IPL 2021: ಚೆನ್ನೈಗೆ ಗೆಲುವಿನ ಆಸೆ ಉಳಿಸಿದ್ದು ಆ ಒಂದು ಬಾಲ್; ಕ್ರಿಕೆಟ್ ದೈತ್ಯ ಆಂಡ್ರೆ ರಸ್ಸೆಲ್ ಕ್ಲೀನ್ ಬೌಲ್ಡ್, ವಿಡಿಯೋ ನೋಡಿ
ಕುರ್ರನ್ ಬೌಲಿಂಗ್ ಕೌಶಲ್ಯದಿಂದ ಬ್ಯಾಟ್ಸ್ಮನ್ಗೆ ಅರಿವಿಗೆ ಬಾರದಂತೆ ವಿಕೆಟ್ ಉರುಳಿಸಿದ ರೀತಿ ವಿಶೇಷವಾಗಿತ್ತು. ಜೊತೆಗೆ, ಆ ಬಳಿಕ ಕುರ್ರನ್ ಸಂಭ್ರಮಿಸಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ನಿನ್ನೆಯ (ಏಪ್ರಿಲ್ 21) ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 18 ರನ್ಗಳ ರೋಚಕ ಜಯ ದಾಖಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಬರೋಬ್ಬರಿ 220 ರನ್ಗಳಿಸಿ ಕೋಲ್ಕತ್ತಾಗೆ ಬೃಹತ್ ಮೊತ್ತದ ಸವಾಲು ಹಾಕಿತ್ತು. ಕಳೆದೆರಡು ಪಂದ್ಯಗಳಲ್ಲಿ ಕೋಲ್ಕತ್ತಾ ಪ್ರದರ್ಶನ ನೋಡಿದ್ದ ಕ್ರಿಕೆಟ್ ಅಭಿಮಾನಿಗಳು, ನಿನ್ನೆಯೂ ಬಹುತೇಕ ಚೆನ್ನೈ ತಂಡವೇ ಗೆಲ್ಲುತ್ತದೆ ಎಂದು ಊಹಿಸಿದ್ದರು. ಅದಕ್ಕೆ ಸರಿಹೊಂದುವಂತೆ ಕೋಲ್ಕತ್ತಾ ಕೂಡ ಇನ್ನಿಂಗ್ಸ್ ಆರಂಭಿಸಿತ್ತು.
ಕೋಲ್ಕತ್ತಾ ತಂಡದ ಪರ ಬ್ಯಾಟ್ಸ್ಮನ್ಗಳು ಕಡಿಮೆ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರು. ತಂಡದ ಮೊತ್ತ 50 ರನ್ ದಾಟುವ ಮುನ್ನವೇ ಮುಖ್ಯ 5 ವಿಕೆಟ್ ಕಳೆದುಕೊಂಡು ಕೋಲ್ಕತ್ತಾ ಸೊರಗಿತ್ತು. ಕೆಕೆಆರ್ಗೆ ಸೋಲೇ ಗತಿ ಎಂಬಂತಾಗಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಪರ ಚಹರ್ 4 ವಿಕೆಟ್ ಕಬಳಿಸಿ ಮಿಂಚಿದ್ದರು. ಮೊದಲ ಐದು ವಿಕೆಟ್ಗೆ ಕ್ರಿಸ್ಗೆ ಇಳಿದಿದ್ದ ದಾಂಡಿಗರು 10 ರನ್ ಕೂಡ ದಾಟಲಾಗದೇ ಪರದಾಡಿದ್ದರು. ಆದರೆ, ನಂತರ ಪಂದ್ಯ ಪಡೆದ ತಿರುವು ರೋಚಕವಾಗಿತ್ತು.
5 ವಿಕೆಟ್ ಬಳಿಕ ಕ್ರೀಸ್ನಲ್ಲಿ ಜೊತೆಯಾದ ಆಂಡ್ರ್ಯೂ ರಸ್ಸೆಲ್ ಹಾಗೂ ದಿನೇಶ್ ಕಾರ್ತಿಕ್ ಚೆನ್ನೈ ಗೆಲುವಿನ ಧೈರ್ಯವನ್ನು ಅಲುಗಾಡಿಸಿಬಿಟ್ಟರು. ರಸ್ಸೆಲ್ ಈ ಟೂರ್ನಿಯ ಎರಡನೇ ಅತಿ ವೇಗದ ಅರ್ಧಶತಕವನ್ನೂ ದಾಖಲಿಸಿದರು. ದಿನೇಶ್ ಕಾರ್ತಿಕ್ ಕೂಡ ಮಿಂಚಿದರು. ದಿನೇಶ್ ಕಾರ್ತಿಕ್ 24 ಬಾಲ್ಗೆ 40 ರನ್ ಗಳಿಸಿರೆ, ರಸ್ಸೆಲ್ 22 ಬಾಲ್ಗೆ 6 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 54 ರನ್ ದಾಖಲಿಸಿದರು.
ಪಂದ್ಯ ಕೊಂಚವೇ ಕೋಲ್ಕತ್ತಾ ಗೆಲ್ಲುವತ್ತ ತಿರುವು ಪಡೆಯುತ್ತಿತ್ತು. ರಸ್ಸೆಲ್ ಕಣದಲ್ಲಿದ್ದರೆ ಕೋಲ್ಕತ್ತಾ ಗೆಲ್ಲುವುದು ಖಂಡಿತಾ ಎಂಬಂತಾಗಿತ್ತು. ಚೆನ್ನೈಗೆ ಅಗತ್ಯವಿದ್ದ ವಿಕೆಟ್ ರಸ್ಸೆಲ್ದು. ಹೇಗಾದರೂ ರಸ್ಸೆಲ್ ಎಂಬ ವೆಸ್ಟ್ ಇಂಡೀಸ್ನ ದೈತ್ಯ ದಾಂಡಿಗನನ್ನು ಕಟ್ಟಿಹಾಕುವ ಹೊಣೆಗಾರಿಕೆ ಚೆನ್ನೈ ಬೌಲರ್ಗಳಿಗೆ ಇತ್ತು. ಹಾಗಿರುವಂತೆಯೇ 54 ರನ್ ಗಳಿಸಿದ್ದ ರಸ್ಸೆಲ್ನನ್ನು ಔಟ್ ಮಾಡಿದ್ದು ಸ್ಯಾಮ್ ಕುರ್ರನ್. ಸ್ಯಾಮ್ ಕುರ್ರನ್ ರಸ್ಸೆಲ್ನ್ನು ಕ್ಲೀನ್ ಬೌಲ್ಡ್ ಮಾಡಿದರು. ಕುರ್ರನ್ ಬೌಲಿಂಗ್ ಕೌಶಲ್ಯದಿಂದ ಬ್ಯಾಟ್ಸ್ಮನ್ಗೆ ಅರಿವಿಗೆ ಬಾರದಂತೆ ವಿಕೆಟ್ ಉರುಳಿಸಿದ ರೀತಿ ವಿಶೇಷವಾಗಿತ್ತು. ಜೊತೆಗೆ, ಆ ಬಳಿಕ ಕುರ್ರನ್ ಸಂಭ್ರಮಿಸಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಸ್ಸೆಲ್ ಆರ್ಭಟ ಬಗ್ಗುಬಡಿದ ಕುರ್ರನ್ ಬೌಲಿಂಗ್ ಹೀಗಿತ್ತು.
— Cricsphere (@Cricsphere) April 21, 2021
ರಸ್ಸೆಲ್ ಬಳಿಕ ಕಮ್ಮಿನ್ಸ್ ಬ್ಯಾಟಿಂಗ್ (34 ಬಾಲ್ಗೆ 66 ರನ್) ಕೂಡ ಭರ್ಜರಿಯಗಿತ್ತು. ಬಹುತೇಕ ಕೊನೆಯ ಹಂತದವರೆಗೂ ಯಾರು ಗೆಲ್ಲುತ್ತಾರೆ? ಎಂಬ ರೋಚಕತೆಯಲ್ಲಿ ಸಾಗಿದ್ದ ಪಂದ್ಯದಲ್ಲಿ ಕೊನೆಗೆ ಚೆನ್ನೈ ತಂಡ 18 ರನ್ಗಳಿಂದ ಗೆಲುವು ಕಂಡಿತು.
ಇದನ್ನೂ ಓದಿ: IPL 2021: ತಂಡಕ್ಕೆ ರಸ್ಸೆಲ್ ನೀಡುವ ಕಾಣಿಕೆಗಳನ್ನು ಕೊಂಡಾಡಿದ ಕೆಕೆಆರ್ ನಾಯಕ ಮಾರ್ಗನ್
(IPL 2021 CSK Andre Russell clean bowled for Sam Curran bowling watch video)
Published On - 4:58 pm, Thu, 22 April 21