ಯುಎಸ್ಎನ ಒರೆಗಾನ್ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2022 ರ (World Athletics Championships 2022) ಜಾವೆಲಿನ್ ಥ್ರೋ ವಿಭಾಗದಲ್ಲಿ ಇಬ್ಬರು ಭಾರತೀಯ ಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದಾರೆ. ನಿರೀಕ್ಷೆಯಂತೆ ಅಂತಿಮ ಸುತ್ತಿನಲ್ಲಿ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ (Neeraj Chopra) ಕಾಣಿಸಿಕೊಂಡರೆ, ಅವರೊಂದಿಗೆ ರೋಹಿತ್ ಯಾದವ್ ಸಹ ಈ ಬಾರಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಇಬ್ಬರ ಮೇಲೆ ನಿರೀಕ್ಷೆ ಹೆಚ್ಚಿದೆ. ಏಕೆಂದರೆ ವಿಶ್ವ ಅಥ್ಲೆಟಿಕ್ಸ್ ಕೂಟದಲ್ಲಿ ಇದುವರೆಗೆ ಭಾರತದ ಯಾವುದೇ ಕ್ರೀಡಾಪಟು ಚಿನ್ನ ಗೆದ್ದಿಲ್ಲ. ಸದ್ಯ ಫೈನಲ್ ಲೀಸ್ಟ್ನಲ್ಲಿರುವ 12 ಮಂದಿಯಲ್ಲಿ ಇಬ್ಬರು ಭಾರತೀಯರು ಸ್ಥಾನಗಿಟ್ಟಿಸಿಕೊಂಡಿದ್ದು, ಹೀಗಾಗಿ ಪದಕವನ್ನು ನಿರೀಕ್ಷಿಸಬಹುದು.
ಆದರೆ ಇಲ್ಲಿ ವಿಶ್ವದ ಖ್ಯಾತನಾಮರಿಂದ ನೀರಜ್ ಚೋಪ್ರಾ ಅವರಿಗೆ ಕಠಿಣ ಪೈಪೋಟಿ ಎದುರಾಗಲಿದೆ. ಏಕೆಂದರೆ ನೀರಜ್ ಚೋಪ್ರಾ ಅವರ ಸಾರ್ವಕಾಲಿಕ ಥ್ರೋ ದಾಖಲೆ ಎಂದರೆ 89.94 ಮೀಟರ್. ಆದರೆ ವಿಶ್ವ ಅಥ್ಲೆಟಿಕ್ಸ್ ಫೈನಲ್ನಲ್ಲಿರುವ ಇಬ್ಬರು ಸ್ಪರ್ಧಿಗಳು 90 ಮೀಟರ್ಗಿಂತ ದೂರ ಎಸೆದ ದಾಖಲೆ ಹೊಂದಿದ್ದಾರೆ.
ಹಾಗೆಯೇ ಫೈನಲ್ನಲ್ಲಿ ಅರ್ಹತೆ ಪಡೆದಿರುವ ಬಹುತೇಕ ಸ್ಪರ್ಧಿಗಳು 85 ಮೀಟರ್ಗಿಂತ ಹೆಚ್ಚಿನ ದೂರ ಎಸೆದ ಸಾಧನೆ ಮಾಡಿದ್ದಾರೆ. ಇತ್ತ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ಎಸೆದಿರುವುದು 88.39 ಮೀಟರ್. ಹೀಗಾಗಿ ಎದುರಾಳಿಗಳಿಂದ ಕಠಿಣ ಪೈಪೋಟಿಯನ್ನು ನಿರೀಕ್ಷಿಸಬಹುದು. ಇನ್ನೊಂದೆಡೆ ರೋಹಿತ್ ಯಾದವ್ ಅವರ ಸರ್ವಶ್ರೇಷ್ಠ ದಾಖಲೆ ಎಂದರೆ 82.54 ಮೀಟರ್ ಮಾತ್ರ. ಹೀಗಾಗಿ ಎಲ್ಲರ ನಿರೀಕ್ಷೆ ನೀರಜ್ ಚೋಪ್ರಾ ಮೇಲಿದೆ.
ಮತ್ತೊಂದೆಡೆ ಕಠಿಣ ಸ್ಪರ್ಧಿಗಳು ಸಹ ಕಣದಲ್ಲಿದ್ದಾರೆ. ಅವರೆಂದರೆ ಹಾಲಿ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪೀಟರ್ಸ್ ಫೈನಲ್ ತಲುಪುವಲ್ಲಿ ಎಡವಿದ್ದರು. ಇದೀಗ ಈ ಕೊರತೆಯನ್ನು ನೀಗಿಸಲು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಕಾಣಿಸಿಕೊಂಡಿದ್ದಾರೆ. 93.07 ಮೀಟರ್ ಥ್ರೋ ಮಾಡಿರುವ ದಾಖಲೆ ಹೊಂದಿರುವ ಗ್ರೆನೇಡಾದ ಆಂಡರ್ಸನ್ ಪೀಟರ್ಸ್ ಅವರು ಇಲ್ಲಿ ನೀರಜ್ ಚೋಪ್ರಾ ಅವರ ನೇರ ಪ್ರತಿ ಸ್ಪರ್ಧಿ ಎನ್ನಬಹುದು. ಇನ್ನು ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಜೆಕ್ ಜಾಕುಬ್ ವಾಡ್ಲೆಜ್ (90.88 ಮೀ), ಫಿನ್‌ಲ್ಯಾಂಡ್‌ನ ಆಲಿವರ್ ಹೆಲಾಂಡರ್ (89.83 ಮೀ) ಕೂಡ ಕಣದಲ್ಲಿದ್ದಾರೆ.
ಇಲ್ಲಿ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ 88.39 ಮೀಟರ್ ಎಸೆದಿದ್ದರೆ, ಆಂಡರ್ಸನ್ ಪೀಟರ್ಸ್ 89.91 ಮೀಟರ್ ಎಸೆದಿದ್ದಾರೆ. ಅಂದರೆ ಗ್ರೂಪ್ ಎ ನಲ್ಲಿ ಅಗ್ರಸ್ಥಾನ ಪಡೆದಿರುವ ಚೋಪ್ರಾಗಿಂತ ಗ್ರೂಪ್ ಬಿ ನಲ್ಲಿ ಮೊದಲ ಸ್ಥಾನ ಪಡೆದಿರುವ ಪೀಟರ್ಸ್ ಒಂದು ಮೀಟರ್ ಹೆಚ್ಚಿನ ದೂರ ಎಸೆದಿರುವುದು ಸ್ಪಷ್ಟ. ಹಾಗೆಯೇ ಗ್ರೂಪ್ ಬಿ ನಲ್ಲಿ 2ನೇ ಸ್ಥಾನ ಪಡೆದಿರುವ ಜೂಲಿಯನ್ ವೆಬರ್ 87.28 ಮೀಟರ್ ಎಸೆಯುವ ಮೂಲಕ ಗಮನ ಸೆಳೆದಿದ್ದಾರೆ. ಹೀಗಾಗಿ ವೆಬರ್ ಕಡೆಯಿಂದಲೂ ಪೈಪೋಟಿಯನ್ನು ನಿರೀಕ್ಷಿಸಬಹುದು.
ಇದಾಗ್ಯೂ ಈ ವರ್ಷ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ನೀರಜ್ ಚೋಪ್ರಾ ಪದಕದೊಂದಿಗೆ ಹಿಂತಿರುಗುವ ನಿರೀಕ್ಷೆಯಿದೆ. ಏಕೆಂದರೆ ಇತ್ತೀಚೆಗಷ್ಟೇ ನೂರ್ಮಿ ಗೇಮ್ಸ್ 2022 ರಲ್ಲಿ 89.03 ಮೀಟರ್ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದರು. ಈ ಮೂಲಕ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು. ಅಂದರೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 88.07 ಮೀಟರ್ ಎಸೆದು ಚಿನ್ನದ ಪದಕ ಗೆದ್ದಿದ್ದ ನೀರಜ್, ಪಾವೊ ನೂರ್ಮಿ ಗೇಮ್ಸ್ನಲ್ಲಿ 89.03 ಮೀಟರ್ ದೂರ ಎಸೆಯುವ ಮೂಲಕ ತಮ್ಮ ಹಳೆಯ ದಾಖಲೆಯನ್ನು ಅಳಿಸಿ ಹಾಕಿದ್ದರು. ಇದೀಗ ಅರ್ಹತಾ ಸುತ್ತಿನಲ್ಲೂ 88 ಮೀಟರ್ಗಿಂತ ದೂರ ಎಸೆದಿದ್ದಾರೆ. ಹೀಗಾಗಿಯೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ನಿರೀಕ್ಷೆಗಳು ಹೆಚ್ಚಾಗಿವೆ.
ಜಾವೆಲಿನ್ ಫೈನಲ್ ಸ್ಪರ್ಧೆ ಯಾವಾಗ?
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2022 ರ ಜಾವೆಲಿನ್ ಫೈನಲ್ ಸ್ಪರ್ಧೆಯು ಭಾರತೀಯ ಕಾಲಮಾನ ಭಾನುವಾರ ಬೆಳಿಗ್ಗೆ 7.05 ಕ್ಕೆ ಶುರುವಾಗಲಿದೆ.
ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯನ್ನು ಭಾರತದಲ್ಲಿ ಸೋನಿ TEN 2 ಮತ್ತು Sony TEN 2 HD TV ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ .
ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬೇಕು?
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಜಾವೆಲಿನ್ ಫೈನಲ್ ಎಸೆತದ ಲೈವ್ ಸ್ಟ್ರೀಮಿಂಗ್ ಭಾರತದಲ್ಲಿ SonyLIV OTT ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುತ್ತದೆ.
ಚಿನ್ನ ಗೆದ್ದರೆ ಹೊಸ ಇತಿಹಾಸ:
39 ವರ್ಷಗಳ ಇತಿಹಾಸ ಹೊಂದಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತ ಪದಕ ಗೆದ್ದಿದ್ದು ಕೇವಲ 1 ಬಾರಿ ಮಾತ್ರ. 2003 ರಲ್ಲಿ ಪ್ಯಾರಿಸ್ನಲ್ಲಿ ನಡೆದ ಕೂಟದಲ್ಲಿ ಲಾಂಗ್ ಜಂಪರ್ ಅಂಜು ಬಾಬಿ ಜಾರ್ಜ್ ಅವರು 6.70 ಮೀ ಜಿಗಿತದೊಂದಿಗೆ ಕಂಚಿನ ಪದಕ ಗೆದ್ದುಕೊಂಡಿದ್ದರು. ಇದಾದ ಬಳಿಕ ಭಾರತದ ಯಾವುದೇ ಕ್ರೀಡಾಪಟುಗಳು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದಿಲ್ಲ. ಇದೀಗ ಜಾವೆಲಿನ್ ಥ್ರೋನಲ್ಲಿ ಫೈನಲ್ ಪ್ರವೇಶಿಸಿರುವ ಚಿನ್ನದ ಹುಡುಗ ನೀರಜ್ ಚೋಪ್ರಾ ಬಂಗಾರದ ಪದಕ ಗೆದ್ದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.