ಐಪಿಎಲ್ 2021ರ ನಿನ್ನೆ ನಡೆದ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬರೋಬ್ಬರಿ 10 ವಿಕೆಟ್‌ಗಳ ಅಂತರದಿಂದ ಮಣಿಸಿತ್ತು. 178 ರನ್ ಟಾರ್ಗೆಟ್ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ 20 ಓವರ್‌ಗೂ ಮೊದಲೇ ಗೆಲುವು ಸಾಧಿಸಿತ್ತು. ನಾಯಕ ವಿರಾಟ್ ಕೊಹ್ಲಿ ಹಾಗೂ ಯಂಗ್, ಎನರ್ಜಿಟಿಕ್ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಭರ್ಜರಿ ಜೊತೆಯಾಟ ನಡೆಸಿದ್ದರು. ಈ ಮಧ್ಯೆ ಕ್ರೀಡಾ ಸ್ಫೂರ್ತಿ ಮೆರೆಯುವ ವಿಚಾರವೊಂದು ನಡೆಯಿತು. ಪರಸ್ಪರ ವಿರೋಧ ತಂಡದ ಆಟಗಾರರು ಕ್ರೀಡೆಯ ಗೌರವ ಹೆಚ್ಚಿಸಿದರು.
ಬ್ಯಾಟಿಂಗ್ ನಡುವೆ ದೇವದತ್ ಪಡಿಕ್ಕಲ್ ಶೂ ಲೇಸ್ ಕಳಚಿಕೊಂಡಿತ್ತು. ಅದನ್ನು ವಿರೋಧಿ ತಂಡದ ಆಟಗಾರ ಜಾಸ್ ಬಟ್ಲರ್ ಸರಿಪಡಿಸಿದರು. ಜಾಸ್ ಬಟ್ಲರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸುವ ಆಟಗಾರ. ಇತ್ತ ದೇವದತ್ ಪಡಿಕ್ಕಲ್ ಭಾರತ ತಂಡ ಪ್ರತಿನಿಧಿಸಿಲ್ಲ. ಒಂದೂ ಅಂತಾರಾಷ್ಟ್ರೀಯ ಪಂದ್ಯ ಆಡಿಲ್ಲ. ಆದರೂ ಆ ಭೇದ ತೋರದೆ ಬಟ್ಲರ್, ಪಡಿಕ್ಕಲ್ ಶೂ ಲೇಸ್ ಕಟ್ಟಿದರು.
ಒಂದೆಡೆ ರಾಜಸ್ಥಾನ್ ರಾಯಲ್ಸ್ ಬೌಲರ್‌ಗಳು ಆರ್‌ಸಿಬಿ ಆರಂಭಿಕ ದಾಂಡಿಗರಿಂದ ಸರಿಯಾಗಿ ದಂಡಿಸಿಕೊಳ್ಳುತ್ತಿದ್ದರು. ವಿಕೆಟ್ ನಷ್ಟವಿಲ್ಲದೆ ಆರ್‌ಸಿಬಿ ಗೆಲುವಿನತ್ತ ಮುಖಮಾಡಿತ್ತು. ಪಡಿಕ್ಕಲ್ ಅಬ್ಬರದ ಬ್ಯಾಟಿಂಗ್ ಮೂಲಕ ಶತಕದ ಸನಿಹದಲ್ಲಿದ್ದರು. ಈ ಯೋಚನೆ ಮರೆತು ಆಟಗಾರರು ಪರಸ್ಪರ ಸಹಕಾರ ಮನೋಭಾವ ತೋರಿದ್ದು ಅಭಿಮಾನಿಗಳ ಹೃದಯ ಗೆದ್ದಿತು.
Jos Buttler ? Devdutt Padikkal#VIVOIPL pic.twitter.com/5dDsXeJPiM
— IndianPremierLeague (@IPL) April 22, 2021
ಈ ವಿಡಿಯೋ ತುಣುಕನ್ನು ಐಪಿಎಲ್ ಅಧಿಕೃತ ಟ್ವಿಟರ್ ಪುಟ ಹಂಚಿಕೊಂಡಿತ್ತು. ಸ್ಪಿರಿಟ್ ಆಫ್ ಕ್ರಿಕೆಟ್ ಎಂದು ಸಂದರ್ಭಕ್ಕೆ ಸಂತಸ ವ್ಯಕ್ತಪಡಿಸಿತ್ತು. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು. 16.3 ಓವರ್‌ಗಳಲ್ಲಿ ಒಂದೂ ವಿಕೆಟ್ ಕಳೆದುಕೊಳ್ಳದೆ 178 ರನ್ ಟಾರ್ಗೆಟ್ ತಲುಪಿದ್ದರು. ರಾಜಸ್ಥಾನ್ ರಾಯಲ್ಸ್ ಆರ್‌ಸಿಬಿ ವಿರುದ್ಧ ಹೀನಾಯ ಸೋಲು ಕಂಡಿತ್ತು. ರಾಯಲ್ ಚಾಲೆಂಜರ್ಸ್ ಪರ ದೇವದತ್ ಪಡಿಕ್ಕಲ್ ಆಕರ್ಷಕ ಶತಕ ದಾಖಲಿಸಿದ್ದರು. 52 ಬಾಲ್‌ಗೆ 101 ರನ್ ಪೇರಿಸಿದ್ದರು. ಮತ್ತೊಂದೆಡೆ ನಾಯಕ ಕೊಹ್ಲಿ 47 ಬಾಲ್‌ಗೆ 72 ರನ್ ದಾಖಲಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು.
ಇದನ್ನೂ ಓದಿ: IPL 2021, RCB: ಒಂದೇ ದಿನ ಆರ್‌ಸಿಬಿ ಸೃಷ್ಟಿ ಮಾಡಿತು ಸಾಲು ಸಾಲು ದಾಖಲೆ! ಇಲ್ಲಿದೆ ವಿವರ
Published On - 9:31 pm, Fri, 23 April 21