ಇಂದು ಭಾರತ – ಇಂಗ್ಲೆಂಡ್ ನಡುವಿನ ಮೊದಲ ಟಿ20 ಕ್ರಿಕೆಟ್ ಸಮರ, ಪಂದ್ಯ ಲೈವ್ ವೀಕ್ಷಣೆ ಎಲ್ಲಿ ಮತ್ತು ಹೇಗೆ? ಇಲ್ಲಿದೆ ವಿವರ
ಇಂದಿನಿಂದ ಅಹಮದಾಬಾದಿನ ಮೊಟೆರಾ ಮೈದಾನದಲ್ಲಿ ಆರಂಭವಾಗಲಿರುವ ಎಲ್ಲ 5 ಪಂದ್ಯಗಳನ್ನು ಸ್ಟಾರ್ ನೆಟ್ವರ್ಕ್ ಪ್ರಸಾರ ಮಾಡಲಿದ್ದು, ಆನ್ಲೈನ್ನಲ್ಲಿ ವೀಕ್ಷಿಸುವವರು ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಆ್ಯಪ್ ಡೌನ್ಲೋಡ್ ಮಾಡಕೊಂಡು ಕ್ರಿಕೆಟ್ ನೋಡಬಹುದಾಗಿದೆ.
ಅಹಮದಾಬಾದ್: ಇಂದಿನಿಂದ (ಮಾರ್ಚ್ 12) ಟಿ20 ಕ್ರಿಕೆಟ್ ರಸದೌತಣ ಶುರುವಾಗಲಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ 5-ಪಂದ್ಯಗಳ ಟಿ20 ಸರಣಿ ಅಹಮದಾಬಾದಿನ ಮೊಟೆರಾ ಮೈದಾನದಲ್ಲಿ ಆರಂಭವಾಗಲಿದ್ದು ಎಲ್ಲ 5 ಪಂದ್ಯಗಳು ಇದೇ ಮೈದಾನದಲ್ಲಿ ನಡೆಯಲಿರುವುದು ವಿಶೇಷ. ಪ್ರವಾಸಿ ತಂಡವನ್ನು ಟೆಸ್ಟ್ ಸರಣಿಯಲ್ಲಿ 3-1ಅಂತರದಿಂದ ಸುಲಭವಾಗಿ ಸೋಲಿಸಿರುವ ವಿರಾಟ್ ಕೊಹ್ಲಿ ಪಡೆಯ ಆತ್ಮವಿಶ್ವಾಸ ಮುಗಿಲೆತ್ತರದಲ್ಲಿದೆ. ಅದೇ ವಿಶ್ವಾಸದೊಂದಿಗೆ ಸೀಮಿತ ಓವರ್ಗಳ ಸರಣಿಗಳನ್ನಾಡಲು ಸನ್ನದ್ಧವಾಗಿದೆ. ಚುಟುಕು ಆವೃತ್ತಿಗೆ ಸ್ಪೆಷಲಿಸ್ಟ್ಗಳಾಗಿರುವ ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಲ್, ಶಿಖರ್ ಧವನ್ ಅವರು ತಂಡದಲ್ಲಿ ಇರಲಿದ್ದು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಸಿದ್ಧರಾಗಿದ್ದಾರೆ. ಫಾರ್ಮಾಟ್ ಬದಲಾದರೂ ತನ್ನ ತಂಡದ ಮಿಷನ್ ಬದಲಾಗಿಲ್ಲ ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ನಲ್ಲಿ ಅವರು, ‘ಹೊಸ ವಾರ, ಹೊಸ ಫಾರ್ಮಾಟ್ ಆದರೆ ಮಿಷನ್ ಅದೇ, ಅದನ್ನು ಸಾಧಿಸೋಣ’ ಎಂದು ಹೇಳಿದ್ದಾರೆ.
ಇಂಗ್ಲೆಂಡ್ ತಂಡವನ್ನು ಸೋಲಿಸಿದ ನಂತರ ಭಾರತ ಜೂನ್ನಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೂ ಅರ್ಹತೆ ಗಿಟ್ಟಿಸಿದ್ದ್ದು ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡವನ್ನು ಅದು ಬ್ರಿಟನ್ನಿನ ಸೌಥಾಂಪ್ಟನ್ನಲ್ಲಿ ಎದುರಿಸಲಿದೆ. ಟಿ20 ಸರಣಿಗೆ ಕೆಲ ಹೊಸಮುಖಗಳನ್ನು ಆಯ್ಕೆ ಮಾಡಲಾಗಿದೆ. ಸೂರ್ಯಕುಮಾರ್ ಯಾದವ್, ರಾಹುಲ ತೆವಾಟಿಯಾ ಮತ್ತು ಇಶಾನ್ ಕಿಷನ್ ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ತೋರಿದ ಉತ್ಕೃಷ್ಟ ಪ್ರದರ್ಶನಗಳಿಂದ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ.
ಟಿ20 ಸರಣಿಗೆ ಭಾರತದ ಟೀಮ್ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ (ಉಪ-ನಾಯಕ), ಕೆ.ಎಲ್ ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್. ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್-ಕೀಪರ್), ಇಶಾನ್ ಕಿಷನ್, ಯುಜ್ವೇಂದ್ರ ಚಹಲ್, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ಟಿ.ನಟರಾಜನ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ನವದೀಪ್ ಸೈನಿ ಮತ್ತು ಶಾರ್ದುಲ್ ಠಾಕೂರ್
ಕ್ರಿಕೆಟ್ ಪಂದ್ಯಾವಳಿಯನ್ನು ಎಲ್ಲಿ ವೀಕ್ಷಿಸಬಹುದು? ಇಂದಿನಿಂದ ಅಹಮದಾಬಾದಿನ ಮೊಟೆರಾ ಮೈದಾನದಲ್ಲಿ ಆರಂಭವಾಗಲಿರುವ ಎಲ್ಲ 5 ಪಂದ್ಯಗಳನ್ನು ಸ್ಟಾರ್ ನೆಟ್ವರ್ಕ್ ಪ್ರಸಾರ ಮಾಡಲಿದ್ದು, ಆನ್ಲೈನ್ನಲ್ಲಿ ವೀಕ್ಷಿಸುವವರು ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಕ್ರಿಕೆಟ್ ನೋಡಬಹುದಾಗಿದೆ.
ಇದನ್ನೂ ಓದಿ: ಮತ್ತೊಂದು ಟಿವಿ ಶೋ ನಿರೂಪಣೆ ಒಪ್ಪಿಕೊಂಡ್ರಾ ಕಿಚ್ಚ ಸುದೀಪ್? ಇದು ಬಿಗ್ ಬಾಸ್ಗಿಂತ ಡಿಫರೆಂಟ್!
ಹೊಸ ವಾರ, ಹೊಸ ಫಾರ್ಮಟ್ ಆದರೆ ಮಿಷನ್ ಅದೇ ಎಂದ ವಿರಾಟ್ ಕೊಹ್ಲಿ
Published On - 11:32 am, Fri, 12 March 21