Chess Olympiad: ಚೆಸ್ ಒಲಿಂಪಿಯಾಡ್ನಲ್ಲಿ ಭಾರತ ಶುಭಾರಂಭ
44th Chess Olympiad: ಅಗ್ರ ಶ್ರೇಯಾಂಕದ ಭಾರತೀಯ ಮಹಿಳಾ ಎ ತಂಡ ತಜಕಿಸ್ತಾನವನ್ನು ಸೋಲಿಸಿದರೆ, ಬಿ ತಂಡವು ವೇಲ್ಸ್ ವಿರುದ್ಧ ಉತ್ತಮ ಫಲಿತಾಂಶವನ್ನು ಪಡೆಯಿತು.
ಚೆನ್ನೈನ ಮಹಾಬಲೀಪುರಂನಲ್ಲಿ ನಡೆಯುತ್ತಿರುವ 44ನೇ ವಿಶ್ವ ಚೆಸ್ ಒಲಿಂಪಿಯಾಡ್ನ (Chess Olympiad) ಮೊದಲ ದಿನವೇ ಭಾರತ ಶುಭಾರಂಭ ಮಾಡಿದೆ. ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗಗಳಲ್ಲಿ ಭಾರತೀಯ ತಂಡಗಳು ಸುಲಭ ಗೆಲುವುಗಳೊಂದಿಗೆ ತಮ್ಮ ಅಭಿಯಾನ ಆರಂಭಿಸಿತು. ಓಪನ್‌ನಲ್ಲಿ ಮೂರು ಮತ್ತು ಮಹಿಳಾ ಸ್ಪರ್ಧೆಯಲ್ಲಿ ಮೂರು ಗೆಲುವಿನೊಂದಿಗೆ ಭಾರತ ತಂಡವು ಉತ್ತಮ ಆರಂಭ ಪಡೆದುಕೊಂಡಿದೆ.
ಅಗ್ರ ಶ್ರೇಯಾಂಕದ ಭಾರತೀಯ ಮಹಿಳಾ ಎ ತಂಡ ತಜಕಿಸ್ತಾನವನ್ನು ಸೋಲಿಸಿದರೆ, ಬಿ ತಂಡವು ವೇಲ್ಸ್ ವಿರುದ್ಧ ಉತ್ತಮ ಫಲಿತಾಂಶವನ್ನು ಪಡೆಯಿತು. ಇನ್ನು ಭಾರತನ ಸ್ಟಾರ್ ಆಟಗಾರ್ತಿ ಕೊನೆರು ಹಂಪಿ ಅಗ್ರ ಬೋರ್ಡ್‌ನಲ್ಲಿ ಆಡುತ್ತಿದ್ದಾರೆ. ಹಾಗೆಯೇ ಆರ್ ವೈಶಾಲಿ, ತಾನಿಯಾ ಸಚ್‌ದೇವ ಮತ್ತು ಭಕ್ತಿ ಕುಲಕರ್ಣಿ ವಿಜಯವನ್ನು ಖಚಿತಪಡಿಸಿದ್ದಾರೆ.
ಕೊನೆರು ಹಂಪಿ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಮಹಿಳಾ ಆಟಗಾರ್ತಿಯಾಗಿದ್ದು, ಅತ್ಯುತ್ತಮ 41 ನಡೆಗಳಲ್ಲಿ ನೆಡೆಜಾ ಆಂಟೊನೊವಾ ಅವರನ್ನು ಹಿಂದಿಕ್ಕಿದ್ದಾರೆ. ಭಾರತ ಸಿ ತಂಡ ಕೂಡ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದು, ಹಾಂಕಾಂಗ್ ತಂಡವನ್ನು 4-0 ಅಂತರದಿಂದ ಮಣಿಸಿದೆ.
ಓಪನ್ ಈವೆಂಟ್‌ನಲ್ಲಿ ಅಗ್ರ ಶ್ರೇಯಾಂಕದ ಯುಎಸ್ ತಂಡವು 93 ನೇ ಶ್ರೇಯಾಂಕದ ಅಂಗೋಲಾ ವಿರುದ್ಧ ಅರ್ಧ ಅಂಕವನ್ನು ಕಳೆದುಕೊಂಡಿದ್ದು ಅಚ್ಚರಿ ಮೂಡಿಸಿತ್ತು. ಇಂಟರ್ನ್ಯಾಷನಲ್ ಮಾಸ್ಟರ್ ಡೇವಿಡ್ ಸಿಲ್ವಾ ಅವರು ಲೆವೊನ್ ಅರೋನಿಯನ್ ಅವರೊಂದಿಗೆ ಡ್ರಾ ಮಾಡಿಕೊಂಡರು. ಹಾಗೆಯೇ ಎರಡನೇ ಶ್ರೇಯಾಂಕದ ಉಕ್ರೇನ್ ದಕ್ಷಿಣ ಆಫ್ರಿಕಾವನ್ನು 4-0 ಮತ್ತು ಮೂರನೇ ಶ್ರೇಯಾಂಕದ ಜಾರ್ಜಿಯಾ 4-0 ರಲ್ಲಿ ಇರಾಕ್ ಅನ್ನು ಸೋಲಿಸಿತು. ಸ್ಟಾರ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಇಲ್ಲದ ನಾರ್ವೆ ತಂಡವು ಲೆಬನಾನ್ ವಿರುದ್ಧ 4-0 ಅಂತರದಲ್ಲಿ ಜಯ ಸಾಧಿಸಿತು.
ಪುರುಷರ ವಿಭಾಗದಲ್ಲಿ ಭಾರತದ ಮೂರು ತಂಡಗಳು ಕ್ರಮವಾಗಿ ಜಿಂಬಾಬ್ವೆ, ಯುಎಇ ಮತ್ತು ದಕ್ಷಿಣ ಸುಡಾನ್ ವಿರುದ್ಧ ಮೊದಲ ಸುತ್ತಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಇದನ್ನೂ ಓದಿ: Chess Olympiad 2022: ಚೆಸ್ ಒಲಿಂಪಿಯಾಡ್ಗೆ ಭಾರತ ಆತಿಥ್ಯ: ಏನಿದರ ವಿಶೇಷತೆ?
ಮೊದಲ ದಿನದ ಚದುರಂಗದಾಟದ ವೇಳೆ ಐದು ಬಾರಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, FIDE ಅಧ್ಯಕ್ಷ ಅರ್ಕಾಡಿ ಡ್ವೊರ್ಕೊವಿಚ್, ಅಖಿಲ ಭಾರತ ಚೆಸ್ ಫೆಡರೇಶನ್ ಅಧ್ಯಕ್ಷಸಂಜಯ್ ಕಪೂರ್ಮತ್ತು ಒಲಿಂಪಿಯಾಡ್ ನಿರ್ದೇಶಕ ಭರತ್ ಸಿಂಗ್ ಚೌಹಾಣ್ ಉಪಸ್ಥಿತರಿದ್ದರು.
Published On - 11:05 am, Sun, 31 July 22