ಅಹಮದಾಬಾದ್: ಟೆಸ್ಟ್ ಸರಣಿಯಲ್ಲಿ ಆಂಗ್ಲರನ್ನ ಬಗ್ಗುಬಡಿದಿರುವ ಟೀಂ ಇಂಡಿಯಾ, ಇದೀಗ T20ಯಲ್ಲೂ ಆಂಗ್ಲರ ಹುಟ್ಟಡಗಿಸೋಕೆ ಸಜ್ಜಾಗಿದೆ. ಇಂಗ್ಲೆಂಡ್ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯನ್ನ ವಶಪಡಿಸಿಕೊಂಡಿರೋ ಕೊಹ್ಲಿ ಪಡೆ, ಇದೀಗ ಚುಟುಕು ಕ್ರಿಕೆಟ್ನಲ್ಲೂ ಆಂಗ್ಲರ ವಿರುದ್ಧ ಅಬ್ಬರಿಸೋಕೆ ಮುಂದಾಗಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಸಂಜೆ 7 ಗಂಟೆಗೆ ಮೊದಲ T20 ಪಂದ್ಯ ನಡೆಯಲಿದ್ದು, ಮಾರ್ಗನ್ ಪಡೆಗೆ ಸೋಲಿನ ಮಾರ್ಮಘಾತ ನೀಡೋದಕ್ಕೆ ಬ್ಲೂ ಬಾಯ್ಸ್ ಭಾರಿ ಆತ್ಮವಿಶ್ವಾಸದೊಂದಿಗೆ ತೊಡೆ ತಟ್ಟಿ ನಿಂತಿದ್ದಾರೆ.
ಮಾರ್ಗನ್ ಪಡೆ ನಂಬರ್ 1ಸ್ಥಾನದಲ್ಲಿದೆ..
ಇಂಗ್ಲೆಂಡ್ ಟೆಸ್ಟ್ ಸರಣಿಯನ್ನ ಸೋತಿರಬಹುದು. ಆದ್ರೆ, T20 ಱಂಕಿಂಗ್ನಲ್ಲಿ ಮಾರ್ಗನ್ ಪಡೆ ನಂಬರ್ 1ಸ್ಥಾನದಲ್ಲಿದೆ. ಇತ್ತ ಟೀಂ ಇಂಡಿಯಾ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಎರಡೂ ತಂಡಗಳು ಅಗ್ರಸ್ಥಾನ ಭದ್ರಪಡಿಸಿಕೊಳ್ಳಲು ಎದುರು ನೋಡ್ತಿವೆ. ಎರಡು ತಂಡಗಳಲ್ಲೂ T20 ಕ್ರಿಕೆಟ್ನ ಸ್ಪೆಷಲಿಸ್ಟ್ಗಳೇ ಇರೋದ್ರಿಂದ ಅಭಿಮಾನಿಗಳಿಗೆ ಭರ್ಜರಿ ರಸದೌತಣ ಸಿಗುವುದಂತೂ ಪಕ್ಕಾ.
ಎಲ್ಲರೂ ಅದ್ಭುತ ಪ್ರದರ್ಶನವನ್ನೇ ನೀಡ್ತಿದ್ದಾರೆ..
ಟೀಂ ಇಂಡಿಯಾ ಕೂಡ ಬಲಿಷ್ಠ ತಂಡ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ, ಟೀಂ ಮ್ಯಾನೇಜ್ಮೆಂಟ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾರನ್ನ ಆಡಿಸಬೇಕು? ಯಾರನ್ನ ಕೈಬಿಡಬೇಕು ಅನ್ನೋದೇ ದೊಡ್ಡ ತಲೆನೋವಾಗಿದೆ. ಯಾಕಂದ್ರೆ ಟೀಂ ಇಂಡಿಯಾದಲ್ಲಿ 19ಆಟಗಾರರಿದ್ದು, ಎಲ್ಲರೂ ಅದ್ಭುತ ಪ್ರದರ್ಶನವನ್ನೇ ನೀಡ್ತಿದ್ದಾರೆ. ಹೀಗಾಗಿ ಆಡುವ ಹನ್ನೊಂದರಲ್ಲಿ ಯಾರನ್ನ ಕಣಕ್ಕಿಳಸಬೇಕೆಂಬುದೇ ಟೀಂ ಮ್ಯಾನೇಜ್ಮೆಂಟ್ ಅನ್ನು ಚಿಂತೆಗೀಡು ಮಾಡಿದೆ.
ಆಸಿಸ್ ವಿರುದ್ಧದ T20 ಸರಣಿಯಲ್ಲಿ ರಿಷಬ್ ಪಂತ್ ತಂಡದಿಂದ ಹೊರಗುಳಿದಿದ್ರು. ಈ ವೇಳೆ ಕೆ.ಎಲ್.ರಾಹುಲ್, ವಿಕೆಟ್ ಕೀಪರ್ ಜೊತೆ ಬ್ಯಾಟ್ಸ್ಮನ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ರು. ಆದ್ರೀಗ ಪಂತ್, ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯೋ ಸಾಧ್ಯತೆ ಹೆಚ್ಚಿದ್ದು, ಯಾರು ಬೆಂಚ್ ಕಾಯ್ತಾರೆ ಅನ್ನೋ ಕುತೂಹಲ ಮೂಡಿದೆ.
ರಾಹುಲ್ ಯಾವ ಸ್ಥಾನದಲ್ಲಿ ಬ್ಯಾಟಿಂಗ್ ಮಾಡ್ಬೇಕು..
ಒಂದು ವೇಳೆ ಪಂತ್ ತಂಡದಲ್ಲಿ ಸ್ಥಾನ ಪಡೆದ್ರೆ, ರಾಹುಲ್ ಯಾವ ಸ್ಥಾನದಲ್ಲಿ ಬ್ಯಾಟಿಂಗ್ ಮಾಡ್ಬೇಕು ಅನ್ನೋ ಪ್ರಶ್ನೆಯೂ ಉದ್ಭವಿಸಿದೆ. 4ನೇ ಕ್ರಮಾಂಕದಲ್ಲಿ ರಾಹುಲ್ ಕಣಕ್ಕಿಳಿದ್ರೆ, ಶ್ರೇಯಸ್ ಐಯ್ಯರ್ ತಮ್ಮ ಸ್ಥಾನವನ್ನ ಬಿಟ್ಟುಕೊಡಬೇಕಾಗುತ್ತೆ. ಅಲ್ಲದೇ, ಆಲ್ರೌಂಡರ್ ಕೋಟಾದದಲ್ಲಿ ಅಕ್ಷರ್ ಪಟೇಲ್ ತಂಡದಲ್ಲಿ ಸ್ಥಾನಪಡೆಯಲಿದ್ದು, ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯಾರನ್ನ ಕೂಡಿಸಬೇಕಾ ಅನ್ನೋ ಪ್ರಶ್ನೆ ಟೀಂ ಮ್ಯಾನೇಜ್ಮೆಂಟ್ಗೆ ಕಾಡ್ತಿದೆ.
ಒಟ್ನಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನ ಬಗ್ಗುಬಡಿಯೊ ವಿಶ್ವಾಸದೊಂದಿಗೆ ಕಣಕ್ಕಿಳಿಯೋಕೆ ಸಜ್ಜಾಗಿದೆ. ಆದ್ರೆ, ಆಡುವ ಬಳಗದ ಅಂತಿಮ ಆಯ್ಕೆ ಟೀಂ ಇಂಡಿಯಾಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಭಾರತ-ಇಂಗ್ಲೆಂಡ್ ಟಿ20 ಸರಣಿ ತಂಡಗಳು..
ಭಾರತ ತಂಡ: ವಿರಾಟ್ ಕೊಹ್ಲಿ (ಕ್ಯಾಪ್ಟನ್), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್. ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್, ರಿಷಭ್ ಪಂತ್, ಇಶಾನ್ ಕಿಶನ್, ಯುಜ್ವೇಂದ್ರ ಚಾಹಲ್, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್, ರಾಹುಲ್ ತಿವಾಟಿಯಾ, ಟಿ ನಟರಾಜನ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ನವದೀಪ್ ಸೈನಿ, ಶಾರ್ದುಲ್ ಠಾಕೂರ್.
ಇಂಗ್ಲೆಂಡ್ ತಂಡ: ಇಯೊನ್ ಮೋರ್ಗಾನ್ (ನಾಯಕ), ಮೊಯೀನ್ ಅಲಿ, ಜೋಫ್ರಾ ಆರ್ಚರ್, ಜೊನಾಥನ್ ಬೈರ್‌ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಸ್ಯಾಮ್ ಕರ್ರನ್, ಟಾಮ್ ಕುರ್ರನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಆದಿಲ್ ರಶೀದ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಮಾರ್ಕ್ ವುಡ್.
5 ಪಂದ್ಯಗಳ T20 ಸರಣಿಯ ವೇಳಾಪಟ್ಟಿ ಹೀಗಿದೆ..
ಪಂದ್ಯ | ದಿನಾಂಕ | ಸಮಯ | ಟಾಸ್ ಸಮಯ | ಕ್ರೀಡಾಂಗಣ | ಸ್ಥಳ |
ಮೊದಲನೇ ಟಿ20 ಪಂದ್ಯ | 12-ಮಾರ್ಚ್ | 7:00 PM | 6:30 PM | ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣ | ಅಹಮದಾಬಾದ್ |
ಎರಡನೇ ಟಿ20 ಪಂದ್ಯ | 14-ಮಾರ್ಚ್ | 7:00 PM | 6:30 PM | ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣ | ಅಹಮದಾಬಾದ್ |
ಮೂರನೇ ಟಿ 20 ಪಂದ್ಯ | 16-ಮಾರ್ಚ್ | 7:00 PM | 6:30 PM | ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣ | ಅಹಮದಾಬಾದ್ |
ನಾಲ್ಕನೇ ಟಿ 20 ಪಂದ್ಯ | 18-ಮಾರ್ಚ್ | 7:00 PM | 6:30 PM | ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣ | ಅಹಮದಾಬಾದ್ |
ಐದನೇ ಟಿ20 ಪಂದ್ಯ | 20-ಮಾರ್ಚ್ | 7:00 PM | 6:30 PM | ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣ | ಅಹಮದಾಬಾದ್ |
Published On - 2:37 pm, Fri, 12 March 21