ಮನು ಭಾಕರ್ ಮಸ್ತ್ ಡ್ಯಾನ್ಸ್ ವಿಡಿಯೋ ವೈರಲ್
Manu Bhaker: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮನು ಭಾಕರ್ ಒಟ್ಟು ಮೂರು ಸ್ಪರ್ಧೆಗಳಲ್ಲಿ ಕಾಣಿಸಿಕೊಂಡಿದ್ದರು. ಈ ಮೂರು ಸ್ಪರ್ಧೆಗಳಲ್ಲೂ ಭಾರತೀಯ ಶೂಟರ್ ಫೈನಲ್ ತಲುಪಿರುವುದು ವಿಶೇಷ. ಅಲ್ಲದೆ ಎರಡು ಸ್ಪರ್ಧೆಗಳಲ್ಲಿ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಇನ್ನು 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕೂದಲೆಳೆಯ ಅಂತರದಲ್ಲಿ ಪದಕ ಕೈ ತಪ್ಪಿತ್ತು.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಎರಡು ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ ಮನು ಭಾಕರ್ಗೆ ಸನ್ಮಾನ ಕಾರ್ಯಕ್ರಮ ಮುಂದುವರೆದಿದೆ. ಮಂಗಳವಾರ ಚೆನ್ನೈನ ವೆಲಮ್ಮಾಲ್ ಮಾಲ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮನು ಭಾಕರ್ ಅವರನ್ನು ಸನ್ಮಾನಿಸಲಾಗಿತ್ತು. ಇದೇ ವೇಳೆ ವೇಲಮ್ಮಾಳ್ ಗ್ರೂಪ್ನ ಶಾಲಾ ವಿದ್ಯಾರ್ಥಿಗಳು ಭಾರತೀಯ ಶೂಟರ್ ಜೊತೆ ಡ್ಯಾನ್ಸ್ ಮಾಡಲು ಮನವಿ ಮಾಡಿದ್ದಾರೆ. ಈ ಕೋರಿಕೆಯನ್ನು ಪೂರೈಸಲು ಮನು ಭಾಕರ್ ವಿದ್ಯಾರ್ಥಿಗಳ ಜೊತೆ ಡ್ಯಾನ್ಸ್ ಮಾಡಿದರು. ಬಾಲಿವುಡ್ನ ಕಾಲಾ ಚಸ್ಮಾ ಹಾಡಿಗೆ ಹೆಜ್ಜೆ ಹಾಕಿದ ಭಾಕರ್ ಅವರ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಎರಡು ಪದಕಗಳನ್ನು ಗೆಲ್ಲುವ ಮೂಲಕ ಮನು ಭಾಕರ್ ಹೊಸ ಇತಿಹಾಸ ನಿರ್ಮಿಸಿದ್ದರು. ಅದು ಸಹ ಎರಡು ಪದಕಗಳನ್ನು ಗೆಲ್ಲುವ ಮೂಲಕ ಎಂಬುದು ವಿಶೇಷ. ಅಂದರೆ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಯಾವುದೇ ಸ್ಪರ್ಧಿ ಒಂದೇ ಆವೃತ್ತಿಯಲ್ಲಿ 2 ಪದಕ ಗೆದ್ದಿರಲಿಲ್ಲ. ಆದರೆ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಎರಡು ಪದಕಗಳನ್ನು ಗೆಲ್ಲುವ ಮೂಲಕ ಮನು ಭಾಕರ್ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಮೊದಲು ಮಹಿಳಾ ಸಿಂಗಲ್ಸ್ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಅಲಂಕರಿಸುವ ಮೂಲಕ ಕಂಚಿನ ಪದಕ ಗೆದ್ದಿದ್ದ ಮನು ಭಾಕರ್, ಆ ಬಳಿಕ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಫರ್ಧೆದಲ್ಲಿ ಸರಬ್ಜೋತ್ ಸಿಂಗ್ ಜೊತೆಗೂಡಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಮನು ಭಾಕರ್ ಪಾತ್ರರಾಗಿದ್ದಾರೆ.