India vs Australia Test series | ಆಸ್ಟ್ರೇಲಿಯಾದಲ್ಲಿ ಹೊಸ ಇಂಡಿಯಾ ಸಾಧಿಸಿತು ದಿಗ್ವಿಜಯ!

India vs Australia Test series | ಆಸ್ಟ್ರೇಲಿಯಾದಲ್ಲಿ ಹೊಸ ಇಂಡಿಯಾ ಸಾಧಿಸಿತು ದಿಗ್ವಿಜಯ!
ಇದು ಚಾಂಪಿಯನ್ ಇಂಡಿಯಾ!

ಪ್ರತಿಯೊಬ್ಬ ಭಾರತೀಯ ಇಂದು ಆನಂದ ಸಾಗರದಲ್ಲಿ ಮುಳುಗಿದ್ದಾನೆ. ಅವನ ಸಂತೋಷ, ಸಂಭ್ರಮಗಳಿಗೆ ಎಣೆಯೇ ಇಲ್ಲ. ಇವತ್ತಿನ ಗೆಲುವು ಸೃಷ್ಟಿಸಿರುವ ಸಡಗರ ಬಹಳ ದಿನಗಳವರೆಗೆ ಮನಸ್ಸಿಗೆ ಮುದ ನೀಡುವ ನೆನಪಾಗಿ ಉಳಿಯಲಿದೆ.

Arun Belly

|

Jan 19, 2021 | 7:49 PM

ಭಾರತ ಐಸಿಸಿ ವಿಶ್ವಕಪ್, ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. ಸೀಮಿತ ಓವರ್ ಪಂದ್ಯಗಳ ಹಲವಾರು ಟೂರ್ನಿಗಳನ್ನು ಗೆದ್ದಿದೆ. ಅನೇಕ ಟೆಸ್ಟ್​ ಮತ್ತು ಸರಣಿಗಳನ್ನು ತವರಿನಲ್ಲಿ ಮತ್ತು ವಿದೇಶಗಳಲ್ಲೂ ಗೆದ್ದಿದೆ.

ಆದರೆ, ಇಂದು ಬ್ರಿಸ್ಬೇನ್​ನಲ್ಲಿ ನಾವೇ ಚಾಂಪಿಯನ್​​ಗಳು, ನಮ್ಮನ್ಯಾರೂ ಸೋಲಿಸಲಾರರು ಅಂತ ಬೀಗುತ್ತಿದ್ದ ಆಸ್ಸೀಗಳ ಧಿಮಾಕನ್ನು ಅವರ ನೆಲದಲ್ಲೇ ಮಣಿಸಿ, ಭಾರತ ಯುವ ತಂಡ ಸಾಧಿಸಿದ ಗೆಲುವಿದೆಯಲ್ಲ… ಅದು ಈ ಎಲ್ಲ ಗೆಲುವುಗಳು ನೀಡಿದ ಸಂತಸ, ತೃಪ್ತಿಗಿಂತ ಹೆಚ್ಚಿನ ರೋಮಾಂಚನವನ್ನು ನೀಡಿದೆ.

ಪ್ರತಿಯೊಬ್ಬ ಭಾರತೀಯ ಇಂದು ಆನಂದ ಸಾಗರದಲ್ಲಿ ಮುಳುಗಿದ್ದಾನೆ. ಅವನ ಸಂತೋಷ, ಸಂಭ್ರಮಗಳಿಗೆ ಎಣೆಯೇ ಇಲ್ಲ. ಇವತ್ತಿನ ಗೆಲುವು ಸೃಷ್ಟಿಸಿರುವ ಸಡಗರ ಬಹಳ ದಿನಗಳವರೆಗೆ ಮನಸ್ಸಿಗೆ ಮುದ ನೀಡುವ ನೆನಪಾಗಿ ಉಳಿಯಲಿದೆ.

ಮೈದಾನದಲ್ಲಿ ಟೀಮ್ ಇಂಡಿಯಾದ ‘ವಿಜಯ ಪಥ’

ಭಾರತೀಯರು ಇವತ್ತು ಅನುಭವಿಸುತ್ತಿರುವ ಸಂತೋಷ ಆಸ್ಟ್ರೇಲಿಯಾವನ್ನು 32 ವರ್ಷಗಳ ನಂತರ ಗಬ್ಬಾ ಮೈದಾನದಲ್ಲಿ ವಿದೇಶದ ಟೀಮೊಂದು ಸೋಲಿಸಿರುವ ಕಾರಣಕ್ಕಾಗಿ ಮಾತ್ರ ಅಲ್ಲ. ಈ ಗೆಲುವು ಹಲವಾರು ಕಾರಣಗಳಿಂದಾಗಿ ವಿಶೇಷವೆನಿಸಿದೆ.

ಅಡಿಲೇಡ್​ನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್​ ಅನ್ನು ಸ್ವಲ್ಪ ನೆನಪಿಸಿಕೊಳ್ಳಿ. ಕೇವಲ 36ರನ್​ಗಳಿಗೆ ಆಲೌಟ್​ ಆಗಿ ಹೀನಾಯ ಸೋಲು ಅನುಭವಿಸಿದ ಟೀಮು ಇದೇನಾ ಅಂತ ಪ್ರಶ್ನಿಸುವ ಸ್ಥಿತಿಯನ್ನು ಅಜಿಂಕ್ಯಾ ರಹಾನೆ ನೇತೃತ್ವದ ಭಾರತದ ಪಡೆ ನಿರ್ಮಾಣ ಮಾಡಿದೆ. ನಂಬಲಸದಳವಾದ ಸ್ಥಿತ್ಯಂತರ!!

ನಮ್ಮೆಲ್ಲರಿಗೆ ಗೊತ್ತಿದೆ, ಮೊದಲ ಟೆಸ್ಟ್​ ನಂತರ ವಿರಾಟ್​ ಕೊಹ್ಲಿ ಪಿತೃತ್ವದ ರಜೆ ಮೇಲೆ ಸ್ವದೇಶಕ್ಕೆ ವಾಪಸ್ಸಾದರು. ಅದಾದ ಮೇಲೆ ಮೊಹಮ್ಮದ್ ಶಮಿ, ಉಮೇಶ್ ಯಾದವ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್, ಹನುಮ ವಿಹಾರಿ ಒಬ್ಬರಾದ ನಂತರ ಒಬ್ಬರಂತೆ ಗಾಯಗೊಂಡು ಸರಣಿಯಿಂದ ಹೊರಬಿದ್ದರು. ನೆಟ್ಸ್ ಬೌಲರ್​ಗಳಾಗಿ ತಂಡದೊಂದಿಗೆ ಆಸ್ಟ್ರೇಲಿಯಾಗೆ ಆಗಮಿಸಿದ ಟಿ ನಟರಾಜನ್, ಶಾರ್ದುಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಗಾಯಗೊಂಡ ಆಟಗಾರರರಿಗೆ ಬದಲೀ ಆಟಗಾರರನ್ನಾಗಿ ಟೀಮಿಗೆ ಸೇರಿಸಿಕೊಳ್ಳಲಾಯಿತು.

ಗೆಲುವಿನ ಕ್ಷಣ ಇದೇ!

ಮೆಲ್ಬರ್ನ್ ಪಂದ್ಯದಿಂದ ರಹಾನೆಗೆ ಸಿಕ್ಕ ಟೀಮಿಗಿಂತ ಭಾರತದ ‘ಎ’ ಟೀಮು ಹೆಚ್ಚು ಬಲಶಾಲಿಯಾಗಿತ್ತೇನೋ? ಆದರೆ, ರಹಾನೆ ಮತ್ತು ಅವರ ತಂಡ ಧೃತಿಗೆಡಲಿಲ್ಲ. ಮೆಲ್ಬರ್ನ್ ಟೆಸ್ಟ್​ನಲ್ಲಿ ಶತಕ ಬಾರಿಸಿ ವೈಯಕ್ತಿಕ ಉದಾಹರಣೆಯೊಂದಿಗೆ ಟೀಮನ್ನು ಮುನ್ನಡೆಸಿದ ರಹಾನೆ ಆ ಪಂದ್ಯವನ್ನು ಗೆದ್ದು ಸರಣಿ ಸಮ ಮಾಡಿಕೊಂಡರಲ್ಲದೆ, ನೆಲಕ್ಕಚ್ಚಿದ್ದ ಭಾರತೀಯರ ಆತ್ಮವಿಶ್ವಾಸ ಮತ್ತು ಮನೋಬಲವನ್ನು ಪುನರುಜ್ಜೀವಗೊಳಿಸಿದರು.

ಭಾರತ ಹಾಗೆ ಎದಿರೇಟು ನೀಡುತ್ತದೆ ಅಂತ ನಿರೀಕ್ಷಿಸಿರದ ಅತಿಥೇಯರು ಅಕ್ಷರಶಃ ಶಾಕ್​ಗೆ ಒಳಗಾದರು. ಅವರನ್ನು ಹಾಗೆಯೇ ಬಿಟ್ಟರೆ ಸರಣಿ ಗೆದ್ದುಕೊಂಡು ಹೋಗುತ್ತಾರೆನ್ನುವ ಭೀತಿಗೊಳಗಾಗಿ ಭಾರತೀಯರೊಂದಿಗೆ ಕ್ರಿಕೆಟೇತರ ಆಟಗಳನ್ನಾಡಲಾರಂಭಿಸಿದರು. ವಿದೇಶಿ ಟೀಮು ಯಾವುದೇ ಆಗಿರಲಿ, ಅದನ್ನು ಸರಣಿಗೆ ಮುಂಚೆ ಮತ್ತು ಆಟ ನಡೆಯುವಾಗ ಮೈಂಡ್​ಗೇಮ್​ಗಳ ಮೂಲಕ ಧೃತಿಗೆಡಿಸುವುದು ಆಸ್ಸೀಗಳಲ್ಲಿ ರಕ್ತಗತವಾಗಿ ಬಂದಿರುವ ಗುಣ. ಸ್ಲೆಡ್ಜಿಂಗ್ ಮಾಡುತ್ತಾ, ಅಣಕಿಸುತ್ತಾ ಎದುರಾಳಿ ತಂಡದ ಆಟಗಾರರ ಏಕಾಗ್ರತೆ ಕಳೆದುಕೊಳ್ಳುವಂತೆ ಮಾಡುವುದು ಅವರ ಜಾಯಮಾನ.

ಸಿಡ್ನಿಯಲ್ಲಿ ಆಸ್ಸೀ ಆಟಗಾರರು ಟೀಮ್ ಇಂಡಿಯಾದ ಸದಸ್ಯರನ್ನು ಮೂದಲಿಸಲು ಶುರುಮಾಡಿದರು. ಟೀಮಿನ ನಾಯಕನಾಗಿ ಆಂಥದೆಲ್ಲ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದ ಆಸ್ಟ್ರೇಲಿಯಾದ ನಾಯಕ ಟಿಮ್ ಫೈನ್ ಖುದ್ದು ತಾವೇ ಸಿಡ್ನಿ ಟೆಸ್ಟ್​ನಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ಹನುಮ ವಿಹಾರಿಯನ್ನು ಮೂದಲಿಸುತ್ತಾ ಅವರ ಏಕಾಗ್ರತೆಗೆ ಭಂಗ ತರುವ ಪ್ರಯತ್ನ ಮಾಡಿದರು. ಭಾರತೀಯ ಆಟಗಾರರು ಅದನ್ನು ಡಿಪ್ಲೊಮ್ಯಾಟಿಕ್ ಆಗಿ ನಿಭಾಯಿದರು. ನಂತರ ಆಸ್ಟ್ರೇಲಿಯಾದ ಹಲವಾರು ಮಾಜಿ ಆಟಗಾರರು ಪೈನ್ ವರ್ತನೆಯನ್ನು ಖಂಡಿಸಿ, ಅವರನ್ನು ಅಸಭ್ಯ ಎಂದು ಜರಿದರು.

ಗೆಲುವಿನ ರೂವಾರಿಗೆ ಜೊತೆ ಆಟಗಾರರಿಂದ ಅಭಿನಂದನೆ

ಆಮೇಲೆ ಶುರುವಾಗಿದ್ದು ಕ್ವೀನ್ಸ್​ಲೆಂಡ್ ಸರ್ಕಾರದ ಉಪಟಳ. ಭಾರತೀಯರು ಹಾರ್ಡ್ ಕ್ವಾರಂಟೈನ್ ನಿಯಮಕ್ಕೆ ಒಳಪಡಲು ನಿರಾಕರಿಸಿದರೆ ಬ್ರಿಸ್ಬೇನ್​ಗೆ ಬರುವುದೇ ಬೇಡ ಎಂದು ಅಲ್ಲಿನ ಆರೋಗ್ಯ ಮಂತ್ರಿ ಮತ್ತು ಸ್ಥಳೀಯ ಆಡಳಿತದ ಅಧಿಕಾರಿಗಳು ಹೇಳಿದರು. ಇದು ಸಹ ಭಾರತೀಯ ಆಟಗಾರರ ಮೇಲೆ ಒತ್ತಡ ಹೇರುವ ತಂತ್ರವಾಗಿತ್ತು. ಆದರೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯು (ಬಿಸಿಸಿಐ) ಕ್ರಿಕೆಟ್ ಅಸ್ಟ್ರೇಲಿಯಾಗೆ (ಸಿಎ) ಒಂದು ಕಾಗದವನ್ನು ಖಾರವಾಗಿ ಬರೆದು ಮತ್ತೊಮ್ಮೆ ಕ್ವಾರಂಟೈನ್​ಗೆ ಒಳಪಡಿಸುವುದಾದರೆ ಮೂರು ಟೆಸ್ಟ್​ಗಳಿಗೆ ಸರಣಿಯನ್ನು ಮಕ್ತಾಯಗೊಳಿಸುವುದಾಗಿ ಹೇಳಿ ತನ್ನ ನಿಲುವನ್ನು ಸ್ಪಷ್ಟಪಡಿಸಿತು. ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬಿಸಿಸಿಐಗಿರುವ ವರ್ಚಸ್ಸಿನ ಬಗ್ಗೆ ಅರಿವಿರುವ ಸಿಎ, ಕ್ವೀನ್ಸ್​ಲೆಂಡ್ ಸರ್ಕಾರದೊಂದಿಗೆ ಮಾತಾಡಿ ಟೆಸ್ಟ್ ನಡೆಯುವಂತೆ ನೋಡಿಕೊಂಡಿತು.

ಏತನ್ಮಧ್ಯೆ, ಆಸ್ಟ್ರೇಲಿಯಾದ ಕೆಲ ಅನಾಗರಿಕ ಜನ ಸಿಡ್ನಿ ಟೆಸ್ಟ್​ನಲ್ಲಿ​ ಭಾರತೀಯರ ಅಟಗಾರರ ವಿರುದ್ಧ ಜನಾಂಗೀಯ ನಿಂದನೆ ಶುರು ಮಾಡಿದರು. ಇಂಥ ವರ್ತನೆಯನ್ನು ಯಾವುದೇ ನಾಗರಿಕ ಸಮಾಜ ಸಹಿಸುವುದಿಲ್ಲ. ಟೀಮ್ ಇಂಡಿಯಾದ ಸದಸ್ಯರು ಅಂಪೈರ್​ ಮತ್ತು ಐಸಿಸಿ ಮ್ಯಾಚ್ ರೆಫರಿಗೆ ದೂರು ಸಲ್ಲಿದ ನಂತರ ಅನಕ್ಷರಸ್ಥರಂತೆ ವರ್ತಿಸುತ್ತಿದ್ದವರನ್ನು ಮೈದಾನದಿಂದ ಹೊರದೊಬ್ಬಲಾಯಿತು.

ದುರದೃಷ್ಟದ ಸಂಗತಿಯೆಂದರೆ, ಬ್ರಿಸ್ಬೇನ್​ನಲ್ಲೂ ಕೆಲ ಕಿಡಿಗೇಡಿಗಳು ಮೊಹಮ್ಮದ್ ಸಿರಾಜ್​ರನ್ನು ‘ಕ್ರಿಮಿ,’  ‘ಕಂದು ನಾಯಿ’ ಅಂತೆಲ್ಲ ನಿಂದಿಸಿದರು. ಆಗಲೂ ದೂರು ಸಲ್ಲಿಸದ ನಂತರ ಅವರ ಉಪಟಳ ನಿಂತಿತು.

ಇದನ್ನೆಲ್ಲ ಯಾಕೆ ಹೇಳಬೇಕಾಗಿದೆಯೆಂದರೆ ಅಷ್ಟೆಲ್ಲ ವೈರುಧ್ಯ, ಮಾನಸಿಕ ಯಾತನೆ, ಕಿರುಕುಳ ಹೊರತಾಗಿಯೂ ಟೀಮ್ ಇಂಡಿಯಾ ಆಸ್ಸೀಗಳನ್ನು ಅವರ ನೆಲದಲ್ಲೇ ಸತತ ಎರಡನೇ ಬಾರಿ ಮಣಿಸಿ ದಿಗ್ವಿಜಯ ಸಾಧಿಸಿದೆ. ಭಾರತದ ಹಲವಾರು ಪ್ರದೇಶಗಳಲ್ಲಿ ಸಿಹಿ ಹಂಚಿ ಮನೆಗಳಲ್ಲಿ, ಬೀದಿಗಳಲ್ಲಿ ಸಂಭ್ರಮ ಆಚರಿಸಲಾಗುತ್ತಿದೆ.

ಎಲ್ಲ ಭಾರತೀಯರಿಗೆ ಇಂಥ ರೋಮಾಂಚಕ ಕ್ಷಣಗಳನ್ನು ನೀಡಿದ ತಂಡದ ಪ್ರತಿಯೊಬ್ಬ ಸದಸ್ಯ, ಸಪೋರ್ಟ್ ಸ್ಟಾಫ್, ಮೆಡಿಕಲ್ ಸ್ಟಾಫ್ ಅಭಿನಂದನೆಗಳಿಗೆ ಅರ್ಹರು. ಇದು ನಿಜಕ್ಕೂ ಒಂದು ಹೊಸ ಭಾರತ!

India vs Australia Test Series | 5 ವಿಕೆಟ್​ ಪಡೆದ ಸಿರಾಜ್​ ಅಪರೂಪದ ಸಾಧನೆಗೆ ಅಪ್ಪನ ನೆನಪೇ ಆಸರೆ

Follow us on

Related Stories

Most Read Stories

Click on your DTH Provider to Add TV9 Kannada