IPL 2022: ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಟ್ರೋಫಿಯನ್ನು ಎತ್ತಿ ಹಿಡಿದು ತಂಡದೊಂದಿಗೆ ಸಂಭ್ರಮಿಸುತ್ತಿರುವಾಗ ಅಲ್ಲೇ ತುಸು ದೂರದಲ್ಲಿ ನಿಂತು ಇಬ್ಬರು ಮಾಜಿ ಆಟಗಾರರು ಮುಗುಳು ನಗುತ್ತಿದ್ದರು. ಅವರು ಮತ್ಯಾರೂ ಅಲ್ಲ, ಗುಜರಾತ್ ಟೈಟಾನ್ಸ್ ತಂಡದ ಕೋಚ್ ಆಶಿಶ್ ನೆಹ್ರಾ ಹಾಗೂ ಮೆಂಟರ್ ಹಾಗೂ ಬ್ಯಾಟಿಂಗ್ ಕೋಚ್ ಗ್ಯಾರಿ ಕರ್ಸ್ಟನ್.
ಐಪಿಎಲ್ ಸೀಸನ್ 15ಗೆ ಗುಜರಾತ್ ಟೈಟಾನ್ಸ್ ಘೋಷಣೆಯಾದ ಬಳಿಕ ತಂಡದ ಸಿಬ್ಬಂದಿಗಳ ಆಯ್ಕೆ ಮಾಡಲಾಗಿತ್ತು. ಈ ವೇಳೆ ಗುಜರಾತ್ ಫ್ರಾಂಚೈಸಿ ಮೊದಲು ಆಯ್ಕೆ ಮಾಡಿದ್ದು ಆಶಿಶ್ ನೆಹ್ರಾ ಹಾಗೂ ಗ್ಯಾರಿ ಕರ್ಸ್ಟನ್ ಅವರನ್ನು. ಈ ಇಬ್ಬರ ಆಯ್ಕೆ ನೋಡಿ ನಕ್ಕವರೇ ಹೆಚ್ಚು. ಏಕೆಂದರೆ ಈ ಇಬ್ಬರು ಮಾಜಿ ಆಟಗಾರರು ಈ ಹಿಂದೆ ಕೂಡ ಜೊತೆಯಾಗಿ ಕಾರ್ಯ ನಿರ್ವಹಿಸಿದ್ದರು. ಅಂದಿನ ಫಲಿತಾಂಶವನ್ನು ಪ್ರದರ್ಶಿಸಿ ಇಬ್ಬರ ಸಾಮರ್ಥ್ಯದ ಬಗ್ಗೆ ಹಲವು ಟ್ರೋಲ್ಗಳು ಹರಿದಾಡಿದ್ದವು.
ಹೌದು, ನೆಹ್ರಾ ಹಾಗೂ ಕಸ್ಟರ್ನ್ ಅವರ ಕೋಚಿಂಗ್ ಸಾಮರ್ಥ್ಯದ ಬಗ್ಗೆ ಅನುಮಾನ ಮೂಡಲು ಮುಖ್ಯ ಕಾರಣ ಆರ್ಸಿಬಿ ಫ್ರಾಂಚೈಸಿ. ಏಕೆಂದರೆ 2019 ರ ಬಳಿಕ ಆರ್ಸಿಬಿ ಫ್ರಾಂಚೈಸಿ ಇಬ್ಬರು ಸಿಬ್ಬಂದಿ ವರ್ಗದಿಂದ ಏಕಾಏಕಿ ವಜಾಗೊಳಿಸಿದ್ದರು. ಅಂದರೆ ಐಪಿಎಲ್ ಸೀಸನ್ 12 ನಲ್ಲಿ ಆರ್ಸಿಬಿ ತಂಡದ ಕೋಚ್ ಗ್ಯಾರಿ ಕಸ್ಟರ್ನ್ ಕಾರ್ಯ ನಿರ್ವಹಿಸಿದ್ದರು. ಇನ್ನು ಬೌಲಿಂಗ್ ಕೋಚ್ ಆಗಿ ಆಶಿಶ್ ನೆಹ್ರಾ ಇದ್ದರು. ಆದರೆ ಆ ಸೀಸನ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಆರ್ಸಿಬಿ ತಂಡ 14 ಪಂದ್ಯಗಳಲ್ಲಿ ಕೇವಲ 5 ಮ್ಯಾಚ್ನಲ್ಲಿ ಮಾತ್ರ ಗೆದ್ದಿದ್ದರು. ಇನ್ನು ಒಂದು ಪಂದ್ಯ ಡ್ರಾ ಆಗಿದ್ದರೆ, ಉಳಿದ 8 ಮ್ಯಾಚ್ನಲ್ಲಿ ಆರ್ಸಿಬಿ ಸೋಲುಂಡಿತ್ತು. ಪರಿಣಾಮ ಆರ್ಸಿಬಿ 2019 ರ ಐಪಿಎಲ್ ಸೀಸನ್ನಲ್ಲಿ ಕೊನೆಯ ಸ್ಥಾನ ಅಲಂಕರಿಸಿತು.
ಈ ಹೀನಾಯ ಪ್ರದರ್ಶನದ ಬೆನ್ನಲ್ಲೇ ಆರ್ಸಿಬಿ ತಂಡದ ಕೋಚಿಂಗ್ ಸಿಬ್ಬಂದಿಗಳಾದ ಆಶಿಶ್ ನೆಹ್ರಾ ಹಾಗೂ ಗ್ಯಾರಿ ಕರ್ಸ್ಟನ್ ಅವರ ತಲೆದಂಡವಾಗಿತ್ತು. ಇಬ್ಬರು ಮಾಜಿ ಆಟಗಾರರಿಗೆ ಕಳಪೆ ಕೋಚಿಂಗ್ ಸ್ಟಾಫ್ ಎಂಬ ಹಣೆಪಟ್ಟಿ ಸಿಗಲು ಇಷ್ಟು ಸಾಕಾಗಿತ್ತು. ಇದಾದ ಬಳಿಕ ಈ ಜೋಡಿಯನ್ನು ಮತ್ತೆ ಕೋಚಿಂಗ್ ಸಿಬ್ಬಂದಿಗಳಾಗಿ ಆಯ್ಕೆ ಮಾಡಿದ್ದು ಗುಜರಾತ್ ಟೈಟಾನ್ಸ್.
ಐಪಿಎಲ್ ಆರಂಭಕ್ಕೂ ಮುನ್ನ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯ ನಡೆಯ ಬಗ್ಗೆ ಹಲವು ವಿಮರ್ಶೆಗಳು ಮೂಡಿಬಂತು. ಅದರಲ್ಲೂ ಖುದ್ದು ನೆಹ್ರಾ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡು ಬಿಡ್ಡಿಂಗ್ ನಡೆಸಿದ್ದರು. ತಮಗೆ ಬೇಕಾದ ಆಟಗಾರರನ್ನು ಆಯ್ಕೆ ಮಾಡಿಕೊಂಡರು. ಮುಖ್ಯವಾಗಿ ನೆಹ್ರಾ ತಮಗೆ ಸೂಕ್ತವಾದ ಬೌಲರ್ಗಳನ್ನು ಆರಿಸಿಕೊಂಡಿದ್ದರು. ಇನ್ನೊಂದೆಡೆ ಕಸ್ಟರ್ನ್ ಬ್ಯಾಟ್ಸ್ಮನ್ಗಳನ್ನು ಆಯ್ಕೆ ಮಾಡಿದರು.
ಗುಜರಾತ್ ಟೈಟಾನ್ಸ್ ತಂಡದ ಘೋಷಣೆಯಾದಾಗ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿನ ಬ್ಯಾಟ್ಸ್ಮನ್ಗಳ ಆಯ್ಕೆ ಮತ್ತು ಪಾಂಡ್ಯಗೆ ನಾಯಕನ ಸ್ಥಾನ ನೀಡಿರುವುದು ಅತೀ ಹೆಚ್ಚು ಚರ್ಚೆಯಾಯಿತು. ವಿಶೇಷ ಎಂದರೆ ಟೀಕೆ ಟಿಪ್ಪಣಿಗಳಿಗೆ ಗುಜರಾತ್ ಟೈಟಾನ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳೇ ಉತ್ತರ ನೀಡಿದ್ದರು. ಏಕೆಂದರೆ ಈ ಬಾರಿ ಗುಜರಾತ್ ಟೈಟಾನ್ಸ್ ಏಳು ಪಂದ್ಯಗಳನ್ನು ಕೊನೆಯ ಓವರ್ನಲ್ಲಿ ಗೆದ್ದಿದೆ. ಈ ಮೂಲಕ ಅತ್ಯಧಿಕ ಬಾರಿ ಅಂತಿಮ ಓವರ್ನಲ್ಲಿ ಗುರಿ ಬೆನ್ನಟ್ಟಿ ಗೆದ್ದ ತಂಡ ಎಂಬ ದಾಖಲೆಯನ್ನು ಗುಜರಾತ್ ಟೈಟಾನ್ಸ್ ನಿರ್ಮಿಸಿದೆ.
ಇನ್ನು ನಾಯಕನ ಬಗ್ಗೆ ಹೇಳಬೇಕೆಂದಿಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮಿಂಚಿದ್ದಾರೆ. ಅಷ್ಟೇ ಅಲ್ಲದೆ ಅದ್ಭುತವಾಗಿ ತಂಡವನ್ನು ಮುನ್ನಡೆಸಿದ್ದಾರೆ. ಈ ಮೂಲಕ ಚೊಚ್ಚಲ ಸೀಸನ್ನಲ್ಲೇ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ.
ಹೌದು, ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಟ್ರೋಫಿಯನ್ನು ಎತ್ತಿ ಹಿಡಿದು ತಂಡದೊಂದಿಗೆ ಸಂಭ್ರಮಿಸುತ್ತಿರುವಾಗ ಇಬ್ಬರು ಮಾಜಿ ಆಟಗಾರರು ಮುಗುಳು ನಗುತ್ತಾ ತುಸು ದೂರದಲ್ಲಿ ನಿಂತು ಸಂಭ್ರಮಿಸುತ್ತಿದ್ದರು. ಅವರು ಮತ್ಯಾರೂ ಅಲ್ಲ, ಗುಜರಾತ್ ಟೈಟಾನ್ಸ್ ತಂಡದ ಕೋಚ್ ಆಶಿಶ್ ನೆಹ್ರಾ ಹಾಗೂ ಮೆಂಟರ್ ಹಾಗೂ ಬ್ಯಾಟಿಂಗ್ ಕೋಚ್ ಗ್ಯಾರಿ ಕರ್ಸ್ಟನ್. ಅದೇ 2019 ರಲ್ಲಿ ಆರ್ಸಿಬಿ ತಂಡದ ವಜಾಗೊಳಿಸಿದ ನೆಹ್ರಾ ಹಾಗೂ ಕಸ್ಟರ್ನ್.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.