2020 ರಂದು ನಡೆದಿದ್ದ ಟೋಕಿಯೋ ಒಲಿಂಪಿಕ್ಸ್ (Tokyo Olympics) ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ಬರೋಬ್ಬರಿ 87.58 ಮೀಟರ್ ದೂರ ಜಾವಲಿನ್ ಥ್ರೋ (Javelin Throw) ಮಾಡುವ ಮೂಲಕ ದೇಶಕ್ಕೆ ಏಕೈಕ ಚಿನ್ನದ ಪದಕ ಗೆದ್ದು ಕೊಟ್ಟಿದ್ದ ಬಂಗಾರದ ಹುಡುಗ ನೀರಜ್ ಚೋಪ್ರಾ (Neeraj Chopra) ಬಗ್ಗೆ ನಿಮಗೆಲ್ಲ ಗೊತ್ತೆ ಇದೆ. ಈಗ ನೀರಜ್ನಂತೆಯೇ ಜಾವಲಿನ್ ಥ್ರೋ ವಿಭಾಗದಲ್ಲಿ ಕರ್ನಾಟಕದ ಪ್ರತಿಭೆಯೊಂದು ಅಪ್ರತಿಮ ಸಾಧನೆ ತೋರಿದೆ. ಕೇರಳದ ತಿರುವನಂತಪುರಂನಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ 82.43 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಮೊದಲ ಸ್ಥಾನ ಪಡೆದು ಮುಂದೆ ಬರುವ ಕಾಮನ್‌ವೆಲ್ತ್, ಏಷ್ಯನ್ ಗೇಮ್ಸ್‌ಗೆ ಕನ್ನಡಿಗ ಮನು ಶೆಟ್ಟಿ ಅರ್ಹತೆ ಪಡೆದಿದ್ದಾರೆ.
ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕುಪ್ಪಗೋಡು ನಾಗನಹಳ್ಳಿಯ ನಿವಾಸಿಯಾಗಿರುವ ಮನು ಶೆಟ್ಟಿ ಪ್ರಸ್ತುತ ಇಂಡಿಯನ್ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೃಷಿಕ ಕುಟುಂಬದ ಕೇಶವ ಹಾಗೂ ಸುಜಾತ ದಂಪತಿಗಳಿಗೆ ಜನಿಸಿದ ಮನು ಶೆಟ್ಟಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹಾಸನದ ಬೇಲೂರಿನಲ್ಲಿ ಮುಗಿಸಿರುತ್ತಾರೆ. ನಂತರ ಪ್ರಥಮ ಪಿಯು ಓದುವಾಗಲೇ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗುವ ಮನುಶೆಟ್ಟಿ 2ನೇ ವರ್ಷದ ಪಧವಿ ಮುಗಿಯುವ ವೇಳೆಗೆ ಕ್ರೀಡಾ ವಿಭಾಗದಲ್ಲಿ ಇಂಡಿಯನ್ ಆರ್ಮಿಗೆ ಆಯ್ಕೆಯಾಗುತ್ತಾರೆ. ನಂತರ ಹಲವಾರು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗೆದ್ದಿದ್ದಾರೆ. ಕಳೆದ ವರ್ಷ ಪಂಜಾಬ್ನ ಪಟಿಯಾಲದಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ 2ರಲ್ಲಿ 75 ಮೀಟರ್ ಜಾವಲಿನ್ ಎಸೆದು 3ನೇ ಸ್ಥಾನ ಪಡೆದರು. ನಂತರ ತೆಲಂಗಾಣದಲ್ಲಿ ನಡೆದಿದ್ದ ಓಪನ್ ನ್ಯಾಷನಲ್ ಕ್ರೀಡಾಕೂಟದಲ್ಲಿ 2ನೇ ಸ್ಥಾನಕ್ಕೆ ಮನುಶೆಟ್ಟಿ ತೃಪ್ತಿ ಪಡಬೇಕಾಯಿತು.
ಬಳಿಕ ಒಲಂಪಿಕ್ ಹೀರೋ ನೀರಜ್ ಚೋಪ್ರಾಗೆ ತರಬೇತಿ ನೀಡಿದ್ದ ಕಾಶೀನಾಥ್ ನಾಯ್ಕ್ ಬಳಿ ಕಠಿಣ ತರಬೇತಿ ಪಡೆಯುತ್ತಿರುವ ಮನು ಶೆಟ್ಟಿ, ಕೇರಳದ ತಿರುವನಂತಪುರಂನಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ 82.43 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ 2022ರ ಕಾಮನ್‌ವೆಲ್ತ್ ಹಾಗೂ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ. ಈ ಗ್ರಾಮೀಣ ಪ್ರತಿಭೆಗೆ ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡುವುದಾಗಿ ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ ಭರವಸೆ ನೀಡಿದ್ದಾರೆ. ಒಲಂಪಿಕ್ಸ್ನಲ್ಲಿ ಚಿನ್ನ ಗೆದ್ದ ನೀರಜ್ರಂತೆಯೇ ಮನು ಶೆಟ್ಟಿ ಕೂಡ ಕಾಮನ್‌ವೆಲ್ತ್ ಹಾಗೂ ಏಷ್ಯನ್ ಗೇಮ್ಸ್ನಲ್ಲಿ ಪದಕ ಗೆದ್ದು ಒಲಂಪಿಕ್ಸ್ನಲ್ಲಿ ಆಡುವಂತ್ತಾಗಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.
ಇದನ್ನೂ ಓದಿ:IND vs SL: 28 ವರ್ಷಗಳ ನಂತರ ಶ್ರೀಲಂಕಾವನ್ನು ಕ್ಲೀನ್ ಸ್ವೀಪ್ ಮಾಡಿದ ಭಾರತ! ಸರಣಿ ಗೆಲುವಿಗೆ 5 ಕಾರಣಗಳಿವು
Published On - 9:33 pm, Mon, 14 March 22