IPL 2025: ಸಮಿತ್ ದ್ರಾವಿಡ್ಗೆ ಐಪಿಎಲ್ನಲ್ಲಿ ಚಾನ್ಸ್ ಸಿಗೋದು ಡೌಟ್
Samit Dravid: ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಸುಪುತ್ರ ಸಮಿತ್ ಕರ್ನಾಟಕ ಟಿ20 ಲೀಗ್ನಲ್ಲಿ ಮೈಸೂರು ವಾರಿಯರ್ಸ್ ಪರ ಆಡುತ್ತಿದ್ದಾರೆ. ಮೊದಲ ನಾಲ್ಕು ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಸಮಿತ್ ದ್ರಾವಿಡ್ 3 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಒಟ್ಟು 63 ರನ್ ಕಲೆಹಾಕಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಸಂಚಲನ ಸೃಷ್ಟಿಸಿದ್ದಾರೆ. ಈ ಭರ್ಜರಿ ಪ್ರದರ್ಶನದ ಬೆನ್ನಲ್ಲೇ ಸಮಿತ್ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಐಪಿಎಲ್ 2025ರ ಹರಾಜಿನಲ್ಲಿ ಕಾಣಿಸಿಕೊಳ್ಳಲು ಅವರು ಅರ್ಹತೆ ಹೊಂದಿಲ್ಲ ಎಂಬುದೇ ಸತ್ಯ.
ಏಕೆಂದರೆ ಐಪಿಎಲ್ ನಿಯಮಗಳ ಪ್ರಕಾರ, ಆಟಗಾರನು ಹರಾಜಿನಲ್ಲಿ ಭಾಗವಹಿಸಲು ಕನಿಷ್ಠ ಎರಡು ಲಿಸ್ಟ್ ಎ ಅಥವಾ ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು. ಹಾಗೆಯೇ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರಬೇಕು.
ಇಲ್ಲಿ ಸಮಿತ್ ದ್ರಾವಿಡ್ ಅವರ ಹೆಸರು ರಾಜ್ಯ ಕ್ರಿಕೆಟ್ ಸಂಸ್ಥೆಯಡಿಯಲ್ಲಿ ನೋಂದಾಯಿತವಾಗಿದೆ. ಆದರೆ ಅವರು ಕರ್ನಾಟಕ ಪರ ಯಾವುದೇ ಲಿಸ್ಟ್ ಎ ಅಥವಾ ಪ್ರಥಮ ದರ್ಜೆ ಪಂದ್ಯಗಳನ್ನಾಡಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.
ಬಿಸಿಸಿಐ ನಿಯಮದ ಪ್ರಕಾರ, ಐಪಿಎಲ್ನಲ್ಲಿ ಭಾಗವಹಿಸಬೇಕಾದ ಆಟಗಾರನು ಭಾರತೀಯ ಕ್ರಿಕೆಟ್ ಮಂಡಳಿ ಆಯೋಜಿಸುವ ಟೂರ್ನಿಯ ಯಾವುದಾರೂ ಎರಡು ಪಂದ್ಯಗಳನ್ನಾಡುವುದು ಕಡ್ಡಾಯ. ಆದರೆ ಇತ್ತ ಸಮಿತ್ ದ್ರಾವಿಡ್ ಕರ್ನಾಟಕ ಸೀನಿಯರ್ ತಂಡದ ಪರ ಯಾವುದೇ ಪ್ರಮುಖ ಟೂರ್ನಿ ಆಡದ ಕಾರಣ ಅವರಿಗೆ ಅವಕಾಶ ಸಿಗುವ ಸಾಧ್ಯತೆಯಿಲ್ಲ.
ಇದಾಗ್ಯೂ ಸಮಿತ್ ದ್ರಾವಿಡ್ 2023-24 ರ ಕೂಚ್ ಬೆಹರ್ ವಿಜೇತ ಅಂಡರ್19 ಕರ್ನಾಟಕ ತಂಡದ ಭಾಗವಾಗಿದ್ದರು. ಆಲೂರಿನಲ್ಲಿ ನಡೆದ ಪ್ರವಾಸಿ ಲಂಕಾಶೈರ್ ತಂಡದ ವಿರುದ್ಧ ಮೂರು ದಿನಗಳ ಪಂದ್ಯದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಇಲೆವೆನ್ನಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಮುಂಬರುವ ದಿನಗಳಲ್ಲಿ ಕರ್ನಾಟಕ ಸೀನಿಯರ್ ತಂಡದಲ್ಲಿ ಅವಕಾಶ ಪಡೆಯುವ ವಿಶ್ವಾಸದಲ್ಲಿದ್ದಾರೆ.
ಅರ್ಹತೆ ಪಡೆಯುವುದು ಹೇಗೆ?
ಒಂದು ವೇಳೆ ಮುಂಬರುವ ರಣಜಿ ಮತ್ತು ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಗಳಲ್ಲಿ ಸಮಿತ್ ದ್ರಾವಿಡ್ ಅವಕಾಶ ಪಡೆದರೆ, ಐಪಿಎಲ್ ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಳ್ಳಲು ಅರ್ಹರಾಗಲಿದ್ದಾರೆ. ಹೀಗಾಗಿ ಡಿಸೆಂಬರ್ ತಿಂಗಳೊಳಗೆ ಸಮಿತ್ ಕರ್ನಾಟಕ ಪರ ಕಣಕ್ಕಿಳಿದರೆ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಅವಕಾಶ ಪಡೆಯಲಿದ್ದಾರೆ.
ಸಮಿತ್ ದ್ರಾವಿಡ್ ಪ್ರದರ್ಶನ ಹೇಗಿದೆ?
ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಸಮಿತ್ ದ್ರಾವಿಡ್ ಮೈಸೂರು ವಾರಿಯರ್ಸ್ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ. ವಾರಿಯರ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಕಾಣಿಸಿಕೊಳ್ಳುತ್ತಿರುವ 18 ರ ಹರೆಯದ ಯುವ ದಾಂಡಿಗ 4 ಪಂದ್ಯಗಳಿಂದ 63 ರನ್ ಕಲೆಹಾಕಿದ್ದಾರೆ. ಈ ವೇಳೆ 3 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳನ್ನು ಬಾರಿಸಿದ್ದಾರೆ.
Published On - 12:53 pm, Wed, 21 August 24