Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಗ್ಲೆಂಡ್​ ವಿರುದ್ಧ ನಡೆವ ಸರಣಿಯಲ್ಲಿ ಟೀಮ್ ಇಂಡಿಯಾಗೆ ಭುವನೇಶ್ವರ ಕುಮಾರ್​ರಂಥ ಅನುಭವಿ ಬೌಲರ್ ಬೇಕಿದೆ: ನಾಸ್ಸೆರ್ ಹುಸ್ಸೇನ್

ಭಾರತ ಡಬ್ಲ್ಯೂಟಿಸಿ ಫೈನಲ್ ಸೋತ ನಂತರ ಟೀಮಿನ ಬೌಲಿಂಗ್ ವೈಫಲ್ಯದ ಬಗ್ಗೆ ಮಾತಾಡಿರುವ ಹುಸ್ಸೇನ್, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆರಂಭವಾಗುವ ಮೊದಲು ಭಾರತ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು ಕರೆಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಇಂಗ್ಲೆಂಡ್​ ವಿರುದ್ಧ ನಡೆವ ಸರಣಿಯಲ್ಲಿ ಟೀಮ್ ಇಂಡಿಯಾಗೆ ಭುವನೇಶ್ವರ ಕುಮಾರ್​ರಂಥ ಅನುಭವಿ ಬೌಲರ್ ಬೇಕಿದೆ: ನಾಸ್ಸೆರ್ ಹುಸ್ಸೇನ್
ಭುವನೇಶ್ವರ್ ಕುಮಾರ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Jun 26, 2021 | 11:16 PM

ಭಾರತದ ವೇಗದ ಬೌಲಿಂಗ್ ಯುನಿಟ್ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ (ಡಬ್ಲ್ಯೂಟಿಸಿ) ಫೈನಲ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದು ಎಲ್ಲೆಡೆ ಚರ್ಚೆಯಾಗುತ್ತಿದೆ. ಹಾಗೆ ನೋಡಿದರೆ ಇಂಗ್ಲೆಂಡ್​ಗೆ ತೆರಳಿರುವ ತಂಡದಲ್ಲಿ ಯುವ ಮತ್ತು ಅನುಭವಿ ವೇಗದ ಬೌಲರ್​ಗಳ ದಂಡೇ ಇದೆ. ಇಶಾಂತ್ ಶರ್ಮ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ನವದೀಪ್ ಸೈನಿ ಮತ್ತು ಶಾರ್ದುಲ್ ಠಾಕೂರ್ ಮೊದಲಾದವರು ಮೂಲ ಟೀಮಿನ ಭಾಗವಾಗಿದ್ದರೆ, ರಿಸರ್ವ್​ಗಳಾಗಿ ಪ್ರಸಿಧ್ ಕೃಷ್ಣ, ಆವೇಶ್ ಖಾನ್, ಅರ್ಜಾನ್ ನಾಗ್ವಾಸ್​ವಲ್ಲಾ ಅಲ್ಲಿದ್ದಾರೆ. ಡಬ್ಲ್ಯೂಟಿಸಿಗೆ ಮೊದಲು ವೇಗದ ಬೌಲಿಂಗ್ ಕಾಂಬಿನೇಶನ್ ಹೇಗಿರಬೇಕು, ಯಾರನ್ನು ಆಡಿಸಬೇಕು ಮತ್ತು ಯಾರು ಅಲ್ಲಿನ ಕಂಡೀಷನ್​ನಗಳಲ್ಲಿ ಹೆಚ್ಚು ಉಪಯುಕ್ತವೆನಿಸಲಿದ್ದಾರೆ ಎಂಬ ಅಂಶಗಳ ಮೇಲೆ ಚರ್ಚೆಗಳು ನಡೆದವು. ಕೊನಗೆ, ಕ್ಯಾಪ್ಟನ್ ವಿರಾಟ್​ ಕೊಹ್ಲಿ, ಮೂರು ವೇಗಿ ಮತ್ತು ಎರಡು ಸ್ಪಿನ್ನರ್​ಗಳ ಆಡುವುದನ್ನು ಪ್ರಕಟಿಸಿದರು. ಪಂದ್ಯದ ಮೊದಲ ದಿನ ಮಳೆಗೆ ಆಹುತಿಯಾಗಿದ್ದರೂ ಕೊಹ್ಲಿ ಟೀಮ್ ಕಾಂಬಿನೇಶನ್ ಬದಲಾಯಿಸುವ ಯೋಚನೆ ಮಾಡಲಿಲ್ಲ.

ಆದರೆ, ಭಾರತೀಯ ಟೀಮ್ ಮ್ಯಾನೇಜ್ಮೆಂಟ್ ಯೋಚನೆ ಮಾಡದ್ದನ್ನು ಇಂಗ್ಲೆಂಡ್​ನ ಮಾಜಿ ಕ್ಯಾಪ್ಟನ್ ನಾಸ್ಸೆರ್ ಹುಸ್ಸೇನ್ ಮಾಡಿದ್ದಾರೆ. ಭಾರತ ಡಬ್ಲ್ಯೂಟಿಸಿ ಫೈನಲ್ ಸೋತ ನಂತರ ಟೀಮಿನ ಬೌಲಿಂಗ್ ವೈಫಲ್ಯದ ಬಗ್ಗೆ ಮಾತಾಡಿರುವ ಹುಸ್ಸೇನ್, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆರಂಭವಾಗುವ ಮೊದಲು ಭಾರತ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು ಕರೆಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಭುವಿಯನ್ನು ಮಹತ್ವಪೂರ್ಣ ಡಬ್ಲ್ಯೂಟಿಸಿ ಮತ್ತು ಇಂಗ್ಲೆಂಡ್​ ವಿರುದ್ಧ ನಡೆಯುವ ಸರಣಿಗೆ ಆಯ್ಕೆ ಮಾಡದೆ, ಶ್ರೀಲಂಕಾದಲ್ಲಿ ಸೀಮಿತ ಓವರ್​ಗಳ ಸರಣಿಯನ್ನು ಆಡಲು ಕಳಿಸಲಾಗಿದೆ. ಡಬ್ಲ್ಯೂಟಿಸಿಯಲ್ಲಿ ಶಮಿಯನ್ನು ಬಿಟ್ಟರೆ ಬೇರೆ ಯಾವುದೇ ಭಾರತೀಯ ಬೌಲರ್ ಪರಿಣಾಮಕಾರಿ ಪ್ರದರ್ಶನ ನೀಡಲಿಲ್ಲ. ಟೀಮಿನಲ್ಲಿ ಭುವಿ ಇದ್ದಿದ್ದರೆ ಭಾರತದ ಆಕ್ರಮಣ ಹೆಚ್ಚು ಮೊನಚಾಗಿರುತಿತ್ತು ಎಂದು ಹುಸ್ಸೇನ್ ಹೇಳಿದ್ದಾರೆ.

‘ಇಂಗ್ಲೆಂಡ್​ ವಿರುದ್ಧ ನಡೆಯುವ ಸರಣಿಗೆ ಭುವನೇಶ್ವರ್ ಅವರನ್ನು ಕರೆಸಿಕೊಳ್ಳಬೇಕು, ಅವರಿಗೆ ಗಾಯದ ಸಮಸ್ಯೆಗಳಿವೆ ಅಂತ ಕೇಳಿದ್ದೇನೆ. ಅವರು ಪೂರ್ತಿ ಸರಣಿ ಆಡುವ ಬದಲು 2-3 ಟೆಸ್ಟ್ ಆಡಿದರೂ ಭಾರತಕ್ಕೆ ದೊಡ್ಡ ಪ್ರಯೋಜನವಾಗಲಿದೆ. ಇಲ್ಲಿರುವ ಕಂಡೀಶನ್​ಗಳು ಅವರಿಗೆ ಜಾಸ್ತಿ ಸೂಟ್​ ಆಗುತ್ತವೆ. ಟೀಮ್​ ಇಂಡಿಯಾ ಹೇಗೆ ಒಬ್ಬ ಅಪ್ಪಟ ಸ್ವಿಂಗ್ ಬೌಲರ್​ನನ್ನು ಮಿಸ್​ ಮಾಡಿಕೊಂಡಿತು ಎನ್ನುವುದನ್ನು ನಾವೆಲ್ಲ ಡಬ್ಲ್ಯೂಟಿಸಿ ಫೈನಲ್ ಪಂದ್ಯದಲ್ಲಿ ನಾವು ನೋಡಿದ್ದೇವೆ,’ ಎಂದು ಸೌತಾಂಪ್ಟನ್​ನಲ್ಲಿ ಪಂದ್ಯದ ಮೂರನೇ ದಿನ ಕಾಮೆಂಟರಿ ಮಾಡುವಾಗ ಹುಸ್ಸೇನ್ ಹೇಳಿದರು.

ಮೊದಲ ಇನ್ನಿಂಗ್ಸ್​ನಲ್ಲಿ ಶಮಿ ನಾಲ್ಕು ಮತ್ತು ಇಶಾಂತ್ ಶರ್ಮ ಮೂರು ವಿಕೆಟ್ ಪಡೆದರೂ ಅವರಿಬ್ಬರು ಅದರಲ್ಲೂ ವಿಶೇಷವಾಗಿ 100 ಟೆಸ್ಟ್​ಗಳನ್ನಾಡಿರುವ ಶರ್ಮ ತಮ್ಮ ಅನುಭವ ಹಾಗೂ ಖ್ಯಾತಿಗೆ ತಕ್ಕ ಬೌಲಿಂಗ್ ಪ್ರದರ್ಶನ ನೀಡಲಿಲ್ಲ. ಬುಮ್ರಾ ಅವರಂತೂ ತೀವ್ರ ನಿರಾಸಿಗೊಳಿಸಿದರು.

ಇಂಗ್ಲೆಂಡ್​ನಲ್ಲಿ ಭುವಿಯ ಸಾಧನೆ ಬಹಳ ಚೆನ್ನಾಗಿದೆ. 2014 ರ ಪ್ರವಾಸದಲ್ಲಿ ಅವರು 26.63 ಸರಾಸರಿಯಲ್ಲಿ 19 ವಿಕೆಟ್ ಪಡೆದರು. ಎರಡು ಬಾರಿ ಅವರು ಇನ್ನಿಂಗ್ಸೊಂದರಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆಯುವ ಸಾಧನೆ ಮಾಡಿದರು. ಆ ಪ್ರವಾಸದಲ್ಲಿ ತೋರಿದ ಅದ್ಭುತ ಪ್ರದರ್ಶನದ ಹೊರತಾಗಿಯೂ 2018 ರ ಪ್ರವಾಸಕ್ಕೆ ಭುವಿಯನ್ನು ಆಯ್ಕೆ ಮಾಡಿರಲಿಲ್ಲ.

ಆದರೆ, ಭುವಿ ಕಳೆದ ಮೂರು ವರ್ಷಗಳಿಂದ ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿಲ್ಲ ಮತ್ತು ಅವರು ಕೊನೆಯ ಬಾರಿಗೆ ಟೆಸ್ಟ್​ ಒಂದರಲ್ಲಿ ಆಡಿದ್ದು 2018ರಲ್ಲಿ. ಅವರನ್ನು ಈಗ ಇಂಗ್ಲೆಂಡ್​ಗೆ ಕರೆಸಿಕೊಳ್ಳಬೇಕೆಂದು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದರೂ ಶ್ರೀಲಂಕಾದಿಂದ ಪ್ರಯಾಣ, ಇಂಗ್ಲೆಂಡ್​ ತಲುಪಿದ ನಂತರ ಕ್ವಾರಂಟೀನ್ ಅವಧಿ ಮೊದಲಾದ ಅಂಶಗಳನ್ನು ಕಡೆಗಣಿಸುವುದು ಸಾಧ್ಯವಿಲ್ಲ. ಅಗತ್ಯ ಬಿದ್ದರೆ ಅವರನ್ನು ಕೊನೆಯ 2-3 ಟೆಸ್ಟ್​ಗಳಿಗೆ ಕರೆಸಿಕೊಳ್ಳುವ ಯೋಚನೆ ಟೀಮ್ ಮ್ಯಾನೇಜ್ಮೆಂಟ್​ಗೆ ಬಂದರೂ ಮೊಹಮ್ಮದ್ ಸಿರಾಜ್ ಮತ್ತು ನವದೀಪ್ ಸೈನಿ ಅಲ್ಲೇ ಲಭ್ಯರಿರುವುದರಿಂದ ಅಂಥ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ತೀರ ಕಡಿಮೆಯಿದೆ.

ಇದನ್ನೂ ಓದಿ: India vs England: ಸರಣಿ ಗೆದ್ದ ಕೊಹ್ಲಿ ಫುಲ್ ಗರಂ! ಶಾರ್ದೂಲ್​- ಭುವನೇಶ್ವರ್​ಗಾದ ಅನ್ಯಾಯಕ್ಕೆ ವಿರಾಟ್​ ಕೆಂಡ ಕೆಂಡ!