IPL 2021: ಮೊದಲ ಪಂದ್ಯಕ್ಕೆ ಪಡಿಕ್ಕಲ್ ಅಲಭ್ಯ! ಕೊಹ್ಲಿ ಜೊತೆ ಆರ್ಸಿಬಿ ಇನ್ನಿಂಗ್ಸ್ ಆರಂಭಿಸುವವರು ಯಾರು?
IPL 2021: ವಿರಾಟ್ ಕೊಹ್ಲಿ ಜೊತೆ ಇನಿಂಗ್ಸ್ ಆರಂಭಿಸೋದಕ್ಕೆ ಆರ್ಸಿಬಿ ತಂಡದಲ್ಲಿ ಮೂವರು ಆಟಗಾರರ ನಡುವೆ ಪೈಪೋಟಿ ಶುರುವಾಗಿದೆ. ಆದ್ರೆ ಮೂವರಲ್ಲಿ ಯಾರ ಜೊತೆ ಕೊಹ್ಲಿ ಇನಿಂಗ್ಸ್ ಆರಂಭಿಸ್ತಾರೆ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.
ಇಂಗ್ಲೆಂಡ್ ವಿರುದ್ಧದ ಅಂತಿಮ ಟಿಟ್ವೆಂಟಿ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆಗೆ ಆರಂಭಿಕನಾಗಿ ಕಣಕ್ಕಿಳಿದ ಕ್ಯಾಪ್ಟನ್ ಕೊಹ್ಲಿ, ಅದ್ಭುತ ಓಪನಿಂಗ್ ನೀಡಿದ್ರು. ಹಿಟ್ಮೆನ್ ಜೊತೆಗೆ ಅಬ್ಬರಿಸಿದ ವಿರಾಟ್, 94 ರನ್ಗಳ ಜೊತೆಯಾಟವಾಡಿದ್ದಲ್ಲದೇ, ಅಜೇಯ 80 ರನ್ಗಳಿಸಿ ಮಿಂಚಿದ್ರು. ಟಿಟ್ವೆಂಟಿ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವಿರಾಟ್, ಈ ಬಾರಿಯ ಐಪಿಎಲ್ನಲ್ಲೂ ಆರಂಭಿಕನಾಗಿ ಕಣಕ್ಕಿಳಿಯುವದಾಗಿ ತಿಳಿಸಿದ್ರು. ಆರ್ಸಿಬಿ ತಂಡದ ನಿರ್ದೇಶಕ ಮೈಕ್ ಹಸನ್ ಕೂಡ, ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ಖಚಿತಪಡಿಸಿದ್ರು. ಹಿಗಾಗಿ ಆರ್ಸಿಬಿಗೆ, ಐಪಿಎಲ್ ಆರಂಭದಲ್ಲೇ ಅದ್ಭುತ ಯಶಸ್ಸು ಸಿಕ್ಕಿತ್ತು.
ಕನ್ನಡಿಗ ಪಡಿಕ್ಕಲ್ ಮೇಲಿತ್ತು ಕೊಹ್ಲಿಗೆ ಬೆಟ್ಟದಷ್ಟು ನಿರೀಕ್ಷೆ! ಆರ್ಸಿಬಿ ಪರ ವಿರಾಟ್ ಆರಂಭಿಕನಾಗಿ ಕಣಕ್ಕಿಳಿಯುವ ನಿರ್ಧಾರಕ್ಕೆ ಬರಲು ಪ್ರಮುಖ ಕಾರಣ, ಕನ್ನಡಿಗ ದೇವದತ್ ಪಡಿಕ್ಕಲ್ ಮೇಲಿನ ನಂಬಿಕೆ. ಕಳೆದ ಸೀಸನ್ನಲ್ಲಿ ಆರ್ಸಿಬಿ ಪರ ಐಪಿಎಲ್ಗೆ ಪದಾರ್ಪಣೆ ಮಾಡಿದ ಪಡಿಕ್ಕಲ್, ಮೊದಲ ಪಂದ್ಯದಲ್ಲೇ ಚೊಚ್ಚಲ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದ. ಕೇವಲ ಮೊದಲ ಪಂದ್ಯದಲ್ಲಿ ಮಾತ್ರವಲ್ಲ.. ಆರ್ಸಿಬಿ ಪರ ಟೂರ್ನಿಯುದ್ಧಕ್ಕೂ ಌರೋನ್ ಫಿಂಚ್ ಜೊತೆಗೆ ಅತ್ಯದ್ಬುತ ಓಪನಿಂಗ್ ನೀಡಿದ್ದ. ಪ್ರತಿ ಪಂದ್ಯದಲ್ಲೂ ಆರ್ಸಿಬಿಗೆ ಆರಂಭಿಕನಾಗಿ ಭದ್ರ ಬುನಾದಿ ಹಾಕಿಕೊಟ್ಟಿದ್ದ.
ಕಳೆದ ಐಪಿಎಲ್ನಲ್ಲಿ ಪಡಿಕ್ಕಲ್ ಕಳೆದ ಐಪಿಎಲ್ನಲ್ಲಿ ಆರ್ಸಿಬಿ ಪರ 15 ಪಂದ್ಯಗಳನ್ನಾಡಿದ ದೇವದತ್ ಪಡಿಕ್ಕಲ್, 473 ರನ್ಗಳಿಸಿದ್ರು. ಇದ್ರಲ್ಲಿ 74 ರನ್ ಪಡಿಕ್ಕಲ್ ಬ್ಯಾಟ್ನಿಂದ ಬಂದ ಗರೀಷ್ಟ ಮೊತ್ತವಾದ್ರೆ, 5 ಅರ್ಧಶತಕ ಸಿಡಿಸಿ ಮಿಂಚಿದ.. ಪಡಿಕ್ಕಲ್ ತೋರಿಸಿದ ಈ ಪರಾಕ್ರಮದ ಮೇಲೆ ಬೆಟ್ಟದಷ್ಟು ನಂಬಿಕೆಯಿಟ್ಟಿದ್ದ ವಿರಾಟ್, ಈ ಸೀಸನ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ನಿರ್ಧಾರಕ್ಕೆ ಬಂದಿದ್ರು. ಐಪಿಎಲ್ನಲ್ಲಿ ಆಗಾಗ ಆರಂಭಿಕನಾಗಿ ಕಣಕ್ಕಿಳಿದಿರುವ ಕೊಹ್ಲಿ, ಅದ್ಭುತ ಯಶಸ್ಸು ಕಂಡಿದ್ದಾರೆ.
ಐಪಿಎಲ್ನಲ್ಲಿ ಆರಂಭಿಕನಾಗಿ ಕೊಹ್ಲಿ ಐಪಿಎಲ್ನಲ್ಲಿ 61 ಪಂದ್ಯಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದಿರುವ ವಿರಾಟ್ 2,345 ರನ್ಗಳಿಸಿದ್ದಾರೆ. ಇದ್ರಲ್ಲಿ ವಿರಾಟ್ 5 ಶತಕ ಮತ್ತು 15 ಅರ್ಧಶತಕ ಸಿಡಿಸಿದ್ದಾರೆ. ಹೀಗೆ ಆರಂಭಿಕನಾಗಿ ಕಂಡಿರುವ ಯಶಸ್ಸು ಮತ್ತು ಪಡಿಕ್ಕಲ್ ಮೇಲಿನ ನಂಬಿಕೆ, ಈ ಸೀಸನ್ನಲ್ಲಿ ಆರ್ಸಿಬಿ ಅದೃಷ್ಟವನ್ನು ಬದಲಾಯಿಸುತ್ತಿತ್ತು. ಆದ್ರೆ ಐಪಿಎಲ್ ಆರಂಭದಲ್ಲೇ ಆರ್ಸಿಬಿಗೆ ಆರಂಭಿಕ ಆಘಾತ ಎದುರಾಗಿದೆ. ಕೊಹ್ಲಿ ಜೊತೆ ಆರಂಭಿಕನಾಗಿ ಕಣಕ್ಕಿಳಿಯಬೇಕಿದ್ದ ನಮ್ಮ ಹೆಮ್ಮೆಯ ಕನ್ನಡಿಗ ಪಡಿಕ್ಕಲ್ಗೆ, ಕೊರೊನಾ ಸೋಂಕು ತಗುಲಿದೆ. ಇದು ಆರ್ಸಿಬಿ ನಾಯಕ ಕೊಹ್ಲಿಯನ್ನ ಚಿಂತೆಗೀಡು ಮಾಡಿದೆ..
ಪಡಿಕಲ್ ಮೊದಲ ಪಂದ್ಯಕ್ಕೆ ಅಲಭ್ಯ.. ಕೊಹ್ಲಿ ಜೊತೆಗಾರ ಯಾರು? ಬೆಂಗಳೂರಿನ ತಮ್ಮ ಮನೆಯಲ್ಲೇ ಕ್ವಾರಂಟೈನ್ ಆಗಿರುವ ಪಡಿಕ್ಕಲ್, ಕೊರೊನಾ ನೆಗೆಟಿವ್ ವರದಿ ಬಂದ ಬಳಿಕ ಐಪಿಎಲ್ ಬಯೊ ಬಬಲ್ಗೆ ಸೇರಿಕೊಳ್ಳಬೇಕು. ಅಷ್ಟೊತ್ತಿಗಾಗಲೇ ದೇವದತ್, ಆರ್ಸಿಬಿ ಪರ ಮೊದಲೆರಡು ಪಂದ್ಯಗಳನ್ನ ಮಿಸ್ ಮಾಡಿಕೊಳ್ಳಲಿದ್ದಾರೆ. ಹೀಗಾಗಿ ಪಡಿಕ್ಕಲ್ ಬದಲು ಯಾರ ಜೊತೆ ಆರಂಭಿಕನಾಗಿ ಕಣಕ್ಕಿಳಿಯಬೇಕು ಅನ್ನೋ ಪ್ರಶ್ನೆ ಕೊಹ್ಲಿಯನ್ನ ಕಾಡುತ್ತಿದೆ.
ವಿರಾಟ್ ಕೊಹ್ಲಿ ಜೊತೆ ಇನಿಂಗ್ಸ್ ಆರಂಭಿಸೋದಕ್ಕೆ ಆರ್ಸಿಬಿ ತಂಡದಲ್ಲಿ ಮೂವರು ಆಟಗಾರರ ನಡುವೆ ಪೈಪೋಟಿ ಶುರುವಾಗಿದೆ. ಆದ್ರೆ ಮೂವರಲ್ಲಿ ಯಾರ ಜೊತೆ ಕೊಹ್ಲಿ ಇನಿಂಗ್ಸ್ ಆರಂಭಿಸ್ತಾರೆ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.
ಸಚಿನ್ ಬೇಬಿ ಜೊತೆ ಆರಂಭಿಕನಾಗಿ ಬರ್ತಾರಾ ವಿರಾಟ್? ಈ ಬಾರಿ ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ತಂಡವನ್ನ ಸೇರಿಕೊಂಡಿರುವ ಸಚಿನ್ ಬೇಬಿ, ವಿರಾಟ್ ಕೊಹ್ಲಿ ಜೊತೆಗೆ ಇನಿಂಗ್ಸ್ ಆರಂಭಿಸುವ ಸಾಧ್ಯೆತೆಯಿದೆ. ಕೇರಳದ ಸಚಿನ್ ಬೇಬಿ ಈ ಹಿಂದೆ ಆರ್ಸಿಬಿ ಪರ ಆಡಿದ ಅನುಭವವನ್ನು ಹೊಂದಿದ್ದಾರೆ. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಸೆಟಲ್ ಆಗಿರುವ ಬೇಬಿ, ಆರಂಭಿಕನ ಸ್ಥಾನವನ್ನ ಯಶಸ್ವಿಯಾಗಿ ನಿಭಾಯಿಸ್ತಾರಾ? ಈ ಪ್ರಶ್ನೆ ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ಅನ್ನ ಕಾಡ್ತಿದೆ..
ಕೊಹ್ಲಿ ಜತೆಗಾರನಾಗಿ ಕ್ರೀಸ್ ಹಂಚಿಕೊಳ್ತಾನಾ ಭರತ್? ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಆಂಧ್ರದ ಕೆ.ಎಸ್.ಭರತ್ ಜೊತೆಗೆ ಕೊಹ್ಲಿ ಆರಂಭಿಕನಾಗಿ ಇನಿಂಗ್ಸ್ ಹಂಚಿಕೊಳ್ಳುವ ಸಾಧ್ಯತೆಯಿದೆ. ವಿಕೆಟ್ ಹಿಂದೆ ಅದ್ಭುತ ಕೈಚಳಕ ತೋರಿಸುವ ಭರತ್, ಆರಂಭಿಕನ ಸ್ಥಾನವನ್ನ ತುಂಬಬಹುದು. ಆದ್ರೆ ಐಪಿಎಲ್ನಲ್ಲಿ ಭರತ್ಗೆ ಅನುಭವದ ಕೊರತೆಯಿದೆ. ಅದು ಅಲ್ಲದೇ ವಿರಾಟ್ ಜೊತೆ, ಮೊದಲ ಬಾರಿಗೆ ಇನಿಂಗ್ಸ್ ಹಂಚಿಕೊಳ್ಳುವುದು ಭರತ್ಗೆ ಸವಾಲಿನ ವಿಷಯವಾಗಲಿದೆ. ಸಚಿನ್ ಬೇಬಿ ಮತ್ತು ಕೆ.ಎಸ್.ಭರತ್ ಕೊಹ್ಲಿ ಜೊತೆ ಆರಂಭಿಕನಾಗಿ ಕಣಕ್ಕಿಳಿಯುವ ವಿಶ್ವಾಸದಲ್ಲಿದ್ದಾರೆ. ಆದ್ರೆ ಕ್ಯಾಪ್ಟನ್ ಕೊಹ್ಲಿ ಕಣ್ಣು ಮಾತ್ರ, ಕೇರಳದ ಆ ಕಲಿಯ ಮೇಲೆ ಬಿದ್ದಿದೆ.
ಇದನ್ನೂ ಓದಿ: IPL 2021: ಆರ್ಸಿಬಿಗೆ ಕೊರೊನಾ ಕಂಟಕ: ಪಡಿಕಲ್ ನಂತರ ತಂಡದ ಮತ್ತೊಬ್ಬ ಆಟಗಾರನಿಗೆ ವಕ್ಕರಿಸಿದ ಕೊರೊನಾ
Published On - 11:24 am, Wed, 7 April 21