ಭಾರತ ಹಾಕಿ ತಂಡದ ಮಾಜಿ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಅವರಿಗೆ ಕೇರಳ ಸರ್ಕಾರವು 2 ಕೋಟಿ ರೂ. ನಗದು ಬಹುಮಾನ ಘೋಷಿಸಿದೆ. ಭಾರತೀಯ ಹಾಕಿಗೆ ಶ್ರೀಜಿತ್ ನೀಡಿದ ಕೊಡುಗೆಯನ್ನು ಪರಿಗಣಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಿಎಂಒ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೇರಳ ಮೂಲದ ಪಿಆರ್ ಶ್ರೀಜೇಶ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡದ ಗೋಲ್ ಕೀಪರ್ ಆಗಿ ಕಾಣಿಸಿಕೊಂಡಿದ್ದರು. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಶ್ರೀಜೇಶ್ ಭಾರತ ತಂಡವು ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಗೆಲುವಿನೊಂದಿಗೆ ಅವರು ಹಾಕಿ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದರು.
ಇದೀಗ ನಿವೃತ್ತರಾಗಿ ಹೊಸ ಇನಿಂಗ್ಸ್ ಆರಂಭಿಸಲು ಮುಂದಾಗಿರುವ ಪಿಆರ್ ಶ್ರೀಜೇಶ್ ಅವರಿಗೆ ಕೇರಳ ಸರ್ಕಾರವು 2 ಕೋಟಿ ರೂ. ನಗದು ಬಹುಮಾನ ನೀಡಲು ಮುಂದಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್ ಬೆನ್ನಲ್ಲೇ ನಿವೃತ್ತಿ ಘೋಷಿಸಿರುವ ಶ್ರೀಜೇಶ್ ಅವರನ್ನು ಜೂನಿಯರ್ ಪುರುಷರ ತಂಡದ ಮುಖ್ಯ ಕೋಚ್ ಆಗಿ ಭಾರತೀಯ ಹಾಕಿ ಫೆಡರೇಷನ್ ನೇಮಿಸಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ ನಡೆಯಲಿರುವ ಸುಲ್ತಾನ್ ಆಫ್ ಜೋಹರ್ ಕಪ್ ಮೂಲಕ ಶ್ರೀಜೇಶ್ ಕೋಚ್ ಆಗಿ ಕಾರ್ಯಾರಂಭ ಮಾಡಲಿದ್ದು, ಈ ಮೂಲಕ ಹೊಸ ಸಾಧನೆ ಮಾಡುವ ತವಕದಲ್ಲಿದ್ದಾರೆ.