India vs Japan: ಸೋತ ಮೇಲೆ ಎಚ್ಚೆತ್ತ ಭಾರತ: ಜಪಾನ್ ವಿರುದ್ಧ 8 ಗೋಲುಗಳ ಭರ್ಜರಿ ಜಯ

| Updated By: ಝಾಹಿರ್ ಯೂಸುಫ್

Updated on: Jan 26, 2023 | 10:10 PM

Hockey World Cup 2023: ನಾಲ್ಕನೇ ಸುತ್ತಿನಲ್ಲಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದ ಟೀಮ್ ಇಂಡಿಯಾ ಆಟಗಾರರು ಸತತವಾಗಿ ಜಪಾನ್ ತಂಡದ ಗೋಲಿನತ್ತ ದಾಳಿ ಮಾಡಿದರು.

India vs Japan: ಸೋತ ಮೇಲೆ ಎಚ್ಚೆತ್ತ ಭಾರತ: ಜಪಾನ್ ವಿರುದ್ಧ 8 ಗೋಲುಗಳ ಭರ್ಜರಿ ಜಯ
India vs Japan
Follow us on

Hockey World Cup 2023: ಭುವನೇಶ್ವರದ ರೂರ್ಕೆಲಾದಲ್ಲಿ ಗುರುವಾರ ನಡೆದ ಹಾಕಿ ವಿಶ್ವಕಪ್​ನ 34ನೇ ಪಂದ್ಯದಲ್ಲಿ ಭಾರತ ತಂಡವು ಜಪಾನ್ (India vs Japan) ವಿರುದ್ಧ 8-0 ಅಂತರದಿಂದ ಜಯಭೇರಿ ಬಾರಿಸಿದೆ. 9 ರಿಂದ 16 ಸ್ಥಾನಕ್ಕಾಗಿ ನಡೆದ ಈ ಪಂದ್ಯದಲ್ಲಿ ಗೆದ್ದಿರುವ ಭಾರತ ತಂಡವು ಟಾಪ್-10 ನಲ್ಲಿ ಕಾಣಿಸಿಕೊಳ್ಳುವ ಮೂಲಕ ವಿಶ್ವಕಪ್​ ಅಭಿಯಾನ ಅಂತ್ಯಗೊಳಿಸುವ ಇರಾದೆಯಲ್ಲಿದೆ. ಆರಂಭದಿಂದಲೇ ಭಾರೀ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಮೊದಲ ಎರಡು ಸುತ್ತುಗಳಲ್ಲಿ ಉಭಯ ತಂಡಗಳಿಂದ ಗೋಲುಗಳು ಮೂಡಿಬಂದಿರಲಿಲ್ಲ.

ಆದರೆ ಮೂರನೇ ಸುತ್ತಿನಲ್ಲಿ ಟೀಮ್ ಇಂಡಿಯಾ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು. ಈ ವೇಳೆ ಸಿಕ್ಕ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿಸುವಲ್ಲಿ ಮಂದೀಪ್ ಸಿಂಗ್ ಯಶಸ್ವಿಯಾದರು. ಇದರ ಬೆನ್ನಲ್ಲೇ ಅಭಿಷೇಕ್ ಮತ್ತೊಂದು ಗೋಲು ಬಾರಿಸಿ 2-0 ಮುನ್ನಡೆ ತಂದುಕೊಟ್ಟರು.

ಮೂರನೇ ಸುತ್ತು ಮುಕ್ತಾಯದ ವೇಳೆ ವಿವೇಕ್ ಸಾಗರ್ ಪ್ರಸಾದ್ ಎಡಬದಿ ಕಾರ್ನರ್ ಕಡೆಯಿಂದ ಬಾರಿಸಿದ ಚೆಂಡು ಗೋಲಿಯನ್ನು ವಂಚಿಸಿ ಗೋಲ್ ಪೋಸ್ಟ್ ಒಳಗೆ ನುಗ್ಗಿತು. ಇದರ ಬೆನ್ನಲ್ಲೇ ರಿವರ್ಸ್ ಶಾಟ್ ಮೂಲಕ ಆಭಿಷೇಕ್ ತಮ್ಮ 2ನೇ ಗೋಲುಗಳಿಸಿದರು. ಇದರೊಂದಿಗೆ ಭಾರತ ತಂಡವು 4-0 ಅಂತರದೊಂದಿಗೆ 3ನೇ ಸುತ್ತು ಮುಕ್ತಾಯಗೊಳಿಸಿತು.

ಇದನ್ನೂ ಓದಿ
IPLನ ಒಂದು ಪಂದ್ಯಕ್ಕೆ 107 ಕೋಟಿ ರೂ: PSL ನ 1 ಪಂದ್ಯಕ್ಕೆ ಎಷ್ಟು ಗೊತ್ತಾ?
ಟೀಮ್ ಇಂಡಿಯಾ ಪರ ಅತೀ ಹೆಚ್ಚು ಬಾರಿ 150 ಕ್ಕೂ ಅಧಿಕ ರನ್ ಬಾರಿಸಿದ್ದು ಯಾರು ಗೊತ್ತಾ?
Team India: ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
Virat Kohli: ಕಿಂಗ್ ಕೊಹ್ಲಿಯ ಅಬ್ಬರಕ್ಕೆ ಸಚಿನ್ ದಾಖಲೆ ಉಡೀಸ್

ನಾಲ್ಕನೇ ಸುತ್ತಿನಲ್ಲಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದ ಟೀಮ್ ಇಂಡಿಯಾ ಆಟಗಾರರು ಸತತವಾಗಿ ಜಪಾನ್ ತಂಡದ ಗೋಲಿನತ್ತ ದಾಳಿ ಮಾಡಿದರು. ಪರಿಣಾಮ ಹರ್ಮನ್​ಪ್ರೀತ್ ಸಿಂಗ್ ಕಡೆಯಿಂದ 5ನೇ ಗೋಲು ಮೂಡಿಬಂದರೆ, ಮನ್​ಪ್ರೀತ್ ಸಿಂಗ್ ಸ್ಟಿಕ್​ನಿಂದ 6ನೇ ಗೋಲು ದಾಖಲಾಯಿತು.

ಇನ್ನು 7ನೇ ಗೋಲು ಬಾರಿಸುವ ಮೂಲಕ ನಾಯಕ ಹರ್ಮನ್​ಪ್ರೀತ್ ಗೆಲುವಿನ ಅಂತರವನ್ನು ಹೆಚ್ಚಿಸಿದರು. ಹಾಗೆಯೇ ಪಂದ್ಯದ ಅಂತಿಮ ಹಂತದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್​ ಅನ್ನು ಜಪಾನ್ ಗೋಲು ಕೀಪರ್ ತಡೆದರು. ಆದರೆ ಅಲ್ಲೇ ಇದ್ದ ಸುಖ್​ಜೀತ್ ಸಿಂಗ್ ಸಿಕ್ಕ ಅವಕಾಶವನ್ನು ಗೋಲಾಗಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಭಾರತ ತಂಡವು 8-0 ಅಂತರದಿಂದ ಜಪಾನ್​ಗೆ ಸೋಲುಣಿಸಿತು.

ಈಗಾಗಲೇ ಕ್ವಾರ್ಟರ್​ಫೈನಲ್​ನಿಂದ ಹೊರಬಿದ್ದಿರುವ ಭಾರತ ತಂಡಕ್ಕೆ ಈ ಗೆಲುವು ತುಸು ಸಮಾಧಾನಕರ. ಏಕೆಂದರೆ ಅಗ್ರ 10 ರಲ್ಲಿ ಟೂರ್ನಿ ಮುಗಿಸಲು ಮತ್ತೊಂದು ಅವಕಾಶ ಲಭಿಸಿದಂತಾಗಿದೆ. ಅದಂತೆ ಜನವರಿ 28 ರಂದು ನಡೆಯಲಿರುವ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ ತಂಡವು 9ನೇ ಸ್ಥಾನದೊಂದಿಗೆ ಹಾಕಿ ವಿಶ್ವಕಪ್​ ಅಭಿಯಾನ ಅಂತ್ಯಗೊಳಿಸುವ ಅವಕಾಶ ಹೊಂದಿದೆ.

 

 

 

Published On - 10:09 pm, Thu, 26 January 23