ಲಿಯೋನೆಲ್ ಮೆಸ್ಸಿ (Lionel Messi) ತಮ್ಮ ವೃತ್ತಿಜೀವನದ ದೊಡ್ಡ ಕನಸನ್ನು ನನಸಾಗಿಸಿದ್ದಾರೆ. ಭಾನುವಾರ ನಡೆದ ಫಿಫಾ ವಿಶ್ವಕಪ್‌ನಲ್ಲಿ (FIFA World Cup) ಫ್ರಾನ್ಸ್ ತಂಡವನ್ನು ಸೋಲಿಸುವ ಮೂಲಕ ಅರ್ಜೆಂಟೀನಾ (Argentina vs France) ತಂಡವನ್ನು ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಮಾಡಿದ್ದಾರೆ. ತಂಡವನ್ನು ವಿಶ್ವ ಚಾಂಪಿಯನ್ ಮಾಡಿದ ಬಳಿಕ ಮೆಸ್ಸಿ ರಾಷ್ಟ್ರೀಯ ತಂಡಕ್ಕೆ ಗುಡ್ಬೈ ಹೇಳುತ್ತಾರೆ ಎಂದು ವರದಿಯಾಗಿತ್ತು. ಫೈನಲ್‌ಗೂ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮೆಸ್ಸಿ ಕೂಡ ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಎಂದು ಹೇಳಿಕೊಂಡಿದ್ದರು. ಆದರೀಗ ತಮ್ಮ ನಿರ್ಧಾರವನ್ನು ಮೆಸ್ಸಿ ಬದಲಿಸಿದಂತೆ ತೋರುತ್ತಿದೆ. ಪಂದ್ಯ ಮುಗಿದ ಬಳಿಕ ತಮ್ಮ ಭವಿಷ್ಯದ ಬಗ್ಗೆ ಹಲವು ಮಾಹಿತಿಗಳನ್ನು ಮೆಸ್ಸಿ ಹಂಚಿಕೊಂಡಿದ್ದಾರೆ. ಇದರಲ್ಲಿ ಪ್ರಮುಖ ವಿಚಾರವೆಂದರೆ ಮೆಸ್ಸಿಯ ನಿವೃತ್ತಿ ವಿಚಾರ. ಈ ಬಗ್ಗೆ ಮಾತನಾಡಿರುವ ಮೆಸ್ಸಿ ತಾನು ನಿವೃತ್ತಿಯಾಗುತ್ತಿಲ್ಲ, ಬದಲಿಗೆ ಅರ್ಜೆಂಟೀನಾ ಪರ ಆಡುವುದನ್ನು ಮುಂದುವರಿಸುವುದಾಗಿ ಹೇಳಿಕೊಂಡಿದ್ದಾರೆ.
2. ಮೆಸ್ಸಿ ಹೇಳಿದ್ದೇನು?
ತನ್ನ ವೃತ್ತಿ ಜೀವನದ ಐದನೇ ವಿಶ್ವಕಪ್ ಆಡಿದ ಮೆಸ್ಸಿ, ಈ ಮೂಲಕ ಐದು ವಿಶ್ವಕಪ್‌ಗಳನ್ನು ಆಡಿದ ಆರನೇ ಆಟಗಾರ ಎನಿಸಿಕೊಂಡಿದ್ದರು. ಅಲ್ಲದೆ ಫೈನಲ್‌ಗೂ ಮುನ್ನ ಮೆಸ್ಸಿ ಇದು ಬಹುಶಃ ನನ್ನ ಕೊನೆಯ ವಿಶ್ವಕಪ್ ಎಂದು ಹೇಳಿದ್ದರು. ಅಂದಿನಿಂದ ಮೆಸ್ಸಿ ಅಂತರಾಷ್ಟ್ರೀಯ ಫುಟ್ಬಾಲ್ಗೆ ವಿದಾಯ ಹೇಳುತ್ತಿದ್ದಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮೆಸ್ಸಿ, “ಇದೆಲ್ಲವನ್ನೂ ಸಾಧಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ, ಫೈನಲ್ ತಲುಪುವ ಮೂಲಕ ನನ್ನ ವಿಶ್ವಕಪ್ ಪ್ರಯಾಣವನ್ನು ಕೊನೆಗೊಳಿಸುತ್ತಿದ್ದೇನೆ. ಮುಂದಿನ ವಿಶ್ವಕಪ್‌ಗೆ ಹಲವು ವರ್ಷಗಳು ಬಾಕಿಯಿದ್ದು, ನಾನು ಮತ್ತೆ ಮುಂದಿನ ವಿಶ್ವಕಪ್‌ನಲ್ಲಿ ಆಡಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ಈ ರೀತಿ ನನ್ನ ಪ್ರಯಾಣವನ್ನು ಮುಗಿಸುವುದು ಉತ್ತಮವಾಗಿದೆ” ಎದು ಹೇಳಿಕೊಂಡಿದ್ದರು.
FIFA World Cup 2022: ಮೆಸ್ಸಿ ಹಿಂದಿಕ್ಕೆ ಗೋಲ್ಡನ್ ಬೂಟ್ ಗೆದ್ದ ಕೈಲಿಯನ್ ಎಂಬಪ್ಪೆ..!
3. ನಾನು ನಿವೃತ್ತಿಯಾಗುತ್ತಿಲ್ಲ
ಆದರೆ ಚಾಂಪಿಯನ್ ಆದ ಬಳಿಕ ತನ್ನ ನಿರ್ಧಾರವನ್ನು ಬದಲಿಸಿಕೊಂಡಿರುವ ಮೆಸ್ಸಿ, ಅಂತರಾಷ್ಟ್ರೀಯ ಫುಟ್‌ಬಾಲ್‌ನಿಂದ ನಾನು ನಿವೃತ್ತಿಯಾಗುತ್ತಿಲ್ಲ. ಅರ್ಜೆಂಟೀನಾ ಪರ ಆಡುವುದನ್ನು ಮುಂದುವರಿಸುವುದಾಗಿ ಪ್ರಶಸ್ತಿ ಗೆಲುವಿನ ನಂತರ ಹೇಳಿದ್ದಾರೆ. TYC ಸ್ಪೋರ್ಟ್ಸ್ ವರದಿಯ ಪ್ರಕಾರ, ಪಂದ್ಯದ ನಂತರ ಈ ಬಗ್ಗೆ ಮಾತನಾಡಿರುವ ಮೆಸ್ಸಿ, “ಇಲ್ಲ, ನಾನು ನನ್ನ ರಾಷ್ಟ್ರೀಯ ತಂಡದಿಂದ ನಿವೃತ್ತಿಯಾಗುತ್ತಿಲ್ಲ. ನಾನು ಅರ್ಜೆಂಟೀನಾದ ಜೆರ್ಸಿಯಲ್ಲಿ ವಿಶ್ವ ಚಾಂಪಿಯನ್‌ನಂತೆ ಆಡುವುದನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.
ಫೈನಲ್‌ನಲ್ಲಿ ಎರಡು ಗೋಲುಗಳನ್ನು ಗಳಿಸಿದ ಮೆಸ್ಸಿ, ಇದರೊಂದಿಗೆ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಮೆಸ್ಸಿ ಒಟ್ಟು 26 ವಿಶ್ವಕಪ್ ಪಂದ್ಯಗಳಲ್ಲಿ 13 ಗೋಲುಗಳನ್ನು ಗಳಿಸಿದ್ದಾರೆ. ಅಲ್ಲದೆ ಫೈನಲ್‌ನಲ್ಲಿ ಕಣಕ್ಕಿಳಿಯುವುದರೊಂದಿಗೆ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂಬ ದಾಖಲೆಯನ್ನೂ ಸಹ ಮೆಸ್ಸಿ ಬರೆದಿದ್ದಾರೆ.
4. ಪಂದ್ಯ ಹೀಗಿತ್ತು
ಫೈನಲ್ ಪಂದ್ಯದ ಮಟ್ಟಿಗೆ ಈ ಪಂದ್ಯ ರೋಚಕವಾಗಿತ್ತು. ಮೊದಲಾರ್ಧದಲ್ಲಿ ಅರ್ಜೆಂಟೀನಾ ಎರಡು ಗೋಲು ಗಳಿಸುವ ಮೂಲಕ ಮುನ್ನಡೆ ಸಾಧಿಸಿತು. 23ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಯನ್ನು ಮೆಸ್ಸಿ ಗೋಲಾಗಿ ಪರಿವರ್ತಿಸಿ ಅರ್ಜೆಂಟೀನಾಗೆ ಮುನ್ನಡೆ ತಂದುಕೊಟ್ಟರು. ನಂತರ 36ನೇ ನಿಮಿಷದಲ್ಲಿ ಏಂಜೆಲ್ ಡಿಮಾರಿಯಾ ಗೋಲು ಬಾರಿಸುವುದರೊಂದಿಗೆ ಅರ್ಜೆಂಟೀನಾಕ್ಕೆ 2-0 ಗೋಲುಗಳ ಮುನ್ನಡೆ ತಂದುಕೊಟ್ಟರು. ಹೀಗಾಗಿ ಪಂದ್ಯವನ್ನು ಮೆಸ್ಸಿಯ ತಂಡ ಭಾಗಶಃ ಗೆದ್ದಂತೆಯೇ ತೋರುತ್ತಿತ್ತು. ಆದರೆ ಫ್ರೆಂಚ್ ಸ್ಟಾರ್ ಕೈಲಿಯನ್ ಎಂಬಪ್ಪೆ 80 ಮತ್ತು 81 ನೇ ನಿಮಿಷಗಳಲ್ಲಿ ಎರಡು ಗೋಲುಗಳನ್ನು ಗಳಿಸಿ ತಮ್ಮ ತಂಡವನ್ನು ಸಮಸ್ಥಿತಿಗೆ ತಂದರು. ಇದರ ನಂತರ, ಹೆಚ್ಚುವರಿ ಸಮಯದಲ್ಲಿ, ಮೆಸ್ಸಿ 108 ನೇ ನಿಮಿಷದಲ್ಲಿ ಗೋಲು ಗಳಿಸಿ ಅರ್ಜೆಂಟೀನಾಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ 10 ನಿಮಿಷಗಳ ನಂತರ ಎಂಬಾಪ್ಪೆ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿ ಸ್ಕೋರ್ ಅನ್ನು ಸಮಗೊಳಿಸಿದರು. ಅಂತಿಮವಾಗಿ ಪೆನಾಲ್ಟಿ ಶೂಟೌಟ್ನಲ್ಲಿ ಅರ್ಜೆಂಟೀನಾ 4-2 ಗೋಲುಗಳಿಂದ ಫ್ರಾನ್ಸ್ ತಂಡವನ್ನು ಮಣಿಸಿ ವಿಶ್ವಕಪ್ ಎತ್ತಿಹಿಡಿಯಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:34 am, Mon, 19 December 22