ಅಡಿಲೇಡ್ ಮೈದಾನದಲ್ಲಿಂದು ಭಾರತದ ಫೀಲ್ಡರ್ಗಳು ಅಸ್ಟ್ರೇಲಿಯ ಆಟಗಾರರಿಗೆ ತೋರಿಸಿದ ಔದಾರ್ಯವನ್ನು ಭಾರತದ ಮಾಜಿ ಆರಂಭ ಆಟಗಾರ ಸುನಿಲ್ ಗಾವಸ್ಕರ್ ತೀವ್ರವಾಗಿ ಟೀಕಿಸಿದ್ದಾರೆ. ಭಾರತೀಯರ ಫೀಲ್ಡಂಗ್ ಕ್ವಾಲಿಟಿ ಬಗ್ಗೆ ಪದೇಪದೆ ಪ್ರಶ್ನೆಗಳೇಳುತ್ತಿವೆ, ಆದರೆ ಸುಧಾರಣೆ ಮಾತ್ರ ಕಂಡುಬರುತ್ತಿಲ್ಲ.
ಅಸ್ಟ್ರೇಲಿಯಾದ ಮೂರನೇ ಕ್ರಮಾಂಕದ ಆಟಗಾರ ಮಾರ್ನಸ್ ಲಬುಶೇನ್ ಇವತ್ತು ಉಪಯುಕ್ತ 47 ರನ್ ಬಾರಿಸಿ ಔಟಾಗುವ ಮೊದಲು ಎರಡು ಬಾರಿ ಜೀವದಾನ ಪಡೆದರು. ಅವರ ವೈಯಕ್ಕಿಕ ಸ್ಕೋರ್ 12 ಆಗಿದ್ದಾಗ ಫೈನ್ಲೆಗ್ನಲ್ಲಿದ್ದ ಜಸ್ಪ್ರೀತ್ ಬುಮ್ರಾ ಒಂದು ಸುಲಭವಾದ ಕ್ಯಾಚ್ ಕೈಚೆಲ್ಲಿದ್ದರು. ಬೌಲರ್ ಮೊಹಮ್ಮದ್ ಶಮಿ ಮುಖ ಸಪ್ಪೆ ಮಾಡಿಕೊಂಡರು.
ಅದಾದ ಮೇಲೆ ಲಬುಶೇನ್ 21 ರನ್ ಗಳಿಸಿ ಆಡುತ್ತಿದ್ದಾಗ ಪೃಥ್ವಿ ಶಾ ಅವರಿಂದ ಜೀವದಾನ ಪಡೆದರು. ಇದು ಕ್ಯಾಚ್ ಬುಮ್ರಾ ಬಿಟ್ಟಿದ್ದಕ್ಕಿಂತ ಸುಲಭವಾಗಿತ್ತು. ಕ್ಯಾಚ್ ಹಿಡಿಯಲು ಗಂಭೀರ ಪ್ರಯತ್ನ ಮಾಡದ ಟೀಮ್ ಇಂಡಿಯಾದ ಆಟಗಾರರನ್ನು ಗಾವಸ್ಕರ್ ತರಾಟೆಗೆ ತೆಗೆದುಕೊಂಡಿದ್ದಾರೆ.
‘ಇವರೆಲ್ಲ ಕ್ರಿಸ್ಮಸ್ ಮೂಡ್ನಲ್ಲಿರುವಂತಿದೆ. ಒಂದು ವಾರ ಮೊದಲೇ ಹಬ್ಬದ ಗಿಫ್ಟ್ಗಳನ್ನು ನೀಡುತ್ತಿದ್ದಾರೆ’ ಎಂದು ಗಾವಸ್ಕರ್ ಕ್ರಿಕೆಟ್ ಜಾಲತಾಣದ ಪ್ರತಿನಿಧಿಯೊಬ್ಬರ ಜೊತೆಗೆ ಮಾತನಾಡುವಾಗ ಹೇಳಿದ್ದರು.
ಶಾ ಅವರ ಕಳಪೆ ಫೀಲ್ಡಿಂಗ್ ನೆಟ್ಟಿಗರಿಂದಲೂ ಭಯಾನಕವಾಗಿ ಟ್ರೋಲ್ ಆಗುತ್ತಿದೆ. ಮಿಹಿರ್ ಝಾ ಎನ್ನುವವರು, ಶಾಗೆ ಕ್ಯಾಚ್ಗಳನ್ನು ಹಿಡಿಯುವುದೂ ಸಾಧ್ಯವಾಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದರೆ, ರೋಹನ್ ಛಾಬ್ರಾ ಹೆಸರಿನ ವ್ಯಕ್ತಿ, ಶಾ ಕ್ಯಾಚ್ ಹಿಡಿಯಲು ಮಾಡಿದ ಪ್ರಯತ್ನ ಪಾರ್ಕ್ನಲ್ಲಿ ಆಟವಾಡಿದಂತಿತ್ತು ಎಂದಿದ್ದಾರೆ.