MS Dhoni: ಮಹೇಂದ್ರ ಸಿಂಗ್ ಧೋನಿ ಮುಂದಿವೆ ಮೂರು ದಾಖಲೆಗಳು; ಐಪಿಎಲ್ 2021ರಲ್ಲೂ ಮಾಡ್ತಾರಾ ಧೋನಿ ಧಮಾಕ?

39 ವರ್ಷದ ಧೋನಿ ಐಪಿಎಲ್​ನಲ್ಲಿ ಈವರೆಗೆ ಮಾಡಿರುವ ರೆಕಾರ್ಡ್​ಗಳನ್ನು ಗಮನಿಸಿದರೆ ಇದು ಅಸಾಧ್ಯ ಎನ್ನಲು ಆಗುವುದಿಲ್ಲ. ಧೋನಿ ದಾಖಲೆಗಳ ಪ್ರಯಾಣ ಹೇಗೆ ಮುಂದುವರಿಯಬಹುದು, ಈ ಬಾರಿಯ ಐಪಿಎಲ್​ನಲ್ಲಿ ಧೋನಿ ಏನೇನು ರೆಕಾರ್ಡ್ ಸಾಧಿಸಬಹುದು.. ಇಲ್ಲಿದೆ ವಿವರಗಳು.

MS Dhoni: ಮಹೇಂದ್ರ ಸಿಂಗ್ ಧೋನಿ ಮುಂದಿವೆ ಮೂರು ದಾಖಲೆಗಳು; ಐಪಿಎಲ್ 2021ರಲ್ಲೂ ಮಾಡ್ತಾರಾ ಧೋನಿ ಧಮಾಕ?
ಸಿಎಸ್​ಕೆ ನಾಯಕ ಧೋನಿ 2008 ರಲ್ಲಿ ತಂಡದ ಪರ ಪಂಜಾಬ್ ಕಿಂಗ್ಸ್ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಿದ್ದರು.
Follow us
| Updated By: ganapathi bhat

Updated on:Apr 05, 2022 | 12:47 PM

ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಮುಕ್ತಾಯವಾದ ಬೆನ್ನಲ್ಲೇ ಐಪಿಎಲ್ ಟಿ-20 ಕ್ರಿಕೆಟ್, ಅಭಿಮಾನಿಗಳನ್ನು ರಂಜಿಸಲು ಕಾತುರವಾಗಿದೆ. ಇನ್ನೇನು ಎರಡು ದಿನದಲ್ಲೇ ಪ್ರೀಮಿಯರ್ ಲೀಗ್ ಪಂದ್ಯಾಟಗಳು ಆರಂಭವಾಗಲಿದ್ದು, ಹಿರಿ-ಕಿರಿ, ದೇಶಿ-ವಿದೇಶಿ ಆಟಗಾರರ ಪ್ರದರ್ಶನ ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದಾರೆ. ಐಪಿಎಲ್ ಎಂದರೆ ಅಲ್ಲಿ ಕ್ರಿಕೆಟ್ ಮಾತ್ರವಲ್ಲ. ಬದಲಿಗೆ ರೋಚಕತೆ, ಭರ್ಜರಿ ಮನರಂಜನೆ, ಉತ್ಸಾಹ, ಹಿರಿಯರ ಅನುಭವ, ಕಿರಿಯರ ಚುರುಕುತನ, ಹೊಸ ಪ್ರತಿಭೆಗಳು ಎಲ್ಲಾ ಇರುತ್ತದೆ. ಹಳೆ ಬೇರು-ಹೊಸ ಚಿಗುರು ಕೂಡಿದ ಪಂದ್ಯಾಕೂಟವಾಗಿರುತ್ತದೆ.

ಭಾರತೀಯ ಕ್ರಿಕೆಟ್ ಕಂಡ ಯಶಸ್ವಿ ನಾಯಕ, ಸದ್ಯ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಎರಡರಿಂದಲೂ ನಿವೃತ್ತಿ ಹೊಂದಿರುವ ಮಹೇಂದ್ರ ಸಿಂಗ್ ಧೋನಿ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಪ್ರದರ್ಶನ ತೋರಲಿದ್ದಾರೆ. ಧೋನಿ-ಚೆನ್ನೈ ಸೂಪರ್ ಕಿಂಗ್ಸ್-ಐಪಿಎಲ್ ಇದ್ಯಾವುದೂ ಹೊಸ ವಿಚಾರವಲ್ಲ. ಏಕದಿನ ಹಾಗೂ ಟೆಸ್ಟ್​ನಿಂದ ನಿವೃತ್ತರಾಗಿರುವ ಧೋನಿ, ಈ ಬಾರಿ ಕೊನೆಯ ಸೀಸನ್ ಐಪಿಎಲ್ ಆಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಾರಿಯ ಐಪಿಎಲ್ ಬಳಿಕ ಅವರು ಎಲ್ಲಾ ಫಾರ್ಮ್ಯಾಟ್​ನ ಕ್ರಿಕೆಟ್​ನಿಂದ ನಿವೃತ್ತರಾಗಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ 39 ವರ್ಷದ ಧೋನಿ, ಪತ್ನಿ ಹಾಗೂ ಮಗುವಿನೊಂದಿಗೆ ಖುಷಿಯಾಗಿದ್ದಾರೆ. ಕೌಟುಂಬಿಕ ಜೀವನದಲ್ಲಿ ಬ್ಯುಸಿಯಾಗಿರುವ ಧೋನಿಗೆ ಇದೇ ಕೊನೆಯ ಸೀಸನ್ ಐಪಿಎಲ್ ಆದರೂ ಆಗಬಹುದು.

ಕೊನೆಯ ಐಪಿಎಲ್ ಆಡಿ, ನಿವೃತ್ತರಾಗುವ ಮೊದಲು ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಕಪ್ ತಂದುಕೊಡಲಿದ್ದಾರಾ? ಯುವಕರನ್ನೂ ನಾಚಿಸುವಂತೆ ಆಡಿ ಇನ್ನಷ್ಟು ವರ್ಷಗಳ ಕಾಲ ಧೋನಿ ಆಡಬೇಕಿತ್ತು ಅನಿಸುವಂತೆ ಮಾಡುತ್ತಾರಾ? 39 ವರ್ಷದ ಧೋನಿ ಐಪಿಎಲ್​ನಲ್ಲಿ ಈವರೆಗೆ ಮಾಡಿರುವ ರೆಕಾರ್ಡ್​ಗಳನ್ನು ಗಮನಿಸಿದರೆ ಇದು ಅಸಾಧ್ಯ ಎನ್ನಲು ಆಗುವುದಿಲ್ಲ. ಧೋನಿ ದಾಖಲೆಗಳ ಪ್ರಯಾಣ ಹೇಗೆ ಮುಂದುವರಿಯಬಹುದು, ಈ ಬಾರಿಯ ಐಪಿಎಲ್​ನಲ್ಲಿ ಧೋನಿ ಏನೇನು ರೆಕಾರ್ಡ್ ಸಾಧಿಸಬಹುದು.. ಇಲ್ಲಿದೆ ವಿವರಗಳು.

7000 ಟಿ-20 ರನ್​ಗಳು: ಬಿಳಿ ಚೆಂಡಿನ ಕ್ರಿಕೆಟ್​ನಲ್ಲಿ ಯಾವತ್ತೂ ಮುಂಚೂಣಿಯಲ್ಲಿದ್ದ ಆಟಗಾರ ಮಹೇಂದ್ರ ಸಿಂಗ್ ಧೋನಿ. ಭಾರತಕ್ಕೆ ವರ್ಲ್ಡ್ ಟಿ ಟ್ವೆಂಟಿ ಕಪ್ ಕೊಟ್ಟ ನಾಯಕ, ಐಪಿಎಲ್​ನಲ್ಲೂ ಮೂರು ಬಾರಿ ಚೆನ್ನೈ ಸೂಪರ್ ಸಿಂಗ್ಸ್ ಕಪ್ ಗೆಲ್ಲುವಂತೆ ಮಾಡಿದ್ದರು. ಆರ್​ಸಿಬಿ ಅಭಿಮಾನಿಗಳಿಗೆ ದುಃಸ್ವಪ್ನವಾಗೇ ಕಾಡಿದ್ದರು ಧೋನಿ ಹಾಗೂ ಸಿಎಸ್​ಕೆ. ಅಂಥಾ ಆಟಗಾರ ಧೋನಿ ಕಳೆದ ಸೀಸನ್​ನಲ್ಲಿ ಮಾತ್ರ ಹೇಳುವಂಥ ಆಟ ಆಡಿರಲಿಲ್ಲ. ಕಳೆದ ಬಾರಿ 14 ಪಂದ್ಯಗಳನ್ನು ಆಡಿದ್ದ ಧೋನಿ, ಕೇವಲ 200 ಕಲೆ ಹಾಕಲಷ್ಟೇ ಸೀಮಿತವಾಗಿದ್ದರು. ಆದರೂ, ಧೋನಿ 7000 ರನ್ ಗಡಿ ದಾಟಲು ಬೇಕಿರುವುದು ಕೇವಲ 179 ರನ್ ಮಾತ್ರ. ಈ ಬಾರಿ ಐಪಿಎಲ್ ಸೀಸನ್​ನಲ್ಲಿ 179 ರನ್ ಬಾರಿಸಿದರೆ ಧೋನಿ 7000 ರನ್ ಗುರಿ ತಲುಪಿದ ಕ್ರಿಕೆಟಿಗ ಆಗಲಿದ್ದಾರೆ.

200 ಸಿಕ್ಸರ್​ಗಳು: ಮಹೇಂದ್ರ ಸಿಂಗ್ ಧೋನಿ ಫಿಟ್ ಅಂಡ್ ಫೈನ್ ಆಟಗಾರ. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್​ಗೆ ಇಳಿದು, ಬೌಂಡರಿ ಸಿಕ್ಸರ್​ಗಳ ಮೂಲಕ ಎದುರಾಳಿಗಳನ್ನು ಸುಸ್ತಾಗಿಸುವವರು ಧೋನಿ. ಧೋನಿ ಹೆಲಿಕಾಪ್ಟರ್ ಶಾಟ್ ಅಂತೂ ತಿಳಿಯದವರಿಲ್ಲ. ಧೋನಿ ಇನ್ನು 14 ಸಿಕ್ಸರ್ ಬಾರಿಸಿದರೆ 200 ಸಿಕ್ಸ್ ಸಿಡಿಸಿದ ಆಟಗಾರರಾಗಿ ಧೋನಿ ಹೊರಹೊಮ್ಮಲಿದ್ದಾರೆ.

150 ಡಿಸ್ಮಿಸಲ್ಸ್: ಧೋನಿ ಯಶಸ್ವಿ ನಾಯಕ ಮಾತ್ರವಲ್ಲ, ಯಶಸ್ವಿ ವಿಕೆಟ್ ಕೀಪರ್ ಕೂಡ ಹೌದು. ಕೀಪಿಂಗ್ ವಿಭಾಗದಲ್ಲಿ ಧೋನಿ ಕೈಚಳಕಕ್ಕೆ ವಿಶ್ವ ಕ್ರಿಕೆಟಿಗರೆಲ್ಲಾ ಮಾರುಹೋಗಿದ್ದಾರೆ. ಮ್ಯಾಜಿಕ್ ಎಂಬಂಥ ಕೀಪಿಂಗ್ ಪ್ರದರ್ಶನವನ್ನು ಧೋನಿ ತೋರಿದ್ದಾರೆ. ಐಪಿಎಲ್ ಸೀಸನ್ 14ರಲ್ಲಿ ಕೀಪರ್ ಆಗಿ ಇನ್ನು ಎರಡು ವಿಕೆಟ್ ಕಿತ್ತರೆ, ಧೋನಿ 150 ವಿಕೆಟ್ ಕಬಳಿಸಿದ ಮೊದಲ ವಿಕೆಟ್ ಕೀಪರ್ ಆಗಿ ಹೊರಹೊಮ್ಮಲಿದ್ದಾರೆ.

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ ಡಬಲ್ ಸೆಂಚುರಿ ಬಾರಿಸಿದ ಧೋನಿ, ರೋಹಿತ್.. ದ್ವಿಶತಕದ ಸನಿಹದಲ್ಲಿ ಕೊಹ್ಲಿ, ರೈನಾ

ಇದನ್ನೂ ಓದಿ: IPL 2021: ಕೊರೊನಾ ಕಂಟಕ! ಚೆನ್ನೈಗೆ ಕೈಕೊಟ್ಟ ಆಸಿಸ್​ ವೇಗಿ, ಧೋನಿ ತಂಡಕ್ಕೆ ಬರಲ್ಲ ಎಂದ ಸ್ಟಾನ್ಲೇಕ್, ರೀಸ್ ಟೋಪ್ಲಿ

Published On - 3:58 pm, Tue, 6 April 21