WTC Final: ಸೌತಾಂಪ್ಟ್​ನಲ್ಲಿ ಕೊಹ್ಲಿಔಟಾದ ರೀತಿ 2014 ರ ಇಂಗ್ಲೆಂಡ್​ ಸರಣಿಯನ್ನು ಜ್ಞಾಪಿಸಿತು ಎಂದರು ಹುಸ್ಸೇನ್ ಮತ್ತು ಗಾವಸ್ಕರ್

|

Updated on: Jun 24, 2021 | 1:32 AM

ಜೇಮಿಸನ್ ಬಹಳ ಚಾಣಾಕ್ಷತೆಯಿಂದ ತಮ್ಮ ಐಪಿಎಲ್​ ತಂಡದ ನಾಯಕನಿಗೆ ಬೌಲ್ ಮಾಡಿದರು. ಕೊಹ್ಲಿ ಕ್ರಿಸ್​ ಹೊರಗಡೆ ನಿಂತು ಬ್ಯಾಟ್ ಮಾಡುತ್ತಿದ್ದರು. ಇದರ ಬಗ್ಗೆ ಅರಿವಿದ್ದ ಜೇಮಿಸನ್ ಬಾಲನ್ನು ಆಫ್​ಸ್ಟಂಪ್​ ಹೊರಗಡೆ ಗುಡ್​ಲೆಂಗ್ತ್ ಸ್ಪಾಟ್​ನಲ್ಲಿ ಪಿಚ್​ ಮಾಡಿ ಮತ್ತೂ ಆಚೆ ಹೋಗುವಂತೆ (ಔಟ್​ಸ್ವಿಂಗರ್) ಎಸೆಯುತ್ತಿದ್ದರು.

WTC Final: ಸೌತಾಂಪ್ಟ್​ನಲ್ಲಿ ಕೊಹ್ಲಿಔಟಾದ ರೀತಿ 2014 ರ ಇಂಗ್ಲೆಂಡ್​ ಸರಣಿಯನ್ನು ಜ್ಞಾಪಿಸಿತು ಎಂದರು ಹುಸ್ಸೇನ್ ಮತ್ತು ಗಾವಸ್ಕರ್
ಕೈಲ್ ಜೇಮಿಸನ್
Follow us on

ಸೌತಾಂಪ್ಟನ್:  ಬಹಳ ಕುತೂಹಲದಿಂದ ನಿರೀಕ್ಷಿಸಲಾಗಿದ್ದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಭಾರತದ ಸುಲಭ ಸೋಲಿನೊಂದಿಗೆ ಕೊನೆಗೊಂಡಿದೆ. ಗೆಲ್ಲಲು ಅಗತ್ಯವಿದ್ದ 138 ರನ್​ಗಳನ್ನು ನ್ಯೂಜಿಲೆಂಡ್​ ತಂಡ ಕೇವಲ ಎರಡು ವಿಕೆಟ್​ ಕಳೆದುಕೊಂಡು ಗಳಿಸಿ 144 ವರ್ಷಗಳ ಟೆಸ್ಟ್ ಕ್ರಿಕೆಟ್​ ಇತಿಹಾಸದ ಮೊದಲ ಚಾಂಪಿಯನ್ ಎನಿಸಿಕೊಂಡಿತು. ಫೈನಲ್​ವರಗೆ ಚಾಂಪಿಯನ್​ಗಳಂತೆ ಆಡಿದ್ದ ಭಾರತ ಅಂತಿಮ ಗೆರೆ ದಾಟುವಾಗ ಮಾತ್ರ ಕೆಟ್ಟದ್ದಾಗಿ ಎಡವಿತು. ಸೋಲಿಗೆ ಕಾರಣಗಳೇನು ಎನ್ನುವ ಪೋಸ್ಟ್​-ಮಾರ್ಟೆಮ್ ಇನ್ನು ವಾರಗಟ್ಟಲೆ ನಡೆಯಲಿದೆ. ಬಿಡಿ, ನಾವು ಅದರ ಬಗ್ಗೆ ಯೋಚಿಸಿವುದು ಬೇಡ, ಫಲಿತಾಂಶ ಬಂದಾಗಿದೆ, ಉತ್ತಮ ಮತ್ತು ಆಲ್​ರೌಂಡ್​ ಆಟದ ಪ್ರದರ್ಶನ ನೀಡಿದ ಟೀಮ್ ಚಾಂಪಿಯನ್ ಪಟ್ಟ ಧರಿಸಿದೆ, ಅದೇ ಈ ಗಳಿಗೆಯ ಸತ್ಯ ಮತ್ತು ನಾವು ಅದನ್ನು ಅಂಗೀಕರಿಸಬೇಕು. 2019ಐಸಿಸಿ ವಿಶ್ವಕಪ್​ ಅನ್ನು ಒಂದು ಮೂರ್ಖ ನಿಯಮದ ಕಾರಣ ಗೆಲ್ಲಲು ವಿಫಲವಾಗಿದ್ದ ನ್ಯೂಜಿಲೆಂಡ್​ ಸಾಂಪ್ರದಾಯಿಕ ಆವೃತ್ತಿಯ ಚಾಂಪಿಯನ್​ಶಿಪ್​ ಗೆದ್ದು ತಾನು ನಿಜವಾದ ಚಾಂಪಿಯನ್ ತಂಡವೆಂದು ಪ್ರೂವ್ ಮಾಡಿದೆ.

ಕಾಮೆಂಟೆರಿ ಬಾಕ್ಸ್​ನಲ್ಲಿದ್ದ ಸುನಿಲ್ ಗಾವಸ್ಕರ್ ಮತ್ತು ನಾಸೆರ್ ಹುಸ್ಸೇನ್ ಅವರು ಭಾರತದ ನಾಯಕ ವಿರಾಟ್​ ಕೊಹ್ಲಿ ಬ್ಯಾಟಿಂಗ್ ವೈಫಲ್ಯದ ಹಿಂದಿನ ಕಾರಣವನ್ನು ಸರಿಯಾಗಿ ವಿಶ್ಲೇಷಿಸಿದ್ದಾರೆ. ಕ್ರಿಕೆಟ್​ ಪ್ರೇಮಿಗಳಿಗೆ ಚೆನ್ನಾಗಿ ನೆನಪಿರಬಹುದು. ಭಾರತದ 2014ರ ಇಂಗ್ಲೆಂಡ್​ ಪ್ರವಾಸ ಕೊಹ್ಲಿ ಪಾಲಿಗೆ ದುಸ್ವಪ್ನವಾಗಿ ಪರಿಣಮಿಸಿತು. ಎಲ್ಲ 5 ಟೆಸ್ಟ್​ಗಳಲ್ಲೂ ಅವರು ಕೆಟ್ಟದ್ದಾಗಿ ಫೇಲಾಗಿದ್ದರು. ಜೇಮ್ಸ್ ಆಂಡರ್ಸನ್ ಅವರು ಕೊಹ್ಲಿ ಪದೇಪದೆ ಔಟ್​ ಮಾಡಿ ಅವರ ಬದುಕನ್ನು ನರಕವಾಗಿಸಿದ್ದರು.

ಕೊಹ್ಲಿ ಡಬ್ಲ್ಯೂಟಿಸಿಯ ಫೈನಲ್​ನ ಎರಡೂ ಇನ್ನಿಂಗ್ಸ್​ಗಳಲ್ಲಿ ವೇಗದ ಬೌಲರ್ ಅಜಾನುಬಾಹು ಕೈಲ್ ಜೇಮಿಸನ್ ಅವರಿಗೆ ವಿಕೆಟ್​ ಒಪ್ಪಿಸಿದರು. ಆಂಡರ್ಸನ್​ ಅವರಂತೆ ಜೇಮಿಸನ್ ಸಹ ಕೊಹ್ಲಿ ಬ್ಯಾಟಿಂಗ್​ನ ಅಪರೂಪದ ದೌರ್ಬಲ್ಯವನ್ನು ಗುರುತಿಸಿ ಒಮ್ಮೆಯಲ್ಲ ಎರಡೂ ಬಾರಿ ಅದನ್ನು ಎಕ್ಸ್​ಪ್ಲಾಯಿಟ್​ ಮಾಡಿದರು.

ರಿಸರ್ವ್ ದಿನದ ಆಟ ಆರಂಭವಾಗುವ ಮೊದಲು ಕ್ರಿಕೆಟ್​ ಪರಿಣಿತರು, ವೀಕ್ಷಕ ವಿವರಣೆಕಾರರು ಪಂದ್ಯದಲ್ಲಿ ಮೂರೂ ಫಲಿತಾಂಶಗಳು ಬರೋದು ಸಾಧ್ಯ ಅಂತ ಹೇಳುತ್ತಿದ್ದರು-ಭಾರತದ ಗೆಲುವು, ನ್ಯೂಜೆಲೆಂಡ್ ಗೆಲುವು ಇಲ್ಲವೇ ಡ್ರಾ. ಕಳೆದ ವಾರವಷ್ಟೇ ಕೇನ್ ವಿಲಿಯಮ್ಸನ್ ಅವರ ಗೈರುಹಾಜರಿ ಹೊರತಾಗಿಯೂ ಇಂಗ್ಲೆಂಡ್​ ಅನ್ನು ಅದರ ಹಿತ್ತಲ್ಲಲ್ಲೇ ಮಣಿಸಿ ಸರಣಿ ಗೆದ್ದಿದ್ದ ಕಿವೀಸ್​ ತಂಡ ಈ ಪಂದ್ಯವನ್ನ ಸೋಲಬಹುದೆಂದು ಅವರು ಯಾವ ಆಧಾರದಲ್ಲಿ ಹೇಳಿದರೋ? ಅದು ಸೋಲುವ ಚಾನ್ಸೇ ಇರಲಿಲ್ಲ. 80-90 ರನ್​ಗಳ ಮೊತ್ತಕ್ಕೆ ನ್ಯೂಜಿಲೆಂಡ್ ಟೀಮನ್ನು ಔಟ್​ ಮಾಡುವುದು ಸಾಧ್ಯವಿತ್ತೇ? ಅದು ಡಬ್ಲ್ಯೂಟಿಸಿಯ ಫೈನಲ್​ ತಲುಪಿದ್ದು ಆಕಸ್ಮಿಕ ಅಲ್ಲ ಸ್ವಾಮಿ, ಭಾರತದಂತೆ ಈ ತಂಡವೂ ಭಾರೀ ಪರಿಶ್ರಮ ಪಟ್ಟು ಆ ಹಂತ ತಲುಪಿತ್ತು. ಸೋಲುವ ಭೀತಿ ಭಾರತಕ್ಕೆ ಮಾತ್ರ ಇತ್ತು, ಅವರಿಗೆ ಇರಲೇ ಇಲ್ಲ. ಹಾಗಾಗೇ, ಆರನೆಯ ಮತ್ತು ಕೊನೆಯ ದಿನವಾಗಿದ್ದ ಬುಧವಾರ ಕೇವಲ ಎರಡು ಫಲಿತಾಂಶ ಸಾಧ್ಯವಿತ್ತು-ನ್ಯೂಜಿಲೆಂಡ್​ ಗೆಲುವು ಇಲ್ಲವೇ ಡ್ರಾ. ಕೊಹ್ಲಿಯನ್ನು ದಿನದಾಟದ ಆರನೇ ಓವರ್​ನಲ್ಲಿ ಔಟ್​ ಮಾಡಿದ ನಂತರ ಭಾರತಕ್ಕೆ ಸೋಲು ಕಟ್ಟಿಟ್ಟ ಬುತ್ತಿಯಾಗಿತ್ತು.

ಜೇಮಿಸನ್ ಬಹಳ ಚಾಣಾಕ್ಷತೆಯಿಂದ ತಮ್ಮ ಐಪಿಎಲ್​ ತಂಡದ ನಾಯಕನಿಗೆ ಬೌಲ್ ಮಾಡಿದರು. ಕೊಹ್ಲಿ ಕ್ರಿಸ್​ ಹೊರಗಡೆ ನಿಂತು ಬ್ಯಾಟ್ ಮಾಡುತ್ತಿದ್ದರು. ಇದರ ಬಗ್ಗೆ ಅರಿವಿದ್ದ ಜೇಮಿಸನ್ ಬಾಲನ್ನು ಆಫ್​ಸ್ಟಂಪ್​ ಹೊರಗಡೆ ಗುಡ್​ಲೆಂಗ್ತ್ ಸ್ಪಾಟ್​ನಲ್ಲಿ ಪಿಚ್​ ಮಾಡಿ ಮತ್ತೂ ಆಚೆ ಹೋಗುವಂತೆ (ಔಟ್​ಸ್ವಿಂಗರ್) ಎಸೆಯುತ್ತಿದ್ದರು. ಕೊಹ್ಲಿ ಚೆಂಡನ್ನು ಬೆನ್ನಟ್ಟುವ ಪ್ರಯತ್ನ ಮಾಡುವ ಬಗ್ಗೆ ಅವರಿಗೆ ನಿಶ್ಚಿತವಾಗಿ ಗೊತ್ತಿತ್ತು.

ಮೊದಲ ಇನ್ನಿಂಗ್ಸ್​ನಲ್ಲಿ ಇನ್​ಸ್ವಿಂಗರ್ ಮೂಲಕ ಕೊಹ್ಲಿಯನ್ನು ಎಲ್​ಬಿ ಬಲೆಗೆ ಕೆಡವಿದ್ದ ಜೇಮಿಸನ್ ಈ ಬಾರಿ ಔಟ್​ಸ್ವಿಂಗರ್ ಅನ್ನು ಬೆನ್ನಟ್ಟುವಂತೆ ಮಾಡಿ ಔಟ್ ಮಾಡಿದರು. ಕೊಹ್ಲಿ ಬ್ಯಾಟಿನ ಅಂಚು ಸವರಿದ ಬಾಲು ವಿಕೆಟ್-ಕೀಪರ್​ ಗ್ಲೌಸ್​ಗಳಿಗೆ ಸುರಕ್ಷಿತವಾಗಿ ಸೇರಿತು.

ಕೊಹ್ಲಿ ಔಟಾದ ರೀತಿ ಬಗ್ಗೆ ಪ್ರತಿಕ್ರಿಯಿಸಿದ ಹುಸ್ಸೇನ್, 2014 ಟೆಸ್ಟ್ ಸರಣಿ ನೆನಪಿಗೆ ಬಂತು ಹೇಳಿದರು.
‘2014 ರಲ್ಲಿ ಔಟಾಗಿದ್ದ ರೀತಿಯಲ್ಲೇ ಕೊಹ್ಲಿ ನಿರ್ಗಮಿಸಿದರು. ಇದೇ ತೆರನಾಗಿ ಆಂಡರ್ಸನ್ ಟೀಮ್ ಇಂಡಿಯ ಕ್ಯಾಪ್ಟನ್​ರನ್ನು ತೊಂದರೆಗೆ ಸಿಲುಕಿಸಿದ್ದರು. ಆದರೆ , 2018 ಸರಣಿಯಲ್ಲಿ ಕೊಹ್ಲಿ ಆ ನ್ಯೂನತೆಯನ್ನು ಸರಿಪಡಿಸಿಕೊಂಡಿದ್ದರು,’ ಎಂದು ಕೊಹ್ಲಿ ಹೇಳಿದರು.

2014 ಸರಣಿಯಲ್ಲಿ ಕೊಹ್ಲಿ ಒಂದೇ ಒಂದು ಅರ್ಧ ಶತಕ ಕೂಡ ಗಳಿಸಲಿಲ್ಲ. ಅವರ ಗಳಿಸಿದ ರನ್ ಸೀಕ್ವೆನ್ಸ್ ಹೀಗಿತ್ತು: 1, 8, 25, 0, 39, 28, 0, 7, 6 ಮತ್ತು 20. ಆಡಿದ 10ಇನ್ನಿಂಗ್ಸ್​ಗಳಲ್ಲಿ 13.5 ಸರಾಸರಿಯಲ್ಲಿ 135 ರನ್! ಆದರೆ 2014 ರಲ್ಲಿ ಆಂಡರ್ಸನ್​ಗೆ 4 ಬಾರಿ ವಿಕೆಟ್ ಒಪ್ಪಿಸಿದ್ದ ಕೊಹ್ಲಿ 2018ರಲ್ಲಿ ಅವರ ದಾಳಿಯಲ್ಲಿ ಒಮ್ಮೆಯೂ ಔಟಾಗಲಿಲ್ಲ. ಎರಡು ಶತಕ ಮತ್ತು ಮೂರು ಅರ್ಧ ಶತಕಗಳ ನೆರವಿನಿಂದ ಅವರು 593 ರನ್ ಗಳಿಸಿದರು.

ಪಾದಗಳ ಚಲನೆಯಿಲ್ಲದ ಕಾರಣ ಕೊಹ್ಲಿ ಔಟಾದರು ಅಂತ ಗಾವಸ್ಕರ್ ಹೇಳಿದರು.

‘ತಮ್ಮ ಹಿಂಗಾಲನ್ನು ಚಲಿಸದೆ ಕೊಹ್ಲಿ ಹೊಡೆತ ಬಾರಿಸುವ ಪ್ರಯತ್ನ ಮಾಡಿದರು. ಅದು ದುಬಾರಿಯಾಗಿ ಪರಿಣಮಿಸಿತು,’ ಎಂದು ಗಾವಸ್ಕರ್ ಹೇಳಿದರು.

ಇದನ್ನೂ ಓದಿ: WTC Final: ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಪಟ್ಟ ಗೆದ್ದ ನ್ಯೂಜಿಲೆಂಡ್! ವಾಟ್ಲಿಂಗ್​ ವಿದಾಯಕ್ಕೆ ಗೆಲುವಿನ ಉಡುಗೂರೆ