 ನೇ ನಿಮಿಷದಲ್ಲಿ ಪಂದ್ಯದ ಮೊದಲ ಗೋಲು ಬಾರಿಸಿ ಮುನ್ನಡೆಯನ್ನು ಸ್ವಲ್ಪ ಕಡಿಮೆ ಮಾಡಿದರು. ಆದಾಗ್ಯೂ ಭಾರತ ಮೂರನೇ ಕ್ವಾರ್ಟರ್ ಅನ್ನು ಒಂದು ಗೋಲಿನೊಂದಿಗೆ ಕೊನೆಗೊಳಿಸಿತು. 45 ನೇ ನಿಮಿಷದ ಕೊನೆಯ ಕೆಲವು ಸೆಕೆಂಡುಗಳಲ್ಲಿ ಭಾರತಕ್ಕೆ ಸಿಕ್ಕ ಪೆನಾಲ್ಟಿ ಕಾರ್ನರ್‌ ಅನ್ನು ನಾಯಕ ಹರ್ಮನ್‌ಪ್ರೀತ್ ಸಿಂಗ್ ಗೋಲಾಗಿ ಪರಿವರ್ತಿಸಿ ಭಾರತವನ್ನು 3-1 ಗೋಲುಗಳ ಮುನ್ನಡೆಗೆ ತಂದರು. ಈ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳು ತಲಾ ಒಂದು ಗೋಲು ಗಳಿಸಿದ್ದರಿಂದ ಮೂರನೇ ಕ್ವಾರ್ಟರ್ 1-1 ಡ್ರಾದಲ್ಲಿ ಕೊನೆಗೊಂಡಿತು.

ನಾಲ್ಕನೇ ಕ್ವಾರ್ಟರ್ ನಿಧಾನವಾಗಿ ಆರಂಭವಾಯಿತು, ಆದರೆ 49 ನೇ ನಿಮಿಷದಲ್ಲಿ ಜಪಾನ್‌ಗೆ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಆದಾಗ್ಯೂ, ಭಾರತದ ರಕ್ಷಣಾ ಮತ್ತು ಗೋಲ್‌ಕೀಪರ್ ಸೂರಜ್ ಕರ್ಕೇರಾ ಅದನ್ನು ಗೋಲಾಗಿ ಪರಿವರ್ತಿಸಲು ಬಿಡಲಿಲ್ಲ. ಆ ಬಳಿಕ ಪಂದ್ಯದ 58 ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್​ನಲ್ಲಿ ಜಪಾನ್ ಗೋಲು ಗಳಿಸಿತು. ಅಂತಿಮವಾಗಿ ಭಾರತ 3-2 ಗೋಲುಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

ಸೂಪರ್-4 ಸುತ್ತಿಗೆ ಭಾರತ ಎಂಟ್ರಿ

ಏಷ್ಯಾಕಪ್ ಹಾಕಿಯಲ್ಲಿ ಜಪಾನ್ ವಿರುದ್ಧ ಸತತ ಎರಡನೇ ಜಯ ಸಾಧಿಸುವ ಮೂಲಕ ಭಾರತ ತಂಡ ಸೂಪರ್-4 ರಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪೂಲ್-ಎ ಪಾಯಿಂಟ್ ಪಟ್ಟಿಯಲ್ಲಿ, ಭಾರತ ತಂಡವು ಎರಡು ಗೆಲುವುಗಳೊಂದಿಗೆ 6 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಮತ್ತೊಂದೆಡೆ, ಈ ಪಂದ್ಯದಲ್ಲಿ ಜಪಾನ್ ಸೋಲಿನಿಂದಾಗಿ ಮೂರು ಅಂಕ ಕಲೆಹಾಕಿ ಮೂರನೇ ಸ್ಥಾನದಲ್ಲಿದೆ. ಉಳಿದಂತೆ ಪೂಲ್-ಎ ನಲ್ಲಿ ಚೀನಾ ತಂಡ ಮೂರು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ನಾಯಕ ಹರ್ಮನ್ಪ್ರೀತ್ ಸಿಂಗ್ ಇದುವರೆಗೆ 2 ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು (5) ಗೋಲುಗಳನ್ನು ಬಾರಿಸಿದ್ದಾರೆ.

Hockey Asia Cup 2025: ಚೀನಾ ವಿರುದ್ಧ ಮೊದಲ ಪಂದ್ಯ ಗೆದ್ದ ಭಾರತ ಹಾಕಿ ತಂಡ; ವಿಡಿಯೋ

ಪೂಲ್-ಎ ನಲ್ಲಿ ಭಾರತವಲ್ಲದೆ, ಚೀನಾ, ಜಪಾನ್ ಮತ್ತು ಕಜಕಿಸ್ತಾನ್ ತಂಡಗಳು ಸೇರಿವೆ. ಇದೀಗ ಸತತ ಎರಡು ಗೆಲುವುಗಳೊಂದಿಗೆ ಟೀಂ ಇಂಡಿಯಾ ಸೂಪರ್-4 ಹಂತಕ್ಕೆ ತಲುಪಿದೆ. ಆದಾಗ್ಯೂ ಸೆಪ್ಟೆಂಬರ್ 1 ರಂದು ಕಜಕಿಸ್ತಾನ್ ವಿರುದ್ಧ ತನ್ನ ಮೂರನೇ ಲೀಗ್ ಪಂದ್ಯವನ್ನು ಆಡಲಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ನಂಬರ್-1 ಸ್ಥಾನವನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದೆ. ಸೆಪ್ಟೆಂಬರ್ 1 ರ ಸಂಜೆ ಚೀನಾ ಮತ್ತು ಜಪಾನ್ ನಡುವಿನ ಪಂದ್ಯದ ಫಲಿತಾಂಶವು ಪೂಲ್-ಎ ತಂಡದಿಂದ ಸೂಪರ್-4 ಹಂತಕ್ಕೆ ಪ್ರವೇಶಿಸುವ ಎರಡನೇ ತಂಡ ಯಾವುದು ಎಂಬುದನ್ನು ನಿರ್ಧರಿಸುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ