India vs Australia Test Series | ಮತ್ತೊಮ್ಮೆ ಜನಾಂಗೀಯ ನಿಂದನೆಗೊಳಗಾದ ಮೊಹಮ್ಮದ್ ಸಿರಾಜ್

ಕೇವಲ ತನ್ನ ಮೊದಲ ಹೆಸರಿನೊಂದಿಗೆ ಮಾತ್ರ ಗುರುತಿಸಿಕೊಳ್ಳಲು ಇಚ್ಛಿಸುವ ಮಹಿಳೆಯೊಬ್ಬರು ಶುಕ್ರವಾರದಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆ ಕಚೇರಿಗೆ ತೆರಳಿ ಬ್ರಿಸ್ಬೆನ್​ನ ಗಬ್ಬಾ ಮೈದಾನದಲ್ಲಿ ಶುಕ್ರವಾರದಂದು ನಡೆದ ಅಸಭ್ಯ ಘಟನೆಯ ಪ್ರತ್ಯಕ್ಷ ವಿವರವನ್ನು ನೀಡಿದ್ದಾರೆ.

India vs Australia Test Series | ಮತ್ತೊಮ್ಮೆ ಜನಾಂಗೀಯ ನಿಂದನೆಗೊಳಗಾದ ಮೊಹಮ್ಮದ್ ಸಿರಾಜ್
ಫೀಲ್ಡ್ ಅಂಪೈರ್​ಗೆ ದೂರು ಸಲ್ಲಿಸುತ್ತಿರುವ ಸಿರಾಜ್

Updated on: Jan 15, 2021 | 9:25 PM

ಆಸ್ಟ್ರೇಲಿಯಾ ನಿಶ್ಚಿತವಾಗಿಯೂ ಒಂದು ಚಿಕ್ಕ, ಚೊಕ್ಕ, ಸುಸಂಸ್ಕೃತ ಮತ್ತು ಸುಂದರ ರಾಷ್ಟ್ರ. ಆದರೆ ಅಲ್ಲಿನ ಕೆಲ ಜನ ಇನ್ನೂ ಅನಾಗರಿಕರಾಗಿ ಉಳಿದಿರುವುದು ಮಾತ್ರ ಆ ದೇಶದ ದೌರ್ಭಾಗ್ಯ. ಕ್ರಿಕೆಟ್​ ಮೈದಾನಗಳಲ್ಲಿ ಅಸಭ್ಯವಾಗಿ ವರ್ತಿಸುವ, ತಮ್ಮ ದೇಶದಲ್ಲಿ ಆಡಲು ಬಂದಿರುವ ಅತಿಥಿಗಳಿಗೆ ‘ಕಂದು ನಾಯಿ’, ‘ಮಂಗ’, ‘ಕ್ರಿಮಿ’ ಮೊದಲಾದ ಪದಗಳನ್ನು ಉಪಯೋಗಿಸುತ್ತಾ ಜನಾಂಗೀಯ ನಿಂದನೆಯಲ್ಲಿ ತೊಡಗುವವರು ಅನಾಗರಿಕರಲ್ಲದೆ ಮತ್ತೇನು?

ಸಿಡ್ನಿಯಲ್ಲಿ ಜರುಗಿದ್ದು ನಮ್ಮ ಸ್ಮೃತಿಪಟಲಗಳಲ್ಲಿ ಇನ್ನೂ ಹಸಿರಾಗಿರುವಾಗಲೇ ಬ್ರಿಸ್ಬೇನ್ ಗಬ್ಬಾ ಮೈದಾನದಲ್ಲಿ ಭಾರತದ ಇಬ್ಬರು ಆಟಗಾರರನ್ನು ಜನಾಂಗೀಯ ನಿಂದನೆಗೊಳಪಡಿದ ಹೇವರಿಕೆ ಹುಟ್ಟಿಸುವ ಘಟನೆ ಮರುಕಳಿಸಿದೆ. ಈ ಸಂಗತಿ ಭಾರತೀಯರ ಗಮನಕ್ಕೆ ಬರುವ ಮೊದಲೇ ಆಸ್ಟ್ರೇಲಿಯಾದ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆ ವರದಿಯೊಂದನ್ನು ಪ್ರಕಟಿಸಿದೆ.

ಕೇವಲ ತನ್ನ ಮೊದಲ ಹೆಸರಿನೊಂದಿಗೆ ಮಾತ್ರ ಗುರುತಿಸಿಕೊಳ್ಳಲಿಚ್ಛಿಸಿರುವ ಮಹಿಳೆಯೊಬ್ಬರು ಶುಕ್ರವಾರದಂದು ಪತ್ರಿಕೆಯ ಕಚೇರಿಗೆ ತೆರಳಿ ಬ್ರಿಸ್ಬೆನ್​ನ ಗಬ್ಬಾ ಮೈದಾನದಲ್ಲಿ ಇಂದು ನಡೆದ ಅಸಭ್ಯ ಘಟನೆಯ ಪ್ರತ್ಯಕ್ಷ ವಿವರವನ್ನು ನೀಡಿದ್ದಾರೆ. ಆಕೆ ಹೇಳಿರುವಂತೆ, ಗಬ್ಬಾ ಮೈದಾನದ ಸೆಕ್ಷನ್ 215 ಮತ್ತು 216ನಲ್ಲಿದ್ದ ಪ್ರೇಕ್ಷಕರ ಗುಂಪೊಂದು ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಮತ್ತು ಟೆಸ್ಟ್​ ಕ್ರಿಕೆಟ್​ಗೆ ಇಂದು ಪಾದಾರ್ಪಣೆ ಮಾಡಿದ ವಾಷಿಂಗ್ಟನ್ ಸುಂದರ್ ಅವರನ್ನು ‘ಕ್ರಿಮಿ’ಗಳೆಂದು ನಿಂದಿಸಿದೆ.

ವಾರ್ನರ್​ರನ್ನು ಔಟ್ ಮಾಡಿದ ನಂತರ ಸಿರಾಜ್ ಪ್ರತಿಕ್ರಿಯಿಸಿದ್ದು ಹೀಗೆ

‘ಒಂದು ಹಂತದಲ್ಲಿ ಆ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ, ‘ಸಿರಾಜ್ ನಮ್ಮ ಕಡೆ ಕೈ ಬೀಸು, ನಮ್ಮೆಡೆ ಕೈ ಬೀಸು ಸಿರಾಜ್, ನಮ್ಮ ಕಡೆ ಕೈ ಬೀಸು ಭಾರತೀಯ ಕ್ರಿಮಿಯೇ’ ಎಂದು ಅರಚುತ್ತಿದ್ದ. ಅವನ ಕೂಗಾಟದ ನಂತರ ಭಾರತದ ಯಾವುದೇ ಆಟಗಾರ ಆ ಸೆಕ್ಷನ್​ ಕಡೆ ಫೀಲ್ಡಿಂಗ್ ಮಾಡಲು ಬರಲಿಲ್ಲ’ ಅಂತ ಆಕೆ ಹೇಳಿರುವುದನ್ನು ಪತ್ರಿಕೆ ವರದಿ ಮಾಡಿದೆ.

ಟೀಮ್ ಇಂಡಿಯಾ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯೊಂದಿಗೆ ಆಸ್ಟ್ರೇಲಿಯಾದ ಆಟಗಾರರು ಸಹ ಜನಾಂಗೀಯ ನಿಂದನೆಯ ಘಟನೆಯನ್ನು ಖಂಡಿಸಿದ್ದಾರೆ.

ಸಿಡ್ನಿಯಲ್ಲಿ ಜರುಗಿದ ಘಟನೆಯ ನಂತರ ವರ್ಚ್ಯುಯಲ್ ಸುದ್ದಿಗೋಷ್ಠಿಯೊಂದರಲ್ಲಿ ಮಾತಾಡಿದ್ದ ಆಸ್ಟ್ರೇಲಿಯಾದ ಪ್ರಿಮೀಯರ್ ಸ್ಪಿನ್ನರ್ ನೇಥನ್ ಲಿಯಾನ್, ‘ಯಾವುದೇ ರೀತಿಯ ಜನಾಂಗೀಯ ನಿಂದನೆಯನ್ನು ಸಹಿಸಲು ಆಗುವುದಿಲ್ಲ. ಹಾಗೆ ಮಾಡುವವರು ಅದನ್ನು ತಮಾಷೆಯೆಂದು ಭಾವಿಸುತ್ತಾರೆ. ಅದರೆ ನಿಂದನೆಗೊಳಗಾಗುವನ ಮೇಲೆ ಅದೆಂಥ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ಅವರು ಯೋಚಿಸುವುದಿಲ್ಲ. ನಾನು ಹೇಳುವುದೇನೆಂದರೆ, ಕ್ರಿಕೆಟ್ ಎಲ್ಲರಿಗೂ ಒಂದು ಕ್ರೀಡೆ, ಹಾಗಾಗಿ ಜನಾಂಗೀಯ ನಿಂದನೆಯಂಥ ಕೆಟ್ಟ ಸಂಸ್ಕೃತಿಗೆ ಅಲ್ಲಿ ಸ್ಥಳವಿಲ್ಲ’ ಎಂದಿದ್ದಾರೆ.

India vs Australia Test Series | 5 ವಿಕೆಟ್​ ಕಬಳಿಸಿದ ನಂತರ ಬೌಲರ್​ಗಳು ಮತ್ತಷ್ಟು ಶ್ರಮವಹಿಸಬೇಕಿತ್ತು: ಗಾವಸ್ಕರ್

Published On - 9:19 pm, Fri, 15 January 21